ಜೈಲಲ್ಲಿರೋರು ಚುನಾವಣೇಲಿ ವೋಟ್ ಹಾಕೋ ಹಾಗಿಲ್ಲ,ಆದ್ರೆ ಸ್ಪರ್ಧಿಸಬಹುದಾ?

By Suvarna NewsFirst Published May 2, 2024, 12:34 PM IST
Highlights

ದೇಶದಲ್ಲಿ ಚುನಾವಣೆ ಪ್ರಚಾರ, ನಾಮಪತ್ರ, ಮತದಾನದ ಭರಾಟೆ ನಡೆಯುತ್ತಿದೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಬಗ್ಗೆ ನಾನಾ ಚರ್ಚೆಗಳು ಸಾಮಾನ್ಯ. ಈ ಮಧ್ಯೆ ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದು, ಈ ಬಗ್ಗೆ ಕಾನೂನು ಏನು ಹೇಳುತ್ತೆ ಗೊತ್ತಾ?
 

ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈಗಾಗಲೇ ಎರಡು ಹಂತದ ಚುನಾವಣೆ ಮುಗಿದಿದೆ. ಒಟ್ಟು ಏಳು ಹಂತಗಳಲ್ಲಿ ಈ ಚುನಾವಣೆ ನಡೆಯಲಿದೆ. ಒಂದ್ಕಡೆ ಮತದಾನ ನಡೆಯುತ್ತಿದ್ದರೆ ಇನ್ನೊಂದು ಕಡೆ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತಿವೆ. ಈ ನಡುವೆ ಜೈಲು ಪಾಲಾಗಿರುವ ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಕೂಡ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. 

ಏಪ್ರಿಲ್ 2023 ರಿಂದ ಅಸ್ಸಾಂ (Assam) ಜೈಲಿನಲ್ಲಿರುವ ಅಮೃತಪಾಲ್ (Amritpal) ಅವರ ಪೋಷಕರು, ಅಮೃತಪಾಲ್ ಚುನಾವಣೆಗೆ ಸ್ಪರ್ಧೆ ನಡೆಸಲಿದ್ದಾರೆ ಎಂದಿದ್ದಾರೆ. ಅಮೃತ್ ಪಾಲ್, ಪಂಜಾಬ್‌ನ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ (Election) ಗೆ ಸ್ಪರ್ಧಿಸಲಿದ್ದಾರೆ ಎಂದು ಪಾಲಕರು ಹೇಳಿದ್ದಾರೆ. ಜೈಲಿನಲ್ಲಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಬಹುದೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಈ ಬಗ್ಗೆ ನಮ್ಮ ದೇಶದ ಕಾನೂನು ಏನಿದೆ? ಯಾರು ಚುನಾವಣೆಗೆ ಸ್ಪರ್ಧಿಸಬಹುದು, ಯಾರು ಸ್ಪರ್ಧಿಸಬಾರದು ಎನ್ನುವ ವಿವರ ಇಲ್ಲಿದೆ.

25 ವರ್ಷಗಳಿಂದ ಸಕ್ಕರೆ ದೂರ, ಮದ್ಯ-ಸಿಗರೆಟ್​ ಮುಟ್ಟೇ ಇಲ್ಲ; ಮಾಂಸಾಹಾರಕ್ಕೆ ಜಾಗವೇ ಇಲ್ಲ!

ಜೈಲಿನಲ್ಲಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಬಹುದೇ? : ಭಾರತದ ಪ್ರಜಾಪ್ರತಿನಿಧಿ ಕಾಯಿದೆ 1951 ರ ಅಡಿಯಲ್ಲಿ ಜೈಲಿನಲ್ಲಿರುವ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧೆ ನಡೆಸಬಹುದು. ಆದ್ರೆ ಅದಕ್ಕೆ ಒಂದಿಷ್ಟು ನಿಯಮವಿದೆ. ಜೈಲಿನಲ್ಲಿರುವ ಯಾವುದೇ ವ್ಯಕ್ತಿಯ ಅಪರಾಧ ಸಾಭೀತಾಗಿರಬಾರದು, ಅಂದ್ರೆ ವಿಚಾರಣಾಧೀನ ಕೈದಿಗಳು ಚುನಾವಣೆಗೆ ಸ್ಪರ್ಧಿಸುವ ಹಕ್ಕು ಪಡೆದಿರುತ್ತಾರೆ. ವಿಚಾರಣಾಧೀನ ಕೈದಿಗಳು ಸಾರ್ವಜನಿಕ ಪ್ರಾತಿನಿಧ್ಯ ಕಾಯ್ದೆಯಡಿ ಚುನಾವಣೆಗೆ ಸ್ಪರ್ಧಿಸಬಹುದು. ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಒಂದು ವರ್ಷದಿಂದ ಇದ್ದರೂ ಅವರು ಚುನಾವಣೆಗೆ ಸ್ಪರ್ಧಿಸುವ ಅಧಿಕಾರ ಪಡೆಯುತ್ತಾರೆ.

ಅಮೃತಪಾಲ್, ವಿಚಾರಣಾಧೀನ ಕೈದಿ. ಅವರು ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿಲ್ಲ. ಹಾಗೆಯೇ ಶಿಕ್ಷೆ ಪ್ರಮಾಣ ಪ್ರಕಟವಾಗಿಲ್ಲ. ಹಾಗಾಗಿ ಅಮೃತಪಾಲ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಧಿಕಾರ ಹೊಂದಿದ್ದಾರೆ.

ಯಾವುದೇ ವ್ಯಕ್ತಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದು, 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಗೆ ಒಳಗಾಗಿದ್ದರೆ ಆತ ಜೈಲಿನಿಂದ ಚುನಾವಣೆಗೆ ಸ್ಪರ್ಧಿಸುವ ಅಧಿಕಾರ ಹೊಂದಿರೋದಿಲ್ಲ. ಕಾಯಿದೆಯ ಸೆಕ್ಷನ್ 8(3) ರ ಅಡಿಯಲ್ಲಿ ಅಪರಾಧಿಗಳು ಬಿಡುಗಡೆಯಾದ ನಂತ್ರವೂ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಜೈಲಿನಲ್ಲಿರುವ ಅಪರಾಧಿಗಳು ಸಂಸದರಾಗಲು ಮತ್ತು ರಾಜ್ಯ ಶಾಸಕಾಂಗಗಳ ಸದಸ್ಯರಾಗಲು ಅನರ್ಹರಾಗಿರುತ್ತಾರೆ. 

ಭಾರತದಲ್ಲಿ ಜೈಲಿನಲ್ಲಿರುವಾಗಲೇ ಚುನಾವಣೆಗೆ ಸ್ಪರ್ಧಿಸುವ ಸಂಪ್ರದಾಯ ಬಹಳ ಹಳೆಯದು. ಪೂರ್ವಾಂಚಲ್ ದರೋಡೆಕೋರ ಹರಿಶಂಕರ್ ತಿವಾರಿ ಜೈಲಿನಲ್ಲಿದ್ದಾಗ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದರ ನಂತ್ರ ವಿಚಾರಾಧೀನ ಖೈದಿಗಳು ಚುನಾವಣೆಗೆ ಸ್ಪರ್ಧಿಸುವ ಪ್ರವೃತ್ತಿ ಹೆಚ್ಚಾಯ್ತು. ಮುಖ್ತಾರ್ ಅನ್ಸಾರಿ, ಅಮರಮಣಿ ತ್ರಿಪಾಠಿ ಸೇರಿದಂತೆ ಹತ್ತಾರು ಪ್ರಮುಖರು ಚುನಾವಣೆಗೆ ಸ್ಪರ್ಧಿಸಿದ್ದರು. 

ನಾಮಪತ್ರ ಸಲ್ಲಿಕೆ ಹೇಗೆ? : ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ತೆಗೆದುಕೊಂಡು ತಮ್ಮ ಬೆಂಬಲಿಗರ ಜೊತೆ ಚುನಾವಣಾಧಿಕಾರಿಗಳ ಬಳಿ ಹೋಗಿ ನಾಮಪತ್ರ ಸಲ್ಲಿಸುತ್ತಾರೆ. ನಾಮಪತ್ರ ಸಲ್ಲಿಸಲು ಎಲ್ಲ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಬಳಿ ಹೋಗ್ಲೇಬೇಕು ಎನ್ನುವ ನಿಯಮವಿಲ್ಲ. ಸಂಬಂಧ ಪಟ್ಟ ಕ್ಷೇತ್ರದ ಮತದಾರ, ಅಭ್ಯರ್ಥಿ ಪರ ನಾಮಪತ್ರದ ಅರ್ಜಿಯನ್ನು ಭರ್ತಿ ಮಾಡಿ ಅದನ್ನು ಚುನಾವಣಾಧಿಕಾರಿಗೆ ಸಲ್ಲಿಸಬಹುದು. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚುನಾವಣೆಗೆ ಪ್ರಸ್ತಾವಕರ ಅಗತ್ಯವಿರುತ್ತದೆ. ಸ್ವತಂತ್ರ್ಯವಾಗಿ ಚುನಾವಣಾ ಸ್ಪರ್ಧೆಗಿಳಿಯುವ ವ್ಯಕ್ತಿಗಳು ಅಫಿಡೆವಿಟ್ ನಲ್ಲಿ ಹತ್ತು ಪ್ರಸ್ತಾವಕರ ಸಹಿಯನ್ನು ಪಡೆಯಬೇಕು. 

ಮಕ್ಕಳನ್ನು ಬೆಳೆಸೋದು ಹೇಗೆ? ಬಾಲಿವುಡ್ ನಟ, ನಟಿಯರು ಹೇಳ್ತಾರೆ ಕೇಳಿ!

ಚುನಾವಣೆ ಪ್ರಚಾರದ ಕಥೆ ಏನು? : ಚುನಾವಣೆ ಪ್ರಚಾರ ಮಾಡಲು ಜೈಲಿನಲ್ಲಿರುವ ಸ್ಪರ್ಧಿಗಳಿಗೆ ಅವಕಾಶ ನೀಡುವಂತೆ ದೆಹಲಿ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಜೈಲಿನಲ್ಲಿರುವ ಅಭ್ಯರ್ಥಿಗಳ ಚುನಾವಣಾ ಪ್ರಚಾರವನ್ನು ಅವರ ಬೆಂಬಲಿಗರು ಮಾಡುತ್ತಾರೆ.  

click me!