ಬರಲಿದೆ, ರಾಜ್ಯ ಸರ್ಕಾರದ ಟಿವಿ ಚಾನೆಲ್!

By Suvarna Web DeskFirst Published Aug 25, 2017, 12:02 PM IST
Highlights

ಈಗಾಗಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‌ಗಳು ಬಹುತೇಕ ರಾಜ್ಯಗಳಲ್ಲಿದ್ದರೂ ರಾಜ್ಯ ಸರ್ಕಾರಿ ಸ್ವಾಮ್ಯದ ಚಾನೆಲ್‌ಗಳು ಕರ್ನಾಟಕದ ಮಟ್ಟಿಗೆ ಇಲ್ಲ. ಈ ಕೊರತೆ ತುಂಬಲು ರಾಜ್ಯ ಸರ್ಕಾರ ಕೊನೆಗೂ ತನ್ನದೇ ಆದ ದೂರದ ರ್ಶನ ವಾಹಿನಿ ಆರಂಭಿಸಲು ಮುಂದಾಗಿದೆ.

ಬೆಂಗಳೂರು: ಈಗಾಗಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‌ಗಳು ಬಹುತೇಕ ರಾಜ್ಯಗಳಲ್ಲಿದ್ದರೂ ರಾಜ್ಯ ಸರ್ಕಾರಿ ಸ್ವಾಮ್ಯದ ಚಾನೆಲ್‌ಗಳು ಕರ್ನಾಟಕದ ಮಟ್ಟಿಗೆ ಇಲ್ಲ. ಈ ಕೊರತೆ ತುಂಬಲು ರಾಜ್ಯ ಸರ್ಕಾರ ಕೊನೆಗೂ ತನ್ನದೇ ಆದ ದೂರದ ರ್ಶನ ವಾಹಿನಿ ಆರಂಭಿಸಲು ಮುಂದಾಗಿದೆ.

‘ಗ್ರಾಮ ಸ್ವರಾಜ್ ಟಿವಿ’ ಹೆಸರಿನಲ್ಲಿ ಚಾನೆಲ್ ಆರಂಭಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್ ಡಿಪಿಆರ್) ಹೆಜ್ಜೆ ಇಟ್ಟಿದೆ. ಆರ್‌ಡಿಪಿಆರ್ ಇಲಾಖೆ ಜೊತೆಗೆ ಇತರೆ ಇಲಾಖೆಗಳ ಯೋಜನೆಗಳು, ಕಾರ್ಯಕ್ರಮಗಳು, ಸಾಧನೆಗಳು ಮತ್ತು ಪ್ರಗತಿಯ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಈ ಚಾನೆಲ್ ಆರಂಭಿಸಲು ಉದ್ದೇಶಿಸಿದೆ.

ಸದ್ಯ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ರಾಜ್ಯದಲ್ಲಿನ ಚಾನೆಲ್ ಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ, ಕಾರ್ಯಕ್ರಮ, ಸಾಧನೆ, ಪ್ರಗತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಚಾನೆಲ್‌ಗಳು ಕೇಂದ್ರ ಸರ್ಕಾರದ ನಿರ್ದೇಶನದ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ಹೀಗಾಗಿ ಆರ್‌ಡಿಪಿಆರ್ ಇಲಾಖೆ ‘ಗ್ರಾಮ ಸ್ವರಾಜ್ ಟಿವಿ’ ಆರಂಭಿಸಲು ನಿರ್ಧರಿಸಿದೆ.

ಖಾಸಗಿ ಸಂಸ್ಥೆ ನೆರವು: ಉದ್ದೇಶಿತ ಚಾನೆಲ್ ಆರಂಭಿಸಲು ಟಿ.ಆರ್. ಮೀಡಿಯಾ ನೆಟ್’ವರ್ಕ್ ಎಂಬ ಖಾಸಗಿ ಸಂಸ್ಥೆಯ ನೆರವನ್ನು ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದೆ.

ನ್ಯೂಸ್ ಮತ್ತು ಇನ್ಫೋಟೈನ್‌ಮೆಂಟ್ ಟಿವಿ ಚಾನೆಲ್ ಆರಂಭಿಸಲು ಈ ಸಂಸ್ಥೆ 20 ಕೋಟಿ ರು. ಹಾಗೂ ಮಾಸಿಕ ವೆಚ್ಚಕ್ಕೆ 2.50 ಕೋಟಿ ರು. ಗಳ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೂಡಲು ಹಿಂಜರಿಯಿತು. ಜೊತೆಗೆ ಈಗಾಗಲೇ ಪ್ರಸಾರವಾಗುತ್ತಿರುವ ಉಳಿದ ನ್ಯೂಸ್ ಚಾನೆಲ್ ತರಹ ಕಾರ್ಯನಿರ್ವಹಣೆ ಬೇಡ ಎಂಬ ಅಭಿಪ್ರಾಯ ಕೂಡ ತಜ್ಞರಿಂದ ವ್ಯಕ್ತವಾಯಿತು. ಇದರ ಪರಿಣಾಮ ಕೊನೆಗೆ ಇಲಾಖೆಯ ದೃಷ್ಟಿಯಲ್ಲಿರುವ ಅಗತ್ಯಗಳಿಗೆ ತಕ್ಕಂತೆ ಪ್ರಾರಂಭಿಕ ಹೂಡಿಕೆಯನ್ನು 10 ಕೋಟಿ.ರು. ಗಳಿಗೆ ಇಳಿಸಲು ಉದ್ದೇಶಿಸಲಾಗಿದೆ.

ಇದರ ಜೊತೆಗೆ ಕೇಬಲ್ ಆಪರೇಟರ್‌ಗಳಿಗೆ ನೀಡುವ ಕ್ಯಾರೇಜ್ ಫೀಸ್ ಮತ್ತು ಸಿಬ್ಬಂದಿ ವೇತನ ಮತ್ತಿತರ ವೆಚ್ಚಕ್ಕೆ ಸಲ್ಲಿಸಿದ್ದ 2.50 ಕೋಟಿ ರು. ಗಳ ಪ್ರಸ್ತಾವನೆಗೆ ಕೂಡ ನಕಾರ ವ್ಯಕ್ತವಾದ ಕಾರಣ ಖರ್ಚುಗಳನ್ನು ಆದಷ್ಟು ಕಡಿಮೆಗೊಳಿಸಿ, ಕಾರ್ಯಕ್ರಮದ ವೆಚ್ಚವನ್ನು ಅಗತ್ಯಕ್ಕೆ ತಕ್ಕ ಹಾಗೆ ಹಿಡಿದಿಟ್ಟು ಕೊಂಡು ಸೀಮಿತ ಚೌಕಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸಿದ ಪರಿಣಾಮ ಮಾಸಿಕ ವೆಚ್ಚ 1.50 ಕೋಟಿ ರು.ಗಳಿಗೆ ಪರಿಷ್ಕರಣೆಗೊಂಡಿದೆ.

ಟಿ.ಆರ್. ಮೀಡಿಯಾ ನೆಟ್‌ವರ್ಕ್ ಸಂಸ್ಥೆಯ ದರ ಪ್ರಸ್ತಾವನೆ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಸರಿಯಾಗಿದೆ ಎಂಬ ಅಭಿಪ್ರಾಯವನ್ನು ವಾರ್ತಾ ಇಲಾಖೆ ವ್ಯಕ್ತಪಡಿಸಿದೆ. ಹೀಗಾಗಿ ‘ಗ್ರಾಮ ಸ್ವರಾಜ್ ಟಿವಿ’ ಚಾನೆಲ್ ಆರಂಭಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ತುಂಬಾ ಉತ್ಸಾಹದಿಂದ ಮುಂದಾಗಿದೆ. ಈ ಯೋಜನೆಗೆ ಆರ್ಥಿಕ ಇಲಾಖೆ ಅನುಮತಿ ಕೊಡುವುದಷ್ಟೆ ಬಾಕಿ ಉಳಿದಿದೆ.

ದೂರದರ್ಶನಇತ್ತಲ್ಲಾ? ಆದರೆ ಅದು ಕೇಂದ್ರ ಸರ್ಕಾರದ್ದು. ರಾಜ್ಯದ ಯೋಜನೆಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಜನರಿಗೆ ಮಾಹಿತಿ ನೀಡಲು ಸಾದ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನ ಬೇಕಾಗುತ್ತದೆ. ಹೀಗಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವಾಲಯ ‘ಗ್ರಾಮ ಸ್ವರಾಜ್ ಟೀವಿ’ ಎಂಬ ಸ್ವಂತ ಚಾನೆಲ್ ಆರಂಭಕ್ಕೆ ನಿರ್ಧರಿಸಿದೆ.

click me!