ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ. ಹೀಗಾಗಿ, ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರು (ಮೇ 08): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡಲು ಅರ್ಹರಾಗಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತನಿಖೆಗೆ ನೀಡುವ ಅಗತ್ಯವೇ ಇಲ್ಲವೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ಎಸ್‌ಐಟಿಯಿಂದ ಸೂಕ್ತವಾಗಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ನಮ್ಮ ಪೊಲೀಸರು ಸಮರ್ಥರಿದ್ದಾರೆ. ರಾಜಕೀಯ ಹೇಳಿಕೆ ಹೊರತುಪಡಿಸದರೆ ತನಿಖೆ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ. ಜೊತೆಗೆ, ಈ ಹಿಂದಿನ ಬಿಜೆಪಿ ಸರ್ಕಾರ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಿಲ್ಲ. ನಾವು ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ ತಂಡಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.
ಹೆಚ್.ಡಿ. ರೇವಣ್ಣಗೆ ಒಂದು ವಾರ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಹಾಸನ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ ಐಟಿ ಬಹಳ ಗಂಭೀರವಾಗಿ ತನಿಖೆ ಮಾಡ್ತಿದ್ದಾರೆ. ಪ್ರಜ್ವಲ್ ದೇಶ ಬಿಟ್ಟು ಹೋಗಿದ್ದಾರೆ ಅನ್ನೋದು ಎಲ್ಲಿರಿಗೂ ಗೊತ್ತಿದೆ. ಅವರನ್ನ ಕರೆದುಕೊಂಡು ಬರೋಕೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ. ಇಂಟರ್ ಪೋಲ್ ನವರು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡ್ತಾರೆ. 197 ದೇಶಗಳಲ್ಲಿ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ಬರೋತನಕ ಹೆಚ್ಚಿನ ವಿಚಾರಣೆ ನಡೆಯೋದು ಕಷ್ಟ. ಪ್ರಜ್ವಲ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಮೊದಲು ಜರ್ಮನಿಗೆ ಹೋಗಿದ್ದು ಗೊತ್ತಾಗಿತ್ತು. ದುಬೈಗೆ ಹೋಗಿದ್ದಾರೆ ಅದೆಲ್ಲ ಇಲ್ಲ. ಇನ್ನೂ ನಿಖರವಾಗಿ ಎಲ್ಲಿದ್ದಾರೆ ಗೊತ್ತಿಲ್ಲ ಎಂದರು.
ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ, ಇನ್ನೂ ಮೂರು ಜನ ಅರೆಸ್ಟ್ ಮಾಡಲಾಗಿದೆ. ಇದರ ತನಿಖೆ ನಡೆಯುತ್ತಿದೆ. ಇದುವರೆಗೆ ಎಸ್‌ಐಟಿನಲ್ಲಿ ನಿಖರವಾಗಿ ಎಷ್ಟು ಪ್ರಕರಣ ದಾಖಲಾಗಿದೆ ಎಂಬ ಅಂಕಿ-ಅಂಶ ಇಲ್ಲ. ಸುಮಾರು 5 ಜನರ ಮೇಲೆ FIR ಆಗಿರಬಹುದು. ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಲಾಗಿದೆ ಎಂದು ತಿಳಿಸಿದರು.
ಇನ್ನು ವಕೀಲ ದೇವರಾಜೇಗೌಡ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಜೊತೆಗೆ ಮಾತಾಡಿದ್ದಾರೆನ್ನಲ್ಲಾದ ಆಡಿಯೋ ರಿಲೀಸ್ ಮಾಡಿರುವುದನ್ನು ಎಸ್‌ಐಟಿ ಗಮನಿಸುತ್ತದೆ. ಆದರೆ, ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಆದರೆ, ಆರೋಪಿಗಳಿಗೆ ಶಿಕ್ಷೆ ಆಗಬಾರದು ಅಂತೇನಿಲ್ಲವಲ್ಲ. ದೇವರಾಜೇಗೌಡ ಅವರು ಎಸ್‌ಐಟಿ ಅಧಿಕಾರಿಗಳೇ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪ ಮಾಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಆ ರೀತಿ ಹೇಳಿದರೆ, ಈ ಬಗ್ಗೆ ಗಮನಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್; ಡಿಕೆಶಿ ಭೇಟಿಗಾಗಿ ದೇವರಾಜೇಗೌಡನೇ ದುಂಬಾಲು ಬಿದ್ದಿದ್ದ: ಶಿವರಾಮೇಗೌಡ
ಎಸ್‌ಐಟಿ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಆದರೆ, ಅಲ್ಲಿ ನಡೆಸ ಸಭೆಯಲ್ಲಿ ಏನು ನಡೆದಿದೆ ಎಂಬುದನ್ನು ಮಾಧ್ಯಮಗಳೆದುರು ಹೇಳಲಾಗಲ್ಲ. ರಾಜ್ಯದ ಪ್ರಮುಖ ಕೇಸ್‌ನ ಬಗ್ಗೆ ಸಿಎಂ ಹಾಗೂ ಗೃಹಸಚಿವರಿಗೆ ಮಾಹಿತಿ ಇರಬೇಕಲ್ವಾ? ಹಾಗಾಗಿ ಎಸ್‌ಐಟಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.