ಅಮಿತ್‌ ಶಾ, ಬಿಎಸ್‌ವೈ ಭೇಟಿ : ನಡೆದ ಸೀಕ್ರೇಟ್ ಚರ್ಚೆ ಏನು..?

By Web DeskFirst Published Dec 29, 2018, 10:52 AM IST
Highlights

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಭೇಟಿ ಮಾತುಕತೆ ನಡೆಸಿದ್ದಾರೆ. ಈ ಭೇಟಿ ರಾಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. 

ನವದೆಹಲಿ :  ಜೆಡಿಎಸ್‌- ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಶುಕ್ರವಾರ ಭೇಟಿಯಾಗಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಅಮಿತ್‌ ಶಾ ಭೇಟಿ ವೇಳೆ ರಾಜ್ಯ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಜ.11 ಮತ್ತು 12 ರಂದು ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಅವರಿಗೆ ನೀಡಿದ್ದೇನೆ ಎಂದು ಯಡಿಯೂರಪ್ಪ ಕರ್ನಾಟಕ ಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದೇವೇಳೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಸಂಗ್ರಹ ಕಾರ್ಯವು ಜ.10ರೊಳಗೆ ಮುಗಿಯಲಿದೆ. ಆ ಬಳಿಕವೇ ಮುಂದಿನ ತಯಾರಿಗಳು ನಡೆಯಲಿದೆ ಎಂದರು.

ರಾಜ್ಯ ಬಿಜೆಪಿಯು ಸರ್ಕಾರ ಉರುಳಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅದೇ ರೀತಿಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್‌ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿಲ್ಲ ಎಂದು ಹೇಳಿದರು.

ರಮೇಶ್‌ ಜಾರಕಿಹೊಳಿ ಅನೇಕ ತಿಂಗಳುಗಳಿಂದ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ರಮೇಶ್‌ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬುದು ಬರೀ ವದಂತಿಯಷ್ಟೆ. ನಾನು ಅವರನ್ನೂ ಭೇಟಿಯೂ ಆಗಿಲ್ಲ, ಮಾತುಕತೆಯೂ ನಡೆಸಿಲ್ಲ ಎಂದರು.

ನಾವು ನಮ್ಮ ಪಾಡಿಗೆ ವಿರೋಧ ಪಕ್ಷದಲ್ಲಿದ್ದೇವೆ. ಆದರೆ ನಾವು ಸರ್ಕಾರ ರಚಿಸಬೇಕಾದರೆ ಆಡಳಿತ ಪಕ್ಷಗಳ ಶಾಸಕರು ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜೀನಾಮೆ ನೀಡಿದರೂ ಅವರು ಮುಂದೆ ಲೋಕಸಭಾ ಚುನಾವಣೆಯ ಜೊತೆಗೆ ತಮ್ಮ ವಿಧಾನ ಸಭೆ ಚುನಾವಣೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಕತ್ತಿಗೆ ತಿಳಿವಳಿಕೆ: ಸರ್ಕಾರ ರಚನೆಯ ಬಗ್ಗೆ ಉಮೇಶ್‌ ಕತ್ತಿ ನೀಡಿರುವ ಹೇಳಿಕೆಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಇಂತಹ ಹೇಳಿಕೆಗಳಿಂದ ಗೌರವ ಬರುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

click me!