
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹುದ್ದೆಗೆ ಅನೇಕ ತಿಂಗಳಿಂದ ನಡೆದ ಹಗ್ಗಜಗ್ಗಾಟ ಮುಕ್ತಾಯದ ಹಂತಕ್ಕೆ ಬಂದಿದ್ದು, ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೇ ಮುಂದುವರೆಯುವುದು ಬಹುತೇಕ ಖಚಿತವಾದಂತಾಗಿದೆ.
ರಾಜ್ಯದ ಎಲ್ಲ ಹಿರಿಯ ನಾಯಕರೊಂದಿಗೆ ಚಿಂತನ-ಮಂಥನ ನಡೆಸಿದ ನಂತರ ಸಾಕಷ್ಟು ಅಳೆದೂ ತೂಗಿದ ನಂತರ ಕಾಂಗ್ರೆಸ್ಸಿನ ವರಿಷ್ಠರು ಸದ್ಯದ ಪರಿಸ್ಥಿತಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಹಾಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನೇ ಮುಂದುವರೆಸುವುದು ಸೂಕ್ತ ಎಂಬ ನಿಲುವಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಕಳೆದ ಒಂದು ತಿಂಗಳಿಂದ ಅಧ್ಯಕ್ಷ ಗಾದಿಗೆ ಸಂಬಂಧಿಸಿದಂತೆ ನಡೆದ ಕಸರತ್ತು ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಪರಮೇಶ್ವರ್ ಅವರ ಮುಂದುವರಿಕೆ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ. ಪರಂಗೆ ಮತ್ತೆ ಅಧ್ಯಕ್ಷಗಿರಿ ದೊರೆಯುವುದು ಘೋಷಣೆಯಾದರೆ ಅವರು ಗೃಹ ಸಚಿವ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಡಿಕೆಶಿ, ಎಸ್ಸಾರ್ಪಿ ಔಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರ ಹೆಸರುಗಳೂ ಪ್ರಬಲವಾಗಿ ಕೇಳಿಬಂದಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವುದರಿಂದ ಪ್ರಬಲ ಸಮುದಾಯಗಳಾದ ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಪರಮೇಶ್ವರ್ ಪರ ಅನೇಕ ಅಂಶಗಳು ಪೂರಕವಾಗಿದ್ದರಿಂದ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲು ಹೈಕಮಾಂಡ್ ಒಲವು ವ್ಯಕ್ತಪಡಿಸಿತು. ಹೀಗಾಗಿ, ಈ ಇಬ್ಬರೂ ನಾಯಕರಿಗೆ ಪರ್ಯಾಯವಾಗಿ ಏನಾದರೂ ಜವಾಬ್ದಾರಿ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ.
ನವದೆಹಲಿಯಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿ ನಿವಾಸದಲ್ಲಿ ಸೋಮವಾರ ದಿನವಿಡೀ ನಡೆದ ಸರಣಿ ಸಭೆಯಲ್ಲಿ ರಾಜ್ಯದ ಬಹುತೇಕ ನಾಯಕರ ಅಭಿಪ್ರಾಯದ ಮೇರೆಗೆ ಪರಮೇಶ್ವರ್ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಲು ಹೈಕಮಾಂಡ್ ತೀರ್ಮಾನಿಸಿದೆ. ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ರಾಜ್ಯದ ಉಸ್ತುವಾರಿ ವೇಣುಗೋಪಾಲ ಹಾಗೂ ಹೈಕಮಾಂಡ್‌ಗೆ ಒಲವು ಇದ್ದರೂ ರಾಜ್ಯದ ಅನೇಕ ಹಿರಿಯ ಮುಖಂಡರ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಶಿವಕುಮಾರ್ ಅಧ್ಯಕ್ಷ ಸ್ಥಾನದ ಕನಸು ನನಸಾಗಲಿಲ್ಲ. ಲಿಂಗಾಯತರ ಮತ ಪಡೆಯಲು ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಪ್ರತಿಪಾದನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಷ್ಠರ ಮುಂದೆ ಬಲವಾಗಿ ಪ್ರತಿಪಾದಿಸಿದರಾದರೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಪರಂ ಅಥವಾ ಶಿವಕುಮಾರ್ ಪೈಕಿ ಒಬ್ಬರನ್ನು ಆಯ್ಕೆಗೆ ಮಾಡಿ ಎಂದಾಗ ಬೇರೆ ದಾರಿ ಇಲ್ಲದೇ ಪರಂ ಕಡೆ ಒಲವು ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ. ಈ ನಡುವೆ, ಸಚಿವ ಎಂ.ಬಿ. ಪಾಟೀಲರ ಹೆಸರೂ ಕೇಳಿಬಂದಿತ್ತು.
ಪರಮೇಶ್ವರ್ ಪರ ನಿಂತ ಖರ್ಗೆ: ಒಂದು ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕೀಯಕ್ಕೆ ಬರಲಿದ್ದು, ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲು ಹಿಂದೇಟು ಹಾಕಿದರು. ಬದಲಾಗಿ ಪರಮೇಶ್ವರ್'ರನ್ನೇ ಮುಂದುವರಿಸಬೇಕೆಂಬ ಒತ್ತಾಯವನ್ನು ಹೈಕಮಾಂಡ್'ಗೆ ಮಾಡಿದರು.
ಅಹಿಂದ ಟ್ರಂಪ್ ಕಾರ್ಡ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳಸಿದ ಅಹಿಂದ ಟ್ರಂಪ್ ಕಾರ್ಡ್'ನ್ನೇ ಮುಂದಿನ ಚುನಾವಣೆಯಲ್ಲಿ ಬಳಸಬೇಕು. ರಾಜ್ಯದಲ್ಲಿ ಪ್ರಬಲ ಸಮುದಾಯಗಳು ಬಿಜೆಪಿ ಹಾಗೂ ಜೆಡಿಎಸ್ ಜೊತೆ ಗುರುತಿಸಿಕೊಳ್ಳುವಂತಹ ಸಾಧ್ಯತೆ ಇದೆ. ಇಂತಹ ಸಂದರವಭದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರು ಕಾಂಗ್ರೆಸ್'ನ್ನು ಬೆಂಬಲಿಸಲು ದಲಿತ ವರ್ಗಕ್ಕೆ ಸೇರಿದ ಪರಮೇಶ್ವರ್ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರಿಸಿದರೆ ಖಂಡಿತ ಚುನಾವಣೆ ವೇಳೆ ಪರಿಣಾಮ ಬೀಳುತ್ತದೆ ಎಂಬ ಅಭಿಪ್ರಾಯವನ್ನು ಬಹುತೇಕ ಹಿರಿಯರು ಸ್ಪಷ್ಟವಾಗಿ ಹೈಕಮಾಂಡ್'ಗೆ ಹೇಳಿದರು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.