ಕೆಎಸ್ಸಾರ್ಟಿಸಿ ಡಬಲ್‌ ಡೆಕ್ಕರ್‌ ಬಸ್‌ ಸದ್ಯಕ್ಕಿಲ್ಲ

By Web DeskFirst Published Jan 16, 2019, 9:16 AM IST
Highlights

ಕೆಎಸ್ಸಾರ್ಟಿಸಿ ಡಬಲ್‌ ಡೆಕ್ಕರ್‌ ಬಸ್‌ ಸದ್ಯಕ್ಕಿಲ್ಲ | ಡಬಲ್‌ ಡೆಕ್ಕರ್‌ ಬಸ್‌ ತಯಾರಿಸಲು ಕಂಪನಿಗಳೇ ಮುಂದೆ ಬರುತ್ತಿಲ್ಲ |  6 ಡಬಲ್‌ ಡೆಕ್ಕರ್‌ ಬಸ್‌ ಓಡಿಸುವ ನಿಗಮದ ಕನಸು ಈಡೇರುತ್ತಿಲ್ಲ

ಬೆಂಗಳೂರು (ಜ. 16):  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಹು ನಿರೀಕ್ಷೆಯ ‘ಡಬಲ್‌ ಡೆಕ್ಕರ್‌ ಬಸ್‌’ ಕಾರ್ಯಾಚರಣೆ ಕನಸು ಸದ್ಯಕ್ಕೆ ಈಡೇರುವುದು ಅನುಮಾನ! ಏಕೆಂದರೆ, ಡಬಲ್‌ ಡೆಕ್ಕರ್‌ ಬಸ್‌ ತಯಾರಿಸಲು ಯಾವ ಕಂಪನಿಗಳೂ ಮುಂದೆ ಬರುತ್ತಿಲ್ಲ.

ಕೆಎಸ್‌ಆರ್‌ಟಿಸಿಯು ರಾಜ್ಯ ಹಾಗೂ ನೆರೆಯ ರಾಜ್ಯಗಳ ನಡುವೆ ಆರು ಡಬಲ್‌ ಡೆಕ್ಕರ್‌ ಬಸ್‌ ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿತ್ತು. ಅದರಂತೆ ಆರು ಬಸ್‌ಗಳನ್ನು ಖರೀದಿಸಲು ಉತ್ಸುಕವಾಗಿತ್ತು. ಬಸ್‌ ತಯಾರಿಸುವ ವೋಲ್ವೋ, ಲೈಲ್ಯಾಂಡ್‌, ಐಷರ್‌, ಟಾಟಾ ಸೇರಿದಂತೆ ಹಲವು ಕಂಪನಿಗಳೊಂದಿಗೆ ಎರಡು-ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ, ಯಾವೊಂದು ಕಂಪನಿಯೂ ಡಬಲ್‌ ಡೆಕ್ಕರ್‌ ಬಸ್‌ ತಯಾರಿಕೆಗೆ ಆಸಕ್ತಿ ತೋರಲಿಲ್ಲ. ಹಾಗಾಗಿ ಸದ್ಯಕ್ಕೆ ಡಬಲ್‌ ಡೆಕ್ಕರ್‌ ಬಸ್‌ ಯೋಜನೆಗೆ ಹಿನ್ನಡೆಯಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕಡಿಮೆ ಸಂಖ್ಯೆಯೇ ನಿರಾಸಕ್ತಿಗೆ ಕಾರಣ:

ಕೆಎಸ್‌ಆರ್‌ಟಿಸಿ ಆರು ಬಸ್‌ಗಳನ್ನು ಖರೀದಿಸಿ ಕಾರ್ಯಾಚರಣೆ ಮಾಡಲು ಯೋಜನೆ ಸಿದ್ಧಪಡಿಸಿದೆ. ಬಸ್‌ಗಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಬಸ್‌ ತಯಾರಿಕಾ ಕಂಪನಿಗಳು ಡಬಲ್‌ ಡೆಕ್ಕರ್‌ ಬಸ್‌ ತಯಾರಿಸಲು ಹಿಂದೇಟು ಹಾಕುತ್ತಿವೆ. ಹಾಗಂತ ಏಕಾಏಕಿ 50-100 ಬಸ್‌ ಖರೀದಿಸಲು ಸಾಧ್ಯವಿಲ್ಲ.

ಏಕೆಂದರೆ, ನಿಗಮದ ಆರ್ಥಿಕ ಪರಿಸ್ಥಿತಿ, ಲಾಭ-ನಷ್ಟಎಲ್ಲ ಆಯಾಮಗಳಿಂದಲೂ ನೋಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಗಮ ಮೊದಲ ಬಾರಿಗೆ ಡಬಲ್‌ ಡೆಕ್ಕರ್‌ ಬಸ್‌ ಕಾರ್ಯಾಚರಣೆಗೆ ಕೈ ಹಾಕಿದೆ. ಇದರ ಸಾಧಕ-ಬಾಧಕಗಳ ಅನುಭವವಿಲ್ಲ. ಅಲ್ಲದೆ, ಈ ಮಾದರಿಯ ಬಸ್‌ಗಳ ದರ ಕೂಡ ದುಬಾರಿಯಾಗಿರುತ್ತದೆ. ಹೀಗಿರುವಾಗ ಏಕಾಏಕಿ ದೊಡ್ಡ ಸಂಖ್ಯೆಯ ಬಸ್‌ ಖರೀದಿಸುವುದು ಕಷ್ಟವಾಗುತ್ತದೆ ಎಂದರು.

70 ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದ ಆಯ್ದ 70 ಮಾರ್ಗಗಳಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಕಾರ್ಯಾಚರಣೆಗೆ ಉತ್ಸುಕವಾಗಿತ್ತು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸುವ, ವಾಹನಗಳ ಸಂಚಾರ ದಟ್ಟಣೆ ತಗ್ಗಿಸುವ ಹಾಗೂ ಪ್ರಯಾಣಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವುದು ಈ ಡಬಲ್‌ ಡೆಕ್ಕರ್‌ ಬಸ್‌ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು.

ಸಚಿವಾಲಯದ ಸಲಹೆ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್‌ ಖರೀದಿಗೆ ಮುಂದಾಗಿತ್ತು. ಇದೀಗ ಬಸ್‌ ತಯಾರಿಕಾ ಕಂಪನಿಗಳು ಡಬಲ್‌ ಡೆಕ್ಕರ್‌ ಬಸ್‌ ತಯಾರಿಕೆಗೆ ನಿರಾಸಕ್ತಿ ತಳೆದಿವೆ. ಈ ಬಗ್ಗೆ ಸಚಿವಾಲಯದ ಗಮನ ಸಳೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ಕೆಎಸ್‌ಆರ್‌ಟಿಸಿಯ ಐದು ಮಾರ್ಗ:

ಕೆಎಸ್‌ಆರ್‌ಟಿಸಿಯು ಈ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಐದು ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲು ನಿರ್ಧರಿಸಿತ್ತು. ಅದರಂತೆ ಬೆಂಗಳೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್‌, ಬೆಂಗಳೂರು- ಚೆನ್ನೈ ಹಾಗೂ ಬೆಂಗಳೂರು-ಹುಬ್ಬಳ್ಳಿ ಮಾರ್ಗ ಗುರುತಿಸಲಾಗಿತ್ತು.

ಈ ಬಸ್‌ಗಳಲ್ಲಿ 82 ಆಸನ ಸಾಮರ್ಥ್ಯ, ಕೆಳ ಅಂತಸ್ತಿನಲ್ಲಿ ಎರಡು ದ್ವಾರ, ಕೆಳ ಮತ್ತು ಮೇಲಂತಸ್ತಿನಲ್ಲಿ ತಲಾ ಎರಡು ತುರ್ತು ನಿರ್ಗಮನ ದ್ವಾರಗಳು ಕಡ್ಡಾಯವಾಗಿ ಇರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿತ್ತು.

-ಮೋಹನ್ ಹಂಡ್ರಂಗಿ 

click me!