ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಗಲಭೆ : ಅಧಿಕಾರಿ ಮೇಲೆ ವಿದೇಶಿಗನ ಹಲ್ಲೆ

By Web DeskFirst Published Dec 20, 2018, 9:46 AM IST
Highlights

ದಕ್ಷಿಣ ಕೊರಿಯಾದ ಪ್ರಜೆಯೊಬ್ಬ ವಲಸೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು :  ಹೊರಗೆ ಕಳುಹಿಸದೇ ಸುಮಾರು ಮೂರು ತಾಸು ಕೂರಿಸಿದ್ದ ಕಾರಣ ಕೋಪಗೊಂಡಿದ್ದ ದಕ್ಷಿಣ ಕೊರಿಯಾದ ಪ್ರಜೆಯೊಬ್ಬ ವಲಸೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕೊರಿಯಾದ ಪ್ರಜೆ ಸಿಯೋಗಾವ್‌ ಪಾರ್ಕ್ ಬಂಧಿತ ಆರೋಪಿ. ವಿಮಾನ ನಿಲ್ದಾಣದ ವಲಸೆ ಅಧಿಕಾರಿ ವೈ.ಎಸ್‌.ಸೈನಿ ಎಂಬುವರು ಹಲ್ಲೆಗೊಳಗಾಗಿದ್ದು, ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಬ್ರೆಜಿಲ್‌ನಿಂದ ನಗರದ ನಿಲ್ದಾಣಕ್ಕೆ ಮಂಗಳವಾರ ಸಂಜೆ 7.30ರ ಬಂದಿಳಿದಿದ್ದ ಸಿಯೋಗಾವ್‌, ನಿಲ್ದಾಣದಿಂದ ಹೊರಗೆ ಬರುತ್ತಿದ್ದ. ಆತನನ್ನು ತಡೆದಿದ್ದ ವಲಸೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ವೀಸಾ ಮೇಲೆ ಬಂದರೆ ಶುಲ್ಕ ಕಟ್ಟಬೇಕು. ಅದರಂತೆ ನಿಗದಿತ ಶುಲ್ಕ ತುಂಬಿ ವೀಸಾ ತೆಗೆದುಕೊಂಡು ಹೊರಗೆ ಹೋಗುವಂತೆ ಸಿಯೋಗಾವ್‌ಗೆ ವಲಸೆ ಅಧಿಕಾರಿಗಳು ಹೇಳಿದ್ದರು.

ಆರೋಪಿ, ಶುಲ್ಕ ಪಾವತಿಗಾಗಿ ಕ್ರೆಡಿಟ್‌ ಕಾರ್ಡ್‌ ಕೊಟ್ಟಿದ್ದ. ಸ್ವೈಪಿಂಗ್‌ ಉಪಕರಣದಲ್ಲಿ ಕಾರ್ಡ್‌ ಕೆಲಸ ಮಾಡಿರಲಿಲ್ಲ. ಆಗ ಆರೋಪಿ, ನಿಲ್ದಾಣದಿಂದ ಹೊರಗೆ ಹೋಗಿ ಎಟಿಎಂ ಘಟಕದಿಂದ ಹಣ ಡ್ರಾ ಮಾಡಿಕೊಂಡು ಬಂದು ಕೊಡುವುದಾಗಿ ಅಧಿಕಾರಿಗಳಿಗೆ ಹೇಳಿದ್ದ. ಅದಕ್ಕೆ ಒಪ್ಪದ ಅಧಿಕಾರಿಗಳು, ರಾತ್ರಿ 11ರವರೆಗೂ ಸಿಯೋಗಾವ್‌ನನ್ನು ಹೊರಗೆ ಬಿಟ್ಟಿರಲಿಲ್ಲ. ಕಾದು ಕಾದು ಕೋಪಗೊಂಡಿದ್ದ ಆರೋಪಿ, ಸೈನಿ ಅವರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದಾಗಿ ಸೈನಿ ಅವರ ಕಣ್ಣಿಗೆ ಗಾಯವಾಗಿತ್ತು. ನಿಲ್ದಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಯಕೊಂಡ ಬಳಿಕ ಸೈನಿ ಅವರು ದೂರು ನೀಡಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವಲಸೆ ಅಧಿಕಾರಿಗಳ ಬಳಿ ಇದ್ದ ಸ್ವೈಪಿಂಗ್‌ ಉಪಕರಣ ಸರಿ ಇರಲಿಲ್ಲ. ಎಟಿಎಂ ಘಟಕದಿಂದ ಹಣ ತಂದು ಕೊಡುವುದಾಗಿ ಹೇಳಿದರೂ ಒಪ್ಪಲಿಲ್ಲ. ಇದರಿಂದ ಕೋಪಗೊಂಡು ಹಲ್ಲೆ ನಡೆಸಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಪ್ರವಾಸಕ್ಕೆ ಬಂದಿದ್ದ ವೇಳೆ ಈ ರೀತಿ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

click me!