ರಾಮಮಂದಿರಕ್ಕೆ ನಿಧಿ ಸಮರ್ಪಣೆ ಸಂತ ಸಮಾವೇಶ

By Kannadaprabha NewsFirst Published Jan 7, 2021, 12:23 PM IST
Highlights

ಸಂಕ್ರಮಣದಿಂದ ರಾಮಮಂದಿರ ನಿರ್ಮಾಣದ ಅಭಿಯಾನ ಆರಂಭವಾಗಲಿದ್ದು, ಶ್ರೀಮಠದ ಎಲ್ಲಾ ಶಾಖೆಗಳು ಸಂಪೂರ್ಣವಾಗಿ ಮುಂದೆ ನಿಂತು ನಿಧಿ ಸಮರ್ಪಣೆಗಾಗಿ ಶ್ರಮಿಸಲಿವೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಬೆಂಗಳೂರು(ಜ.07): ರಾಮನ ಆಲಯ ಒಬ್ಬ ವ್ಯಕ್ತಿಯಿಂದ ಆಗುವುದಲ್ಲ. ನಮ್ಮೆಲ್ಲರ ಶ್ರದ್ಧಾಭಕ್ತಿಯಿಂದ ನೆರವೇರಬೇಕಿದೆ. ಸಂಕ್ರಮಣದಿಂದ ರಾಮಮಂದಿರ ನಿರ್ಮಾಣದ ಅಭಿಯಾನ ಆರಂಭವಾಗಲಿದ್ದು, ಶ್ರೀಮಠದ ಎಲ್ಲಾ ಶಾಖೆಗಳು ಸಂಪೂರ್ಣವಾಗಿ ಮುಂದೆ ನಿಂತು ನಿಧಿ ಸಮರ್ಪಣೆಗಾಗಿ ಶ್ರಮಿಸಲಿವೆ ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಸಂತ ಸಮಾವೇಶ’ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಮಂದಿರ ರಾಮನಿಗಾಗಿ ಅಲ್ಲ, ಅದು ನಮ್ಮೆಲ್ಲರ ಆಧ್ಯಾತ್ಮಿಕ ಚೈತನ್ಯಕ್ಕಾಗಿ. ಆದಿಚುಂಚನಗಿರಿ ಮತ್ತು ಅಯೋಧ್ಯೆ ನಡುವೆ ಅವಿನಾಭಾವ ಸಂಬಂಧವಿದೆ. ಅಯೋಧ್ಯೆಯಿಂದ ಗೊರಖ್‌ನಾಥರು ಆದಿಚುಂಚನಗಿರಿಗೆ ಬಂದು ಧ್ಯಾನ ಮಾಡಿ ಮೊದಲು ಮಠ ಸ್ಥಾಪಿಸಿದ್ದರು. ನಂತರ ಕೊನೆಯ ಮಠವಾಗಿ ಗೊರಕ್‌ಪುರದಲ್ಲಿ ನಿರ್ಮಿಸಿದ್ದಾರೆ ಎಂದರು.

ಪೂರ್ವದಲ್ಲಿ ನಮ್ಮೆಲ್ಲರ ಹಣ ಭೋಗಕ್ಕಾಗಿರದೆ, ತ್ಯಾಗಕ್ಕಾಗಿತ್ತು. ಧರ್ಮ ನಮ್ಮ ಆಸ್ತಿ. ಹಣ ನನ್ನ ಆಸ್ತಿಯಲ್ಲ ಎಂಬುದನ್ನು ಶ್ರೀರಾಮ ವನವಾಸಕ್ಕೆ ಹೋಗುವಾಗ ಹೇಳಿದ್ದ. ಪ್ರತಿ ಹಳ್ಳಿಗಳಲ್ಲಿಯೂ ರಾಮಮಂದಿರ ನಿರ್ಮಾಣವಾಗಿದ್ದವು. ಆ ಎಲ್ಲಾ ರಾಮಮಂದಿರಗಳ ಪ್ರತಿಫಲ ಇಂದಿನ ರಾಮಮಂದಿರವಾಗಿದೆ. ರಾಮಮಂದಿರ ನಿರ್ಮಾಣ ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರಿಯ ಪ್ರಚಾರಕ ಸುಧೀರ್‌ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಭಾರತದ ಜನರಲ್ಲಿ ಪ್ರಭಾವ ಬೀರಿವೆ. ರಾಮನ ಜನ್ಮಸ್ಥಳದಲ್ಲಿ ಮಂದಿರ ಕಟ್ಟುವ ಉದ್ದೇಶ ಇದಾಗಿದೆ. 70 ವರ್ಷಗಳ ಸುದೀರ್ಘ ಕಾಲ ನ್ಯಾಯಾಲಯದಲ್ಲಿದ್ದು, ಈಗ 14 ಸಾವಿರ ಚದರಡಿ ಪ್ರದೇಶ ರಾಮಮಂದಿರಕ್ಕೆ ಸೇರಿದೆ ಎಂದು ಇತ್ಯರ್ಥವಾಗಿದೆ. ರಾಮಮಂದಿರ ನಿರ್ಮಾಣ ಹಿಂದೂ ಸಮಾಜದ ಜವಾಬ್ದಾರಿಯಾಗಿದೆ. ಅಲ್ಲಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಸಹ ಸರ್ಕಾರದ ಜವಾಬ್ದಾರಿ ಎಂದು ನುಡಿದರು.

ಸುಳ್ಳಿನ ರಾಜಕೀಯವನ್ನು ಜನರು ತಿರಸ್ಕರಿಸಿದ್ದಾರೆ, ಕರ್ನಾಟಕ ಚುನಾವಣೆಯೇ ಉದಾಹರಣೆ: ಆರ್‌ಸಿ

ಉಡುಪಿ ಪೇಜಾವರ ಮಠದ ಸ್ವಾಮೀಜಿ ಹಾಗೂ ಶ್ರೀರಾಮ ಮಂದಿರ ನಿರ್ಮಾಣದ ಟ್ರಸ್ಟಿವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ರಾಮನ ಆರಾಧನೆ ಪ್ರತಿನಿತ್ಯ ನಡೆದರೆ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ. ರಾಮಮಂದಿರ ನಿರ್ಮಾಣ ಕನಸು ನನಸಾಗಿದೆ. ಮುಂದೆ ರಾಮರಾಜ್ಯ ಆರಂಭವಾಗಬೇಕು. ರಾಮಮಂದಿರವನ್ನು ಅದೇ ರೀತಿ ಉಳಿಸಿಕೊಳ್ಳುತ್ತೇವೆ ಎಂಬ ಸಂಕಲ್ಪ ಮಾಡಬೇಕಿದೆ ಎಂದು ಕರೆ ನೀಡಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ಚೆನ್ನಸಿದ್ದರಾಯ ಸ್ವಾಮೀಜಿ, ಅರಕಲಗೂಡು ಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗಿನ ರೇಣುಕಾನಂದ ಸ್ವಾಮೀಜಿ, ವೇದಾನಂದ, ಕ್ಷೇತ್ರಿಯ ಪ್ರಚಾರಕರಾದ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಗಣ್ಯರು ಉಪಸ್ಥಿತರಿದ್ದರು.

click me!