5 ರೀತಿಯ ತುರ್ತು ಸಂದರ್ಭಗಳು ಹಾಗೂ ಅವುಗಳನ್ನು ನಿಭಾಯಿಸುವ ಕೆಲವು ಉಪಾಯಗಳು

By ಆಧಿಲ್ ಶೆಟ್ಟಿFirst Published Oct 12, 2017, 8:59 PM IST
Highlights

ಕನಸಿನ ಮನೆಯನ್ನು ಕಟ್ಟಲು/ಕೊಳ್ಳಲು ಅಥವಾ ಮಕ್ಕಳ ಉನ್ನತ ಶಿಕ್ಷಣದಂತಹ ಉದ್ದೇಶಗಳಿಗೆ ಬೇಕಾಗಿರುವ ಹಣಕಾಸು ಅವಶ್ಯಕತೆಗಳನ್ನು ಪೂರೈಸಲು ನೀವು ಕಠಿಣ ಪರಿಶ್ರಮ ಪಡುತ್ತಿರಬಹದು. ಆದರೆ ಊಹಿಸಿರದ ಸಂದರ್ಭ ಅಥವಾ ಘಟನೆ ಘಟಿಸಿದರೆ, ಎಲ್ಲಾ ಯೋಜನೆಗಳು ಭಾಗಶ: ಅಥವಾ ಪೂರ್ತಿಯಾಗಿ ತಲೆಕೆಳಗಾಗುವ ಸಾಧ್ಯತೆಗಳಿವೆ. ಜೀವನವು ಸುಗಮವಾಗಿ ನಡೆಯುತ್ತಿರುವಾಗ ಯಾರೂ ಕೂಡಾ ಕೆಟ್ಟ ಗಳಿಗೆಯ ಬಗ್ಗೆ ಯೋಚಿಸಲುಬಯಸುವುದಿಲ್ಲ. ಆದರೆ ತುರ್ತು ಪರಿಸ್ಥಿತಿ ಯಾವಾಗ ಉದ್ಭವಿಸುತ್ತದೆ ಎಂದು ಹೇಳಲಾಗದು.

ಕನಸಿನ ಮನೆಯನ್ನು ಕಟ್ಟಲು/ಕೊಳ್ಳಲು ಅಥವಾ ಮಕ್ಕಳ ಉನ್ನತ ಶಿಕ್ಷಣದಂತಹ ಉದ್ದೇಶಗಳಿಗೆ ಬೇಕಾಗಿರುವ ಹಣಕಾಸು ಅವಶ್ಯಕತೆಗಳನ್ನು ಪೂರೈಸಲು ನೀವು ಕಠಿಣ ಪರಿಶ್ರಮ ಪಡುತ್ತಿರಬಹದು. ಆದರೆ ಊಹಿಸಿರದ ಸಂದರ್ಭ ಅಥವಾ ಘಟನೆ ಘಟಿಸಿದರೆ, ಎಲ್ಲಾ ಯೋಜನೆಗಳು ಭಾಗಶ: ಅಥವಾ ಪೂರ್ತಿಯಾಗಿ ತಲೆಕೆಳಗಾಗುವ ಸಾಧ್ಯತೆಗಳಿವೆ. ಜೀವನವು ಸುಗಮವಾಗಿ ನಡೆಯುತ್ತಿರುವಾಗ ಯಾರೂ ಕೂಡಾ ಕೆಟ್ಟ ಗಳಿಗೆಯ ಬಗ್ಗೆ ಯೋಚಿಸಲು ಬಯಸುವುದಿಲ್ಲ. ಆದರೆ ತುರ್ತು ಪರಿಸ್ಥಿತಿ ಯಾವಾಗ ಉದ್ಭವಿಸುತ್ತದೆ ಎಂದು ಹೇಳಲಾಗದು. ವೈದ್ಯಕೀಯ ಖರ್ಚು ಅಥವಾ ಆಸ್ತಿಪಾಸ್ತಿ ಹಾನಿಯಂತಹ ಅನಪೇಕ್ಷಿತ ಸಂದರ್ಭಗಳಿಗೆ ಆರ್ಥಿಕವಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿರದ ಪಕ್ಷದಲ್ಲಿ, ಹಿಂದಿನ ಎಲ್ಲಾ ಸಂಪಾದನೆಯು ವ್ಯರ್ಥವಾಗುವ ಸಾಧ್ಯತೆಗಳಿವೆ.    ಆದುದರಿಂದ ಅಂತಹ ಸಂದರ್ಭಗಳಿಗೆ ಸನ್ನದ್ಧರಾಗಿರುವುದು ಯಾವುದಕ್ಕೂ ಒಳ್ಳೆಯದು.  ಯಾವ ರೀತಿಯ ತುರ್ತು ಸಂದರ್ಭಗಳಿಗೆ ಹೇಗೆ ಸಿದ್ಧರಾಗಿರಬಹುದು ಎಂದು ತಿಳಿಯೋಣ ಬನ್ನಿ:

ಉದ್ಯೋಗ ಕಳೆದುಕೊಂಡರೆ

ಕಂಪನಿಯ ನೀತಿಯಲ್ಲಿ ಬದಲಾವಣೆ, ಗ್ರಾಹಕ/ ಕ್ಲೈಂಟ್ ಕಳೆದುಕೊಳ್ಳುವುದು, ಮಾರುಕಟ್ಟೆ ಕುಸಿತ ಅಥವಾ  ಕೃತಕ ಬುದ್ದಿಮತ್ತೆ ಬಳಸಿ ಮಾನವ ಸಂಪನ್ಮೂಲವನ್ನು ಕೈಬಿಡುವ ಕಂಪನಿಯ ಯೋಜನೆ ಇತ್ಯಾದಿ ಕಾರಣಗಳಿಂದ  ಒಬ್ಬ ವ್ಯಕ್ತಿ ಯಾವಾಗ, ಹೇಗೆ ಉದ್ಯೋಗ ಕಳೆದುಕೊಳ್ಳಬಹುದು ಎಂದು ಊಹಿಸುವುದು ಕಷ್ಟ. ಇಂತಹ ಸಂದರ್ಭ ಎದುರಾದಾಗ ತಕ್ಷಣ ಪರ್ಯಾಯ ಆದಾಯ ಮೂಲವನ್ನು ಹುಡುಕಬೇಕಾಗುತ್ತದೆ; ಅದಕ್ಕೆ ಸಮಾಯಾವಕಾಶ ಬೇಕು. ಆದರೆ ಆ ಅವಧಿಯಲ್ಲಿ ಬಾಡಿಗೆ, ಇನ್ನಿತರ ಬಿಲ್’ಗಳನ್ನು ಪಾವತಿಸದೇ ಇರುವಂತಿಲ್ಲ.  ಆದುದರಿಂದ ಕನಿಷ್ಠ 8 ತಿಂಗಳುಗಳ ಕಾಲ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ಒಂದು ‘ತುರ್ತು’ ನಿಧಿಯನ್ನು ಪ್ರತಿಯೊಬ್ಬರು ಹೊಂದಿರಲೇಬೇಕು.

ಆದುದರಿಂದ ಸುಲಭವಾಗಿ ನಗದೀಕರಿಸುವ, ಸಾಧಾರಣ ಲಾಭದೊಂದಿಗೆ ಕಡಿಮೆ ರಿಸ್ಕ್ ಇರುವ ಲಿಕ್ವಿಡ್ ಮ್ಯೂಚುವಲ್ ಫಂಡ್ ( ಅಂದಾಜು 7-8% ವಾರ್ಷಿಕ ಲಾಭ), ಫಿಕ್ಸಡ್ ಡಿಪಾಸಿಟ್ (ಅಂದಾಜು 7% ವಾರ್ಷಿಕ ಲಾಭ)  ಅಥವಾ ಬ್ಯಾಲೆನ್ಸ್ ಮ್ಯೂಚುವಲ್ ಫಂಡ್’ನಂತಹ (ಅಂದಾಜು ಶೇ.12-14ರವರೆಗೆ ಲಾಭ) ಯೋಜನೆಗಳಲ್ಲಿ ವ್ಯವಸ್ಥಿತವಾಗಿ ಹಣ ಹೂಡುವುದು ಸೂಕ್ತ.

ಆರೋಗ್ಯ ತುರ್ತು ವೈದ್ಯಕೀಯ ಖರ್ಚುಗಳು:

ಇಂದಿನ ದಿನಗಳಲ್ಲಿ ವೈದ್ಯಕೀಯ ಸೇವೆಗಳ ದರಗಳು ಬಹಳ ದುಬಾರಿಯಾಗಿವೆ. ಇಂತಹುದರಲ್ಲಿ ಯಾರಿಗಾದರೂ ಈ ಸನ್ನಿವೇಶ ಎದುರಿಸಬೇಕಾಗಿ ಬಂದರೆ, ಆಸ್ಪತ್ರೆ/ ವೈದ್ಯಕೀಯ ಖರ್ಚುಗಳನ್ನು ನಿಭಾಯಿಸಲು ಬಹಳ ಕಷ್ಟಪಡಬೇಕಾಗುತ್ತದೆ.  ಈ ರೀತಿಯ ಅನಿರೀಕ್ಷಿತ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಮಾಸಿಕ ಆದಾಯದ ಹೊರತಾಗಿ ಪ್ರತ್ಯೇಕ ಪರ್ಯಾಯ ವ್ಯವಸ್ಥೆಯಿರಬೇಕಾದುದು ಅಗತ್ಯ.  ಆ ನಿಟ್ಟಿನಲ್ಲಿ ಆರೋಗ್ಯ ವಿಮೆಯು ಸಹಕಾರಿಯಾಗಿದೆ. ಚಿಕಿತ್ಸೆ/ಆಸ್ಪತ್ರೆಯ  ಖರ್ಚುಗಳನ್ನು ಆರೋಗ್ಯವಿಮೆಯು ಭರಿಸುತ್ತದೆ.

ಒಂದು ವೇಳೆ ಆಗಾಗಲೇ ಆರೋಗ್ಯ ವಿಮೆಯೊಂದನ್ನು ಹೊಂದಿದ್ದರೆ, ಅದಕ್ಕಿಂತ ಹೆಚ್ಚು ಮೌಲ್ಯವಿರುವ ವಿಷಮಾವಸ್ಥೆಯ ವಿಮೆಯನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. ಅದರಲ್ಲಿ ಮಾರಕ ಕಾಯಿಲೆಗಳ ಚಿಕಿತ್ಸೆ ಹಾಗೂ ಆಸ್ಪತ್ರೆ ವೆಚ್ಚಗಳು ಅಲ್ಲದೇ ಇನ್ನಿತರ ಖರ್ಚುಗಳನ್ನು ಕೂಡಾ ನಿಭಾಯಿಸಬಹುದಾಗಿದೆ. ಕಾಯಿಲೆಯಿಂದಾಗಿ ಕೆಲಸ ಮಾಡಲಾಗದ ಪರಿಸ್ಥಿತಿಯುಂಟಾಗುವ ಸನ್ನಿವೇಶದಲ್ಲಿ ಇದು ಬಹಳ ಉಪಯುಕ್ತವಾಗಬಲ್ಲುದು.

ಆರೋಗ್ಯ ವಿಮೆಯನ್ನು ಖರೀದಿಸುವಾಗ ಹಾಲಿ ಇರುವ ಕಾಯಿಲೆಗಳು, ವಿಮಾ ಅವಧಿ ಮತ್ತು  ಮೌಲ್ಯ ಮತ್ತಿತರ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಎಷ್ಟು ಬೇಗ ವಿಮೆಯನ್ನು ಖರೀದಿಸುತ್ತೀರೋ, ಕಂತಿನ ಮೊತ್ತ ಅಷ್ಟು ಕಡಿಮೆಯಾಗಿರುತ್ತದೆ, ಎಂಬುವುದು ನೆನಪಿರಲಿ.

ವೈದ್ಯಕೀಯ ಖರ್ಚುಗಳಿಗಾಗಿ ಆರೋಗ್ಯ ವಿಮೆಯ ಹೊರತಾಗಿಯೂ ಒಂದು ಪರ್ಯಾಯ ವ್ಯವಸ್ಥೆಯಿದ್ದರೆ ಉತ್ತಮ. ಕೆಲವೊಮ್ಮೆ ಚಿಕಿತ್ಸೆ ಪಡೆಯುವ ಆಸ್ಪತ್ರೆಯು ವಿಮಾ ಸಂಸ್ಥೆಯ ಪಟ್ಟಿಯಲ್ಲಿರದ ಸಾಧ್ಯತೆಗಳು ಇರುತ್ತವೆ.  ಆ ಸಂದರ್ಭದಲ್ಲಿ ಮೊದಲು ಕೈಯಿಂದ ಹಣ ಪಾವತಿಸಬೇಕಾಗುತ್ತದೆ, ಬಳಿಕ ವಿಮಾ ಕಂಪನಿಯಿಂದ ಪಡೆದುಕೊಳ್ಳಬೇಕಾಗುತ್ತದೆ. ಫಿಕ್ಸೆಡ್ ಡಿಪಾಸಿಟ್ ಅಥವಾ ಮ್ಯೂಚುವಲ್ ಫಂಡ್’ಗಳಲ್ಲಿ ಹಣವನ್ನು ಹೂಡುವ ಮೂಲಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.

ಕುಟುಂಬದ ಸದಸ್ಯರೊಬ್ಬರ ನಿಧನ:

ಕುಟುಂಬದ ಸದಸ್ಯರೊಬ್ಬರನ್ನು  ಕಳೆದುಕೊಳ್ಳುವುದು ಜೀವನದ ಬಲುದೊಡ್ಡ ಭಾವನಾತ್ಮಕ ಸವಾಲು; ಹಾಗೂ ಅದು ಬಹಳ ವರ್ಷಗಳವರೆಗೆ ನೋವನ್ನುಂಟು ಮಾಡುವಂತದ್ದು.  ನಿಧನಹೊಂದಿದವರು ಕುಟುಂಬದ ದುಡಿಯುವ ಸದಸ್ಯರಾಗಿದ್ದರೆ ಅವರ ಸಾವು ಕುಟುಂಬದ ಮುಂದೆ ಆರ್ಥಿಕ ಸವಾಲುಗಳನ್ನು ಕೂಡಾ ಹುಟ್ಟುಹಾಕುತ್ತದೆ.  ಆ ಸಂದರ್ಭದಲ್ಲಿ  ಆಧಾರಸ್ತಂಭವಾಗಿ ಇನ್ನಾರು ವ್ಯಕ್ತಿಗಳಿಲ್ಲದಿದ್ದರೆ, ಶಿಕ್ಷಣ, ಸಾಲ ಅಥವಾ ಇನ್ನಿತರ ಖರ್ಚುಗಳ ಭಾರೀ ಹೊರೆಯನ್ನು ಕುಟುಂಬವು ಹೊರಬೇಕಾಗುತ್ತದೆ.  ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಜೀವ ವಿಮೆ ಮಾಡಿಸುವುದು ಉತ್ತಮ. ವಿಮಾ ಮೊತ್ತವನ್ನು ನಿಗದಿಪಡಿಸುವಾಗ ಭವಿಷ್ಯದ ಎಲ್ಲಾ ರೀತಿಯ ಖರ್ಚುವೆಚ್ಚಗಳನ್ನು ಲೆಕ್ಕಹಾಕಿ ನಿರ್ಧರಿಸಿ.

ಪ್ರಾಕೃತಿಕ ವಿಕೋಪ:

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಆಸ್ತಿಪಾಸ್ತಿ ಅಥವಾ ಮನೆಯೊಳಗಡೆಯ ಸಾಮಾನುಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ.  ಅನಾಹುತ ಸಂದರ್ಭದಲ್ಲಿ ಮನೆ-ಮಠಗಳನ್ನುರಕ್ಷಿಸಲಾಗದಿದ್ದರೂ, ಸೂಕ್ತವಾದ ಹಣಕಾಸು/ವಿಮಾ ಯೋಜನೆಯಿಂದ ಅವುಗಳ ನಷ್ಟವನ್ನು ಭರಿಸಬಹುದು. ನೆರೆ, ಅಗ್ನಿ ಅವಘಡ, ಸುನಾಮಿ ಇತ್ಯಾದಿ ಪ್ರಾಕೃತಿಕ ವಿಕೋಪಗಳಿಂದ ಆಗುವ ಭಾರೀ ನಷ್ಟವನ್ನು ತಪ್ಪಿಸಲು ಗೃಹ ವಿಮೆಯು ಉಪಯುಕ್ತ ಸಾಧನವಾಗಿದೆ.  ಪ್ರಾಕೃತಿಕ ವಿಕೋಪಗಳನ್ನು ಗಮನದಲ್ಲಿಟ್ಟುಕೊಂಡು ಗೃಹ ವಿಮೆ ಖರೀದಿಸುವಾಗ ಆರೋಗ್ಯ ಹಾಗೂ ಜೀವ ವಿಮೆಗಳನ್ನು ಖರೀದಿಸಲು ಮರೆಯಬೇಡಿ.

ಪ್ರವಾಸದ ವೇಳೆ ಉದ್ಭವಿಸುವ ತುರ್ತು ಪರಿಸ್ಥಿತಿ:

ಅಪರಿಚಿತ ಸ್ಥಳಕ್ಕೆ ಪ್ರವಾಸ ಕೈಗೊಂಡು ಮೋಜು ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಬ್ಯಾಗೇಜ್ ಕಳವಾದರೆ? ಅಥವಾ ಆರೋಗ್ಯ ಕೆಟ್ಟರೇ? ಅಥವಾ ಅನಿರೀಕ್ಷಿತವಾದದ್ದೇನಾದರೂ ಸಂಭವಿಸಿದರೆ? ಮುಂದೇನು? ನಿಮ್ಮ ಜತೆ ಯಾರು ಇಲ್ಲದಿದ್ದರೆ ನೀವು ಅಸಹಾಯಕರಾಗುತ್ತೀರಿ. ಇಂತಹ ಸಂದರ್ಭದಲ್ಲಿ ‘ಪ್ರವಾಸ ವಿಮೆ’ಯು ನಿಮ್ಮ ಸಹಾಯಕ್ಕೆ ಬರುತ್ತದೆ. ನಿಮ್ಮ ಪ್ರವಾಸ ದೇಶದೊಳಗಡೆಯಾಗಿರಲಿ ಅಥವಾ ವಿದೇಶದಲ್ಲಾಗಿರಲಿ, ಪ್ರವಾಸ ವಿಮೆಯು ನಿಮ್ಮ ಎಲ್ಲಾ ವೈದ್ಯಕೀಯ ಹಾಗೂ ಇನ್ನಿತರ ಖರ್ಚುಗಳನ್ನು ಭರಿಸುತ್ತದೆ.

ಕಡಿಮೆ ರಿಸ್ಕ್ ಇರುವ ಹಾಗೂ ಒಳ್ಳೆಯ ಲಾಭವಿರುವ ಬೇರೆ ಬೇರೆ ಯೋಜನೆಗಳಲ್ಲಿ ಹಣವನ್ನು ಹೂಡುವ ಮೂಲಕ ಪರ್ಯಾಯ ಹಣದ ಮೂಲವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಿ. ತುರ್ತು ಸಂದರ್ಭಗಳು ಅನಿರೀಕ್ಷಿತವಾಗಿ ಎದುರಾಗುವುದರಿಂದ ಅವುಗಳನ್ನು ನಿಭಾಯಿಸಲು ಸೂಕ್ತವಾದ ಪೂರ್ವಸಿದ್ಧತೆಗಳು ಅಷ್ಟೇ ಅತ್ಯಗತ್ಯ.

ಆಧಿಲ್ ಶೆಟ್ಟಿ, 

ಸಿಇಓ -ಬ್ಯಾಂಕ್ ಬಝಾರ್

https://www.bankbazaar.com/

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

click me!