
ಬೆಂಗಳೂರು : ಚಿಕುನ್ ಗುನ್ಯಾ ಆಯ್ತು, ಹಕ್ಕಿ ಜ್ವರ ಆಯ್ತು, ಈಗ ಕಾಗೆ ಜ್ವರ ಸರದಿ. ಹೌದು, ಮಾರಣಾಂತಿಕ ರೋಗವೆನಿಸಿರುವ ವೆಸ್ಟ್ ನೈಲ್ ವೈರಸ್ ಅರ್ಥಾತ್ ಕಾಗೆ ಜ್ವರ ನೆರೆಯ ಕೇರಳದಲ್ಲಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ, ದೇಶದಲ್ಲೇ ಮೊದಲ ಬಲಿ ಪಡೆದಿದೆ. ಕಾಗೆ ಸೇರಿದಂತೆ ಪಕ್ಷಿಗಳು ಹಾಗೂ ಸೊಳ್ಳೆಗಳಿಂದ ಹರಡುವ ಈ ಕಾಯಿಲೆ ರಾಜ್ಯಕ್ಕೂ ವ್ಯಾಪಿಸುವ ಭೀತಿ ಆರಂಭಗೊಂಡಿದೆ. ಪರಿಣಾಮ ಈ ರೋಗದ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
1937ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ವೆಸ್ಟ್ ನೈಲ್ ವೈರಾಣು 1999ರಿಂದ ಉತ್ತರ ಅಮೆರಿಕದಲ್ಲಿ ತೀವ್ರವಾಗಿ ಕಾಣಿಸಿಕೊಂಡಿತ್ತು. ಇಂತಹ ವೈರಾಣು ದಾಳಿಗೆ ಸೋಮವಾರ ದೇಶದಲ್ಲೇ ಮೊದಲ ಬಲಿಯಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ 7 ವರ್ಷದ ಬಾಲಕನಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆಯ ತಂಡ ಪರಿಶೀಲನೆ ನಡೆಸಿತ್ತು. ಕಳೆದ ಗುರುವಾರ ವೆಸ್ಟ್ ನೈಲ್ ವೈರಸ್ ಸೋಂಕಿರುವುದು ದೃಢಪಟ್ಟಿತ್ತು. ಬಾಲಕ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕೇರಳ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಆತಂಕ ಮನೆ ಮಾಡಿದೆ.
ವಿಶೇಷವಾಗಿ ಕರ್ನಾಟಕದಲ್ಲಿ ಈ ಭೀತಿ ಹೆಚ್ಚಿದೆ. ಏಕೆಂದರೆ, ಮಲಪ್ಪುರಂ ಜಿಲ್ಲೆಯು ಕರ್ನಾಟಕದ ಗಡಿಭಾಗದಿಂದ ಕೇವಲ 150 ಕಿ.ಮೀ. ಇದೆ. ಜತೆಗೆ ಈ ವೈರಾಣು ಕಾಗೆ ಸೇರಿದಂತೆ ಪಕ್ಷಿಗಳಿಂದ ಹರಡುವುದರಿಂದ ವಲಸೆ ಪಕ್ಷಿಗಳ ಮೂಲಕ ರಾಜ್ಯಕ್ಕೂ ಹರಡಬಹುದು. ಹೀಗಾಗಿ ಪಕ್ಷಿಧಾಮಗಳು, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಗಾವಲು ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಕಾಯಿಲೆಗೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಗಳಿಗೆ ಕಾಯುತ್ತಿದ್ದು, ನಿರ್ದೇಶನ ಬಂದ ತಕ್ಷಣ ಪಶುಸಂಗೋಪನಾ ಇಲಾಖೆ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ರೋಗ ರಾಜ್ಯಕ್ಕೂ ಹರಡುವ ಭೀತಿಯಿದೆ. ಆದರೆ, ಇನ್ನೂ ಹರಡಿಲ್ಲ. ರಾಜ್ಯದಲ್ಲಿ ಈವರೆಗೂ ವೆಸ್ಟ್ ನೈಲ್ ವೈರಸ್ ಪ್ರಕರಣ ವರದಿಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಬದಲಿಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮನುಷ್ಯರಿಗೆ ಚಿಕಿತ್ಸೆ ಇಲ್ಲ, ಮುನ್ನೆಚ್ಚರಿಕೆಯೇ ಮಾರ್ಗ
ಈ ಸೋಂಕು ತಗುಲಿದ ವ್ಯಕ್ತಿಗೆ ಸೋಂಕು ನಿವಾರಣೆಗೆ ನಿರ್ದಿಷ್ಟಚಿಕಿತ್ಸೆ ಇಲ್ಲ. ಸೋಂಕಿನಿಂದ ಉಂಟಾಗುವ ಜ್ವರ, ತಲೆನೋವು, ನರಗಳ ಊದಿಕೊಳ್ಳುವಿಕೆಯಂತಹ ಸಮಸ್ಯೆಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿ ಹತೋಟಿಗೆ ತರಬೇಕಾಗುತ್ತದೆ. ಹೀಗಾಗಿ ರೋಗದ ಲಕ್ಷಣಗಳು ಬೇಗ ಗೊತ್ತಾದರೆ ಮಾತ್ರ ಬದುಕುಳಿಯುವ ಸಾಧ್ಯತೆಗಳು ಹೆಚ್ಚು. ಉಳಿದಂತೆ ಕುದುರೆಗಳಿಗೆ ಈ ವೈರಸ್ ತಗುಲಿದರೆ ಚಿಕಿತ್ಸೆ ಇದೆ. ಹೀಗಾಗಿ, ಮನುಷ್ಯರು ಮುನ್ನೆಚ್ಚರಿಕೆ ವಹಿಸುವುದು ಹಾಗೂ ಸೊಳ್ಳೆ ಕಡಿತದಿಂದ ಪಾರಾಗುವುದೇ ಪ್ರಮುಖ ಚಿಕಿತ್ಸೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ವೆಸ್ಟ್ ನೈಲ್ ವೈರಸ್ ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದೆ. ಈವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ನೆರೆ ರಾಜ್ಯದಲ್ಲಿ ಒಬ್ಬರು ಮೃತರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಣ್ಗಾವಲು ವಹಿಸುತ್ತಿದ್ದೇವೆ. ಇದು ಹಕ್ಕಿ ಹಾಗೂ ಸೊಳ್ಳೆಯಿಂದ ಹರಡಲಿದ್ದು, ನಿರ್ದಿಷ್ಟಚಿಕಿತ್ಸೆ ಇರುವುದಿಲ್ಲ. ಹೀಗಾಗಿ ಕಟ್ಟೆಚ್ಚರ ವಹಿಸುತ್ತಿದ್ದೇವೆ. ಕೇಂದ್ರ ಆರೋಗ್ಯ ಇಲಾಖೆಯ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ. ನಿರ್ದೇಶನ ಬಂದ ಬಳಿಕ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
- ಸಜ್ಜನ್ ಶೆಟ್ಟಿ, ಜಂಟಿ ನಿರ್ದೇಶಕ, ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗ (ಎನ್‌ವಿಬಿಪಿಸಿ)
ನಿಯಂತ್ರಣ ಹೇಗೆ?
ಸೋಂಕುಪೀಡಿತ ಪ್ರದೇಶದಿಂದ ವಲಸೆ ಬರುವ ಹಕ್ಕಿಗಳಿಂದ ರೋಗ ಸೊಳ್ಳೆಗಳಿಗೆ ಹರಡುತ್ತದೆ. ಸೊಳ್ಳೆಗಳ ಕಡಿತದಿಂದ ಮನುಷ್ಯರಿಗೆ ಹರಡುತ್ತದೆ. ಹೀಗಾಗಿ ವಲಸೆ ಹಕ್ಕಿಗಳು ಬರುವ ಕಡೆ ತೀವ್ರ ಕಣ್ಗಾವಲು ವಹಿಸಬೇಕು. ಸೋಂಕುಪೀಡಿತ ಪಕ್ಷಿಗಳನ್ನು ಪತ್ತೆಹಚ್ಚಿ ಸೋಂಕು ಬೇರೊಬ್ಬರಿಗೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಸೋಂಕಿಗೆ ನಿರ್ದಿಷ್ಟಚಿಕಿತ್ಸೆ ಇಲ್ಲದಿರುವುದರಿಂದ ಸೋಂಕು ಬಾರದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ. ಉಳಿದಂತೆ ಸೊಳ್ಳೆಗಳ ನಿಯಂತ್ರಣ ಹಾಗೂ ಸೊಳ್ಳೆಗಳಿಂದ ರಕ್ಷಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಮುಖವಾಗಿ ಸಾರ್ವಜನಿಕರು ಸೊಳ್ಳೆ ಪರದೆ ಉಪಯೋಗಿಸುವುದು, ಸುತ್ತಮುತ್ತಲೂ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ವಹಿಸುವುದು ಮಾಡಬೇಕು.
ಸೊಳ್ಳೆಯಿಂದ ಜನರಿಗೆ
ವೆಸ್ಟ್ ನೈಲ್ ವೈರಸ್ ಎಂಬುದು ಫ್ಲೆವಿ ವೈರಸ್ ವರ್ಗಕ್ಕೆ ಸೇರಿದ ವೈರಸ್. ಫ್ಲೆವಿವೈರಸ್ ವರ್ಗಕ್ಕೇ ಝೀಕಾ ವೈರಸ್, ಎಲ್ಲೊ ಫೀವರ್ ವೈರಸ್‌ನಂತಹ ಮಾರಣಾಂತಿಕ ವೈರಸ್‌ಗಳು ಸೇರಿವೆ. ಇಂತಹ ವೆಸ್ಟ್ ನೈಲ್ ವೈರಸ್ ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡುಬರುತ್ತದೆ. ಈ ವೈರಾಣುಗಳು ಕಾಗೆ ಜಾತಿಗೆ ಸೇರಿದ ಪಕ್ಷಿಗಳಿಂದ ಹರಡುವುದರಿಂದ ‘ಕಾಗೆ ಜ್ವರ’ ಎಂದೂ ಕರೆಯಲಾಗುತ್ತದೆ. ಪ್ರಮುಖವಾಗಿ ಹಕ್ಕಿಗಳಿಂದ ಸೊಳ್ಳೆಗಳಿಗೆ ಹಾಗೂ ಸೊಳ್ಳೆಗಳ ಕಡಿತದಿಂದ ಮನುಷ್ಯರು ಹಾಗೂ ಕುದುರೆಗಳಿಗೆ ರೋಗ ಹರಡುತ್ತದೆ.
ಜ್ವರ ಲಕ್ಷಣಗಳೇನು?
ಸೋಂಕು ತಗುಲಿದ ಶೇ.80ರಷ್ಟುಜನರಲ್ಲಿ ಕೊನೆಯ ಹಂತದವರೆಗೆ ರೋಗದ ಲಕ್ಷಣ ಕಾಣುವುದಿಲ್ಲ. 2-3 ವಾರ ಬಳಿಕ ಲಕ್ಷಣಗಳು ಗೋಚರಿಸುತ್ತವೆ. ಉಳಿದ ಶೇ.20ರಷ್ಟುಜನರಲ್ಲಿ ಜ್ವರ, ತಲೆನೋವು, ತುರಿಕೆ, ಮೈ-ಕೈ ನೋವು, ನರ ಊದಿಕೊಳ್ಳುವಿಕೆಯಂತಹ ಲಕ್ಷಣಗಳು ಕಾಣುತ್ತವೆ. ಅಪರೂಪದ ಪ್ರಕರಣಗಳಲ್ಲಿ 2-3 ದಿನದಲ್ಲೇ ಲಕ್ಷಣಗಳು ತೀವ್ರವಾಗಿ ಕೋಮಾಗೆ ತಲುಪಬಹುದು. ಅಂತಿಮ ಹಂತದಲ್ಲಿ ಪ್ಯಾರಾಲಿಸಿಸ್ ಉಂಟಾಗಬಹುದು ಅಥವಾ ಮೆದುಳು ನಿಷ್ಕಿ್ರಯಗೊಳ್ಳಬಹುದು.
ವರದಿ : ಶ್ರೀಕಾಂತ್ ಎನ್. ಗೌಡಸಂದ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.