ಒಂದು ಎಕರೆ ಭೂಮಿಯಲ್ಲಿ 12 ಲಕ್ಷದವರೆಗೂ ಆದಾಯಗಳಿಸುವುದು ಹೇಗೆ..?

By Web DeskFirst Published Aug 1, 2018, 11:04 AM IST
Highlights

ಒಂದು ಎಕರೆ ಭೂಮಿಯಲ್ಲಿ ಈ ರೀತಿಯ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ 6 ರಿಂದ 12 ಲಕ್ಷದವರೆಗೂ ಕೂಡ ಆದಾಯ ಗಳಿಸಬಹುದು ಎಂದು ಕೃಷಿ ತಜ್ಞ ಸುಭಾಷ್ ಪಾಳೇಕರ್ ಹೇಳುತ್ತಾರೆ.

ಬೆಂಗಳೂರು : ‘ಒಂದು ತುಂಡು ಭೂಮಿ ಇದ್ದರೆ ಸಾಕು ಸುಖವಾಗಿ ಜೀವನ ನಡೆಸುವುದಕ್ಕೆ ಬೇಕಾಗುವಷ್ಟು ಆದಾಯವನ್ನು ಗಳಿಸಬಹುದು. ಒಂದು ಎಕರೆ ಭೂಮಿಯಲ್ಲಿ ಶೂನ್ಯ ಅಥವಾ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಕೆ ಮಾಡಿಕೊಂಡರೆ ವಾರ್ಷಿಕ 3 ದಿಂದ 6 ಲಕ್ಷ ರು. ಆದಾಯ ಗಳಿಸಬಹುದು. ನಮ್ಮ ನಿರೀಕ್ಷೆ ಪ್ರಕಾರ 12 ಲಕ್ಷ ರು. ಆದಾಯ ಗಳಿಸಬಹುದು.’ 

ಇನ್ನೇನು ಕೃಷಿಯಲ್ಲಿ ಬದುಕಿಲ್ಲ. ಇರುವ ಜಮೀನು ಮಾರಿ ಬೇರೆ ಯಾವುದಾದರೂ ಉದ್ಯೋಗ ಮಾಡೋಣ ಎಂದು ಕೃಷಿಯಿಂದ ವಿಮುಖರಾದವರಿಗೆ ಶೂನ್ಯ ಬಂಡವಾಳ ಕೃಷಿ ಪದ್ಧತಿಯ ಮೂಲಕ ಹೊಸ ಮಾರ್ಗ ತೋರಿಸಿದ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ವಿಶ್ವಾಸದ ಮಾತಿದು. 

ಕೃಷಿ ಪದವಿ ಪಡೆದ ಅನೇಕ ಯುವಕರು ತಮ್ಮ ಜಮೀನಿನಲ್ಲಿ ಸಾವಿರಾರು ರು. ವೆಚ್ಚ ಮಾಡಿ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಖರೀದಿಸಿ ನಾಲ್ಕೈದು ವರ್ಷಗಳಲ್ಲಿ ಉತ್ತಮ ಇಳುವರಿ ಪಡೆದವರು ನಂತರದ ವರ್ಷದಲ್ಲಿ ಆದಾಯಕ್ಕಿಂತ ಹೆಚ್ಚು ಬಂಡವಾಳ ತೊಡಗಿಸ ಬೇಕಾಗಿ ಬರುವುದರಿಂದ ನಷ್ಟ ಅನುಭವಿಸುತ್ತಾರೆ. ಆಗ ನಾಗಪುರ ಬಳಿಯ ಸ್ಯಾಟ್ಪುಡಾ ಬುಡಕಟ್ಟು ಪ್ರದೇಶಕ್ಕೆ ತೆರಳಿ ಅಲ್ಲಿಯ ಜನರು ಅನುಸರಿಸುತ್ತಿರುವ ಶೂನ್ಯ ಬಂಡವಾಳ ಕೃಷಿ ಪದ್ಧತಿಯ ಬಗ್ಗೆ ತಿಳಿದುಕೊಂಡು ತಮ್ಮ ಜಮೀನಿನಲ್ಲಿ ಪ್ರಯೋಗ ಮಾಡಿ ಯಶಸ್ಸು ಕಾಣುತ್ತಾರೆ. ಇವರ ಯಶೋಗಾಥೆಯನ್ನು ರಾಜ್ಯದ ರೈತರಿಗೆ ತಿಳಿಸುವ ಮೂಲಕ ರಾಜ್ಯದಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ಧತಿ ಜಾರಿಗೆ ತರಲು ರಾಜ್ಯ ಸರ್ಕಾರ ಈಗ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಪಾಳೇಕರ್ ಅವರು ‘ಕನ್ನಡಪ್ರಭ’ ಜತೆ ಮಾತಾಡಿದರು.

ಲಾಭ ಇಲ್ಲ ಎಂದು ಹಳ್ಳಿಯ ಯುವ ಕರು ಕೃಷಿಯಿಂದ ವಿಮುಖರಾಗುತ್ತಿರುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗಲು ಕಾರಣವೇನು?

ವಿದೇಶಿ ಜೀವನ ಶೈಲಿಗೆ ಆಕರ್ಷಿತರಾಗಿದ್ದಾರೆ. ಕೃಷಿ ಮಾಡುವುದಕ್ಕೆ ಬಂಡವಾಳ ಬೇಕು. ಸಾಲ ಮಾಡಿದರೆ ವಾಪಸ್ ಪಾವತಿಗೆ ಸಾಧ್ಯವಿಲ್ಲ. ಬ್ಯಾಂಕ್ ಆಸ್ತಿ ಜಪ್ತಿ ಮಾಡುತ್ತೆ ಎಂಬ ಭಯಯಿಂದ ಕೇವಲ ಎಂಟು- ಹತ್ತು ಸಾವಿರ ರು.ಗಳಿಗೆ ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಇನ್ನೊಂದು ಕಡೆ ರೈತರನ್ನು ಮದುವೆ ಆಗುವುದಕ್ಕೂ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಗಳಿಂದ ಯುವಕರು ನಗರಗಳ ಕಡೆಗೆ ಸಾಗುತ್ತಿದ್ದಾರೆ. ಇದಕ್ಕೆ ಶೂನ್ಯ ಬಂಡವಾಳ ಕೃಷಿ ಪದ್ಧತಿ ಪರಿಹಾರ ನೀಡಲಿದೆ.

ಇತ್ತೀಚೆಗೆ ಕೃಷಿ ಕ್ಷೇತ್ರದತ್ತ ಯುವಕರು ಮತ್ತೆ ಮುಖ ಮಾಡುತ್ತಿದ್ದಾರೆಯೇ? 

ಕೈಗಾರಿಕೆಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳ, ಸ್ಪರ್ಧೆ, ಜನರ ಬೇಡಿಕೆಗಳು ಪೂರ್ಣಗೊಂಡಿ ರುವುದರಿಂದ ವಸ್ತುಗಳ ಮಾರಾಟದಲ್ಲಿ ಕುಂಠಿತವಾಗುತ್ತಿದೆ. ಕೈಗಾರಿಕೆಯಲ್ಲಿ ಯಾಂತ್ರೀಕರಣ ಹೆಚ್ಚಾಗಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಉದ್ಯೋಗ ಮತ್ತು ಆದಾಯವಿರುವ ಕೃಷಿ ಕ್ಷೇತ್ರಕ್ಕೆ ವಾಪಸ್ ಆಗುತ್ತಿದ್ದಾರೆ. ಈಗಾಗಲೇ ಅನೇಕ ಸಾಫ್ಟ್‌ವೇರ್ ಎಂಜಿನಿಯರ್, ಡಾಕ್ಟರ್ ಗಳು ಹೆಚ್ಚು ಆದಾಯ ವಿದ್ದರೂ ಕೃಷಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಒಂದು ಕಾರ್ಯಕ್ರಮದಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ಧತಿ ತಿಳಿಯುವುದಕ್ಕೆ ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ ಸೇರಿ 1200 ಕ್ಕಿಂತ ಹೆಚ್ಚು ಡಾಕ್ಟರ್, ಎಂಜಿನಿಯರ್ಗಳು ಬಂದಿದ್ದರು. ಅದರಲ್ಲಿ 900 ಕ್ಕೂ ಹೆಚ್ಚು
ಮಂದಿ ಸಾಫ್ಟ್‌ವೇರ್ ಉದ್ಯೋಗಿಗಳಿದ್ದರು. 

 ಶೂನ್ಯ ಬಂಡವಾಳ ಕೃಷಿಗೆ ರಾಸಾಯನಿಕ ಕೃಷಿ ಭೂಮಿಯ ಪರಿವರ್ತನೆ ಹೇಗೆ?

ಈಗಾಗಲೇ ರಾಸಾಯನಿಕ, ಸಾವಯವ ಕೃಷಿ ಪದ್ಧತಿಯಿಂದ ಕೃಷಿ ಭೂಮಿ ಬಂಜರು ಆಗಿದೆ. ಭಾರತೀಯ ನಾಟಿ ಹಸುವಿನ ಒಂದು ಗ್ರಾಂ ಸಗಣಿಯಲ್ಲಿ 300 ರಿಂದ 500 ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಒಂದು ಗ್ರಾಂನಷ್ಟು ಮಣ್ಣಿನಲ್ಲಿ ನೂರು ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಇವೆರಡು ಮಿಶ್ರಗೊಳ್ಳು ವುದರಿಂದ ಭೂಮಿ ಫಲವತ್ತಾಗುತ್ತದೆ. ಅಲ್ಲದೇ ಯಾವುದೇ ಬೆಳೆ ಶೇ.98.5ರಷ್ಟು ಪೌಷ್ಟಿಕಾಂಶ ಗಾಳಿ, ಬೆಳಕು, ವಾತಾವರಣದಿಂದ ಪಡೆದುಕೊಳ್ಳುತ್ತದೆ. ಶೇ.1.5ರಷ್ಟು ಮಾತ್ರ ಮಣ್ಣಿನಿಂದ ಪಡೆದುಕೊಳ್ಳುತ್ತದೆ. ಇದರಿಂದ ರಾಸಾಯನಿಕ ಕೃಷಿ ಭೂಮಿ ಪರಿವರ್ತನೆ ಸಮಸ್ಯೆಯಲ್ಲ.

ಕರ್ನಾಟಕ ಸರ್ಕಾರ ರೈತರ ಬೆಳೆಸಾಲಮನ್ನಾ ಘೋಷಣೆ ಮಾಡಿದೆಯಲ್ಲ?

ಸಾಲ ಮನ್ನಾದಿಂದ ರೈತರ ಸಮಸ್ಯೆಗಳು ಪರಿಹಾರವಾಗಲ್ಲ. ಶೂನ್ಯ ಬಂಡವಾಳ ಕೃಷಿಗೆ ಅನುಕೂಲವಾಗುವ ಉದ್ದೇಶದಿಂದ ರೈತರಿಗೆ ದೇಸಿ ಹಸು ನೀಡಬೇಕು.

ವಿಶ್ವನಾಥ ಮಲೆಬೆನ್ನೂರು

click me!