ಉದ್ಯಾನ ನಗರಿಯ ನಿವಾಸಿಗಳೇ ಎಚ್ಚರ...!

By Web DeskFirst Published Mar 11, 2019, 9:54 AM IST
Highlights

ಬೆಂಗಳೂರು ನಾಗರಿಕರೆ ಎಚ್ಚರ. ನೀವು ಈ ಕೆಲಸ ಮಾಡದಿದ್ದಲ್ಲಿ ನಿಮಗೆ ಬೀಳಲಿದೆ ಭಾರಿ ದಂಡ. 

ಬೆಂಗಳೂರು :  ಉದ್ಯಾನ ನಗರಿಯ ನಿವಾಸಿಗಳೇ ಎಚ್ಚರ...! ನಿಮ್ಮ ಮನೆಯಲ್ಲಿ ಉತ್ಪಾದನೆಯಾಗುವ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡದೆ ವಿಲೇವಾರಿ ವಾಹನಗಳಿಗೆ ಮಿಶ್ರ ತ್ಯಾಜ್ಯ ನೀಡಲು ಮುಂದಾದರೆ ಇನ್ನು ಮುಂದೆ ದುಬಾರಿ ದಂಡ ತೆರಬೇಕಾಗುತ್ತದೆ!

ಈಗಾಗಲೇ ರಸ್ತೆ ಬದಿ, ಖಾಲಿ ನಿವೇಶನ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆದು ಹೋಗುವವರಿಗೆ ಮಾರ್ಷಲ್‌ಗಳ ಹದ್ದಿನ ಕಣ್ಣಿಟ್ಟು ದಂಡ ವಿಧಿಸುತ್ತಿರುವ ಬಿಬಿಎಂಪಿ ಇದೀಗ, ಮನೆ ಹಂತದಲ್ಲೇ ತ್ಯಾಜ್ಯ ವಿಂಗಡಣೆಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸುವ ಸಲುವಾಗಿ ಕಟ್ಟುನಿಟ್ಟಿನ ನಿರ್ಧಾರಕ್ಕೆ ಬಂದಿದೆ. ಪ್ರಸ್ತುತ ಪ್ರಗತಿಯಲಿರುವ ವಾರ್ಡ್‌ವಾರು ಟೆಂಡರ್‌ ಮೂಲಕ ಹಸಿ ಕಸ ಸಂಗ್ರಹ ಮತ್ತು ವಿಲೇವಾರಿಗೆ ಹೊಸ ಗುತ್ತಿಗೆದಾರರನ್ನು ನೇಮಿಸಿದ ಬಳಿಕ ಕಸ ವಿಂಗಡಣೆ ಮಾಡದವರಿಗೆ ಮನೆ ಹಂತದಲ್ಲೇ ದಂಡ ವಿಧಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವು​ದಾಗಿ ಹೇಳಿ​ದೆ.

2017ರಲ್ಲೇ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ್ದರೂ, ಸಂಪೂರ್ಣ ಅನುಷ್ಠಾನದಲ್ಲಿ ವಿಫಲವಾಗಿರುವ ಬಿಬಿಎಂಪಿ, ಇದೀಗ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕ ಟೆಂಡರ್‌ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡಲು ತೀರ್ಮಾನಿಸಿದೆ. ಹಾಗಾಗಿಯೇ ಪ್ರಸ್ತುತ ಹಸಿ ಕಸ ವಿಲೇವಾರಿಗೆ ಮಾತ್ರ ಟೆಂಡರ್‌ ಆಹ್ವಾನಿಸಿದೆ. ಗುತ್ತಿಗೆದಾರರು ಇದಕ್ಕೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಈ ಅಂಶವನ್ನು ಮಾತ್ರ ಸಡಿಸಲಿಸಲು ಸಾಧ್ಯವಿಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಅದರಂತೆ, ವಾರ್ಡ್‌ವಾರು ಟೆಂಡರ್‌ನಲ್ಲಿ ಬಿಡ್‌ ಮಾಡಿ ಗುತ್ತಿಗೆ ಪಡೆದ ಗುತ್ತಿಗೆದಾರರು ನಿಯಮಾವಳಿ ಪ್ರಕಾರ, ಪ್ರತಿ ಮನೆಯಿಂದ ಹಸಿ ಕಸವನ್ನು ಮಾತ್ರ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ನಗರದ ಯಾವುದೇ ವಾರ್ಡ್‌ ನಿವಾಸಿಗಳು ಕಸ ವಿಂಗಡಿಸದೆ ನೀಡಲು ಮುಂದಾದರೆ ಮನೆ ಬಾಗಿಲಿಗೆ ಬರುವ ಆಟೋ ಟಿಪ್ಪರ್‌ ಸಿಬ್ಬಂದಿ ಅದನ್ನು ಸ್ವೀಕರಿಸುವಂತಿಲ್ಲ. ಅಲ್ಲದೆ, ಆ ರೀತಿ ಮಿಶ್ರ ತ್ಯಾಜ್ಯ ನೀಡುವ ಮನೆಗಳ ಮಾಹಿತಿಯನ್ನು ವಿಳಾಸ ಸಹಿತ ನೋಟ್‌ ಮಾಡಿಕೊಂಡು ಬಿಬಿಎಂಪಿಗೆ ನೀಡಬೇಕು. ಜೊತೆಗೆ ಮಿಶ್ರ ತ್ಯಾಜ್ಯ ನೀಡಲು ಬರುವ ಮನೆಯವರ ಫೋಟೋವನ್ನೂ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯಲಿದ್ದಾರೆ. ಇದರ ಆಧಾರದ ಮೇಲೆ ಪಾಲಿಕೆ ಅಂತಹವರಿಗೆ ದಂಡ ವಿಧಿಸಲು ಹೊರಟಿದೆ.

ಐದು ಪಟ್ಟು ದಂಡ ಹೆಚ್ಚಳಕ್ಕೆ ಪ್ರಸ್ತಾವನೆ:

ಕಸ ವಿಂಗಡಿಸದೆ ನೀಡುವ ನಾಗರಿಕರಿಗೆ ಪ್ರಸ್ತುತ .100ರಿಂದ .500 ರವರೆಗೆ ದಂಡ ವಿಧಿಸಲು ಅವಕಾಶವಿದೆ. ಈಗಿರುವ ದಂಡದ ಮೊತ್ತವನ್ನು ಐದು ಪಟ್ಟು ಅಂದರೆ .500 ರಿಂದ .2500 ರವರೆಗೆ ಹೆಚ್ಚಿಸಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

‘ಆಟೋ ಟಿಪ್ಪರ್‌ ಡ್ರೈವರ್‌ ಮತ್ತು ಸಹಾಯಕ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ, ತ್ಯಾಜ್ಯ ವಿಂಗಡಿಸದ ಮನೆಗಳಿಗೆ ದಂಡ ವಿಧಿಸಲಾಗುವುದು. ಒಂದು ವೇಳೆ ದಂಡ ಪಾವತಿಸಲು ಮನೆಯವರು ನಿರಾಕರಿಸಿದರೆ, ಪಾಲಿಕೆ ಪ್ರತೀ ವರ್ಷ ಮನೆ ಮಾಲಿಕರು ಆಸ್ತಿ ತೆರಿಗೆ ಪಾವತಿಸುವ ವೇಳೆ ದಂಡ ಸೇರಿಸಿ ಮಾಡಿ ವಸೂಲು ಮಾಡಲಾಗುವುದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ವಿಲೇವಾರಿ) ರಂದೀಪ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಪ್ರಸ್ತುತ ಇರುವ ದಂಡದ ಮೊತ್ತವನ್ನು ಐದು ಪಟ್ಟು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಗೆ ಅನುಮೋದನೆ ಸಿಗುವವರೆಗೆ ಹಾಲಿ ಜಾರಿಯಲ್ಲಿರುವಷ್ಟುದಂಡದ ಮೊತ್ತವನ್ನು ವಿಧಿಸಲಾಗುವುದು. ಈ ಕಾರ್ಯಕ್ಕೆ ಪಾಲಿಕೆಯ ಹಿರಿಯ ಆರೋಗ್ಯ ಪರಿವೀಕ್ಷಕರನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಫೈನಿಂಗ್‌ ಮಷಿನ್‌ಗಳನ್ನು ನೀಡಿ ದಂಡ ವಿಧಿಸುವ ಕಾರ್ಯ ವಹಿಸಲಾಗುವುದು. ಈ ನಿಯಮ ಕಟ್ಟುನಿಟ್ಟಿನ ಜಾರಿ ಬಳಿಕ ತ್ಯಾಜ್ಯವನ್ನು ಹೊರಗೆ ಕದ್ದು ಮುಚ್ಚಿ ಎಸೆಯುವುದು ಹೆಚ್ಚಬಹುದು. ಅದನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಅಂತಹವರಿಗೆ ದಂಡ ವಿಧಿಸಲು ಮಾರ್ಷಲ್‌ಗಳನ್ನು ನೇಮಿಸಲಾಗಿದೆ. ದಂಡ ವಿಧಿಸುವ ಪ್ರಕ್ರಿಯೆಯನ್ನು ಮತ್ತಷ್ಟುಪರಿಣಾಮಕಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಒಣ ತ್ಯಾಜ್ಯ ಸಂಗ್ರಹದ ಜವಾಬ್ದಾರಿಯನ್ನು ಸ್ವಯಂ ಸೇವಾ ಸಂಸ್ಥೆಗಳು, ಚಿಂದಿ ಆಯುವವರ ಸಂಘಟನೆಗಳು, ಸ್ವಸಹಾಯ ಗುಂಪುಗಳಿಗೆ ವಹಿಸಲು ಪಾಲಿಕೆ ಮುಂದಾಗಿದೆ. ಪ್ರತ್ಯೇಕ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಗರದಲ್ಲಿ ಚಿಂದಿ ಆಯುವವರ ಸಮೀಕ್ಷೆಯನ್ನೂ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂಡ ಪ್ರಮಾಣ 5 ಪಟ್ಟು ಹೆಚ್ಚಳಕ್ಕೆ ಅನುಮೋದನೆ

ದಂಡ ಪ್ರಮಾಣ ಐದು ಪಟ್ಟು ಹೆಚ್ಚಿಸಲು ಸರ್ಕಾರಕ್ಕೆ ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತಿದ್ದು, ಅಧಿಸೂಚನೆ ಹೊರಬೀಳುವುದು ಬಾಕಿ ಇದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಅಧಿಸೂಚನೆ ಹೊರಬಿದ್ದರೆ, ತ್ಯಾಜ್ಯ ವಿಂಗಡಿಸದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಅಕ್ರಮ ತ್ಯಾಜ್ಯ ವಿಲೇವಾರಿ, ರಸ್ತೆಯಲ್ಲಿ ತ್ಯಾಜ್ಯ ನೀರು ಹರಿಸಿದರೆ, ಅವೈಜ್ಞಾನಿಕವಾಗಿ ಪ್ರಾಣಿ ತ್ಯಾಜ್ಯ ವಿಲೇವಾರಿ ಮಾಡಿದರೆ ಅಂತಹವರಿಗೆ ಮೊದಲ ಹಂತದಲ್ಲಿ .500, 2ನೇ ಹಂತದಲ್ಲಿ .1000, ನಂತರ .2500 ರವರೆಗೆ ದಂಡ ವಿಧಿಸಲು ಬಿಬಿಎಂಪಿಗೆ ಅವಕಾಶ ದೊರೆಯಲಿದೆ.

ಇನ್ನು, ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಸುರಿಯುವವರಿಗೆ .5ರಿಂದ .25 ಸಾವಿರದ ವರೆಗೆ, ಆಸ್ಪತ್ರೆ, ಕೈಗಾರಿಕಾ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿದ ಪ್ರಕರಣಗಳಿಗೆ .2,500ರಿಂದ .5000 ರವರೆಗೆ ದಂಡ ವಿಧಿಸಲು ಅವಕಾಶ ದೊರೆಯಲಿದೆ.

ಹಸಿ ಕಸ ಸಂಗ್ರಹ ಮತ್ತು ವಿಲೇವಾರಿ ಪ್ರಸ್ತುತ ಆಹ್ವಾನಿಸಿರುವ ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಹೊಸ ಗುತ್ತಿಗೆದಾರರು ನೇಮಕಗೊಂಡ ಬಳಿಕ ಪ್ರತೀ ಮನೆಯಲ್ಲೂ ಹಸಿ, ಒಣ ಕಸವನ್ನು ವಿಂಗಡಿಸಿ ನೀಡಬೇಕು. ಮಿಶ್ರ ತ್ಯಾಜ್ಯವನ್ನು ಸ್ವೀಕರಿಸುವಂತಿಲ್ಲ. ಕಸ ವಿಂಗಡಿಸಿ ನೀಡದ ಪ್ರತಿಯೊಂದು ಮನೆಗೂ ದಂಡ ವಿಧಿಸಲಾಗುವುದು. ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರಿಗೆ ಈ ಜವಾಬ್ದಾರಿ ನೀಡಲಾಗುತ್ತದೆ.

-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ತ್ಯಾಜ್ಯ ವಿಲೇವಾರಿ)

ವರದಿ :  ಲಿಂಗರಾಜು ಕೋರಾ

click me!