ಮಂಗಳೂರು, ಮುಂಬೈ, ದೆಹಲಿ: ಜಾರ್ಜ್ ಹೆಜ್ಜೆಯ ಜಾಡು ಹುಡುಕುತ್ತಾ!

By Web DeskFirst Published Jan 29, 2019, 11:13 AM IST
Highlights

ಅನಾರೋಗ್ಯದಿಂದ ನಿಧನರಾದ ಹಿರಿಯ ನಾಯಕ ಜಾರ್ಜ್ ಫರ್ನಾಂಡೀಸ್| ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್| ಇಹಲೋಕದ ಯಾತ್ರೆ ಮುಗಿಸಿದ ಹಿರಿಯ ಸಮಾಜವಾದಿ ನಾಯಕ| ಜಾರ್ಜ್ ಫರ್ನಾಂಡೀಸ್ ಹೋರಾಟದ ಇತಿಹಾಸ| ಕಾಂಗ್ರೆಸ್ ವಿರೋಧಿ ರಾಜಕಾರಣದ ಮುಂಚೂಣಿ ನಾಯಕ ಜಾರ್ಜ್| ಕಳಚಿತು ಸಭ್ಯ ರಾಜಕಾರಣದ ಕೊನೆಯ ಕೊಂಡಿ

ನವದೆಹಲಿ(ಜ.29): ಸರಳ ಜೀವಿ, ಹೋರಾಟಗಾರ, ಸಮಾಜವಾದಿ ನಾಯಕ, ಲೋಹಿಯಾವಾದಿ, ಮಾಜಿ ರಕ್ಷಣಾ ಸಚಿವ ಹೀಗೆ ಅವರನ್ನು ಏನು ಬೇಕಾದ್ರೂ ಕರೆಯಿರಿ. ಕೊನೆಯಲ್ಲಿ ಅವರು ನೆನಪಾಗೋದು ನಮ್ಮೆಲ್ಲರ ಪ್ರೀತಿಯ ಜಾರ್ಜ್ ಫರ್ನಾಂಡೀಸ್ ಎಂದೇ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನರಾಗಿದ್ದಾರೆ. ಅಲ್ಜೈಮರ್ ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್ ಇತ್ತೀಚೆಗೆ H1N1 ಸೋಂಕಿಗೆ ತುತ್ತಾಗಿದ್ದು, ತಮ್ಮ 88ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಾರ್ಜ್ ರಾಜಕೀಯ ಜೀವನವನ್ನೊಮ್ಮೆ ಮೆಲುಕು ಹಾಕಿದಾಗ, ಸಿದ್ದಾಂತದೊಂದಿಗೆ ರಾಜಿ ಇಲ್ಲದ, ಹೋರಾಟದ ಇತಿಹಾಸವೊಂದು ತೆರೆದುಕೊಳ್ಳುತ್ತದೆ.1930 ಜೂನ್ 3ರಂದು ಮಂಗಳೂರಿನಲ್ಲಿ ಜನಿಸಿದ ಜಾರ್ಜ್ ಫರ್ನಾಂಡಿಸ್,  ತಮ್ಮ 19ನೇ ವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ, ಸಮಾಜವಾದಿ ನಾಯಕ ಲೋಹಿಯಾ ಪರಿಚಯದಿಂದ ಹೋರಾಟ ಆರಂಭ ಮಾಡಿದ್ದರು.

ಮುಂಬೈನಲ್ಲಿ ರೈಲ್ವೇ ಕಾರ್ಮಿಕ ಸಂಘದ ನಾಯಕರಾಗಿದ್ದ ಜಾರ್ಜ್, ಹಲವು ಧೀರ ಹೋರಾಟಗಳ ಮೂಲಕ ಗಮನ ಸೆಳೆದವರು.ತುರ್ತುಪರಿಸ್ಥಿತಿ ವೇಳೆ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಭೂಗತರಾಗಿದ್ದುಕೊಂಡೇ ಬಂಡಾಯವೆದ್ದಿದ್ದರು. ಈ ವೇಳೆ  ಬರೋಡಾ ಡೈನಮೈಟ್ಸ್ ಪ್ರಕರಣದಲ್ಲಿ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಡಲಾಗಿತ್ತು.

ಆದರೆ ದಬ್ಬಾಳಿಕೆ ಮೂಲಕ ಸರ್ಕಾರಕ್ಕೆ ಜಾರ್ಜ್ ಅವರ ಗಟ್ಟಿ ಇರಾದೆಯನ್ನು ಅಲುಗಾಡಿಸಲಾಗಲಿಲ್ಲ. ಜೀವನಪೂರ್ತಿ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿದ ಜಾರ್ಜ್, ಮುಂದೆ ನಡೆದ ಹಲವು ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲವಾಗಿ ನಿಂತರು.

ವಾಜಪೇಯಿ ಸರ್ಕಾರದಲ್ಲಿ ಎರಡು ಬಾರಿ ರಕ್ಷಣಾ ಸಚಿವರಾಗಿದ್ದ ಜಾರ್ಜ್, ಶಿಷ್ಟಾಚಾರ ಬದಿಗಿರಿಸಿ ತಮಗೊದಗಿಸಿದ್ದ ರಕ್ಷಣೆಯನ್ನು ನಿರಾಕರಿಸಿ ಸರಳತೆ ಮೆರೆದಿದ್ದರು. ಇವರ ಅವಧಿಯಲ್ಲೇ ಎನ್‌ಡಿಎ ಸರ್ಕಾರ ಪೋಖ್ರಾನ್-2 ಅಣು ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು ಎಂಬುದು ವಿಶೇಷ.

ಇಷ್ಟೇ ಅಲ್ಲದೇ ಪಾಕಿಸ್ತಾನಕ್ಕಿಂತಲೂ ಚೀನಾ ನಮ್ಮ ಮೊದಲ ವಿರೋಧಿ ಎಂದು ಹೇಳಿದ್ದ ಜಾರ್ಜ್. ಚೀನಾ ಕುರಿತು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದರು. ಅಲ್ಲದೇ ರಕ್ಷಣಾ ಸಚಿವರಾದ ಬಳಿಕ ಹಲವು ಬಾರಿ ಯುದ್ಧಭೂಮಿಗೆ ಭೇಟಿ ನೀಡಿದ್ದ ಜಾರ್ಜ್, ಸೈನಿಕರ ಕುಂದು ಕೊರತೆಗಳನ್ನು ಆಲಿಸಿ ತಕ್ಷಣವೇ ಅದಕ್ಕೆ ಪರಿಹಾರ ಸೂಚಿಸುವ ಬಗೆ ಅವರನ್ನು ಸೈನಿಕರ ಸಚಿವ ಎಂದೇ ಗುರುತಿಸುವಂತೆ ಮಾಡಿತ್ತು.

ಇದಕ್ಕೂ ಮೊದಲ ವಿ.ಪಿ.ಸಿ.ಗ್ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ ಜನಸಾಮಾನ್ಯರೊಂದಿಗೆ ಪ್ರಯಾಣಿಸಿದ್ದರು. ಅಲ್ಲದೇ ಕೊಂಕಣ್ ರೆಲ್ವೇ ಪ್ರಾರಂಭಿಸಿ ಈ ಭಾಗದ ಜನರ ಮನದಲ್ಲಿ ಅಜರಾಮರವಾಗಿ ಉಳಿದವರು ಜಾರ್ಜ್ ಫರ್ನಾಂಡೀಸ್. ಇಷ್ಟೇ ಅಲ್ಲದೇ ಮೊರಾರ್ಜಿ ದೇಸಾಯಿ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದರು.

ಆದರೆ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದಾಗ ಸೈನಿಕರ ಶವ ಪೆಟ್ಟಿಗೆ ಹಗರಣದಲ್ಲಿ ಜಾರ್ಜ್ ಹೆಸರು ಕೇಳಿ ಬಂದಿತ್ತು. ಹುತಾತ್ಮರ ಶವಪೆಟ್ಟಿಗೆಯಲ್ಲೂ ಹಣ ಮಾಡಿಕೊಳ್ಳುತ್ತಾರಲ್ಲ ಎಂಬ ಆಕ್ರೋಶ ಜನಸಾಮಾನ್ಯರಲ್ಲಿ ಹರಡಿತ್ತು.

ಇದನ್ನರಿತ ಜಾರ್ಜ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿದರು. ನಂತರ ನಡೆದ ಆಯೋಗದ ವಿಚಾರಣೆ ಬಳಿಕ ದೋಷಮುಕ್ತರಾಗಿ ಜಾರ್ಜ್ ಹೊರಬಂದಿದ್ದು ಕೂಡ ಇತಿಹಾಸವೇ.

ಜಾರ್ಜ್ ಪತ್ರಕರ್ತರಾಗಿ, ಲೇಖಕರಾಗಿ, ಕೃಷಿಕರಾಗಿ, ಕಾರ್ಮಿಕ ನಾಯಕರಾಗಿ ಪ್ರಸಿದ್ಧರಾಗಿದ್ದರು. ಸರಳ ಜೀವನದ ಪ್ರತೀಕವಾಗಿದ್ದರು. ಜಾರ್ಜ್ ನಿಧನದಿಂದಾಗಿ ಭಾರತದ ಸಭ್ಯ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದ್ದು, ಅವರ ಆದರ್ಶ ಪಾಲನೆಯೊಂದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಹೇಳಬಹುದು.

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ

ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಮೋದಿ ಸೇರಿದಂತೆ ಗಣ್ಯರ ಸಂತಾಪ!

click me!