ಮೋದಿ ಕನಸಿನ ಸ್ವಚ್ಛ ಭಾರತಕ್ಕೆ 5 ವರ್ಷ; ಸಾಧಕ- ಬಾಧಕಗಳೇನು?

By Web DeskFirst Published Sep 30, 2019, 4:43 PM IST
Highlights

ಸ್ವಚ್ಛ ಭಾರತ ಅಭಿಯಾನ ನಾಡಿದ್ದು ಅಕ್ಟೋಬರ್‌ 2ರಂದು 5 ವರ್ಷ ಪೂರೈಸಲಿದೆ. ಈ ಅಭಿಯಾನದ ಫಲವಾಗಿ ಭಾರತ ಇಂದು ಬಯಲು ಶೌಚದ ಪಿಡುಗಿನಿಂದ ಬಹುತೇಕ ಮುಕ್ತಿ ಪಡೆದಿದೆ. ಒಂದು ಕಾಲದಲ್ಲಿ ನೈರ್ಮಲ್ಯದ ಗಂಧಗಾಳಿಯೂ ಗೊತ್ತಿಲ್ಲದ ಹಳ್ಳಿಗಳ ಪ್ರತಿ ಮನೆಯಲ್ಲೂ ಈಗ ಶೌಚಾಲಯವಿದೆ. ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅ.2ರಂದು ಭಾರತವನ್ನು ಅಧಿಕೃತವಾಗಿ ಬಯಲು ಶೌಚ ಮುಕ್ತ ಎಂದು ಘೋಷಿಸಿಲಿದ್ದಾರೆ. 

ಸ್ವಚ್ಛ ಭಾರತ ಅಭಿಯಾನ ನಾಡಿದ್ದು ಅಕ್ಟೋಬರ್‌ 2 ರಂದು 5 ವರ್ಷ ಪೂರೈಸಲಿದೆ. ಈ ಅಭಿಯಾನದ ಫಲವಾಗಿ ಭಾರತ ಇಂದು ಬಯಲು ಶೌಚದ ಪಿಡುಗಿನಿಂದ ಬಹುತೇಕ ಮುಕ್ತಿ ಪಡೆದಿದೆ. ಒಂದು ಕಾಲದಲ್ಲಿ ನೈರ್ಮಲ್ಯದ ಗಂಧಗಾಳಿಯೂ ಗೊತ್ತಿಲ್ಲದ ಹಳ್ಳಿಗಳ ಪ್ರತಿ ಮನೆಯಲ್ಲೂ ಈಗ ಶೌಚಾಲಯವಿದೆ.

ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅ.2ರಂದು ಭಾರತವನ್ನು ಅಧಿಕೃತವಾಗಿ ಬಯಲು ಶೌಚ ಮುಕ್ತ ಎಂದು ಘೋಷಿಸಿಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಈ ಅಸಾಧ್ಯವಾದ ಗುರಿಯನ್ನು ಸಾಧಿಸಿದ್ದು ಹೇಗೆ? ಈ ಅಭಿಯಾನ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಅಭಿಯಾನ ಆರಂಭವಾಗಿದ್ದು ಏಕೆ?

2011ರ ರಾಷ್ಟ್ರೀಯ ಜನಗಣತಿಯ ಪ್ರಕಾರ, ಶೇ.32ರಷ್ಟುಗ್ರಾಮೀಣ ಮನೆಗಳು ಮಾತ್ರ ಶೌಚಾಲಯಗಳನ್ನು ಹೋದಿದ್ದವು. ಸರ್ಕಾರ ಟಾಯ್ಲೆಟ್‌ಗಳನ್ನು ನಿರ್ಮಿಸಲು ಸಾಕಷ್ಟುಹಣ ವ್ಯಯಿಸಿದ ಹೊರತಾಗಿಯೂ ವಿಶ್ವದ ಇತರ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ನೈರ್ಮಲ್ಯದಲ್ಲಿ ಭಾರತ ತೀರಾ ಹಿಂದೆ ಉಳಿದಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಕೇವಲ ಶೇ.40ರಷ್ಟುಮನೆ ಮಂದಿ ಮಾತ್ರ ಶೌಚಾಲಯ ಸೌಲಭ್ಯ ಹೊಂದಿದ್ದರು. ಹೀಗಾಗಿ ಭಾರತವನ್ನು ಸಚ್ಛ ಮತ್ತು ಬಯಲುಶೌಚ ಮುಕ್ತಗೊಳಿಸುವ ಗುರಿಯೊಂದಿಗೆ 2014 ಅ.2ರಂದು ಸ್ವಚ್ಛ ಭಾರತ ಯೋಜನೆಯನ್ನು ಮೋದಿ ಸರ್ಕಾರ ಆರಂಭಿಸತ್ತು.

ಮುಂದಿನ 5 ವರ್ಷಗಳಲ್ಲಿ ಅಂದರೆ 2019 ಅ.2ರ ಒಳಗಾಗಿ ಭಾರತದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸುವ ಗುರಿಯನ್ನು ಹೊಂದಲಾಗಿತ್ತು. ಅಸಾಧ್ಯವೆಂದೇ ಭಾವಿಸಲಾಗಿದ್ದ ಈ ಗುರಿಯನ್ನು ನಿಗದಿತ ಸಮಯದಲ್ಲಿ ಸಾಧಿಸಿದ್ದು ಭಾರತದ ಮಹತ್ವದ ಸಾಧನೆಯೇ ಸರಿ. ಅಂದಿನ ಪರಿಸ್ಥಿತಿ ಹಾಗೂ ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು ಸರ್ಕಾರದ ಬದ್ಧತೆಯಿಂದ. ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಈ ಅಭಿಯಾನದ ಮುಂದಾಳತ್ವ ವಹಿಸಿ ಜನರಿಗೆ ಶೌಚಾಲಯಗಳನ್ನು ನಿರ್ಮಿಸಲು ಪ್ರೇರಣೆಯಾಗಿದ್ದರು.

ಸ್ವಚ್ಚ ಭಾರತ ಅಭಿಯಾನಕ್ಕಾಗಿ ಮೋದಿಗೆ ಗೇಟ್ಸ್ ಸಂಸ್ಥೆ ಪ್ರಶಸ್ತಿ

ಕೇವಲ ಶೌಚಾಲಯಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಜನರ ಮನಸ್ಥಿತಿಯಲ್ಲಿ ಬದಲಾವಣೆ ತರುವುದಕ್ಕೂ ಸರ್ಕಾರ ಪ್ರಾಮುಖ್ಯತೆ ನೀಡಿತ್ತು. ಈ ಮುನ್ನ ಶೌಚಾಲಯಗಳ ನಿರ್ಮಾಣವನ್ನಷ್ಟೇ ಲೆಕ್ಕಹಾಕಲಾಗುತ್ತಿತ್ತು. ಅದು ಕೇವಲ ದಾಖಲೆಗಷ್ಟೇ ಸೀಮಿತವಾಗಿತ್ತು. ಆದರೆ, ಸ್ವಚ್ಛ ಭಾರತ ಅಭಿಯಾನ ಸಂಪೂರ್ಣ ಗ್ರಾಮವನ್ನು ಬಯಲುಶೌಚ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು ಸತತವಾಗಿ ಶ್ರಮಿಸಿದ್ದಾರೆ. ಜನರು ಸ್ವಯಂಪ್ರೇರಿತವಾಗಿ ಶೌಚಾಲಯ ನಿರ್ಮಿಸಿದ್ದಾರೆ. ಇದೆಲ್ಲದರ ಫಲವಾಗಿ ಕಳೆದ 5 ವರ್ಷಗಳ ಅವಧಿಯಲ್ಲಿ 9.9 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೇ.99ರಷ್ಟುಯಶಸ್ಸಿನ ಗುರಿ ಮುಟ್ಟಲಾಗಿದೆ.

ಇದು ಭಾರತದ ಬೃಹತ್‌ ಅಭಿಯಾನ

ಯಾವುದೇ ಅಭಿಯಾನದಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗಿಯಾದಾಗ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ. ಅದೇ ರೀತಿ ಸ್ವಚ್ಛ ಭಾರತ ಅಭಿಯಾನಕ್ಕೆ ಕೇವಲ ಸರ್ಕಾರವಷ್ಟೇ ಅಲ್ಲ ಜನ ಸಮುದಾಯ, ಸಂಘ ಸಂಸ್ಥೆಗಳು, ಸಾವಿರಾರು ಎನ್‌ಜಿಒಗಳು ಕೈಜೋಡಿಸಿವೆ. ತಮ್ಮ ಸಮುದಾಯಕ್ಕೆ ಶೌಚಾಲಯಗಳನ್ನು ನಿರ್ಮಿಸಲು 1,00,000ಕ್ಕೂ ಅಧಿಕ ಮಹಿಳಾ ಕೆಲಸಗಾರರು ಪುರುಷರ ಜೊತೆ ಶ್ರಮಿಸಿದ್ದಾರೆ.

5 ಲಕ್ಷಕ್ಕೂ ಅಧಿಕ ಸ್ವಚ್ಛಾಗ್ರಹಿಗಳು ಗ್ರಾಮ ಗ್ರಾಮಗಳು ಹಾಗೂ ಜಿಲ್ಲೆಗಳಲ್ಲಿ ಪ್ರತಿ ಮನೆಯ ಬಾಗಿಲಿಗೂ ತೆರಳಿ ಶೌಚಾಲಯ ನಿರ್ಮಾಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ಕೂಡ ಈ ಅಭಿಯಾನಕ್ಕೆ ಸಾಥ್‌ ನೀಡಿದೆ. ಕಳೆದ ವರ್ಷ 400,000 ಕಾಲೇಜು ವಿದ್ಯಾರ್ಥಿಗಳು ಸ್ವಚ್ಛ ಭಾರತ ತರಬೇತಿ ಕಾರ್ಯಕ್ರಮದಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಬಯಲುಶೌಚ ಮುಕ್ತ ಗ್ರಾಮಗಳ ನಿರ್ಮಾಣ

ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸುವುದರ ಜೊತೆಗೆ ಇಡೀ ಗ್ರಾಮವನ್ನು ಬಯಲು ಶೌಚದ ಪಿಡುಗಿನಿಂದ ಮುಕ್ತಗೊಳಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿತ್ತು. 2019ರ ಮೇ ವೇಳೆಗೆ 5,61,014 ಗ್ರಾಮಗಳು, 5,61,014 ಗ್ರಾಮ ಪಂಚಾಯತ್‌ಗಳು, 6,091 ತಾಲೂಕು ಘಟಕಗಳು ಹಾಗೂ 618 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಅಭಿಯಾನ ಅತ್ಯಂತ ವೇಗ ಪಡೆದುಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ದಿನ ಸರಾಸರಿ 62,329 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದೆಲ್ಲೆಡೆ ಗಂಟೆಗೆ ಸುಮಾರು 4,500 ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಬಯಲುಶೌಚ ಮುಕ್ತ ಯಾಕೆ ಅಗತ್ಯ?

ಜನರು ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಅದು ಕಾಲರಾ, ಯಕೃತ್ತಿನ ಉರಿಯೂತ, ಟೈಫಾಯಿಡ್‌ ಮತ್ತಿತರ ಕಾಯಿಲೆಗಳು ಹರಡಲು ಕಾರಣವಾಗುತ್ತಿದೆ. ಈ ಕಾಯಿಲೆಯಿಂದಾಗಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು ಅತಿಸಾರ ಕಾಯಿಲೆಗೆ ತುತ್ತಾಗುವ ಅತಿ ಹೆಚ್ಚಿನ ಅಪಾಯ ಇದೆ. ಪ್ರತಿ ವರ್ಷ ಸುಮಾರು 117,300 ಮಕ್ಕಳು ಅತಿಸಾರ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಅಲ್ಲದೇ ಸುರಕ್ಷತೆ ಇಲ್ಲದೇ ಇರುವ ಕಾರಣಕ್ಕೆ ಮಹಿಳೆಯರು ಇದರಿಂದ ಅತಿ ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದಾರೆ.

ಶೌಚಾಲಯ ಕ್ರಾಂತಿ ನಿಜಕ್ಕೂ ಎಷ್ಟಾಗಿದೆ?

ಸಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ಗೋವಾವನ್ನು ಹೊರತುಪಡಿಸಿ ಪ್ರತಿಯೊಂದು ರಾಜ್ಯಗಳ ಮನೆ ಮಂದಿಯೂ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಬಿಹಾರ ಮತ್ತು ಒಡಿಶಾ ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಬಯಲುಶೌಚ ಮುಕ್ತ ಎಂದು ಘೋಷಿಸಲಾಗಿದೆ. ಕೇವಲ ಶೇ.7ರಷ್ಟುಗ್ರಾಮಗಳು ಮಾತ್ರ ಬಯಲುಶೌಚದಿಂದ ಮುಕ್ತವಾಗಿಲ್ಲ. ಈ ಹಳ್ಳಿಗಳೂ ಶೀಘ್ರದಲ್ಲೇ ಬಯಲು ಶೌಚದಿಂದ ಮುಕ್ತವಾಗಲಿವೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ.

ಶೌಚಾಲಯ ನಿರ್ಮಾಣದಲ್ಲಿ ನಗರಗಳೇ ಹಿಂದೆ!

ಗ್ರಾಮೀಣ ಭಾಗದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಈಡೇರಿಸಿದೆ. ಆದರೆ, ಶೌಚಾಲಯ ನಿರ್ಮಾಣದಲ್ಲಿ ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶಗಳೇ ಹಿಂದೆ ಉಳಿದಿವೆ ಎಂಬ ಅಚ್ಚರಿಯ ಅಂಶವನ್ನು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ. 4378 ನಗರಾಡಳಿತ ಪ್ರದೇಶಗಳ ಪೈಕಿ 94 ನಗರಾಡಳಿತ ಪ್ರದೇಶಗಳು ಜೂನ್‌ ತಿಂಗಳವರೆಗೂ ಬಯಲುಶೌಚ ಮುಕ್ತ ಎಂದು ಘೋಷಿಸಲ್ಪಟ್ಟಿರಲಿಲ್ಲ.

ಮನೆಮಂದಿಗೆ ಶೌಚಾಲಯ ನಿರ್ಮಾಣ

2014 ಅಕ್ಟೋಬರ್‌ ಶೇ.38.70

2019 ಅಕ್ಟೋಬರ್‌ ಶೇ.99.99

ಸಾವಿರಾರು ಕೋಟಿ ಖರ್ಚು

ಸರ್ಕಾರ ಸ್ವಚ್ಛ ಭಾರತ ಅಭಿಯಾನವನ್ನು ಸಾಕಾರಗೊಳಿಸುವ ನಿಟ್ಟಿನಿಂದ ವರ್ಷದಿಂದ ವರ್ಷಕ್ಕೆ ಅನುದಾನವನ್ನು ಏರಿಕೆ ಮಾಡಿದೆ. ಅದರ ಪ್ರಮಾಣ ಹೀಗಿದೆ:

2015- 16

ಗ್ರಾಮೀಣ 6525 ಕೋಟಿ ರು.

ನಗರ 1000 ಕೋಟಿ ರು.

2016-17

ಗ್ರಾಮೀಣ 10,500 ಕೋಟಿ ರು.

ನಗರ 2300 ಕೋಟಿ ರು.

2017- 18

ಗ್ರಾಮೀಣ 16,948 ಕೋಟಿ ರು.

ನಗರ 2300 ಕೋಟಿ ರು.

2018- 19

ಗ್ರಾಮೀಣ 15,343 ಕೋಟಿ ರು.

ನಗರ 2500 ಕೋಟಿ ರು.

2019-20

ಗ್ರಾಮೀಣ 9994 ಕೋಟಿ ರು.

ನಗರ 2650 ಕೋಟಿ ರು.

ಪ್ರತಿ ವರ್ಷ ಕಟ್ಟಿದ ಹೊಸ ಟಾಯ್ಲೆಟ್‌ಗಳು

2014- 15 0.49 ಕೋಟಿ

2015-16 1.25 ಕೋಟಿ

2016-17 2.17 ಕೋಟಿ

2017-18 3.0 ಕೋಟಿ

2018- 19 3.0 ಕೋಟಿ

ಕರ್ನಾಟಕ ಬಯಲುಶೌಚ ಮುಕ್ತವಾಗಿದೆಯೇ?

2018 ನ.19ರಂದು ಕರ್ನಾಟಕವನ್ನು ಬಯಲುಶೌಚ ಮುಕ್ತ ರಾಜ್ಯ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 72.2 ಲಕ್ಷ ಮನೆ ಮಂದಿಗೆ ಶೌಚಾಲಯ ಸೌಲಭ್ಯವನ್ನು ಒದಗಿಸಲಾಗಿದೆ. 2018ಕ್ಕೂ ಮುನ್ನ 5 ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ 45.2 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಈ ಗುರಿಯನ್ನು ಸಾಧಿಸಿದ 26ನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಅಭಿಯಾನ ಇಲ್ಲಿಗೇ ನಿಲ್ಲಬಾರದು

ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ ಭಾಗದ ಜನರಲ್ಲಿ ಧನಾತ್ಮಕ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಜನರು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮೀಣ ಭಾಗದ ಸಾಮಾಜಿಕ ಆರ್ಥಿಕ ಸ್ಥಿತಿಗತಿಯನ್ನೂ ಈ ಅಭಿಯಾನ ಬದಲಿಸಿದೆ. ಈಗ ನಿರ್ಮಾಣ ಆಗಿರುವ ಶೌಚಾಲಯಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಹಾಗೂ ನೈರ್ಮಲ್ಯ ವ್ಯವಸ್ಥೆಯನ್ನು ಇನ್ನಷ್ಟುಬಲಗೊಳಿಸುವ ದೊಡ್ಡ ಸವಾಲು ಸರ್ಕಾರದ ಮುಂದಿದೆ. ಹೀಗಾಗಿ ಭಾರತ ಬಯಲುಶೌಚ ಮುಕ್ತ ಎಂದು ಘೋಷಿಸಿದರೂ ಅಭಿಯಾನ ಮುಂದುವರಿಯಬೇಕಿದೆ.

click me!