ಸೈಟ್‌ ಹಣ ಕಟ್ಟೋಕೆ 1 ತಿಂಗಳ ಅವಕಾಶ..?

By Web DeskFirst Published Dec 16, 2018, 9:27 AM IST
Highlights

ಕೆಂಪೇಗೌಡ ಬಡಾವಣೆ 2ನೇ ಹಂತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಹಣ ಪಾವತಿಸಲು ಹೆಚ್ಚುವರಿಯಾಗಿ ಒಂದು ತಿಂಗಳು ಅವಧಿ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಬೆಂಗಳೂರು :  ನಾಡಪ್ರಭು ಕೆಂಪೇಗೌಡ ಬಡಾವಣೆ 2ನೇ ಹಂತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಹಣ ಪಾವತಿಸಲು ಹೆಚ್ಚುವರಿಯಾಗಿ ಒಂದು ತಿಂಗಳು ಅವಧಿ ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶನಿವಾರ ನಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಎರಡನೇ ಹಂತದಲ್ಲಿ ಒಟ್ಟಾರೆ 4971 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ನಿಯಮಗಳ ಪ್ರಕಾರ ನಿವೇಶನ ಹಂಚಿಕೆಯಾದ 60 ದಿನದೊಳಗೆ ಪೂರ್ಣ ಪ್ರಮಾಣದ ಹಣವನ್ನು ಪಾವತಿಸಬೇಕು. ಪಾವತಿಸದಿದ್ದರೆ ನಂತರದ 30 ದಿನಗಳಿಗೆ ಶೇ.15ರಷ್ಟುಬಡ್ಡಿ, ಈ ನಂತರದ 30 ದಿನಗಳಿಗೆ ಶೇ.21ರಷ್ಟುಬಡ್ಡಿ ಪಾವತಿಸಬೇಕಾಗುತ್ತದೆ. 6 ತಿಂಗಳಲ್ಲಿ ಹಣ ಸಂದಾಯ ಮಾಡದಿದ್ದರೆ ನಿವೇಶನ ರದ್ದುಗೊಳ್ಳಲಿದೆ. ಹೀಗಾಗಿ, ನಿವೇಶನದಾರರ ಮನವಿ ಮೇರೆಗೆ ಬಡ್ಡಿ ವಿಧಿಸದೆ ಒಂದು ತಿಂಗಳ ಹೆಚ್ಚುವರಿ ಅವಧಿ ನೀಡಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಅವರ ನೇತೃತ್ವದಲ್ಲಿ ನಡೆದ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಅವಧಿ ವಿಸ್ತರಿಸಲಾಗುತ್ತದೆ. ಹೆಚ್ಚುವರಿ ಅವಧಿಯಲ್ಲೂ ಹಣ ಪಾವತಿಯಾಗದಿದ್ದರೆ ಈಗ ನಿಗದಿ ಮಾಡಿರುವಂತೆ ಬಡ್ಡಿ ಸಹಿತ ಹಣ ಪಾವತಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಸುಮಾರು 43 ವಿಷಯಗಳ ಕುರಿತು ಚರ್ಚಿಸಲಾಗಿದೆ. 2006ರಲ್ಲಿ ಆರಂಭವಾದ ಫೆರಿಫೆರಲ್‌ ರಿಂಗ್‌ ರಸ್ತೆಯ ಸಂಪೂರ್ಣ ರೂಪುರೇಷೆಗಳನ್ನು ಜ.30ರೊಳಗೆ ಪೂರ್ಣಗೊಳಸಿ ಫೆಬ್ರವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸುವ ಕುರಿತು ಸಹ ಚರ್ಚಿಸಲಾಗಿದೆ. ಪ್ರಾಧಿಕಾರದ ವಿವಿಧ ಕಾಮಗಾರಿಗಳಿಗೆ ಸ್ವಾಧೀನ ಪಡಿಸಿಕೊಂಡಿರುವ ಜಾಗಗಳ ವ್ಯಾಜ್ಯಗಳನ್ನು ಅಡ್ವೋಕೇಟ್‌ ಜನರಲ್‌ ಸಲಹೆ ಪಡೆದು ಪರಿಹರಿಸಲು ಸಹ ಒಪ್ಪಿಗೆ ಸೂಚಿಸಲಾಗಿದೆ ಎಂದರು.

ಅದೇ ರೀತಿ ಬಿಡಿಎ ವ್ಯಾಪ್ತಿಯಲ್ಲಿನ ನಿವೇಶನ ಹಾಗೂ ಆಸ್ತಿಗಳ ಲೆಕ್ಕಪರಿಶೋಧನೆ ನಡೆಸಲು ಟೆಂಡರ್‌ ಪೂರ್ಣಗೊಂಡಿದ್ದು, ಮಾಚ್‌ರ್‍ ಅಂತ್ಯದೊಳಗೆ ಗುತ್ತಿಗೆದಾರರು ಆಡಿಟ್‌ ಕೆಲಸ ಪೂರ್ಣಗೊಳಿಸಲು ಸಮಯ ನಿಗದಿ ಮಾಡಲಾಗಿದೆ ಎಂದರು.

75 ಚ.ಮೀ. ಕಾರ್‌ ಪಾರ್ಕಿಂಗ್‌ 

ನಗರದಲ್ಲಿ ಪ್ರತಿ 50 ಚ.ಮೀ. ಅಂತರದಲ್ಲಿ ಕಾರ್‌ ಪಾರ್ಕಿಂಗ್‌ಗೆ ಅವಕಾಶ ನೀಡುವ ನಿಯಮವಿದೆ. ಇದನ್ನು ಮೆಟ್ರೋ ರೈಲು ಇರುವ ನಗರದಲ್ಲಿ 75 ಚ.ಮೀ.ಗೆ ಹೆಚ್ಚಿಸಲು ತೀರ್ಮಾನಿಸಲಾಯಿತು. ಮೆಟ್ರೋ ಇರುವ ಪ್ರದೇಶದಲ್ಲಿ ಮೆಟ್ರೋ ಬಳಕೆ ಹೆಚ್ಚಿರುವ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂತಿಮ ನಿರ್ಧಾರಕ್ಕಾಗಿ ಮತ್ತು ನಿಯಮ ತಿದ್ದುಪಡಿಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಪರಮೇಶ್ವರ್‌ ತಿಳಿಸಿದರು.

‘ಜಿ’ ಕೆಟಗರಿ ನಿವೇಶನ ಮತ್ತು ಸಿಎ ನಿವೇಶನಗಳ ಹಂಚಿಕೆ ಸಂಬಂಧ ಸಮಿತಿಗಳನ್ನು ರಚನೆ ಮಾಡುವುದಕ್ಕೆ ಕೂಡ ಒಪ್ಪಿಗೆ ದೊರೆತಿದೆ. ಬಿಡಿಎ ಆಯುಕ್ತರು ಸಮಿತಿ ಅಧ್ಯಕ್ಷರಾಗಿರುತ್ತಾರೆ. 24 ಸಿಎ ನಿವೇಶನಗಳ ಮಾರಾಟಕ್ಕೆ ಕಳೆದ ಸೆಪ್ಟೆಂಬರ್‌ ಮತ್ತು ನವೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ನೂರಾರು ಅರ್ಜಿಗಳು ಬಂದಿದ್ದು, ಹಂಚಿಕೆ ಮಾಡುವುದಕ್ಕೂ ಒಪ್ಪಿಗೆ ದೊರೆತಿದೆ ಎಂದು ಮಾಹಿತಿ ನೀಡಿದರು.

click me!