ಅಕ್ಟೋಬರ್ 28 ರಂದು ರಾಜ್ಯದಲ್ಲಿ ಮತ್ತೊಂದು ಚುನಾವಣೆ

By Web DeskFirst Published Oct 4, 2018, 9:25 AM IST
Highlights

ರಾಜ್ಯದಲ್ಲಿ ಮತ್ತೊಂದು ಚುನಾವಣೆಗೆ ಚುನಾವಣಾ ಆಯೋಗವು ದಿನಾಂಕ ಪ್ರಕಟ ಮಾಡಿದೆ. ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಅಕ್ಟೋಬರ್ 28 ರಂದು ನಡೆಯಲಿದೆ. 

ಬೆಂಗಳೂರು :  ಪ್ರವಾಹದಿಂದಾಗಿ ಹಾಗೂ ನಾನಾ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕಲಬುರಗಿ ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ವಿವಿಧ ಕಾರಣಗಳಿಂದಾಗಿ 9 ಜಿಲ್ಲೆಗಳಲ್ಲಿ ತೆರವಾಗಿರುವ 6 ಜಿಲ್ಲಾ ಪಂಚಾಯಿತಿ, 3 ತಾಲೂಕು ಪಂಚಾಯಿತಿಗಳಲ್ಲಿ ಉಪಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿದೆ.

ಅ.28ರಂದು ಚುನಾವಣೆ ನಡೆಯಲಿದ್ದು, 31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಧಾರಾಕಾರವಾಗಿ ಸುರಿದ ಮಳೆಯಿಂದ ಕೊಡುಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾಗಿದ್ದರಿಂದ ಆಯೊಗವು ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಪಟ್ಟಣ ಪಂಚಾಯಿತಿಯ ಎಲ್ಲಾ ವಾರ್ಡ್‌ಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಅ.16ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಅಂದೇ ಕೊನೆಯ ದಿನವಾಗಿರುತ್ತದೆ. ಈ ಮೊದಲು ಆ.10ರಿಂದ 16ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಹೀಗಾಗಿ ಒಂದು ದಿನ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಪಿ.ಎನ್‌. ಶ್ರೀನಿವಾಸಾಚಾರಿ ತಿಳಿಸಿದ್ದಾರೆ.

ಅ.17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.20ರಂದು ನಾಮಪತ್ರಗಳನ್ನು ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಅ.31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣ ಪಂಚಾಯಿತಿಯ ಅವಧಿ ಮುಗಿದಿರುವ ಕಾರಣ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪುರಸಭೆಗೆ ಸ್ಫರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿ ಸಿ.ಎಸ್‌.ರಮೇಶ್‌ ನಿಧನದಿಂದ ಮತ್ತು ಕಲಬುರಗಿ ಜಿಲ್ಲೆಯ ಅಫ್ಜಲಪುರ ಪುರಸಭೆಗೆ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಅ.9ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅ.16ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು.

ಅವಧಿ ಮುಕ್ತಾಯವಾಗುತ್ತಿರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮೋಘಾ ಗ್ರಾಮ ಪಂಚಾಯಿತಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕರಡಕಲ್‌ ಮತ್ತು ಕಿರದಳ್ಳಿ ಗ್ರಾಮ ಪಂಚಾಯಿತಿಗಳಿಗೆ ಮತ್ತು 9 ಜಿಲ್ಲೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 6 ಜಿಲ್ಲಾ ಪಂಚಾಯಿತಿ ಮತ್ತು 3 ತಾಲೂಕು ಪಂಚಾಯಿತಿಗಳಿಗೆ ಉಪಚುನಾವಣೆಗೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆಯ ಆವಲಹಳ್ಳಿ, ರಾಮನಗರ ಜಿಲ್ಲೆಯ ಕುದೂರು, ಶಿವಮೊಗ್ಗ ಆವಿನಹಳ್ಳಿ, ಮೈಸೂರು ಜಿಲ್ಲೆಯ ಸೋಮನಾಥ್‌ಪುರ, ಕಲಬುರಗಿಯ ಆಡಕಿ, ರಾಯಚೂರಿನ ಜಾಲಹಳ್ಳಿ ಜಿಲ್ಲಾಪಂಚಾಯತ್‌ ಮತ್ತು ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ, ಹಾಸನ ಜಿಲ್ಲೆಯ ರಾಮನಾಥಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಗಬೆಟ್ಟು ತಾಲೂಕು ಪಂಚಾಯತ್‌ಗೆ ಚುನಾವಣೆ ನಡೆಯಲಿದೆ ಎಂದರು.

click me!