9 ಕಾಂಗ್ರೆಸ್ ಮುಖಂಡರ ಉಚ್ಛಾಟನೆಗೆ ಯತ್ನ..?

By Web DeskFirst Published Dec 25, 2018, 7:31 AM IST
Highlights

ಸಚಿವ ಸಂಪುಟ ಪುನಾ​ರ​ಚ​ನೆ​ಯಿಂದ ಕಾಂಗ್ರೆ​ಸ್‌​ನಲ್ಲಿ ಅತೃಪ್ತಿ ಭುಗಿ​ಲೆ​ದ್ದಿ​ರುವ ಬೆನ್ನಲ್ಲೇ  ಇದೀಗ 9 ಮಂದಿಯನ್ನು  ಉಚ್ಛಾಟನೆ ಮಾಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. 

ಬೆಂಗಳೂರು :  ಸಚಿವ ಸಂಪುಟ ಪುನಾ​ರ​ಚ​ನೆ​ಯಿಂದ ಕಾಂಗ್ರೆ​ಸ್‌​ನಲ್ಲಿ ಅತೃಪ್ತಿ ಭುಗಿ​ಲೆ​ದ್ದಿ​ರುವ ಈ ಹಂತ​ದಲ್ಲೇ ಕಳೆದ ವಿಧಾನಸಭಾ ಚುನಾವಣೆ ವೇಳೆಯ ಪಕ್ಷವಿರೋಧಿ ಚಟುವಟಿಕೆ ನಡೆ​ಸಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಸದ​ಸ್ಯರು ಸೇರಿ​ದಂತೆ ಒಂಭತ್ತು ಮಂದಿ​ಯನ್ನು ಪಕ್ಷ​ದಿಂದ ಉಚ್ಚಾಟಿ​ಸುವ ಮೂಲಕ ಅತೃ​ಪ್ತ​ರಿಗೆ ಎಚ್ಚ​ರಿಕೆಯ ಸಂದೇಶ ನೀಡುವ ಪ್ರಯತ್ನವನ್ನು ಪಕ್ಷ ಮಾಡಿದೆ.

ಸೋಮವಾರ ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು ಪಕ್ಷವಿರೋಧಿ ಚಟು​ವ​ಟಿಕೆ ಹಿನ್ನೆ​ಲೆ​ಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ಒಬ್ಬರು, ಮೈಸೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಯ ಇಬ್ಬರು ಮತ್ತು ನಂಜನಗೂಡು ತಾಲೂಕು ಪಂಚಾಯ್ತಿ ಅಧ್ಯಕ್ಷ ಸೇರಿದಂತೆ ಐವರು ಸದಸ್ಯರು ಹಾಗೂ ಮೂಡಿಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಸೇರಿ ಒಟ್ಟು ಒಂಬತ್ತು ಮಂದಿ ಕಾಂಗ್ರೆ​ಸ್ಸಿ​ಗ​ರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿ​ಸಿ​ದ​ರು.

2018ರ ವಿಧಾನಸಭಾ ಚುನಾವಣೆ ವೇಳೆ ದಾಖಲಾಗಿದ್ದ ಪಕ್ಷ ವಿರೋಧಿ ಚಟುವಟಿಕೆ ದೂರುಗಳ ಬಗ್ಗೆ ವಿಚಾರಣೆ ನಡೆ​ಸಲು ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಅವರ ನೇತೃತ್ವದಲ್ಲಿ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ರಚಿ​ಸ​ಲಾ​ಗಿತ್ತು. ಈ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ಈ ಕ್ರಮ ಕೈಗೊ​ಳ್ಳ​ಲಾ​ಗಿದೆ. ಇನ್ನು ಮುಂದೆಯೂ ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು, ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಎಷ್ಟುಪ್ರಾಮಾಣಿ​ಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ, ಪಕ್ಷಕ್ಕೆ ಎಷ್ಟುಶಿಸ್ತುಬದ್ಧವಾಗಿ ನಡೆದುಕೊಂಡಿದ್ದಾರೆ ಮತ್ತು ಪಕ್ಷದ ವರ್ಚ​ಸ್ಸಿಗೆ ಧಕ್ಕೆ ಉಂಟಾ​ಗು​ವಂತೆ ನಡೆ​ದು​ಕೊಂಡಿ​ದ್ದಾ​ರೆಯೇ ಎಂಬುದನ್ನು ಗಮ​ನಿ​ಸ​ಲಾ​ಗು​ವುದು. ಯಾರೇ ಈ ಮಾನ​ದಂಡ ಉಲ್ಲಂಘಿ​ಸಿ​ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳ​ಲಾ​ಗು​ವುದು ಎಂದು ಎಚ್ಚ​ರಿ​ಸಿ​ದ​ರು.

ಪಕ್ಷ ವಿರೋಧಿ ಚಟುವಟಿಕೆ, ಬಹಿರಂಗ ಹೇಳಿಕೆ ನೀಡುವಂತಹ ಅಶಿಸ್ತು ತಡೆಯಲು ಹೈಕಮಾಂಡ್‌ ಎಲ್ಲ ಪ್ರದೇಶ ಕಾಂಗ್ರೆಸ್‌ಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ರಾಜಸ್ಥಾನದಲ್ಲಿ ಕೂಡ ಇಂತಹ ದೂರುಗಳು ಕೇಳಿಬಂದ ಹಿನ್ನೆ​ಲೆ​ಯಲ್ಲಿ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿದ್ದಾರೆ. ರಾಜ್ಯದಲ್ಲೂ ಕೂಡ ಯಾರೇ ಅಶಿಸ್ತು ಪ್ರದ​ರ್ಶಿ​ಸಿ​ದರೂ ಇದೇ ನೀತಿ ಪಾಲಿ​ಸ​ಲಾ​ಗು​ವುದು ಎಂದ​ರು.

2018ರ ಚುನಾ​ವ​ಣೆ ವೇಳೆ ಪಕ್ಷ ವಿರೋಧಿ ಚಟು​ವ​ಟಿಕೆ ನಡೆ​ಸಿದ ಬಗ್ಗೆ ಶಿಸ್ತು ಪಾಲನಾ ಸಮಿತಿ ಮುಂದೆ 44 ದೂರುಗಳು ದಾಖಲಾಗಿದ್ದವು. ಇದರಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ದಾಖಲಾಗಿದ್ದ 39 ದೂರುಗಳಲ್ಲಿ ಹೊಸಕೋಟೆ, ಟಿ.ನರಸೀಪುರ, ನಂಜನಗೂಡು ಮತ್ತು ಮೂಡಿಗೆರೆ ಕ್ಷೇತ್ರಗಳಲ್ಲಿ 9 ಮುಖಂಡರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಸಾಬೀತಾಗಿದೆ. ಹಾಗಾಗಿ ಅವರನ್ನು ಉಚ್ಚಾಟಿಸಲಾಗಿದೆ. 18 ಪ್ರಕರಣಗಳಲ್ಲಿ ಮತ್ತೆ ತಪ್ಪು ಮರುಕಳಿಸದಂತೆ ಎಚ್ಚರಿಸಲಾಗಿದೆ. ಇನ್ನೂ 13 ಪ್ರಕರಣಗಳಲ್ಲಿ ವಿವಿಧ ಸಲಹೆ ನೀಡಿ ದೂರು ಮುಕ್ತಾಯಗೊಳಿಸಲಾಗಿದೆ ಎಂದು ವಿವರಿಸಿದರು.

ಉಚ್ಚಾಟಿತ 9 ಮುಖಂಡರು

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಮಂಜುನಾಥ್‌, ಮೈಸೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಸುಧೀರ್‌, ಮೈಸೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯ ಮಧು ಸುಬ್ಬಣ್ಣ, ನಂಜನಗೂಡು ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ಸದಸ್ಯರಾದ ಶಿವಣ್ಣ, ಗೀತಾ, ದೇವಮ್ಮ, ಮಾದಪ್ಪ ಮತ್ತು ಮೂಡಿಗೆರೆಯ ಮಾಜಿ ಎಪಿಎಂಸಿ ಅಧ್ಯಕ್ಷ ಎಂ.ಸಿ.ನಾಗೇಶ್‌

click me!