ಕಾಂಗ್ರೆಸ್‌ಗೆ ‘ಆಪರೇಷನ್‌ ಕಮಲ’ ಆತಂಕ : ಸತೀಶ್ ಜಾರಕಿಹೊಳಿ ಎಚ್ಚರಿಕೆ

By Web DeskFirst Published Dec 15, 2018, 8:21 AM IST
Highlights

ಮತ್ತೆ ಕರ್ನಾಟದಲ್ಲಿ ಕಾಂಗ್ರೆಸ್ ನಾಯಕರಿಗೆ ಹೊಸ ಆತಂಕವೊಂದು ಎದುರಾಗಿದೆ. ಆರಂಭದಿಂದಲೂ ಅಸಮಾಧಾನಗೊಂಡ ಸತೀಶ್ ಜಾರಕಿಹೊಳಿ ಇದೀಗ ಕಾಂಗ್ರೆಸ್ ಮುಖಂಡರಿಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. 

ಸುವರ್ಣ ವಿಧಾನಸೌಧ :  ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲದೇ ಇರುವುದು ಹಾಗೂ ಇತ್ತೀಚಿನ ವಿಧಾನಪರಿಷತ್‌ ಸಭಾಪತಿ ಸ್ಥಾನಮಾನ ದಕ್ಷಿಣ ಭಾಗದವರ ಪಾಲಾಗಿರುವುದು ಕಾಂಗ್ರೆಸ್‌ ಪಕ್ಷದ ಉತ್ತರ ಕರ್ನಾಟಕ ಭಾಗದ ಶಾಸಕರಲ್ಲಿ ಅತೃಪ್ತಿಯನ್ನು ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದೇ ಹೋದರೆ ಉತ್ತರ ಕರ್ನಾಟಕ ಭಾಗದ ಶಾಸಕರು ಕಾಂಗ್ರೆಸ್‌ ಹೈಕಮಾಂಡ್‌ ಕದ ತಟ್ಟುವ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಾಗೂ ಶಾಸಕ ಸತೀಶ್‌ ಜಾರಕಿಹೊಳಿ, ಪಕ್ಷ ಮತ್ತು ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ನಮ್ಮ ಬೇಡಿಕೆ ಈಡೇರದಿದ್ದರೆ ಹೈಕಮಾಂಡ್‌ ಮೊರೆ ಹೋಗುವುದಾಗಿ ಹೇಳಿದ್ದಾರೆ. ಗುರುವಾರ ಇದೇ ಮಾತುಗಳನ್ನು ಮಾಜಿ ಸಚಿವ ಎಂ.ಬಿ. ಪಾಟೀಲ್‌ ಆಡಿದ್ದರು. ಈಗ ಇದಕ್ಕೆ ಸತೀಶ ಜಾರಕಿಹೊಳಿ ಅವರೂ ದನಿಗೂಡಿಸಿದ್ದಾರೆ.

ಹೀಗಾಗಿ ಉತ್ತರ ಕರ್ನಾಟಕದ ಶಾಸಕರಿಗೆ ನ್ಯಾಯ ದೊರಕಿಸಿಕೊಡಲು ಒಗ್ಗೂಡಿರುವ ಶಾಸಕರ ಗುಂಪಿನ ನೇತೃತ್ವ ವಹಿಸಿರುವ ಸತೀಶ್‌ ನೀಡಿರುವ ಈ ಎಚ್ಚರಿಕೆ ಕಾಂಗ್ರೆಸ್‌ನಲ್ಲಿರುವ ಆಂತರಿಕ ಬೇಗುದಿಯನ್ನು ಮತ್ತಷ್ಟುತೀವ್ರಗೊಳಿಸುವ ಸಾಧ್ಯತೆ ಇದೆ.

ಅನ್ಯಾಯ ಸರಿಯಾಗಬೇಕು:

‘ಅಧಿಕಾರ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದು ಸರಿಯಾಗಬೇಕು. ಹೀಗಾಗಿ ಪಕ್ಷ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಮುಂಬರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾವು ಪ್ರಸ್ತಾಪ ಮಾಡುತ್ತೇವೆ. ಜತೆಗೆ, ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರ ಮುಂದೆಯೂ ಈ ವಿಚಾರ ಪ್ರಸ್ತಾಪಿಸುತ್ತೇವೆ. ಇಷ್ಟಾಗಿಯೂ ನಮ್ಮ ಬೇಡಿಕೆಗಳು ಈಡೇರದಿದ್ದರೆ, ಹೈಕಮಾಂಡ್‌ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಲಿದೆ’ ಎಂದು ಜಾರಕಿಹೊಳಿ ಹೇಳಿದರು.

ಉತ್ತರ ಕರ್ನಾಟಕದ ಹಿರಿಯ ಶಾಸಕ ಎಸ್‌.ಆರ್‌. ಪಾಟೀಲ್‌ ಅವರಿಗೆ ಸಭಾಪತಿ ಹುದ್ದೆ ಕೈ ತಪ್ಪಿದ್ದು ಈ ಭಾಗದ ಶಾಸಕರು ಒಗ್ಗೂಡುವಂತೆ ಮಾಡಿದ್ದು, ಸರ್ಕಾರ ಹಾಗೂ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಒಗ್ಗೂಡಿ ಪ್ರಯತ್ನ ನಡೆಸುವಂತಹ ಬೆಳವಣಿಗೆಗೆ ಕಾರಣವಾಗಿದೆ. ಮಾಜಿ ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್‌ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರ ಗುರುವಾರ ಅನೌಪಚಾರಿಕ ಸಭೆ ನಡೆಸಿ ತಮಗೆ ಆಗುತ್ತಿರುವ ಅನ್ಯಾಯವನ್ನು ಹೈಕಮಾಂಡ್‌ ಗಮನಕ್ಕೆ ತರಲು ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪಕ್ಷದ ಪ್ರಮುಖ ಹುದ್ದೆಗಳಾದ ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ , ಪದಾಧಿಕಾರಿ ಸ್ಥಾನಗಳು ಮತ್ತು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಪ್ರಮುಖ ಖಾತೆಗಳೆಲ್ಲವೂ ದಕ್ಷಿಣ ಕರ್ನಾಟಕ ಶಾಸಕರ ಪಾಲಾಗಿವೆ. ಕಡಿಮೆ ಶಾಸಕರಿದ್ದರೂ ದಕ್ಷಿಣ ಕನ್ನಡದವರಿಗೆ ಹೆಚ್ಚಿನ ಸ್ಥಾನ ಮಾನ ನೀಡಲಾಗಿದೆ. ಉತ್ತರ ಕರ್ನಾಟಕದ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಪ್ರಾತಿನಿಧ್ಯ ಕಡಿಮೆಯಿದೆ. ಈ ತಾರತಮ್ಯ ಸರಿಹೋಗಬೇಕು. ಇದು ನಮ್ಮ ಆಗ್ರಹ.

- ಸತೀಶ್‌ ಜಾರಕಿಹೊಳಿ, ಯಮಕನಮರಡಿ ಶಾಸಕ

click me!