ಅನಗತ್ಯ ಸಾಲ ಮಾಡ್ಕೊಂಡಿದ್ದೀರಾ? ಹಾಗಾದರೆ ಈ 5 ಉಪಾಯಗಳನ್ನು ಪ್ರಯತ್ನಿಸಿ

By ಆಧಿಲ್ ಶೆಟ್ಟಿFirst Published Oct 11, 2017, 2:01 PM IST
Highlights

ಜೀವನದಲ್ಲಿ ಮನೆ ಕಟ್ಟುವಾಗ/ಕೊಳ್ಳುವಾಗ, ಉನ್ನತ ಶಿಕ್ಷಣ ಪಡೆಯಲು ಅಥವಾ ಇನ್ನಾವುದೇ ಅಗತ್ಯದ ವಸ್ತುಗಳನ್ನು ಖರೀದಿಸುವಾಗ, ಮತ್ತಿತರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಹಣದ ಕೊರತೆಯುಂಟಾದರೆ ಸಾಲ ಪಡೆಯುವ ಯೋಚನೆ ಹುಟ್ಟಿಕೊಳ್ಳುತ್ತದೆ.  ಅದಕ್ಕಾಗಿ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುತ್ತದೆ. ಆದರೆ ಎಲ್ಲಾ ಸಾಲಗಳು ಅನಗತ್ಯ ಸಾಲಗಳಾಗಿರುವುದಿಲ್ಲ.  ಕೆಲವು ಯೋಜಿತ ಸಾಲಗಳಾಗಿದ್ದರೆ, ಇನ್ನು ಕೆಲವು ತುರ್ತು ಪರಿಸ್ಥಿತಿಯಲ್ಲಿ ಉದ್ಭವಿಸುವಂತವುಗಳಾಗಿರುತ್ತವೆ. ಉದ್ಯೋಗ ಕಳೆದುಕೊಳ್ಳುವುದರಿಂದ ಅಥವಾ ಕಾಯಿಲೆಗೆ ತುತ್ತಾಗುವುದರಿಂದ ಅನಗತ್ಯ ಸಾಲದ ಸಾಧ್ಯತೆಗಳನ್ನು ಎದುರಿಸಬೇಕಾಗುತ್ತದೆ.

ಜೀವನದಲ್ಲಿ ಮನೆ ಕಟ್ಟುವಾಗ/ಕೊಳ್ಳುವಾಗ, ಉನ್ನತ ಶಿಕ್ಷಣ ಪಡೆಯಲು ಅಥವಾ ಇನ್ನಾವುದೇ ಅಗತ್ಯದ ವಸ್ತುಗಳನ್ನು ಖರೀದಿಸುವಾಗ, ಮತ್ತಿತರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಹಣದ ಕೊರತೆಯುಂಟಾದರೆ ಸಾಲ ಪಡೆಯುವ ಯೋಚನೆ ಹುಟ್ಟಿಕೊಳ್ಳುತ್ತದೆ.  ಅದಕ್ಕಾಗಿ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಸಿಗುತ್ತದೆ. ಆದರೆ ಎಲ್ಲಾ ಸಾಲಗಳು ಅನಗತ್ಯ ಸಾಲಗಳಾಗಿರುವುದಿಲ್ಲ.  ಕೆಲವು ಯೋಜಿತ ಸಾಲಗಳಾಗಿದ್ದರೆ, ಇನ್ನು ಕೆಲವು ತುರ್ತು ಪರಿಸ್ಥಿತಿಯಲ್ಲಿ ಉದ್ಭವಿಸುವಂತವುಗಳಾಗಿರುತ್ತವೆ. ಉದ್ಯೋಗ ಕಳೆದುಕೊಳ್ಳುವುದರಿಂದ ಅಥವಾ ಕಾಯಿಲೆಗೆ ತುತ್ತಾಗುವುದರಿಂದ ಅನಗತ್ಯ ಸಾಲದ ಸಾಧ್ಯತೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಅನಗತ್ಯ ಸಾಲ ಪಡೆಯಲು ಬೇರೆ ಬೇರೆ ಕಾರಣಗಳಿರಬಹುದು.  ಆದರೆ ಅಂತಹ ಸಾಲಗಳನ್ನು ಆದಷ್ಟು ಬೇಗ ತೀರಿಸುವುದು ಬಹಳ ಅತ್ಯಗತ್ಯ. ಬೇರೆ ಬೇರೆ ಕಡೆಯಿಂದ ಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆಯುವುದು, ಆ ಬಳಿಕ ಮರುಪಾವತಿಸಲು ವಿಳಂಬ ಮಾಡುವುದರಿಂದ ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಂತಾಗುತ್ತದೆ. ಇಂತಹ ಸಾಲಗಳ ಸುಳಿಯಿಂದ ಹೇಗೆ ಹೊರಬರಬಹುದು ಎಂಬುವುದರ ಬಗ್ಗೆ ಕೆಲವು ಉಪಾಯಗಳನ್ನು ಬನ್ನಿ ನೋಡೋಣ…

ಪ್ರಸಕ್ತ ಸಾಲ/ಹಣಕಾಸು ಪರಿಸ್ಥಿತಿಯ ಅವಲೋಕನ:

ಜೀವನದಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುಂಚೆ ತನ್ನ ಹಣಕಾಸು ಪರಿಸ್ಥಿತಿಯನ್ನು ಅವಲೋಕಿಸುವುದು ಬಹಳ ಅಗತ್ಯ. ಈ ರೀತಿ ಮಾಡುವುದರಿಂದ ತನ್ನ ಬಳಿ ಎಷ್ಟು ಹಣ ಇದೆ, ಇನ್ನೆಷ್ಟು ಹಣ ಬೇಕಾಗುತ್ತದೆ ಎಂಬಿತ್ಯಾದಿ ವಿಷಯಗಳು  ತಿಳಿಯುವುದು. ಅದಕ್ಕನುಗುಣವಾಗಿ ಮುಂದಿನ ಯೋಜನೆಯನ್ನು ರೂಪಿಸಬೇಕು.  ನಿಮ್ಮ ಜೀವನಶೈಲಿಯಲ್ಲಿ ಅನಗತ್ಯ ಖರ್ಚುಗಳು ಸೇರಿಕೊಂಡಿದ್ದರೆ ಮೊದಲು ಅದಕ್ಕೆ ಕತ್ತರಿ ಹಾಕಬೇಕಾದುದು ಅತ್ಯಗತ್ಯ.  ಅದರ ಬದಲಾಗಿ ಸಾಲ ಮರುಪಾವತಿಗೆ ಪ್ರಾಶಸ್ತ್ಯ ನೀಡಬೇಕು. ನಿಮ್ಮ ಆದಾಯ, ಖರ್ಚು, ಕೈಯಲ್ಲಿರುವ ಹಣ, ಭವಿಷ್ಯದ ಖರ್ಚು-ವೆಚ್ಚ ಎಂಬಿತ್ಯಾದಿ ಅಂಶಗಳನ್ನು ಮುಂಚೆಯೇ ಲೆಕ್ಕ ಹಾಕಿಕೊಳ್ಳಿ.

ಸಾಲ ಮರುಪಾವತಿ ಯೋಜನೆ ತಯಾರಿಸಿ

ಆ ಬಳಿಕ ಸಾಲ ಸಂದಾಯ ಮಾಡುವ ಯೋಜನೆಯನ್ನು ರೂಪಿಸಿ.  ಒಂದಕ್ಕಿಂತ ಹೆಚ್ಚು ಕಡೆ ಸಾಲ ಪಡೆದಿದ್ದರೆ, ಹೆಚ್ಚಿನ ಬಡ್ಡಿದರವಿರುವ ವೈಯುಕ್ತಿಕ ಸಾಲ/ ಕ್ರೆಡಿಟ್ ಕಾರ್ಡ್ ಸಾಲಗಳ ಮರುಪಾವತಿಯನ್ನು ಆದ್ಯತೆಯಾಗಿಟ್ಟುಕೊಳ್ಳಿ. ಯಾವ್ಯಾವ ಸಾಲಕ್ಕೆ ಎಷ್ಟೆಷ್ಟು ಬಡ್ಡಿ/ದಂಡ ವಿಧಿಸಲಾಗುತ್ತದೆ ಎಂಬುವುದನ್ನು ಮುಂಚಿತವಾಗಿ ತಿಳಿದುಕೊಳ್ಳುವ ಮೂಲಕ ಹಣವನ್ನು ಉಳಿಸಬಹುದು. ಸಾಲ ತೀರಿಸುವಾಗ ಹೇಗೆ ಹಣ ಉಳಿಸಬಹುದು ಎಂದು ಕೆಳಗೆ ಕೊಟ್ಟಿರುವ ಕೋಷ್ಟಕದಲ್ಲಿ ತಿಳಿಯಬಹುದಾಗಿದೆ.

* ಅಂಕಿಗಳು ಉದಾಹರಣೆಗಾಗಿ ಮಾತ್ರ

ಆದುದರಿಂದ, ಸಂಪೂರ್ಣ/ಅಂತಿಮ ಸಾಲ ಸಂದಾಯ ಮಾಡುವ ಸಂದರ್ಭದಲ್ಲಿ ಪೂರ್ವವಾಧಿ ಮರುಪಾವತಿ ದಂಡ, ಬಾಕಿ ಉಳಿದಿರುವ ಅವಧಿ, ಬಡ್ಡಿದರ ಮುಂತಾದವುಗಳು ಪ್ರಮುಖ ಅಂಶಗಳಾಗಿವೆ.

ಬಜೆಟ್ ಹಾಕಿಕೊಳ್ಳಿ:

ಸಾಲ ಸಂದಾಯ ಮಾಡಲು ಆರಂಭಿಸುವಾಗ ನಿಮ್ಮ ಇತರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟನ್ನು ಸಿದ್ದಪಡಿಸಿ.  ಹಾಲಿ ಸಾಲವನ್ನು ಚುಕ್ತಾ ಮಾಡಲು ಇನ್ನೊಂದು ಸಾಲವನ್ನು ಮಾಡಲು ಹೋಗಬೇಡಿ. ಅದುದರಿಂದ ಸಮರ್ಪಕವಾದ ಯೋಜನೆ ರೂಪಿಸುವ ಮೂಲಕ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಸಾಲ ತೀರಿಸಲು ಹಣ ಉಳಿತಾಯ ಮಾಡಬಹುದು.

ಹೆಚ್ಚು ಹಣ ಉಳಿಸಿದರೆ ಇನ್ನೂ ಉತ್ತಮ:

ನಿಮಗೆ ಬಂದಿರುವ ಹೆಚ್ಚಿನ ಆದಾಯವನ್ನು (ಬೋನಸ್ ಅಥವಾ ಬಹುಮಾನ ರೂಪದಲ್ಲಿ ಬಂದಿರುವ ಹಣ) ಕೂಡಾ ಸಾಲ ಸಂದಾಯ ಮಾಡಲು ಬಳಸಿಕೊಂಡರೆ ಇನ್ನೂ ಉತ್ತಮ. ವಾರಾಂತ್ಯದ ಐಷಾರಾಮಿ ಪ್ರವಾಸಗಳು, ದುಬಾರಿ ಇಲೆಕ್ಟ್ರಾನಿಕ್ಸ್ ಗ್ಯಾಜೆಟ್’ಗಳ ಖರೀದಿ ಮತ್ತಿತರ ಐಷಾರಾಮಿ ವಸ್ತುಗಳನ್ನು ಖರೀದಿಸುವ ಪ್ರವೃತ್ತಿಗೂ ಕಡಿವಾಣ ಹಾಕಿ. ಹೆಚ್ಚು ಹಣ ಉಳಿಸಿದರೆ, ಆದಷ್ಟು ಬೇಗ ಸಾಲದಿಂದ ಮುಕ್ತಿ ಪಡೆಯಬಹುದು.

ವ್ಯವಸ್ಥಿತವಾಗಿ ಮರುಪಾವತಿಸಿ:

ಸಾಲದ ಬಗ್ಗೆ ಗಾಬರಿಪಡುವ ಬದಲಾಗಿ ವ್ಯವಸ್ಥಿತವಾಗಿ ಸಾಲ ಮರುಪಾವತಿ ಮಾಡಿ. ಬಡ್ಡಿದರಕ್ಕೆ ಅನುಗುಣವಾಗಿ ಆದ್ಯತೆಗಳನ್ನು ನಿಶ್ಚಯಿಸಿಕೊಳ್ಳಿ. ಬಡ್ಡಿದರ ಕಡಿಮೆ ಹಾಗೂ ಸ್ಥಿರವಾಗಿರುವ ಸಾಲಗಳನ್ನು ಅವಧಿಪೂರ್ವವಾಗಿ ಸಂದಾಯ ಮಾಡುವ ಅಗತ್ಯವಿಲ್ಲ. CIBIL ಸ್ಕೋರ್ ಮೇಲೆ ಪರಿಣಾಮ ಬೀರುವ ಹಾಗೂ ಹೆಚ್ಚು ಬಡ್ಡಿದರವಿರುವ ಸಾಲವನ್ನು ಮೊದಲು ಮರುಪಾವತಿಸಲು ಆರಂಭಿಸಿ.

ಈ ಕ್ರಮಗಳಿಂದ ಯಾವುದೇ ಪ್ರಯೋಜನವಾಗದಿರುವ ಸಂದರ್ಭದಲ್ಲಿ ಪರ್ಯಾಯ ಉಪಾಯಗಳನ್ನು  ಪ್ರಯತ್ನಿಸಬಹುದು.  ಹೂಡಿರುವ ಬಂಡವಾಳವನ್ನು ಹಿಂಪಡೆಯುವುದಾಗಲಿ ಅಥವಾ ಕುಟುಂಬ ಸದಸ್ಯರು/ ಸ್ನೇಹಿತರಿಂದ ಸಾಲ ಪಡೆಯುವುದಾಗಲಿ ಮಾಡಬಹುದು. ಯಾವುದಕ್ಕೂ,  ಯಾವುದೇ ನಿರ್ಧಾರ ಕೈಗೊಳ್ಳುವ ಮುಂಚೆ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ  ಹಣಕಾಸು ಅಗತ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಆಧಿಲ್ ಶೆಟ್ಟಿ, 

ಸಿಇಓ -ಬ್ಯಾಂಕ್ ಬಝಾರ್

https://www.bankbazaar.com/

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

click me!