ಬಿಜೆಪಿಗೆ ಮತ ಹಾಕದಂತೆ ಯುವಕರಿಂದ ಪ್ರಮಾಣ ಮಾಡಿಸಿತಾ ಕಾಂಗ್ರೆಸ್?

By Web DeskFirst Published Oct 9, 2018, 9:08 AM IST
Highlights

ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗೆ ಎಲ್ಲಾ ಪಕ್ಷಗಳಿಂದ ಭರದಿಂದ ಸಿದ್ಧತೆ | ಬಿಜೆಪಿಗೆ ಮತ ಹಾಕದಂತೆ ಯುವಕರಿಂದ ಪ್ರಮಾಣ ಮಾಡಿಸಿದ ಕಾಂಗ್ರೆಸ್ ! ಈ ಸುದ್ದಿ ನಿಜನಾ? 

ಬೆಂಗಳೂರು (ಅ. 09): ಮುಂದಿನ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕುವಂತೆ ಕಾಂಗ್ರೆಸ್ ಜನರ ಬಳಿ ಪ್ರಮಾಣ ಮಾಡಿಸಿಕೊಳ್ಳುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸಂದೇಶವನ್ನು ಕೆಲವರು ಶೇರ್ ಮಾಡಿ, ‘ಇದು ಹಿಟ್ಲರ್ ಆಡಳಿತ ವ್ಯವಸ್ಥೆಯಂತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿ ನಡೆ’ ಎಂದು ಬರೆದಿದ್ದಾರೆ. ಕೇವಲ ಟ್ವೀಟರ್ ಮಾತ್ರವಲ್ಲದೆ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲೂ ಈ ವಿಡಿಯೋ
ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕರ ಗುಂಪು ‘ಚುನಾವಣೆಯಲ್ಲಿ ಬಿಜೆಪಿಗೆ ನಾವು ಮತ ಹಾಕುವುದಿಲ್ಲ. ಹಾಗೆಯೇ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಯಾವುದೇ ಬೆಂಬಲ ನೀಡುವುದಿಲ್ಲ. ಕನಿಷ್ಠ 3 ಜನರಾದರೂ ಈ ಪ್ರಮಾಣ ಮಾಡುವಂತೆ ನಾನು ಪ್ರಯತ್ನಿಸುತ್ತೇನೆ. ಜೊತೆಗೆ ಬಿಜೆಪಿಯ ಭ್ರಷ್ಟಾಚಾರ, ಅನ್ಯಾಯದ ಕುರಿತು ನನ್ನ ಜಿಲ್ಲೆ ಮತ್ತು ಗ್ರಾಮದ ಜನರಲ್ಲಿ ಜಾಗ್ರತಿ ಮೂಡಿಸುತ್ತೇನೆ’ ಎನ್ನುತ್ತಿರುವ ದೃಶ್ಯವಿದೆ.

ಆದರೆ ವಾಸ್ತವ ಏನೆಂದರೆ ಮಧ್ಯಪ್ರದೇಶದಲ್ಲಿ ಯುವ ಸಮೂಹವೊಂದು ಆನ್‌ಲೈನ್ ಪರೀಕ್ಷೆಯ ವಿರುದ್ಧ ನಡೆಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕೈಗೊಂಡ ಪ್ರತಿಜ್ಞೆ ಇದಾಗಿತ್ತು. ಇದರ ಮೂಲ ವಿಡಿಯೋವನ್ನು ಪರಿಶೀಲಿಸಿದಾಗ ಯುವಕರು
ಮೊದಲಿಗೆ, ‘ಆನ್‌ಲೈನ್ ಪರೀಕ್ಷೆಗಳು ಕೊನೆಗೊಳ್ಳುವವರೆಗೆ ನಾವು ಬಿಜೆಪಿಗೆ ಮತ ಹಾಕುವುದಿಲ್ಲ...’ ಎಂದಿರುವುದು ತಿಳಿಯುತ್ತದೆ.

ಈ ಪ್ರಕರಣ ನಡೆದಿರುವುದು 2018 ರ ಜನವರಿ 26 ರಂದು ಮಧ್ಯಪ್ರದೇಶದಲ್ಲಿ. ಇದನ್ನು ಹಲವು ಸುದ್ದಿ ಮಾಧ್ಯಮಗಳೂ ವರದಿ ಮಾಡಿದ್ದವು. ಎಲ್ಲೂ ಕೂಡ ಕಾಂಗ್ರೆಸ್ ಹೆಸರು ಇಲ್ಲ. ಆದರೆ, ಈಗ ಇದೇ ವಿಡಿಯೋವನ್ನು ಇನ್ನೊಂದು
ಅರ್ಥದಲ್ಲಿ ಶೇರ್ ಮಾಡಲಾಗುತ್ತಿದೆ.

-ವೈರಲ್ ಚೆಕ್ 

click me!