ಲೋಕಾಯುಕ್ತ ಸ್ಥಾನಕ್ಕೆ ನ್ಯಾ| ವಿಶ್ವನಾಥ ಶೆಟ್ಟಿ ಹೆಸರು ತಿರಸ್ಕೃತ?

By Suvarna Web DeskFirst Published Jan 16, 2017, 3:46 PM IST
Highlights

ಎಸ್.ಆರ್.ಹಿರೇಮಠ್ ಅವರು ನ್ಯಾ| ವಿಶ್ವನಾಥ್ ಶೆಟ್ಟಿ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

ಬೆಂಗಳೂರು(ಜ. 16): ಲೋಕಾಯುಕ್ತ ಸ್ಥಾನಕ್ಕೆ ಸರಕಾರ ಶಿಫಾರಸು ಮಾಡಿದ ನ್ಯಾ| ಪಿ.ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಖುದ್ದು ವಿಶ್ವನಾಥ್ ಶೆಟ್ಟಿ ಆಯ್ಕೆ ಬಗ್ಗೆ ಒಲವು ಹೊಂದಿದ್ದರು. ಆದರೆ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್.ಹಿರೇಮಠ್ ಅವರು ನ್ಯಾ| ವಿಶ್ವನಾಥ್ ಶೆಟ್ಟಿ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ. ಈ ವಿಚಾರದಲ್ಲಿ ಸ್ಪಷ್ಟನೆ ನೀಡಬೇಕೆಂದು ರಾಜ್ಯಪಾಲರು ಸರಕಾರಕ್ಕೆ ಶಿಫಾರಸು ಪತ್ರವನ್ನು ವಾಪಸ್ ಕಳುಹಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ವಾರದ ಹಿಂದೆ ಲೋಕಾಯುಕ್ತ ನೇಮಕಾತಿಯ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ನ್ಯಾ| ವಿಶ್ವನಾಥ್ ಶೆಟ್ಟಿ, ನ್ಯಾ| ಎನ್.ಕೆ.ಕುಮಾರ್ ಮತ್ತು ನ್ಯಾ| ಆನಂದ್ ಬೈರಾರೆಡ್ಡಿ ಅವರುಗಳ ಹೆಸರನ್ನು ಲೋಕಾಯುಕ್ತ ಸ್ಥಾನಕ್ಕೆ ಪರಿಗಣಿಸಲಾಗಿತ್ತು. ಈ ಮೂವರು ಹೆಸರಿಗೆ ರಾಜಕೀಯವಾಗಿ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಕೂಡ ತಮ್ಮ ಅಭ್ಯಂತರವಿಲ್ಲ ಎಂದು ಅಭಿಪ್ರಾಯ ನೀಡಿದ್ದರು. ಆದರೆ, ಸಿಎಂ ಅವರು ವಿಶ್ವನಾಥ್ ಶೆಟ್ಟಿಯವರ ಬಗ್ಗೆ ಹೆಚ್ಚು ಒಲವು ಹೊಂದಿದ್ದು, ಅವರ ಹೆಸರೇ ಅಂತಿಮವಾಗಿ, ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು.

ಇದೇ ವೇಳೆ, ವಿಶ್ವನಾಥ್ ಶೆಟ್ಟಿ ಅವರ ಅರ್ಹತೆಯನ್ನು ಎಸ್.ಆರ್.ಹಿರೇಮಠ್ ಪ್ರಶ್ನಿಸಿದ್ದರು. ಬೆನ್ನಿಗಾನಹಳ್ಳಿ ಜಮೀನು ಡೀನೋಟಿಫಿಕೇಶನ್ ಪ್ರಕರಣದಲ್ಲಿ ನ್ಯಾ| ವಿಶ್ವನಾಥ ಶೆಟ್ಟಿಯವರು ಡಿಕೆಶಿ ಪರವಾಗಿ ವಕೀಲರಾಗಿ ವಾದಿಸಿದ್ದರು. ಇಂತಹ ವ್ಯಕ್ತಿಯನ್ನು ಲೋಕಾಯುಕ್ತಕ್ಕೆ ನೇಮಕ ಮಾಡಬಾರದು ಎಂದು ಹಿರೇಮಠ್ ಆಗ್ರಹಿಸಿದ್ದರು. ಅಲ್ಲದೇ, ಜ್ಯುಡಿಶಿಯಲ್ ಲೇಔಟ್'ನಲ್ಲಿ ನ್ಯಾ| ಶೆಟ್ಟಿಯವರು ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ನಿವೇಶನ ಪಡೆದುಕೊಂಡಿದ್ದಾರೆಂದೂ ಹಿರೇಮಠ್ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಲೋಕಾಯುಕ್ತ ಸ್ಥಾನಕ್ಕೆ ನ್ಯಾ| ಶೆಟ್ಟಿಯವರ ಹೆಸರನ್ನು ತಿರಸ್ಕರಿಸಿರಬಹುದೆನ್ನಲಾಗಿದೆ.

click me!