ವೇದಿಕೆಯಲ್ಲೇ ಎಚ್‌ಡಿಕೆ - ಪ್ರತಾಪ್ ಸಿಂಹ ಜಟಾಪಟಿ

By Web DeskFirst Published Dec 8, 2018, 9:43 AM IST
Highlights

ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಅವರ ನಡುವೆ ವೇದಿಕೆಯಲ್ಲೇ ಜಟಾಪಟಿ ನಡೆದ ಘಟನೆ ಕೊಡಗಿನಲ್ಲಿ ನಡೆದಿದೆ. 

ಮಡಿಕೇರಿ :  ಕೊಡಗಿನ ಮಹಾಮಳೆ ಸಂತ್ರಸ್ತರಿಗಾಗಿ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಂಸದ ಪ್ರತಾಪ್‌ ಸಿಂಹ ನಡುವೆ ಜಟಾಪಟಿ ನಡೆಯಿತು.

ಕೊಡಗಿನಲ್ಲಿ ದುರಂತ ಸಂಭವಿಸಿದಾಗ ಮೊದಲು ಸ್ಪಂದಿಸಿದ್ದೇ ಕೇಂದ್ರದ ಎನ್‌ಡಿಆರ್‌ಎಫ್‌. ಈ ಬಗ್ಗೆ ನಾನೇ ಕೇಂದ್ರವನ್ನು ಸಂಪರ್ಕಿಸಿದ್ದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯನ್ನೂ ಸಮರೋಪಾದಿಯಲ್ಲಿ ಕೇಂದ್ರ ಸರ್ಕಾರ ದುರಸ್ತಿ ಮಾಡಿದೆ ಎಂದು ಪ್ರತಾಪ್‌ ಸಿಂಹ ಹೇಳಿದರು.

ಕುಳಿತಲ್ಲಿಂದಲೇ ಸಂಸದರತ್ತ ಸನ್ನೆ ಮಾಡಿದ ಕುಮಾರಸ್ವಾಮಿ, ವೇದಿಕೆಯಲ್ಲಿ ಅನುಚಿತ ಮಾತುಗಳನ್ನಾಡದಂತೆ ಸೂಚಿಸಿದರು. ಸಂಸದರು ತಕ್ಷಣ ಭಾಷಣ ಮೊಟಕುಗೊಳಿಸಿದಂತೆ ಕಂಡುಬಂದರೂ ಮತ್ತೆ ಮಾತು ಮುಂದುವರಿಸುತ್ತಾ, ‘ಮಕ್ಕಳನ್ನು ಶಾಲೆಗೆ ಸೇರಿಸಬೇಕಾದರೂ ವಿಳಾಸ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ನೆರವಿನ ಬಗ್ಗೆ ನಾನು ವಿಳಾಸ ನೀಡುತ್ತಿದ್ದೇನೆ. ಕೇಂದ್ರ ಸರ್ಕಾರದಿಂದ ನೆರವು ಸಿಕ್ಕಿಲ್ಲ ಎಂಬ ಅನುಮಾನ ಬೇಡ’ ಎಂದು ಹೇಳಿ ಭಾಷಣ ಮುಗಿಸಿದರು. ಈ ವೇಳೆ ತಮ್ಮ ಆಸನದಲ್ಲಿ ಕುಳಿತ ಪ್ರತಾಪ್‌ ಸಿಂಹ ಮತ್ತು ಸಿಎಂ ನಡುವೆ ಮಾತಿನ ವಿನಿಮಯ ನಡೆದಿದ್ದು ಕಂಡುಬಂತು.

ನಂತರ ಮಾತನಾಡಿದ ಕುಮಾರಸ್ವಾಮಿ, ಕೇಂದ್ರ ಸರ್ಕಾರ ಪುಕ್ಕಟೆಯಾಗಿ ವಿಮಾನ ಕಳುಹಿಸಿಕೊಟ್ಟಿಲ್ಲ. ಅದಕ್ಕೂ ಹಣ ಪಾವತಿಸಬೇಕಿದೆ. ವಿಕೋಪ ಸಂಭವಿಸಿದಾಗ ನಾನೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ, ನೆರವು ಕೇಳಿದ್ದೇನೆ. ಕೇಂದ್ರ ಸರ್ಕಾರ ನೀಡುತ್ತಿರುವುದು ಜನರ ತೆರಿಗೆ ಹಣವನ್ನೇ ಹೊರತು, ಸ್ವಂತದ್ದಲ್ಲ ಎಂದು ಟೀಕಿಸಿದರು.

click me!