ಕರ್ನಾಟಕ ಸರ್ಕಾರದಿಂದ ನವೆಂಬರ್ 1ರಿಂದ ಆರಂಭವಾಗಲಿದೆ ಮಹತ್ವದ ಪ್ರಕ್ರಿಯೆ

By Web DeskFirst Published Sep 26, 2018, 7:49 AM IST
Highlights

ಸಹಕಾರ ಬ್ಯಾಂಕ್‌ಗಳಲ್ಲಿ ಈಗಾಗಲೇ ಕರ್ನಾಟಕ ಸರ್ಕಾರದಿಂದ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರಕ್ರಿಯೆ ಚಾಲನೆ ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಸಾಲಮನ್ನಾ ಕುರಿತು ಸರ್ಕಾರದ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿ, ನವೆಂಬರ್ ಒಂದರಿಂದ ಚಾಲನೆ ನೀಡುವುದಾಗಿ ಸಿಎಂ ಹೇಳಿದ್ದಾರೆ. 

ಬೆಂಗಳೂರು:  ರಾಜ್ಯ ಮೈತ್ರಿ ಸರ್ಕಾರ ಘೋಷಣೆ ಮಾಡಿರುವ ಸಾಲಮನ್ನಾ ಯೋಜನೆಯಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ 2 ಲಕ್ಷ ರು.ವರೆಗಿನ ಸಾಲಮನ್ನಾ ಪ್ರಕ್ರಿಯೆಯು ಬರುವ ಕರ್ನಾಟಕ ರಾಜ್ಯೋತ್ಸವ ದಿನದಿಂದ (ನ.1) ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಮುಖ್ಯ  ಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಅಲ್ಲದೆ, ಸರ್ಕಾರಕ್ಕೆ ರೈತರ ಸಾಲದ ಬಗ್ಗೆ ಖುದ್ದು ರೈತರಿಂದಲೇ ಮಾಹಿತಿ ತಿಳಿದುಕೊಳ್ಳುವುದಕ್ಕಾಗಿ ಅರ್ಜಿಯೊಂದನ್ನು ಸಿದ್ಧಪಡಿಸಲಾಗಿದೆ. ಈ ಅರ್ಜಿಯನ್ನು ಇನ್ನೆರೆಡು ದಿನದಲ್ಲಿ ನಾಡ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಸಹಕಾರ ಬ್ಯಾಂಕ್‌ಗಳಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪ್ರಕ್ರಿಯೆ ಚಾಲನೆ ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಸಾಲಮನ್ನಾ ಕುರಿತು ಸರ್ಕಾರದ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದರು. 

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಮಾಡುವ ಪ್ರಕ್ರಿಯೆಯನ್ನು  ಅಧಿಕೃತವಾಗಿ ನವೆಂಬರ್ 1ರಿಂದ ಪ್ರಾರಂಭಿಸಲಾಗುವುದು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಶನಿವಾರ ಬ್ಯಾಂಕ್‌ಗಳ ಪ್ರಮುಖರ ಜತೆ ಸಭೆ ನಡೆಯಲಿದೆ. ಸಭೆಯಲ್ಲಿ ಬ್ಯಾಂಕ್‌ಗಳಲ್ಲಿನ ರೈತರ ಸಾಲದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ ಎಂದು ಹೇಳಿದರು. ಮಾಹಿತಿ ಸಂಗ್ರಹ: ಸಾಲಮನ್ನಾ ಯೋಜನೆಯು ಮಧ್ಯವರ್ತಿಗಳಿಗೆ ತಲುಪಬಾರದು ಎಂಬ ಉದ್ದೇಶದಿಂದ ಸರ್ಕಾರವು ಎರಡು ಸಮಿತಿಗಳನ್ನು ರಚಿಸಿದೆ.  ಒಂದು ಸಮಿತಿಯು ರೈತರು ಯಾವ ಬ್ಯಾಂಕ್‌ನಿಂದ ಎಷ್ಟು ಸಾಲ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. 

ಸರ್ಕಾರಕ್ಕೆ ರೈತರ ಸಾಲದ ಬಗ್ಗೆ ಖುದ್ದು ರೈತರಿಂದಲೇ ಮಾಹಿತಿ ತಿಳಿದುಕೊಳ್ಳುವುದಕ್ಕಾಗಿ ಅರ್ಜಿಯೊಂದನ್ನು ಸಿದ್ಧಪಡಿಸಲಾಗಿದೆ. ಈ ಅರ್ಜಿಯನ್ನು ಇನ್ನೆರೆಡು ದಿನದಲ್ಲಿ ನಾಡ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ವಿತರಣೆ ಮಾಡಲಾಗುತ್ತದೆ. ಅರ್ಜಿಯು ಸುಲಭವಾಗಿದ್ದು, ಸರ್ಕಾರದ  ಮಾಹಿತಿಗಾಗಿ ಮತ್ತು ಮಧ್ಯವರ್ತಿಗಳ ಕಾಟವನ್ನು ತಪ್ಪಿಸಲು ಅರ್ಜಿಗಳನ್ನು ನೀಡಲಾಗುತ್ತಿದೆ. ರೈತ ಕುಟುಂಬದಲ್ಲಿರುವ ಸದಸ್ಯರ ಮಾಹಿತಿಯ ಕುರಿತು ಪಡೆದುಕೊಳ್ಳಲಾಗುವುದು ಎಂದರು. 

ಎರಡನೇ ಸಮಿತಿಯು ಬ್ಯಾಂಕ್‌ಗಳಿಂದ ಮಾಹಿತಿ ಕಲೆ ಹಾಕುತ್ತಿದೆ. ಬ್ಯಾಂಕ್‌ಗಳ ಯಾವ ಶಾಖೆಯಿಂದ ಯಾವ ರೈತರು ಎಷ್ಟು ಸಾಲ ಮಾಡಿದ್ದಾರೆ ಎಂಬ ವಿಷಯವನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.

click me!