ಗಂಗೆಯ ಪಾವಿತ್ರ್ಯ ರಕ್ಷಣೆಗೆ ಇನ್ನೆಷ್ಟು ಬಲಿಯಾಗಬೇಕು?

By Web DeskFirst Published Oct 12, 2018, 3:00 PM IST
Highlights

ಪವಿತ್ರ ದೇವನದಿಯ ಸಂರಕ್ಷಣೆಗಾಗಿಯೇ ತಮ್ಮ 80ರ ಇಳಿವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಸ್ವಾಮಿ ಜ್ಞಾನ ಸ್ವರೂಪಾನಂದ ಸ್ವಾಮೀಜಿ ನಿರಶನ ಕುಳಿತು 109 ದಿನಗಳಾಗಿದ್ದವು. ಅವರ ಹೋರಾಟಕ್ಕೆ ಸಿಕ್ಕ ಫಲ ಬಂಧನ, ಮೊಕದ್ದಮೆ, ಕೊನೆಗೆ ಪ್ರಾಣ ತ್ಯಾಗ. ಅಷ್ಟುದಿನಗಳ ನಿರಾಹಾರದ ನಂತರವೂ ಅದೇ ಅಬೋಧ ನಗುವಿನೊಂದಿಗೆ, ಆದರೆ ಹಟಕ್ಕೆ ಬಿದ್ದು ಇಹಲೋಕ ತ್ಯಜಿಸಿಬಿಟ್ಟರು.

ಬೆಂಗಳೂರು (ಅ. 12): ನಿಜಕ್ಕೂ ನಾವು ಭಾರತೀಯರು ಗಂಗೆಯ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದೇವೆ. ನಾಚಿಕೆಯಾಗಬೇಕಿತ್ತು ನಮಗೆ! ಈವರೆಗೆ ಪಾಪಿಗಳ ಶವಗಳಿಗೆ ಮಾತ್ರ ಮುಕ್ತಿ ದೊರಕಿಸುತ್ತಿದ್ದ ಗಂಗೆ ಇದರೊಂದಿಗೆ ಮತ್ತೊಮ್ಮೆ ಜೀವಂತ ವ್ಯಕ್ತಿಯೊಬ್ಬನಿಗೆ ವಿಶಿಷ್ಟರೀತಿಯಲ್ಲಿ ಮುಕ್ತಿ ದೊರಕಿಸಿಕೊಟ್ಟಿದ್ದಾಳೆ.

ಇದು ಎರಡನೇ ಬಾರಿ ಹೀಗಾಗುತ್ತಿರುವುದು. 2011ರ ಜೂನ್‌ 13ರಂದು ಸತತ 115 ದಿನ ಉಪವಾಸ ಕುಳಿತ ಬಳಿಕ ಹರಿದ್ವಾರದ ಸನ್ಯಾಸಿ ಸ್ವಾಮಿ ನಿಗಮಾನಂದರು ಇಹಲೋಕ ತ್ಯಜಿಸಿದ್ದರು. ಅವರ ಸಾವು ಅಂದಿನ ಸರ್ಕಾರಕ್ಕೆ ದೊಡ್ಡ ವಿಚಾರವಾಗಲೇ ಇಲ್ಲ. ಇದೀಗ ಶ್ರೀ ಜ್ಞಾನಸ್ವರೂಪ ಸಾನಂದ ಸ್ವಾಮೀಜಿ (ಪ್ರೊ.ಜಿ.ಡಿ. ಅಗರ್ವಾಲ್‌) ಯವರ ಪ್ರಾಣಾರ್ಪಣೆಯೂ ನಮಗೆ ದೊಡ್ಡದೆನಿಸುವುದೇ ಇಲ್ಲ.

ಅಂದು ನಿಗಮಾನಂದರ ಸಾವು ಸ್ವಲ್ಪ ಸುದ್ದಿಯಾಯಿತು ಎಂಬುದನ್ನು ಬಿಟ್ಟರೆ ಮತ್ತೇನೂ ಅನ್ನಿಸಲಿಲ್ಲ. ಗಂಗೆಯ ಒಡಲಲ್ಲಿ ಅರೆ ಬೆಂದ ಹೆಣಗಳೂ ಎಂದಿನಂತೆಯೇ ತೇಲಿ ಹೋಗುತ್ತಲೇ ಇವೆ. ಗಣಿಗಾರಿಕೆ, ಗಂಗೆಯ ಹರಿವಿಗೆ ಅಡ್ಡಲಾಗಿ ಮನಬಂದಂತೆ ಒಡ್ಡುಗಳ ನಿರ್ಮಾಣ ಸೇರಿದಂತೆ ಎಲ್ಲ ರೀತಿಯ ಅತ್ಯಾಚಾರಗಳೂ ಮುಂದುವರಿದೇ ಇವೆ. ಇದಕ್ಕಿಂತ ವಿಪರ್ಯಾಸ ಬೇರೇನಿದೆ? ಹಟಕ್ಕೆ ಬೀಳದೇ, ಪ್ರತಿಭಟನೆಗೆ ಇಳಿಯದೇ ಏನೂ ಆಗುವುದಿಲ್ಲವೇ? ಕೊನೇ ಪಕ್ಷ ಒಂದು ಜೀವಕ್ಕೆ ನಾವು ಕಟ್ಟುವ ಬೆಲೆ ಇಷ್ಟೇ ಏನು?

109ದಿನದ ಉಪವಾಸಕ್ಕೆ ಸಿಕ್ಕ ಫಲ!

ಪವಿತ್ರ ದೇವನದಿಯ ಸಂರಕ್ಷಣೆಗಾಗಿಯೇ ತಮ್ಮ 80ರ ಇಳಿವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಸ್ವಾಮಿ ಜ್ಞಾನ ಸ್ವರೂಪಾನಂದ ಸ್ವಾಮೀಜಿ ನಿರಶನ ಕುಳಿತು 109 ದಿನಗಳಾಗಿದ್ದವು. ಅವರ ಹೋರಾಟಕ್ಕೆ ಸಿಕ್ಕ ಫಲ ಬಂಧನ, ಮೊಕದ್ದಮೆ, ಕೊನೆಗೆ ಪ್ರಾಣ ತ್ಯಾಗ. ಅಷ್ಟುದಿನಗಳ ನಿರಾಹಾರದ ನಂತರವೂ ಅದೇ ಅಬೋಧ ನಗುವಿನೊಂದಿಗೆ, ಆದರೆ ಹಟಕ್ಕೆ ಬಿದ್ದು ಇಹಲೋಕ ತ್ಯಜಿಸಿಬಿಟ್ಟರು.

ಜೀವನವೇ ಗಂಗೆಗೆ ಸಮರ್ಪಿತ

ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಸಾನಂದ ಸ್ವಾಮಿಗಳ ನಿವಾಸವೇ ಒಂದು ಆಶ್ರಮ. ತಾವೇ ತಮ್ಮ ಕೊಠಡಿಯ ಕಸ ಗುಡಿಸಿಕೊಳ್ಳುತ್ತ, ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತ, ತಾವೇ ಆಹಾರ ಸಿದ್ಧಪಡಿಸಿಕೊಳ್ಳುತ್ತ, ತಾವೇ ಖಾದಿ ನೇಯ್ದುಕೊಳ್ಳುತ್ತ ಸಮಾಜದ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದವರು. ಸೈಕಲ್‌ ಹತ್ತಿ ಹೊರಟರೆ ಅಲ್ಲೊಂದು ಚಳವಳಿ ಹುಟ್ಟಿಕೊಳ್ಳುತ್ತಿತ್ತು. ಬಸ್‌ನಲ್ಲಿ, ರೈಲಿನಲ್ಲಿ ಬಂದಿಳಿದರೆ ಬೃಹತ್‌ ಆಂದೋಲನ ರೂಪುಗೊಳ್ಳುತ್ತಿತ್ತು.

ಉಪವಾಸ ಕುಳಿತುಬಿಟ್ಟರೆ ಆಳುವವರಿಗೆ ಉಸಿರು ಕಟ್ಟಲಾರಂಭಿಸುತ್ತಿತ್ತು. ಅವರ ಮಾತು, ಮತ ಎರಡೂ ಗಂಗೆಯೇ. ಅವರೊಬ್ಬ ಸಾಮಾನ್ಯ ಮನುಷ್ಯನಾಗಿರಲಿಲ್ಲ. 1932ರಲ್ಲಿ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಕಂಧ್ಲಾ ಎಂಬಲ್ಲಿ ಹುಟ್ಟಿದ ಜಿ.ಡಿ.ಅಗರ್ವಾಲ್‌ರದು ಸಾಮಾನ್ಯ ಕೃಷಿಕ ಕುಟುಂಬ. ರೂರ್ಕಿ ವಿವಿಯಲ್ಲಿ (ಈಗಿನ ಐಐಟಿ ರೂರ್ಕಿ) ಸಿವಿಲ್‌ ಎಂಜಿನಿಯರಿಂಗ್‌ ಪದವಿ. ಡಿಸೈನಿಂಗ್‌ ಎಂಜಿನಿಯರ್‌ ಆಗಿ ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ವೃತ್ತಿ ಆರಂಭ.

ಜ್ಞಾನದ ಹಸಿವಿಗೆ ವಿರಾಮವೆಲ್ಲಿ? ಅಮೆರಿಕದ ಬಕ್ರ್ಲಿಯಲ್ಲಿನ ಪ್ರತಿಷ್ಠಿತ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿ ಪಿಎಚ್‌.ಡಿ. ನಂತರ ವಿಶ್ವಮಾನ್ಯ ಪರಿಸರ ಎಂಜಿನಿಯರ್‌ ಎನಿಸಿಕೊಂಡರು. ಐಐಟಿ ಕಾನ್ಪುರದಲ್ಲಿ ಪ್ರಾಧ್ಯಾಪಕ ಹುದ್ದೆ ಕೈಬೀಸಿ ಕರೆಯಿತು. ವಿಭಾಗ ಮುಖ್ಯಸ್ಥರಾಗಿ ಹಾಗೂ ಡೀನ್‌ ಆಗಿ ಸೇವೆ ಸಲ್ಲಿಸಿದರು.

ಅತ್ಯಂತ ಪ್ರಭಾವೀ ವೈಜ್ಞಾನಿಕ ಲೇಖನಗಳನ್ನು ಬರೆದರು. ಹತ್ತಾರು ಮಂದಿಗೆ ಪಿಎಚ್‌.ಡಿಗೆ ಮಾರ್ಗದರ್ಶಕರಾದರು. ನಂತರ ಭಾರತ ಸರ್ಕಾರದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಮೊದಲ ಸದಸ್ಯ-ಕಾರ್ಯದರ್ಶಿಯಾದರು. ಮಾಲಿನ್ಯ ನಿಯಂತ್ರಣ ಹಾಗೂ ಪರಿಸರ ರಕ್ಷಣೆಯ ಕಾಯ್ದೆ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.

ಗಂಗೆಯ ಪುನರುಜ್ಜೀವನಕ್ಕೆ ಸಂಕಲ್ಪ

ಅದು 2007ರ ಒಂದು ದಿನ. ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಲುದ್ದೇಶಿಸಿದ್ದ ಅಣೆಕಟ್ಟೊಂದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಪ್ರಿಯಾ ಪಟೇಲ್‌ ಎಂಬುವವರು ಎಂ.ಸಿ.ಮೆಹ್ತಾರನ್ನು ಕಾಣಲು ಬಂದಿದ್ದರು. ಅಗರ್ವಾಲರೂ ಜೊತೆಗಿದ್ದರು. ಗಂಗಾ ಮಾತೆಯ ಒಡಲು ಬರಿದಾಗುತ್ತಿದ್ದುದನ್ನು ಕಣ್ಣಾರೆ ಕಾಣಲು ಹೊರಟಿತು ಆ ತಂಡ. ಸ್ಥಳ ತಲುಪಿದಾಗ ಅಗರ್ವಾಲರಿಗೆ ನಂಬಲಾಗಲಿಲ್ಲ.

ಮೂವತ್ತು ವರ್ಷಗಳ ಹಿಂದೆ ಮನೇರಿ ಭಾಲಿ ಯೋಜನೆ ಶುರುವಾಗಿದ್ದಾಗ ಮೊದಲ ಬಾರಿ ಅವರು ಅಲ್ಲಿಗೆ ಹೋಗಿದ್ದರು. ಈಗ ಮನೇರಿ ಭಾಲಿಯ ಕೆಳ ಪ್ರದೇಶಗಳಲ್ಲಿ ಭಾಗೀರಥಿಯೇ ಕಣ್ಮರೆಯಾಗಿದ್ದಳು! ಅಣೆಕಟ್ಟುಗಳಲ್ಲಿ ಸಂಗ್ರಹಿಸಿ ನದಿಯ ನೀರನ್ನು ಕಾಲುವೆಗಳ ಮೂಲಕ ಬೇರೆಡೆ ಸ್ಥಳಾಂತರಿಸಲಾಗುತ್ತಿತ್ತು.

ಅಗರ್ವಾಲ ಜೀ ಮನಸ್ಸು ಕದಡಿ ಹೋಯಿತು. ಅಂದೇ ಗಂಗೆಗಾಗಿ ತಾವೇನಾದರೂ ಮಾಡಿಯೇ ತೀರಬೇಕೆಂದು ಸಂಕಲ್ಪಿಸಿದರು. 2008ರ ರಾಮನವಮಿಯ ದಿನ ಅದನ್ನು ಘೋಷಿಸಿದರು: ‘ಉಳಿದ ನನ್ನ ಜೀವಿತ ಗಂಗೆಗೇ ಸಮರ್ಪಿತ.’ ವೈಜ್ಞಾನಿಕ ವಿಮರ್ಶೆಗಳಲ್ಲಿ ಸಿದ್ಧಹಸ್ತರಾಗಿದ್ದ ವಿಜ್ಞಾನಿ ಸ್ವಾಮೀಜಿಯಾದರು.

ನಿರಂತರ ಹೋರಾಟದ ಬದುಕು

ಸ್ವಾಮಿ ಜ್ಞಾನ ಸ್ವರೂಪಾನಂದ ಸ್ವಾಮೀಜಿಯವರದು ನಿರಂತರ ಹೋರಾಟದ ಬದುಕು. ಮಧ್ಯಪ್ರದೇಶದ ಅಮರಕಂಟಕ್‌ ಎಂಬಲ್ಲಿ ಜಲಸಂರಕ್ಷಣೆಗಾಗಿ 2011ರಲ್ಲೂ ನಿರಶನ ನಡೆಸಿದ್ದರು. ಕೇದಾರದಲ್ಲಿ ಜಲ ಪ್ರಳಯ ಸಂಭವಿಸುವ 3 ದಿನ ಮುಂಚೆಯಷ್ಟೇ ಗಂಗೆಯ ಉಳಿವಿಗಾಗಿ ನಿರಶನ ಕುಳಿತಿದ್ದರು.

ಗಂಗಾ ನದಿಗೆ ಹೆಚ್ಚು ನೀರು ಹರಿದು ಬರುವ ಉತ್ತರಾಖಂಡವೊಂದರಲ್ಲೇ ನದಿಗೆ 268 ಕಟ್ಟೆ(ಬಾಂದಾರ)ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಉತ್ತರ ಪ್ರದೇಶ ಸೇರಿದಂತೆ ಗಂಗಾ ಹರಿವಿನುದ್ದಕ್ಕೂ 784 ಅಣೆಕಟ್ಟೆಗಳು, 66 ಬ್ಯಾರೇಜ್‌ಗಳು, 45 ಕಾಲುವೆಗಳ ಯೋಜನೆ ರೂಪುಗೊಂಡಿದೆ. ಈ ಪ್ರಸ್ತಾವಕ್ಕೆ ಈಗಾಗಲೇ ಶೇ.90ರಷ್ಟುಒಪ್ಪಿಗೆ ಕೂಡ ದೊರೆತಿದೆ. ಅಲ್ಲದೆ 8 ಕಟ್ಟೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇವೆಲ್ಲ ‘ಪಿಪಿಪಿ’ ಯೋಜನೆಗಳು.

ಗಂಗೆ ರಕ್ಷಣೆಗೆ ಪ್ರತ್ಯೇಕ ನೀತಿ ಬೇಕು

ಖಾಸಗೀಕರಣದೊಂದಿಗೆ ಅಮೃತದಂಥ ಗಂಗೆ ಬಿಕರಿಯಾಗತೊಡಗುತ್ತಾಳೆ. ಇದೇ ರೀತಿ ಈಗಾಗಲೇ ಬಿಲಾಂಗಣ ನದಿಯನ್ನು ಮಾರಾಟ ಮಾಡಲಾಗಿದೆ! ಈ ಹಿನ್ನೆಲೆಯಲ್ಲಿ 2008-09ರಲ್ಲಿ ಇದೇ ಸ್ವಾಮೀಜಿ ನೇತೃತ್ವದಲ್ಲಿ ಜನಾಂದೋಲನ ರೂಪುಗೊಂಡಿತ್ತು. ಅದರ ಪರಿಣಾಮವಾಗಿ ಭಾಗೀರಥಿ ನದಿಯ ಮೂಲ ಗಂಗೋತ್ರಿ ಕೆಳಗಡೆ ಬರುವ ಭೈರವ ಘಾಟ್‌, ಲೋಹಾರಿ ನಾಗಪಾಲ್‌ ಮತ್ತು ಮನೇರಿ ಕಟ್ಟೆಗಳ ನಿರ್ಮಾಣವನ್ನು ರದ್ದು ಮಾಡಲಾಗಿದೆ.

ಅದೇ ರೀತಿ ಗೋಮುಖದಿಂದ ಉತ್ತರಕಾಶಿವರೆಗಿನ 135 ಕಿ.ಮೀ. ಭಾಗಿರಥಿ ನದಿ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ, ಗಂಗೆಯ ನೈಸರ್ಗಿಕ ಹರಿವನ್ನು ವಿರೂಪಗೊಳಿಸುವ ಸಾಕಷ್ಟುಯೋಜನೆಗಳು ಈಗಲೂ ನಾನಾ ಹಂತದಲ್ಲಿ ಪ್ರಗತಿಯಲ್ಲಿವೆ.

ನಿಸರ್ಗ ಮತ್ತು ಮಾನವನ ನಡುವೆ ಸಹಚರ್ಯವನ್ನು ಮತ್ತೆ ಪ್ರತಿಷ್ಠಾಪಿಸಬೇಕು, ಗಂಗೆಯನ್ನು ಪವಿತ್ರವಾಗುಳಿಸಲು ಆಕೆಯ ಭೂಮಿಯನ್ನು ಆಕೆಗೆ ಬಿಟ್ಟುಕೊಡಬೇಕು. ಗಂಗೆಯ ಪಾವಿತ್ರ್ಯ ಎಂಬುದು ಕೇವಲ ಭೌತಿಕ ಸ್ವಚ್ಛತೆಯಲ್ಲ. ಸ್ವಚ್ಛ ನೀರೆಲ್ಲವೂ ಗಂಗೆಯಾಗಲು ಸಾಧ್ಯವಿಲ್ಲ. ಹೀಗಾಗಿ ಗಂಗೆಯ ರಕ್ಷಣೆಗಾಗಿ ಈ ದೇಶದಲ್ಲಿ ಪ್ರತ್ಯೇಕ ನೀತಿಯೊಂದರ ಅಗತ್ಯವಿದೆ ಎಂಬುದು ಸ್ವಾಮಿ ಜ್ಞಾನ ಸ್ವರೂಪಾನಂದ ಸ್ವಾಮೀಜಿಯವರ ಪ್ರತಿಪಾದನೆಯಾಗಿತ್ತು. ಇದಕ್ಕಾಗಿಯೇ ಅವರು ಹೋರಾಡುತ್ತಿದ್ದರು.

ಇಷ್ಟೆಲ್ಲದರ ನಡುವೆಯೂ ಸರ್ಕಾರ ಮುಗುಮ್ಮಾಗಿ ಕುಳಿತಿತ್ತು. ನಾವೂ ಸುಮ್ಮನಿದ್ದೆವು. ಸ್ವಾಮಿ ಜ್ಞಾನ ಸ್ವರೂಪಾನಂದ ಸ್ವಾಮೀಜಿ ಮಾತ್ರ ಏಕಾಂಗಿಯಾಗಿ ತಮ್ಮ ಕರ್ತವ್ಯ ಮುಗಿಸಿ ಹೊರಟುಹೋದರು. ಗಂಗಾ ಮಾತೆ ನಮ್ಮ ಕ್ಷಮಿಸಿಯಾಳೇ?

-ರಾಧಾಕೃಷ್ಣ ಭಡ್ತಿ 

click me!