ಮತ್ತೆ ಬಿಜೆಪಿಗೆ ವಾಪಸಾಗಲಿದ್ದಾರೆ 50 ಮುಖಂಡರು

By Web DeskFirst Published Nov 26, 2018, 1:40 PM IST
Highlights

ದೇಶದಾದ್ಯಂತ ಸದ್ಯ ಚುನಾವಣಾ ಕಾವು ಹೆಚ್ಚಾಗಿದೆ. ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಭರದಿಂದ ಸಾಗಿದ್ದರೆ, ಲೋಕಸಭಾ ಚುನಾವಣೆಯೂ ಸಮೀಪಿಸುತ್ತಿದೆ.  ಇದೇ ಸಂದರ್ಭದಲ್ಲಿ ಬಿಜೆಪಿ ತನ್ನದೇ ಆದ ಮಾಸ್ಟರ್ ಪ್ಲಾನ್ ಮಾಡುತ್ತಿದೆ. 

ನವದೆಹಲಿ : ದೇಶದಲ್ಲಿ ಚುನಾವಣೆ ಕಾವೇರುತ್ತಿದೆ. ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಲೋಕಸಭಾ ಚುನಾವಣೆಗೂ ಇನ್ನು ಕೆಲವೇ ತಿಂಗಳು ಬಾಕಿ ಇವೆ. 

ಇದೇ ಸಂದರ್ಭದಲ್ಲಿ ದಿಲ್ಲಿ ಬಿಜೆಪಿ ತನ್ನ ಬಂಡಾಯ ನಾಯಕರನ್ನು ಪುನಾ ಪಕ್ಷಕ್ಕೆ ಕರೆಯಿಸಿಕೊಳ್ಳುವ ಯತ್ನದಲ್ಲಿದೆ. ಘರ್ ವಾಪಸಿ ಮೂಲಕ ಜನಮನ ಗೆಲ್ಲುವ ಕಾರ್ಯತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ. 

ದಿಲ್ಲಿಯಲ್ಲಿ ಕಳೆದ ವರ್ಷ 2017ರಲ್ಲಿ ನಡೆದ ನಗರ ಪಾಲಿಕೆ ಚುನಾವಣೆ ವೇಳೆ  ಹೊಸ ಹೊಸ ಮುಖಗಳನ್ನು ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಬಿಜೆಪಿ ಚುನಾಯಿತ ಕಾರ್ಪೊರೇಟರ್‌ಗಳಿಗೆ ಟಿಕೆಟ್ ನೀಡಿರಲಿಲ್ಲ. ಪಕ್ಷದ ಈ ನಡೆಗೆ ಮುನಿಸಿಕೊಂಡ ಅನೇಕರು ಬಂಡಾಯವೆದ್ದಿದ್ದರು. ಸ್ವತಂತ್ರವಾಗಿಯೂ ಸ್ಪರ್ಧಿಸಿದ್ದರು. 

ರೆಬೆಲ್ ನಾಯಕರ ಉಚ್ಛಾಟನೆ:
ಬಂಡಾಯವೆದ್ದ 80 ಮುಖಂಡರನ್ನು ಬಿಜೆಪಿ ಉಚ್ಛಾಟಿಸಿತ್ತು. ಆದರೆ, ಈ ನಡೆಯಿಂದ ಪಕ್ಷ ತಿಂದ ಪೆಟ್ಟು ಮಾತ್ರ ಸಣ್ಣದಲ್ಲ. ಇದೀಗ ಈ ಉಚ್ಛಾಟಿತ ಮುಖಂಡರನ್ನು ಮತ್ತೆ ಪಕ್ಷಕ್ಕೆ ಕರೆತರಲು ಯತ್ನಿಸುತ್ತಿದೆ. ಪಕ್ಷದಿಂದ ಕಳೆದ ವರ್ಷ ಉಚ್ಛಾಟನೆಯಾದ ಎಲ್ಲ ಮುಖಂಡರು ಮತ್ತೆ ಪಕ್ಷಕ್ಕೆ ಆಗಮಿಸುವುದಾದರೆ ಸ್ವಾಗತ. ಆದರೆ ಅವರೆಲ್ಲರೂ ಪಕ್ಷಕ್ಕೆ ನಿಷ್ಠೆಯಿಂದ ಇರಬೇಕು ಎಂದು ದಿಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ  ರವೀಂದ್ರ ಗುಪ್ತಾ ಹೇಳಿದ್ದಾರೆ.  ಅಲ್ಲದೇ ಮತ್ತೆ ಪಕ್ಷಕ್ಕೆ ಕರೆತರುವ ಹೊಣೆಯೂ ಇವರ ಮೇಲಿದೆ. 

ಕಳೆದ ವರ್ಷ ಪಕ್ಷದಿಂದ ಉಚ್ಛಾಟನೆಗೊಂಡ ಮುಖಂಡರಲ್ಲಿ 50 ಮಂದಿ ಮತ್ತೆ ಪಕ್ಷಕ್ಕೆ ಮರಳು ಸಿದ್ಧವಿದ್ದು, ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತದೆ ಎಂದು ರವೀಂದ್ರ ಗುಪ್ತಾ ಹೇಳಿದ್ದಾರೆ.

ಈಗಾಗಲೇ ಮಿಜೋರಾಂ, ಮಧ್ಯ ಪ್ರದೇಶ, ರಾಜಸ್ಥಾನ, ತೆಲಂಗಾಣ, ಚತ್ತೀಸ್‌ಗಢದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ದಿಲ್ಲಿ ಬಿಜೆಪಿಯ ಈ ನಿರ್ಧಾರ ಈ ರಾಜ್ಯಗಳಲ್ಲಿಯೂ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಎಲ್ಲ ರಾಜ್ಯಗಳಲ್ಲಿ ಡಿಸೆಂಬರ್ 7 ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ.

click me!