ಗಿಣಿ ಪಂಜರದಲ್ಲಿಟ್ಟರೆ ಹುಷಾರ್

By Web DeskFirst Published Sep 9, 2018, 10:21 AM IST
Highlights

ಗಿಣಿಯನ್ನು ಪಂಜರದಲ್ಲಿಟ್ಟು ಸಾಕುವುದೇ ಪ್ರಾಣಿ ಹಿಂಸೆ ಎಂದಿರುವ ಅರಣ್ಯ ಇಲಾಖೆ ಪಂಜರದಲ್ಲಿ ಗಿಣಿ ಇಟ್ಟುಕೊಂಡು ಶಾಸ್ತ್ರ ಹೇಳುವುದರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಮಂಗಳೂರು :  ವನ್ಯಜೀವಿ ಸಂರಕ್ಷಣಾ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಅರಣ್ಯ ಇಲಾಖೆ ಇದೀಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಗಿಣಿಯನ್ನು ಪಂಜರದಲ್ಲಿಟ್ಟು ಸಾಕುವುದೇ ಪ್ರಾಣಿ ಹಿಂಸೆ ಎಂದಿರುವ ಇಲಾಖೆ, ಪಂಜರದಲ್ಲಿ ಗಿಣಿ ಇಟ್ಟುಕೊಂಡು ಶಾಸ್ತ್ರ ಹೇಳುವುದರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಅಷ್ಟೇ ಅಲ್ಲ, ಬೆಳೆನಾಶ ಮಾಡುವ ನೆಪದಲ್ಲಿ ಕೋತಿ(ಮಂಗ)ಗಳನ್ನು ಹತ್ಯೆ ಮಾಡುವವರಿಗೆ ಇನ್ನು ಜೈಲೇ ಗತಿ. ಅದೂ ಮೂರು ವರ್ಷದವರೆಗೆ!

ಪ್ರಸ್ತುತ ಪಂಜರದ ಗಿಣಿಶಾಸ್ತ್ರ ಹಾಗೂ ಕೋತಿಗಳ ಮೇಲಿನ ಮಾನವ ದೌರ್ಜನ್ಯ ಮಿತಿಮೀರುತ್ತಿರುವ ದೂರಿಗೆ ಸಂಬಂಧಿಸಿ ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು ಇವುಗಳ ರಕ್ಷಣೆ ಬಗ್ಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ. ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆ.30ರಂದು ಹೊರಡಿಸಿದ ಆದೇಶದಲ್ಲಿ, ಈ ವನ್ಯಜೀವಿಗಳನ್ನು ಮಾನವ ದೌರ್ಜನ್ಯದಿಂದ ತಡೆಗಟ್ಟಿರಕ್ಷಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಗಿಣಿ ಹಿಂಸೆ ಸಲ್ಲ:  ಓಣಿ, ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಪಂಜರದ ಎದುರು ಕೈಚಾಚಿ ಕುಳಿತುಕೊಂಡು ಗಿಣಿ ಶಾಸ್ತ್ರ ಕೇಳುವವರಿಗೆ ಪಕ್ಷಿ ಹಿಂಸೆ ಗಮನಕ್ಕೆ ಬರುವುದಿಲ್ಲ. ಶಾಸ್ತ್ರ ಹೇಳುವಾತ ಹೇಳಿದಂತೆ ಗಿಣಿ ಕೇಳುತ್ತದೆ. ಗಿಣಿ ತೆಗೆದ ಕಾರ್ಡ್‌ ಅನ್ನು ಹಿಡಿದುಕೊಂಡು ಶಾಸ್ತ್ರ ಹೇಳಲಾಗುತ್ತಿದೆ. ಇದನ್ನೇ ನಂಬಿಕೊಂಡು ಜನರು ಮನಸ್ಸಿನ ಭಾರ ಇಳಿಸಿಕೊಂಡು ತೆರಳುತ್ತಾರೆ. ಆದರೆ ಇಲ್ಲಿ ಗಿಣಿಯನ್ನು ಹಿಂಸಿಸಿ ಪಳಗಿಸಿದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಈ ಗಿಣಿಗಳಿಗೆ ಶಾಸ್ತ್ರದ ಕಾರ್ಡ್‌ಗಳನ್ನು ಹೆಕ್ಕಲು ಅನುಕೂಲವಾಗುವ ಹಾಗೆ ಅದರ ಮೂತಿಯನ್ನು ತುಂಡು ಮಾಡುತ್ತಾರೆ. ಹಾರದಂತೆ ಅದರ ರೆಕ್ಕೆಯ ತುದಿಯನ್ನು ಕತ್ತರಿಸುತ್ತಾರೆ. ಉಗುರನ್ನೂ ತೆಗೆಯುತ್ತಾರೆ. ನಂತರ ಕಾರ್ಡ್‌ ತೆಗೆಯುವುದನ್ನು ಇನ್ನೊಂದು ಗಿಣಿಯನ್ನು ನೋಡಿ ಕಲಿಯುವಂತೆ ಸಣ್ಣನೆಯ ಕಡ್ಡಿಯಿಂದ ಹೊಡೆಯುತ್ತಾರೆ. ಕಾರ್ಡ್‌ ತೆಗೆದರೆ ಮಾತ್ರ ಗಿಣಿಗೆ ಕಾಳು. ಇಲ್ಲದಿದ್ದರೆ ಇಲ್ಲ. ಹೀಗಾಗಿ ತನ್ನ ಸ್ವಂತಿಕೆಯನ್ನೇ ಕಳೆದುಕೊಂಡ ಗಿಣಿ ಅತ್ತ ಹಾರಲೂ ಆಗದೆ, ಇತ್ತ ನಡೆಯಲೂ ಆಗದೆ, ತನ್ನಪಾಡಿಗೆ ತಾನು ಬಿದ್ದುಕೊಂಡು ಇರುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ ಮಂಗಳೂರಿನ ಶಶಿಧರ ಶೆಟ್ಟಿ.

ಕೋತಿ ಹತ್ಯೆಗೂ ಶಿಕ್ಷೆ:  ಸಾಮಾನ್ಯವಾಗಿ ಘಟ್ಟಪ್ರದೇಶ ಇರುವಲ್ಲಿ ಕೃಷಿ ತೋಟಗಳಿಗೆ ಕೋತಿಯ ಕಾಟ ಜಾಸ್ತಿ. ಕೋತಿಯನ್ನು ನಿಯಂತ್ರಿಸಲು ನಾನಾ ಉಪಾಯಗಳನ್ನು ಮಾಡುತ್ತಾರೆ. ಹೆಚ್ಚಿನ ಕಡೆಗಳಲ್ಲಿ ಕೋತಿ ಹಾವಳಿ ತಡೆಗೆ ಗುಂಡೇಟು ಹಾಕುವುದೂ ಇದೆ. ಈ ಹಿಂದೆ ಕೋತಿಯನ್ನು ಕುಣಿತ ನಡೆಸಿ ಭಿಕ್ಷಾಟನೆ ನಡೆಸುತ್ತಿದ್ದರು. ಕೋತಿ ಕೂಡ ವನ್ಯಜೀವಿ ವ್ಯಾಪ್ತಿಗೆ ಸೇರುವುದರಿಂದ ಅದನ್ನು ಮನೆಯಲ್ಲಿ ಕೂಡ ಸಾಕುವಂತಿಲ್ಲ. ಅವುಗಳಿಂದ ತೆಂಗಿನಕಾಯಿ ಕೀಳಿಸುವಂತಿಲ್ಲ. ಗಿಣಿಯಂತೆ ಕೋತಿಯನ್ನು ಸಾಕುವುದೂ ಅಪರಾಧ. ಈ ಎರಡು ವನ್ಯಜೀವಿಗಳ ಮೇಲಿನ ದೌರ್ಜನ್ಯ ಅತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್‌ಇಸಿಎಫ್‌) ಅರಣ್ಯ ಇಲಾಖೆಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗಿಣಿ ಮತ್ತು ಕೋತಿಯನ್ನು ರಕ್ಷಿಸುವ ಬಗ್ಗೆ ಆದೇಶವನ್ನು ಹೊರಡಿಸಿದ್ದಾರೆ.

ಗಿಣಿ ಹಿಡಿಯೋದು ಹೇಗೆ?

ಶಿವಮೊಗ್ಗ, ಮಲೆನಾಡು ಪ್ರದೇಶಗಳ ಅರಣ್ಯಗಳಲ್ಲಿ ಗಿಣಿಗಳು ಹೇರಳವಾಗಿವೆ. ಅವುಗಳು ಪೊಟರೆಯಲ್ಲಿ ಸದ್ದುಮಾಡುವುದನ್ನೇ ಪತ್ತೆ ಮಾಡುವ ಈ ಮಂದಿ ರಾತ್ರಿ ವೇಳೆ ಪೊಟರೆಯಿಂದ ಗಿಣಿಮರಿಯನ್ನು ಕದಿಯುತ್ತಾರೆ. ಬಳಿಕ ಗಿಣಿ ಮರಿಗಳನ್ನು ಶಾಸ್ತ್ರ ಹೇಳುವ ಕಾರ್ಡ್‌ ತೆಗೆಯುವವರೆಗೆ ಹಿಂಸಿಸಿ ಸರಿದಾರಿಗೆ ತರುತ್ತಾರೆ.

ಭಾರತೀಯ ವನ್ಯಜೀವಿ ಕಾಯ್ದೆ 1972ರ ಶೆಡ್ಯೂಲ್‌ 3ರ ಪ್ರಕಾರ ಗಿಣಿ, ಕೋತಿಗಳನ್ನು ಹಿಂಸಿಸಬಾರದು. ಹಿಂಸಿಸಿದರೆ ಮೂರು ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಶೆಡ್ಯೂಲ್‌ 1ರಲ್ಲಿ ಪ್ರಮುಖ ವನ್ಯಜೀವಿಗಳನ್ನು ನಾಶಮಾಡಿದರೆ, 7 ವರ್ಷವರೆಗೆ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ವನ್ಯಜೀವಿಗಳಿಗೆ ತೊಂದರೆ ಕೊಡುವುದಾಗಲೀ, ಅವುಗಳನ್ನು ಸಾಕುವುದಕ್ಕೂ ಅವಕಾಶ ಇಲ್ಲ. ಈಗಾಗಲೇ ಮಂಗಳೂರಿನಲ್ಲಿ ಮೂರು ಗಿಣಿ ಶಾಸ್ತ್ರ ಪ್ರಕರಣವನ್ನು ಪತ್ತೆ ಮಾಡಿದ್ದು ಗಿಣಿಯನ್ನು ರಕ್ಷಿಸಲಾಗಿದೆ.

-ಶ್ರೀಧರ್‌, ವಲಯ ಅರಣ್ಯ ಅಧಿಕಾರಿ, ಮಂಗಳೂರು

ಶಾಸ್ತ್ರಕಾರರಿಂದ ಬಚಾವ್‌ ಮಾಡಿದ ಮೂರು ಗಿಣಿಗಳನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕಳುಹಿಸಲಾಗಿದೆ. ಮೂರು ಗಿಣಿಗಳಿಗೆ ಈಗ ಚಿಕಿತ್ಸೆ ನೀಡುತ್ತಿದ್ದು, ಕಡಿದ ಮೂತಿ ಪುನಃ ಬರಲಾರಂಭಿಸಿದೆ. ನಿಧಾನವಾಗಿ ಈ ಗಿಣಿಗಳು ಚೇತರಿಸಿಕೊಳ್ಳುತ್ತಿವೆ.

-ಶಶಿಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎನ್‌ಇಸಿಎಫ್‌, ಮಂಗಳೂರು

ಆತ್ಮಭೂಷಣ್‌

click me!