ಸಹಪಾಠಿಯನ್ನೇ ಬಾಳ ಸಂಗಾತಿ ಮಾಡಿಕೊಂಡ ಅನಂತ್

By Kannadaprabha NewsFirst Published Nov 13, 2018, 11:27 AM IST
Highlights

ಸಾಮಾನ್ಯ ರೈಲ್ವೆ ನೌಕರನ ಮಗನಾಗಿ ಹುಟ್ಟಿದ ಅನಂತಕುಮಾರ್ ರಾಜಕಾರಣಿಯಾಗಿ ಎತ್ತರೆತ್ತರಕ್ಕೆ ಏರಿದ್ದು ನಿಜಕ್ಕೂ ಬಹುದೊಡ್ಡ ಯಶೋಗಾಥೆ. ಹುಬ್ಬಳ್ಳಿ ಬಿಟ್ಟು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ನಿರಂತರ ಗೆಲುವಿನೊಂದಿಗೆ ಸೋಲಿಲ್ಲದ ಸರದಾರ ಎನಿಸಿದ್ದರೂ ಜನ್ಮಭೂಮಿ ಹುಬ್ಬಳ್ಳಿಯೊಂದಿಗೆ ತಮ್ಮ ನಂಟನ್ನು ಮಾತ್ರ ಮರೆತವರಲ್ಲ.

ಜನನ, ಬಾಲ್ಯ, ಓದು, ಹೋರಾಟ, ರಾಜಕೀಯ ನಾಯಕತ್ವ ನೀಡಿದ ಹುಬ್ಬಳ್ಳಿ ಅವರಿಗೆ ಮರೆಯದ ಮಮತಾಮಯಿ. ರೈಲ್ವೆ ನೌಕರರಾಗಿ ಹುಬ್ಬಳ್ಳಿಯ ಎಂಟಿಎಸ್ ಕಾಲನಿಯಲ್ಲಿ ನೆಲೆಸಿದ್ದ ಎಚ್.ಎನ್.ನಾರಾಯಣ ಶಾಸ್ತ್ರಿ ಹಾಗೂ ಗಿರಿಜಾ ಶಾಸ್ತ್ರಿ ಅವರ ಮೂವರು ಮಕ್ಕಳಲ್ಲಿ ಅನಂತಕುಮಾರ್ ಜ್ಯೇಷ್ಠ ಪುತ್ರ. ನಂದಕುಮಾರ್ ಹಾಗೂ ಸುಹಾಸಿನಿ ಚಿಕ್ಕವರು. ನಂದಕುಮಾರ್ ಹುಬ್ಬಳ್ಳಿಯಲ್ಲೇ ನೆಲೆಸಿದ್ದರೆ, ಸಹೋದರಿ ಬೆಂಗಳೂರಲ್ಲಿದ್ದಾರೆ. ಅನಂತಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿಯ ಬಾಸೆಲ್ ಮಿಷನ್ ಶಾಲೆಯಲ್ಲಿ ಪೂರೈಸಿದರೆ, ಪ್ರೌಢಶಿಕ್ಷಣವನ್ನು ಲ್ಯಾಮಿಂಗ್ಟನ್ ಸ್ಕೂಲ್‌ನಲ್ಲಿ ಪೂರೈಸಿದರು. ಮುಂದೆ ಕೆಎಲ್‌ಇ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿದರು. ಬಳಿಕ ಕಲಾ ಪದವಿಯನ್ನು ಅದೇ ಕೆಎಲ್‌ಇ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಮತ್ತು ಜೆಎಸ್‌ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಪದವಿ ಪಡೆದ ಹೆಗ್ಗಳಿಕೆ ಅವರದು.

ಸ್ನೇಹಿತರ  ದೊಡ್ಡ ಬಳಗ

ಈಗಿನ ಸಂಸದ ಪ್ರಹ್ಲಾದ ಜೋಶಿ ಅವರು ಅನಂತಕುಮಾರ್ ಅವರಿಗೆ ಬಾಲ್ಯದ ಗೆಳೆಯ. ಕಾರಣ ಜೋಶಿಯವರ ತಂದೆ ಕೂಡ ರೈಲ್ವೆ ನೌಕರರು. ಅಲ್ಲದೇ ಎಂಟಿಎಸ್ ಕಾಲನಿಯಲ್ಲಿ ಅಕ್ಕಪಕ್ಕದ ಮನೆ. ಹಾಗಾಗಿ ಸದಾ ಜತೆಯಾಗಿ ಇರುತ್ತಿದ್ದರು. ಅದು ಮುಂದೆ ರಾಜಕೀಯದಲ್ಲೂ ಜತೆಯಾಗಿಯೇ ಹೆಜ್ಜೆ ಹಾಕುವಂತೆ ಮಾಡಿತು. ಹಾಲಿ ಶಾಸಕರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಹಾಗೂ ಅಚ್ಯುತ್ ಲಿಮ್ಹೆ, ವಿನೋದ ಡವಳೆ ಸೇರಿದಂತೆ ಹಲವರು ಅನಂತಕುಮಾರ್ ಅವರ ಬಾಲ್ಯ ಸ್ನೇಹಿತರು. ಇನ್ನು ಬಸವರಾಜ ಬೊಮ್ಮಾಯಿ ಪಿಯುಸಿ ಸಹಪಾಠಿಯಾಗಿದ್ದರೆ, ಶೆಟ್ಟರ್ ಕಾನೂನು ವಿದ್ಯಾರ್ಥಿಯಾಗಿದ್ದಾಗ ಮತ್ತು ಎಬಿವಿಪಿಯಲ್ಲಿದ್ದಾಗ ಸ್ನೇಹಿತರು. ಅನಂತಕುಮಾರ್ ಹಾಗೂ ಅಚ್ಯುತ್ ಲಿಮ್ಹೆ ಎಬಿವಿಪಿಯಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಈ ಎಲ್ಲರಿಗೂ ಬರೀ ಸ್ನೇಹಿತರಾಗಿರಲಿಲ್ಲ ಅನಂತಕುಮಾರ್, ರಾಜಕೀಯವಾಗಿ ಗುರು ಕೂಡ ಆಗಿ ಮಾರ್ಗದರ್ಶನ ಮಾಡುತ್ತಿದ್ದರು.

ರಾಜಕೀಯಕ್ಕೆ ಬರಲು ತಾಯಿ ಪ್ರೇರಣೆ

ತಂದೆ ರೈಲ್ವೆ ನೌಕರರಾಗಿದ್ದರೆ, ತಾಯಿ ಗಿರಿಜಾ ಶಾಸ್ತ್ರಿ ಸಮಾಜ ಸೇವಕಿಯಾಗಿ ಗುರುತಿಸಿಕೊಂಡವರು. ಆಗಿನ ನಗರಸಭೆಗೆ ಸದಸ್ಯರಾಗಿ ಉಪಮೇಯರ್ ಆಗಿ ಕೆಲಸ ಮಾಡಿದವರು. ಅನಂತಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಡಲು ತಾಯಿಯ ಈ ಸಮಾಜ ಸೇವೆಯೇ ಪ್ರೇರಣೆಯಾಗಿತ್ತು. ಚಿಕ್ಕಂದಿನಿಂದಲೇ ಮನೆಗೆ ಬರುತ್ತಿದ್ದವರನ್ನು ತಾಯಿ ಉಪಚರಿಸುತ್ತಿದ್ದ ಬಗೆ, ಅವರು ನಗರಸಭೆ ಸದಸ್ಯರಾಗಿ ಮಾಡಿದ್ದ ಕೆಲಸಗಳು ಅನಂತಕುಮಾರ್ ಅವರ ಮನಸಲ್ಲಿ ಅಚ್ಚಳಿಯದೇ ಉಳಿದಿದ್ದವು. ಈ ಕಾರಣದಿಂದಲೇ ಮುಂದೆ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಹೋರಾಟಕ್ಕೆ ಧುಮುಕಿದರು.

ಎಬಿವಿಪಿಯಿಂದ ಹೋರಾಟ ಶುರು

1975ರಲ್ಲಿ ಪಿಯುಸಿಗೆ ಸೇರ್ಪಡೆಯಾದ ಅನಂತಕುಮಾರ್ ಆಗಲೇ ಎಬಿವಿಪಿಗೆ ಸೇರ್ಪಡೆಯಾದರು. ಶುಲ್ಕ ಹೆಚ್ಚಳ, ಹಾಸ್ಟೆಲ್ ಸಮಸ್ಯೆ, ಮೂಲಸೌಲಭ್ಯ ಹೀಗ ನಾನಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ ಮಾಡುತ್ತಿದ್ದರು. ಈ ಮೂಲಕ ಇಡೀ ರಾಜ್ಯದಲ್ಲೇ ವಿದ್ಯಾರ್ಥಿ ಪರಿಷತ್‌ಗೆ ಹೋರಾಟದ ಖದರ್ ತಂದುಕೊಟ್ಟರು. ಹೀಗಾಗಿ ಎಬಿವಿಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾದ ಅನಂತಕುಮಾರ್, ಮುಂದೆ ನಗರ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತ ಕಾರ್ಯದರ್ಶಿ ಹೀಗೆ ನಾನಾ ಹುದ್ದೆಗಳಲ್ಲಿ ಮಿಂಚಿದರು. ಬರೋಬ್ಬರಿ ೧೧ ವರ್ಷಗಳ ಕಾಲ ವಿದ್ಯಾರ್ಥಿ ಪರಿಷತ್‌ನಲ್ಲಿದ್ದ ಅನಂತಕುಮಾರ್ ಅವರ ಸಂಘಟನೆ ಚಾತುರ್ಯತೆ, ವಾಕ್ ಚಾತುರ್ಯತೆಯನ್ನು ಮರೆಯುವಂತಿಲ್ಲ. ಪೂರ್ಣಾವಧಿ ಕಾರ್ಯಕರ್ತರಾಗಿಯೂ ಕೆಲ ವರ್ಷ ಕೆಲಸ ಮಾಡಿದರು.

40 ದಿನ ಜೈಲುವಾಸ!

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿತ್ತು. ಹೀಗೆ ಜೈಲು ಸೇರಿದ ಹೋರಾಟಗಾರರ ಪೈಕಿ ಅನಂತಕುಮಾರ್ ಕೂಡ ಒಬ್ಬರು. ಆಗ ಅವರು ಪ್ರಥಮ ಪಿಯುಸಿಯಲ್ಲಿ ಓದುವ ವಿದ್ಯಾರ್ಥಿ. 40 ದಿನಗಳ ಜೈಲು ವಾಸದಲ್ಲಿ ಹಲವು ಹೋರಾಟಗಾರರ ಒಡನಾಟದಿಂದ ಹೋರಾಟದ ಮನೋಭಾವ ಇನ್ನಷ್ಟು ಹೆಚ್ಚಿತ್ತು. ಜೈಲು ಅನುಭವಿಸಿ ಹೊರಬಂದ ಬಳಿಕ 1977ರಲ್ಲಿ ಎಬಿವಿಪಿ ಸೇರ್ಪಡೆಯಾದರು. ಹುಬ್ಬಳ್ಳಿ ಈದ್ಗಾ ಮೈದಾನ, ಹೈಕೋರ್ಟ್ ಪೀಠ, ನೈಋತ್ಯ ರೈಲ್ವೆ ವಲಯ, ಕಾಂಗ್ರೆಸ್ ವಿರುದ್ಧದ ಹೋರಾಟಗಳಲ್ಲಿ ಭಾಗಿಯಾಗಿ ಆಗಾಗ ಬಂಧನಕ್ಕೊಳಗಾದ ಹೋರಾಟದ ಇತಿಹಾಸ ಅವರದು. ಈ ಮೂಲಕ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹಲವರನ್ನು ರಾಜಕೀಯವಾಗಿ ಬೆಳೆಸಿ, ಸದಾ ಅವರ ಗುರುವಾಗಿ ಬೆನ್ನಿಗೆ ನಿಂತ ಹಿರಿಮೆ ಅನಂತಕುಮಾರ ಅವರದು.

ಕವಿಯೂ ಆಗಿದ್ದರು!

ಅನಂತಕುಮಾರ್ ಒಳಗೆ ಒಬ್ಬ ಕವಿ ಕೂಡ ಇದ್ದ. ವಿದ್ಯಾರ್ಥಿಯಾಗಿದ್ದಾಗ ಕೆಲವು ಕವಿತೆಗಳನ್ನು ಬರೆದಿದ್ದರಂತೆ. ಮುಂದೆ ರಾಜಕಾರಣಿಯಾದ ಮೇಲೆ ಸಮಯ ಸಿಗದೇ ಕವಿತೆ ಬರೆಯೋದು ನಿಂತಿತ್ತು. ಆದರೂ ತಮ್ಮ ಭಾಷಣಗಳಲ್ಲಿ ಕವಿತೆಗಳನ್ನು ಹೇಳುವ ಮೂಲಕ ತಮ್ಮದು ಕವಿ ಹೃದಯ ಎಂಬುದನ್ನು ಸಾಬೀತುಪಡಿಸುತ್ತಿದ್ದರು. ಓದುವ ಹವ್ಯಾಸ ಬಹಳವಿತ್ತು. ಎಸ್.ಎಲ್.ಭೈರಪ್ಪ, ಡಿವಿಜಿ ಸೇರಿದಂತೆ ಹಲವರ ಕೃತಿಗಳನ್ನು ಓದುತ್ತಿದ್ದರು.

ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಮಂತ್ರಿಯಾಗುವೆ

ದೇಶದಲ್ಲಿ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಬೇರೆ ಪಕ್ಷಗಳ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಊಹೆ ಕೂಡ ಮಾಡಲು ಸಾಧ್ಯವಿಲ್ಲದಿದ್ದ ವೇಳೆಯಲ್ಲೇ ‘ಈ ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡುತ್ತೇವೆ. ಅದರಲ್ಲಿ ನಾನು ಮಂತ್ರಿಯಾಗುತ್ತೇನೆ’ ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾಗಲೇ ಅನಂತಕುಮಾರ್ ಹೇಳುತ್ತಿದ್ದರಂತೆ. ಆಗ ಇವರ ಮಾತು ಸಖತ್ ಜೋಕು. ವಿದ್ಯಾರ್ಥಿಗಳೆಲ್ಲ ಗೊಳ್ಳನೇ ನಗುತ್ತಿದ್ದರಂತೆ. ಆದರೆ ಆ ಮಾತನ್ನು ಸತ್ಯ ಮಾಡಿದ್ದು ಅನಂತಕುಮಾರ್ ಅವರ ರಾಜಕೀಯ ಯಶೋಗಾಥೆ.

ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಅನಂತಕುಮಾರ್ ಸಚಿವರಾಗಿ ಮಿಂಚಿದ್ದಾರೆ. ಆ ರೀತಿಯ ಕನಸು ಕಂಡು ಅದನ್ನು ನನಸು ಮಾಡಲು ಹೋರಾಟ ನಡೆಸಿದವರು ಅನಂತಕುಮಾರ್.

29ನೇ ವಯಸ್ಸಲ್ಲಿ ಬಿಜೆಪಿಗೆ

1988ರಲ್ಲಿ ಅನಂತಕುಮಾರ್ ಎಬಿವಿಪಿಯಿಂದ ಬಿಜೆಪಿ ಸೇರ್ಪಡೆಯಾದರು. ಅಲ್ಲಿ ಪಕ್ಷ ಸಂಘಟಿಸುವಲ್ಲಿ ಶ್ರಮಿಸಿದರು. ಹೀಗಾಗಿ ಬಿಜೆಪಿಯಲ್ಲಿ ಹಲವು ಹುದ್ದೆಗಳು ಅವರನ್ನು ಹುಡುಕಿಕೊಂಡು ಬಂದವು. ಕಾರ್ಯದರ್ಶಿ, ರಾಜ್ಯಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ಮುಂದೆ ಬೆಂಗಳೂರಿಗೆ ಶಿಫ್ಟ್ ಆಗಿ 1996ರಿಂದ ನಿರಂತರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗುತ್ತಾ ಬಂದರು. ರಾಜಕೀಯ ಕ್ಷೇತ್ರವನ್ನಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡರೂ ಹುಬ್ಬಳ್ಳಿಯನ್ನು ಮಾತ್ರ ಮರೆಯಲಿಲ್ಲ. ಇಲ್ಲಿನ ವಿಮಾನ ನಿಲ್ದಾಣ, ಬಿಆರ್‌ಟಿಎಸ್, ನೈಋತ್ಯ ರೈಲ್ವೆ ವಲಯ, ಮಹದಾಯಿ ವಿವಾದ ಹೀಗೆ ಉತ್ತರ ಕರ್ನಾಟಕದ ಯಾವುದೇ ಸಮಸ್ಯೆಗೂ ಕೇಂದ್ರದಲ್ಲಿ ಧ್ವನಿಯಾದವರು ಅನಂತಕುಮಾರ್.

ತೇಜಸ್ವಿನಿ ಜತೆ ಪ್ರೇಮವಿವಾಹ

ಅನಂತಕುಮಾರ್ ಅವರದ್ದು ಪ್ರೇಮ ವಿವಾಹ. ಕಾಲೇಜಿಗೆ ಹೋಗುತ್ತಿದ್ದ ವೇಳೆಯಲ್ಲೇ ಸಹಪಾಠಿ ತೇಜಸ್ವಿನಿ ಅವರನ್ನು ಪ್ರೇಮಿಸಿದ್ದರು. ಮುಂದೆ 1989ರಲ್ಲಿ ತೇಜಸ್ವಿನಿ ಅವರನ್ನು ವಿವಾಹವಾಗಿ ತಮ್ಮ ಬಾಳಸಂಗಾತಿಯನ್ನಾಗಿ ಮಾಡಿಕೊಂಡರು. ಈ ದಂಪತಿಗೆ ಈಗ ಐಶ್ವರ್ಯ ಹಾಗೂ ವಿಜೇತಾ ಎಂಬಿಬ್ಬರು ಮಕ್ಕಳಿದ್ದಾರೆ.

 

 

click me!