ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ‍್ಯಕ್ರಮಕ್ಕೆ ಇತಿಶ್ರೀ

By Web DeskFirst Published Jun 21, 2019, 8:15 AM IST
Highlights

ಪಶ್ಚಿಮ ಘಟ್ಟಅಭಿವೃದ್ಧಿ ಕಾರ‍್ಯಕ್ರಮಕ್ಕೆ ಇತಿಶ್ರೀ | ಕೇಂದ್ರ, ರಾಜ್ಯ ಸಹಭಾಗಿತ್ವದಲ್ಲಿ 40 ವರ್ಷದಿಂದ ಜಾರಿಯಲ್ಲಿದ್ದ ಯೋಜನೆ | ಯೋಜನೆ ಕೈಬಿಡುವ ಕುರಿತು ಅಧಿಕೃತ ಆದೇಶ ಬಾಕಿ

ಬೆಂಗಳೂರು (ಜೂ. 21): ರಾಜ್ಯದ 11 ಜಿಲ್ಲೆಗಳ 40 ತಾಲೂಕುಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಪ್ರದೇಶದ ಅಭಿವೃದ್ಧಿ, ಅರಣ್ಯ ಸಂರಕ್ಷಣೆ ಹಾಗೂ ಅಲ್ಲಿ ವಾಸಿಸುವ ಜನರಿಗೆ ಸೌಲಭ್ಯ ನೀಡುವ ಉದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅನುಷ್ಠಾನ ಮಾಡುತ್ತಿದ್ದ ‘ಪಶ್ಚಿಮ ಘಟ್ಟಅಭಿವೃದ್ಧಿ ಕಾರ್ಯಕ್ರಮ’ಕ್ಕೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ. ರಾಜ್ಯ ಸರ್ಕಾರ ಸಹ ವರ್ಷದಿಂದ ವರ್ಷಕ್ಕೆ ನಿಗದಿ ಮಾಡುತ್ತಿದ್ದ ಹಣವನ್ನು ಕಡಿಮೆ ಮಾಡುತ್ತಾ ಬಂದಿದೆ. ಅಲ್ಲದೇ ಈ ಕಾರ್ಯಕ್ರಮದಡಿ ಅನುಷ್ಠಾನ ಮಾಡುತ್ತಿದ್ದ ವಿವಿಧ ಕಾಮಗಾರಿ, ಯೋಜನೆ, ಸೌಲಭ್ಯಗಳನ್ನು ‘ನರೇಗಾ’ ಅಡಿ ನೀಡಲು ಮುಂದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಯೋಜನೆಯನ್ನೇ ಕೊನೆಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

11 ಜಿಲ್ಲೆ, 40 ತಾಲೂಕು ವ್ಯಾಪ್ತಿ:

ರಾಜ್ಯದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 40 ತಾಲ್ಲೂಕುಗಳಲ್ಲಿ ಪರಿಸರ ಸಮತೋಲನ ಕಾಪಾಡಲು ಮತ್ತು ಆ ಪ್ರದೇಶದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಶೇ. 90 ಹಾಗೂ ರಾಜ್ಯ ಸರ್ಕಾರ ಶೇ. 10 ರಷ್ಟುಅನುದಾನವನ್ನು ನೀಡುತ್ತಿತ್ತು.

ಈ ಅನುದಾನದ ಅಡಿಯಲ್ಲಿ ಜಲಾನಯನ ಕಾಮಗಾರಿ ಮೂಲಕ ನೀರು ಸರಬರಾಜು ಕಲ್ಪಿಸಿ ಸವಕಳಿ ತಡೆಗಟ್ಟುವುದು, ಪರಿಸರ ಕಾಪಾಡುವುದು, ನೀರಾವರಿ ಕಾಲುವೆಗಳ ಅಭಿವೃದ್ಧಿ ಮತ್ತು ದುರಸ್ತಿ, ಔಷಧೀಯ ಗುಣಗಳ ಸಸ್ಯ, ಬಿದಿರು, ಹಣ್ಣಿನ ಮರ, ಜತ್ರೋಪ ಸಸ್ಯಗಳನ್ನು ಬೆಳೆಸುವುದು, ಗುಡ್ಡಗಾಡು ಪ್ರದೇಶದಲ್ಲಿ ಎರಡನೇ ಬೆಳೆ ಬೆಳೆಯಲು ಕಿಂಡಿ ಅಣೆಕಟ್ಟು, ಕಾಲುಸಂಕಗಳ ನಿರ್ಮಾಣ, ಭೂ ಸಾರ ಮತ್ತು ನೀರಿನ ಸಂರಕ್ಷಣೆಗಾಗಿ ಜಮೀನಿನ ಸಮತಟ್ಟು, ಹರಿಯುವ ನೀರನ್ನು ತಡೆಗಟ್ಟಲು ಕೃಷಿ ಹೊಂಡ, ತಿರುವು ಕಾಲುವೆ, ನೀರು ಇಂಗದಂತೆ ಹುಲ್ಲಿನ ಬದುಗಳ ನಿರ್ಮಾಣ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿತ್ತು.

ಜೊತೆಗೆ ಈ ಪ್ರದೇಶದಲ್ಲಿ ಮೇವು ಬೆಳೆಯಲು ಜಮೀನು ಅಭಿವೃದ್ಧಿ ಪಡಿಸುವುದು, ಆ ಮೂಲಕ ಹಂದಿ, ಮೊಲ, ಕೋಳಿ ಸಾಕಾಣೆ ಮಾಡುವುದು. ಈ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಔಷಧಿ ಮತ್ತು ಪೌಷ್ಟಿಕಾಂಶಗಳ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಈವರೆಗೆ ಅನುಷ್ಠಾನ ಮಾಡಿಕೊಂಡು ಬರಲಾಗುತ್ತಿತ್ತು.

ಅನುದಾನ ನಿಲ್ಲಿಸಿದ ಕೇಂದ್ರ:

ಆದರೆ ಕಳೆದ 2015-16ನೇ ಸಾಲಿನಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿದೆ. 2014-15ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 32.40 ಕೋಟಿ ರು ಬಿಡುಗಡೆಯಾಗಿತ್ತು. ಆದರೆ ಕೇಂದ್ರ ಅನುದಾನ ನೀಡುವುದನ್ನು ಸ್ಥಗಿತಗೊಳಿಸಿದ ನಂತರ ರಾಜ್ಯ ಸರ್ಕಾರ ನೀಡುತ್ತಿದ್ದ ಅಲ್ಪ ಅನುದಾನದಿಂದ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿತ್ತು.

2015-16 ನೇ ಸಾಲಿನಲ್ಲಿ 6.12 ಕೋಟಿ ರು., 2016-17 ಮತ್ತು 2017-18ನೇ ಸಾಲಿನಲ್ಲಿ 4.46 ಕೋಟಿ ರು. ನೀಡಿದ್ದ ರಾಜ್ಯ ಸರ್ಕಾರ, 2018-19ನೇ ಸಾಲಿನಲ್ಲಿ ಕೇವಲ ಮೂರು ಕೋಟಿ ರು. ನಿಗದಿ ಮಾಡಿತ್ತು. ಹೀಗಾಗಿ ಪ್ರತಿ ಜಿಲ್ಲೆಗಳಿಗೆ ನೀಡುತ್ತಿದ್ದ ಅನುದಾನ ಕಡಿಮೆಯಾಯಿತು. ಯಾವುದೇ ದೊಡ್ಡ ಕಾರ್ಯಕ್ರಮ ಅನುಷ್ಠಾನ ಮಾಡದೇ ಸಣ್ಣಪುಟ್ಟಕೆಲಸಗಳನ್ನು ಮಾಡುವಂತಹ ಸ್ಥಿತಿಗೆ ತಲುಪಿತು.

ಬಜೆಟ್‌ನಲ್ಲೂ ಪ್ರಸ್ತಾಪವಿಲ್ಲ:

ಹೀಗಿರುವಾಗ ರಾಜ್ಯ ಸರ್ಕಾರ ಪ್ರಸಕ್ತ 2019-20ನೇ ಸಾಲಿನಲ್ಲಿ ಈ ಕಾರ್ಯಕ್ರಮಕ್ಕೆ ಬಜೆಟ್‌ನಲ್ಲಿ ಯಾವುದೇ ಹಣವನ್ನು ನಿಗದಿ ಮಾಡಲಿಲ್ಲ. ಹೀಗಾಗಿ ಈ ವರ್ಷ ಯಾವುದೇ ಕಾರ್ಯಕ್ರಮ ಜಾರಿಯಾಗುತ್ತಿಲ್ಲ. ಈ ಕಾರ್ಯಕ್ರಮದ ಅಡಿ ಎರವಲು ಸೇವೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶೀಘ್ರವೇ ಬೇರೆ ಇಲಾಖೆಗೆ ವರ್ಗ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಸದ್ಯ ಈ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೇತನ ಮಾತ್ರ ನೀಡಲಾಗುತ್ತಿದೆ. ಸರ್ಕಾರ ‘ಪಶ್ಚಿಮ ಘಟ್ಟಅಭಿವೃದ್ಧಿ ಕಾರ್ಯಕ್ರಮ’ ಕೊನೆಗೊಳಿಸಲಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸುವುದಷ್ಟೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

- ಚಂದ್ರಮೌಳಿ ಎಂ ಆರ್ 

click me!