ಬಿಜೆಪಿಯಿಂದ 20,000 ವಾಟ್ಸಾಪ್‌ ಗ್ರೂಪ್‌!

By Suvarna Web DeskFirst Published Mar 5, 2018, 7:33 AM IST
Highlights

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯು ಇದುವರೆಗೆ ಹೆಚ್ಚೂ ಕಡಮೆ 20 ಸಾವಿರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸುವ ಮೂಲಕ ದಾಖಲೆ ಮೆರೆದಿದೆ.

ಬೆಂಗಳೂರು : ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯು ಇದುವರೆಗೆ ಹೆಚ್ಚೂ ಕಡಮೆ 20 ಸಾವಿರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸುವ ಮೂಲಕ ದಾಖಲೆ ಮೆರೆದಿದೆ.

ಒಂದು ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಗರಿಷ್ಠ 256 ಮಂದಿ ಸದಸ್ಯರಿರಬಹುದು. ಆ ಪ್ರಕಾರ ಲೆಕ್ಕ ಹಾಕಿದರೆ ಸುಮಾರು 50 ಲಕ್ಷ ಜನರು ಈ ಮಾಧ್ಯಮದ ಮೂಲಕ ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಇದು ಹಿಂದಿನ ಉತ್ತರ ಪ್ರದೇಶ, ಗುಜರಾತ್‌ ವಿಧಾನಸಭಾ ಚುನಾವಣೆಗಳಲ್ಲಿ ಅಲ್ಲಿನ ಬಿಜೆಪಿ ರಚಿಸಿದ್ದ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಿಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ಚುನಾವಣೆ ಉದ್ದೇಶದಿಂದ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಬೇಕು ಎಂಬುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸೂಚನೆಯಾಗಿತ್ತು. ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಮೂರು ದಿನಗಳ ಕಾಲ ಬೆಂಗಳೂರಿಗೆ ಆಗಮಿಸಿ ಪಕ್ಷದ ವಿವಿಧ ಹಂತದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದ ಅವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸುವುದರಿಂದ ಆಗುವ ಲಾಭದ ಬಗ್ಗೆ ಹಲವು ನಿರ್ದಿಷ್ಟನಿರ್ದೇಶನಗಳನ್ನು ನೀಡಿದ್ದರು.

ಅದಾದ ಕೆಲವು ದಿನಗಳ ನಂತರ ಪ್ರಕ್ರಿಯೆ ಆರಂಭಗೊಂಡು ಪಕ್ಷದ ಐಟಿ ಘಟಕ ಅಸ್ತಿತ್ವದಲ್ಲಿದ್ದರೂ ಇದಕ್ಕಾಗಿಯೇ ಸಾಮಾಜಿಕ ಜಾಲತಾಣ (ಸೋಷಿಯಲ್‌ ಮೀಡಿಯಾ) ಘಟಕ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂತು. ಬಾಲಾಜಿ ಶ್ರೀನಿವಾಸ್‌ ಅವರು ಈ ಘಟಕದ ಸಂಚಾಲಕರಾಗಿ ನೇಮಕಗೊಂಡು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿಂದ ಇದುವರೆಗೆ ಸತತವಾಗಿ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳ ರಚನೆ ಕಾರ್ಯ ಮುಂದುವರೆದಿದ್ದು, ಈಗ ಆ ಸಂಖ್ಯೆ ಸುಮಾರು 20 ಸಾವಿರ ತಲುಪಿದೆ. ಇನ್ನೂ ಪ್ರತಿನಿತ್ಯ ಹತ್ತಾರು ಗ್ರೂಪ್‌ಗಳ ರಚನೆ ನಡೆಯುತ್ತಲೇ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ದೂರದ ಜಿಲ್ಲೆ, ತಾಲೂಕು, ಮಂಡಲದ ಮೂಲಕ ಬೂತ್‌ ಮಟ್ಟದವರೆಗೂ ಪ್ರತ್ಯೇಕ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ಪಕ್ಷದ ಪರ ಪ್ರಚಾರ, ಪಕ್ಷದ ನಾಯಕರ ಹೇಳಿಕೆಗಳು, ಪ್ರತಿಪಕ್ಷಗಳ ಎಡವಟ್ಟುಗಳು, ಪ್ರತಿಪಕ್ಷಗಳಿಗೆ ನೀಡುವ ಎದಿರೇಟು ಮತ್ತಿತರ ಸಂದೇಶಗಳನ್ನು ನಿರಂತರವಾಗಿ ಹರಿಬಿಡಲಾಗುತ್ತದೆ. ಬೆಂಗಳೂರಿನಿಂದ ಹರಿಬಿಡುವ ಸಂದೇಶಗಳು ಕ್ಷಣಾರ್ಧದಲ್ಲಿ ದೂರದ ಗ್ರಾಮೀಣ ಪ್ರದೇಶವನ್ನೂ ತಲುಪುತ್ತವೆ.

ರಾಜಧಾನಿ ಬೆಂಗಳೂರಿನಲ್ಲಿರುವ ಬಿಜೆಪಿಯ ಸಾಮಾಜಿಕ ಜಾಲತಾಣ ಘಟಕದ ಕೇಂದ್ರ ಕಚೇರಿಯ ನಂತರ ರಾಜ್ಯವನ್ನು ಏಳು ವಿಭಾಗಗಳನ್ನಾಗಿಸಿ ಅವುಗಳಿಗೆ ಒಬ್ಬೊಬ್ಬ ಉಸ್ತುವಾರಿಯನ್ನು ನೇಮಿಸಲಾಗಿದೆ. ಅದರ ನಂತರ ಜಿಲ್ಲೆ, ತಾಲೂಕು, ಮಂಡಲ ಹಾಗೂ ಬೂತ್‌ ಮಟ್ಟದಲ್ಲಿ ಗ್ರೂಪ್‌ಗಳನ್ನು ಮಾಡಿಕೊಂಡು ಅವುಗಳಿಗೆ ಅಡ್ಮಿನ್‌ಗಳನ್ನು ಮಾಡಲಾಗಿದೆ.

ಎಫ್‌ಬಿ, ಟ್ವೀಟರ್‌ಗಿಂತ ವಾಟ್ಸಾಪ್‌ ಬೆಸ್ಟ್‌

ಸದ್ಯದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಲ್ಲಿ ಫೇಸ್‌ಬುಕ್‌ ಮತ್ತು ಟ್ವೀಟರ್‌ಗಿಂತ ವಾಟ್ಸ್‌ ಆ್ಯಪ್‌ ಹೆಚ್ಚು ಜನಪ್ರಿಯವಾಗಿದೆ ಎಂಬುದು ಅಧ್ಯಯನದಿಂದ ಹೊರಬಿದ್ದಿರುವ ಅಂಶ. ಇದಕ್ಕೆ ಮುಖ್ಯ ಕಾರಣ ಮೊಬೈಲ್‌. ಸರಾಗವಾಗಿ ಸಂದೇಶಗಳನ್ನು ನೋಡುವುದಕ್ಕೆ ಮತ್ತು ಕಳುಹಿಸುವುದಕ್ಕೆ ವಾಟ್ಸ್‌ ಆ್ಯಪ್‌ ಸುಲಭ ಎಂಬ ಕಾರಣಕ್ಕಾಗಿ ಅತಿಹೆಚ್ಚು ಮಂದಿ ಇದನ್ನೇ ಬಳಸುತ್ತಿದ್ದಾರೆ. ಹೀಗಾಗಿ, ಬಿಜೆಪಿ ಈ ವಾಟ್ಸ್‌ ಆ್ಯಪನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಜನಸಾಮಾನ್ಯರಿಗೆ ತಲುಪುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿದು ಬಂದಿದೆ.

click me!