ಡಿ.ಕೆ ಶಿವಕುಮಾರ್ ಈ ನಿರ್ಧಾರದಿಂದ ಕಾಂಗ್ರೆಸ್ ಗೆ ಭರ್ಜರಿ ಲಾಭ

By Web DeskFirst Published Nov 12, 2018, 10:22 AM IST
Highlights

ಸಚಿವ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭವಾಗಿದ್ದು, ಲಿಂಗಾಯತ ಲಿಂಗಾಯತರು ಮತ್ತೆ ಕಾಂಗ್ರೆಸ್‌ ಕಡೆ ಬಂದಿದ್ದಾರೆ ಎಂದು ಹೈಕಮಾಂಡ್‌ ಮುಂದೆ ಅವರ ಬೆಂಬಲಿಗರು ವಾದ ಮಂಡಿಸಿದ್ದಾರೆ.
 

ಬೆಂಗಳೂರು :  ಲಿಂಗಾಯತ ಧರ್ಮ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭವಾಗಿದ್ದು, ಲಿಂಗಾಯತರು ಮತ್ತೆ ಕಾಂಗ್ರೆಸ್‌ ಕಡೆ ಬಂದಿದ್ದಾರೆ ಎಂದು ಹೈಕಮಾಂಡ್‌ ಮುಂದೆ ಅವರ ಬೆಂಬಲಿಗರು ವಾದ ಮಂಡಿಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಚಾರದಲ್ಲಿ ಹಿಂದಿನ ಸರ್ಕಾರ ಮಧ್ಯೆ ಪ್ರವೇಶಿಸಿದ್ದು ಸರಿಯಲ್ಲ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಸಚಿವ ಶಿವಕುಮಾರ್‌ ಅವರು ನೀಡಿದ ಹೇಳಿಕೆ ಸ್ವ ಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿತ್ತು. ಇದರಿಂದ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗುತ್ತದೆ ಎಂದು ಆರೋಪಿಸಲಾಗಿತ್ತು. ಆದರೆ, ಅಂತಹದ್ದೇನೂ ಆಗಿಲ್ಲ. ಬದಲಿಗೆ ಒಳ್ಳೆಯದೇ ಆಗಿದೆ. ಶಿವಕುಮಾರ್‌ ಅವರ ಹೇಳಿಕೆಯಿಂದ ಲಿಂಗಾಯತ ಸಮುದಾಯ ವಾಪಸ್‌ ಕಾಂಗ್ರೆಸ್‌ನತ್ತ ತಿರುಗುವಂತೆ ಮಾಡಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಹೈಕಮಾಂಡ್‌ ನಾಯಕರ ಮುಂದೆ ಬೆಂಬಲಿಗರು ವಾದ ಮಂಡಿಸಿದ್ದಾರೆ.

ಲಿಂಗಾಯತರು ನಿರ್ಣಾಯಕ ಸಂಖ್ಯೆಯಲ್ಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಪಡೆದಿರುವ ಮತಗಳ ಅಂಕಿ ಅಂಶ ಸಮೇತ ಸಚಿವ ಶಿವಕುಮಾರ್‌ ಅವರ ಬೆಂಬಲಿಗರು ತಮ್ಮ ನಾಯಕರು ಸಮಯಕ್ಕೆ ಸರಿಯಾಗಿ ಬುದ್ಧಿವಂತಿಕೆಯ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರು ಒಟ್ಟು 6,27,365 ಮತಗಳನ್ನು ಪಡೆದು 2,43,161 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದು ನ್ಯಾಮಗೌಡ 96,968 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದು ಅಂಕಿ ಅಂಶ ಸಮೇತ ತಮ್ಮ ನಾಯಕನ ಹೇಳಿಕೆಯಿಂದ ಯಾವುದೇ ತಪ್ಪಾಗಿಲ್ಲ ಎಂಬುದನ್ನು ಹೈಕಮಾಂಡ್‌ಗೆ ಬೆಂಗಲಿಗರು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

click me!