ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದ: ಶ್ರೀ ಶ್ರೀ ರವಿಶಂಕರ್ ಮಧ್ಯಸ್ಥಿಕೆಗೆ ಬಿಜೆಪಿ, ವಿಎಚ್’ಪಿ ಆಕ್ಷೇಪ

By Suvarna Web DeskFirst Published Nov 15, 2017, 8:43 PM IST
Highlights

ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಆರಂಭಿಸಿರುವ ಮಧ್ಯಸ್ಥಿಕೆ ಪ್ರಕ್ರಿಯೆಗೆ ಬಿಜೆಪಿ, ಹಾಗೂ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದೆ.

ನವದೆಹಲಿ: ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಆರಂಭಿಸಿರುವ ಮಧ್ಯಸ್ಥಿಕೆ ಪ್ರಕ್ರಿಯೆಗೆ ಬಿಜೆಪಿ, ಹಾಗೂ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಇತರ ಆಯ್ಕೆಗಳನ್ನು ನೆಚ್ಚಿಕೊಳ್ಳಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

ಶ್ರೀ ಶ್ರೀ ರವಿಶಂಕರ್ ಅವರು ನಾಳೆ (ನ.16) ಅಯೋಧ್ಯೆಗೆ ಭೇಟಿನೀಡಲಿದ್ದು ವ್ಯಾಜ್ಯಕ್ಕೆ  ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ವಿಶ್ವ ಹಿಂದೂ ಪರಿಷತ್ತು (ವಿಎಚ್’ಪಿ) ಕೂಡಾ ಮಧ್ಯಸ್ಥಿಕೆಗೆ ವಿರೋಧ ವ್ಯಕ್ತಪಡಿಸಿದೆ. ರಾಮ ಜನ್ಮಭೂಮಿಯು ಹಿಂದೂಗಳಿಗೆ ಸೇರಿದ್ದು, ಅದಕ್ಕೆ ಪುರಾವೆಗಳೂ ಇವೆ. ಅದಕ್ಕೆ ಯಾವುದೇ ಮಾತುಕತೆಯ ಅವಶ್ಯಕತೆಯಿಲ್ಲ, ಅಥವಾ ಯಾರೊಂದಿಗೂ ಭಿಕ್ಷೆ ಬೇಡುವ ಅಗತ್ಯವಿಲ್ಲ, ಎಂದು ವಿಎಚ್’ಪಿ ನಾಯಕ ಶರದ್ ಶರ್ಮಾ ಹೇಳಿದ್ದಾರೆ.

ರಾಮಜನ್ಮಭೂಮಿ ಚಳುವಳಿಗೆ ಯಾವುದೇ ಕೊಡುಗೆಯನ್ನು ನೀಡದವರು ಮಾತುಕತೆ ಮೂಲಕ ಈ ವಿವಾದವನ್ನು ಬಗೆಹರಿಸಲು ಮುಂದಾಗಿದ್ದಾರೆ ಎಂದಿರುವ ಶರದ್ ಶರ್ಮಾ, ‘ನಾವು ಶ್ರೀ ಶ್ರೀ ರವಿಶಂಕರ್ ಅವರನ್ನು ಗೌರವಿಸುತ್ತೇವೆ, ಆದರೆ ಈ ಹಿಂದೆ ಪ್ರಧಾನಿ, ಸರ್ಕಾರ ಹಾಗೂ ಶಂಕರಾಚಾರ್ಯ ನಡೆಸಿರುವ ಪ್ರಯತ್ನಗಳು ಕೂಡಾ ಯಾವುದೇ ಫಲಿತಾಂಶ ನೀಡದಿರುವುದನ್ನು ನೆನಪಿಸಿಕೊಳ್ಳಬೇಕು, ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ವಿವಾದಕ್ಕೆ ಸಂಬಂಧಿಸಿ ಮುಸ್ಲಿಮರ ಪ್ರತಿನಿಧಿ ಸಂಘಟನೆಯಾದ ಅಖಿಲ ಭಾರತ ಮುಸ್ಲಿಮ್ ವೈಯುಕ್ತಿಕ ಕಾನೂನು ಮಂಡಳಿ ಕೂಡಾ ಶ್ರೀ ಶ್ರೀ ರವಿಶಂಕರ್ ಮಧ್ಯಸ್ಥಿಕೆ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದೆ. ಮಾತುಕತೆ ನಡೆಸುತ್ತೇವೆ ಎಂದವರು ಈವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. 12 ವರ್ಷಗಳ ಹಿಂದೆಯೂ ಕೂಡಾ ಅವರು ಇಂತಹ ಪ್ರಯತ್ನವನ್ನು ಆರಂಭಿಸಿ, ಕೊನೆಗೆ ವಿವಾದಾಸ್ಪದ ಜಮೀನನ್ನು ಹಿಂದೂಗಳಿಗೆ ನೀಡುವಂತೆ ಹೇಳಿದ್ದರು. ಈ ಬಾರಿ ಏನು ಹೊಸ ಪರಿಹಾರವನ್ನು ಹೊಂದಿದ್ದಾರೆ ಎಂಬುವುದನ್ನು ಅವರು ಬಹಿರಂಗಪಡಿಸಬೇಕು, ಎಂದು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನ ವಲೀ ರಹ್ಮಾನಿ ಹೇಳಿದ್ದಾರೆ.  

click me!