ನೀವು ಕಂಡ ಮೈಸೂರಿನ ಅರಮನೆಯ ಆಕರ್ಷಕ ಹುಡುಗಿ ನಿಧನ

By Web DeskFirst Published Oct 4, 2018, 7:59 AM IST
Highlights

  ಮೈಸೂರಿನ ಜಗನ್ಮೋಹನ ಅರಮನೆಯಲ್ಲಿರುವ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿರುವ ‘ಗ್ಲೋ ಆಫ್‌ ಹೋಪ್‌’ ಎಂಬ ಹೆಸರಿನ ಆ ಸುಂದರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ‘ಬಾಲಕಿ’ ಇದೀಗ ನಿಧನ ಹೊಂದಿದ್ದಾರೆ.

ಮುಂಬೈ: ಸೀರೆ ಉಟ್ಟಬಾಲಕಿಯೊಬ್ಬಳು ದೀಪವನ್ನು ಹಿಡಿದು, ಗಾಳಿಗೆ ಜ್ವಾಲೆ ಆರಿ ಹೋಗದಂತೆ ಕೈಯಲ್ಲಿ ರಕ್ಷಣೆ ಮಾಡುವ ಸುಂದರ ಕಲಾ ಚಿತ್ರವನ್ನು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿರುವ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯಲ್ಲಿ ನೀವು ಗಮನಿಸಿರಬಹುದು. ಆ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿರಬಹುದು. ‘ಗ್ಲೋ ಆಫ್‌ ಹೋಪ್‌’ ಎಂಬ ಹೆಸರಿನ ಆ ಸುಂದರ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ‘ಬಾಲಕಿ’ ಇದೀಗ ನಿಧನ ಹೊಂದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಉಪ್ಲೇಕರ್‌ ಅವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪುತ್ರಿಯ ನಿವಾಸದಲ್ಲಿ ತಮ್ಮ 102ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೈಸೂರಿನ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯ ಪ್ರಮುಖ ಆಕರ್ಷಣೆಯಾಗಿರುವ, ಗೀತಾ ಉಪ್ಲೇಕರ್‌ ಅವರು ಇರುವ ಚಿತ್ರವನ್ನು 1945-46ರಲ್ಲಿ ರಚನೆ ಮಾಡಲಾಗಿತ್ತು. ಈ ಜಲವರ್ಣದ ಚಿತ್ರವನ್ನು ರಚಿಸಿದ್ದು ರಾಜಾ ರವಿ ವರ್ಮಾ ಎಂದು ಕೆಲವರು ಹೇಳುತ್ತಾರಾದರೂ, ಅದರ ನೈಜ ಸೃಷ್ಟಿಕರ್ತ ಎಸ್‌.ಎಲ್‌. ಹಲ್ದಂಕರ್‌. ಅವರು ಗೀತಾ ಅವರ ತಂದೆ.

ಗೀತಾ ಅವರು ತಮ್ಮ 12ನೇ ವಯಸ್ಸಿನಲ್ಲಿ ದೀಪಾವಳಿ ಹಬ್ಬದ ದಿನ ಸೀರೆ ಧರಿಸಿ, ದೀಪ ಹಿಡಿದು ನಿಂತಿದ್ದರು. ಗಾಳಿಯಿಂದ ಜ್ವಾಲೆ ರಕ್ಷಿಸಲು ಕೈಯನ್ನು ಅಡ್ಡ ಹಿಡಿದಿದ್ದರು. ಇದನ್ನು ಗಮನಿಸಿದ ಅವರ ತಂದೆ ಹಲ್ದಂಕರ್‌ ಅವರು, ಅದೇ ರೀತಿ ನಿಲ್ಲುವಂತೆ ಸೂಚಿಸಿದ್ದರು. ಮೂರು ತಾಸು ಗೀತಾ ನಿಂತಿದ್ದರು. ಮೂರು ದಿನಗಳಲ್ಲಿ ಚಿತ್ರ ಮೈದಳೆದಿತ್ತು.

ಈ ಚಿತ್ರವನ್ನು ಫ್ರಾನ್ಸ್‌ನ ಕಲಾಪ್ರೇಮಿಯೊಬ್ಬರು 8 ಕೋಟಿ ರು.ಗೆ ಕೇಳಿದ್ದರು ಎಂದು ಸ್ವತಃ ಗೀತಾ ಅವರೇ ಕೇಳಿಕೊಂಡಿದ್ದರು. ಮೈಸೂರಿನ ಗ್ಯಾಲರಿ ಈ ಚಿತ್ರವನ್ನು ಬಹಳ ಹಿಂದೆಯೇ 300 ರು.ಗೆ ಖರೀದಿಸಿತ್ತು.

click me!