ಚಾಲಕನಿಂದ 37 ಮಂದಿ ಜೀವ ಉಳೀತು!: ಬೆಳಗ್ಗೆ ಬೈಸಿಕೊಂಡವನಿಗೆ ಸಂಜೆ ದೇವರ ಪಟ್ಟ!

By Web DeskFirst Published Dec 16, 2018, 10:38 AM IST
Highlights

ಶುಕ್ರವಾರ ಸುಳ್ವಾಡಿಯ ಮಾರಮ್ಮನ ದೇಗುಲದಲ್ಲಿ ಪ್ರಸಾದ ಸ್ವೀಕರಿಸಬೇಕಿದ್ದ ತಾಂಡಮೇಡು ಗ್ರಾಮದ 37 ಮಹಿಳೆಯರು ತಾವು ಪ್ರಯಾಣಿಸುತ್ತಿದ್ದ ಗೂಡ್ಸ್‌ ಟೆಂಪೋ ಚಾಲಕನಿಂದಾಗಿ ಜೀವ ಉಳಿಸಿಕೊಂಡಿದ್ದಾರೆ.

ಚಾಮರಾಜನಗರ[ಡಿ.16]: ಇದು ಪವಾಡವೋ, ಅದೃಷ್ಟವೋ! ಶುಕ್ರವಾರ ಸುಳ್ವಾಡಿಯ ಮಾರಮ್ಮನ ದೇಗುಲದಲ್ಲಿ ಪ್ರಸಾದ ಸ್ವೀಕರಿಸಬೇಕಿದ್ದ ತಾಂಡಮೇಡು ಗ್ರಾಮದ 37 ಮಹಿಳೆಯರು ತಾವು ಪ್ರಯಾಣಿಸುತ್ತಿದ್ದ ಗೂಡ್ಸ್‌ ಟೆಂಪೋ ಚಾಲಕನಿಂದಾಗಿ ಜೀವ ಉಳಿಸಿಕೊಂಡಿದ್ದಾರೆ.

ತಾಂಡಮೇಡು ಗ್ರಾಮದ ಮಹಿಳೆಯರು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಶುಕ್ರವಾರ ತೆರಳಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಬೇಕಿತ್ತು. ಅದರಂತೆ ಅವರು ಸೇತು ಎಂಬ ವ್ಯಕ್ತಿ ಚಲಾಯಿಸುತ್ತಿದ್ದ ಗೂಡ್ಸ್‌ ಟೆಂಪೋದಲ್ಲಿ ದೇವಸ್ಥಾನದತ್ತ ಹೊರಟಿದ್ದರು. ಆದರೆ, ಚಾಲಕ ಸೇತು ಸುಳ್ವಾಡಿ ಮಾರಮ್ಮನ ದೇಗುಲದ ಬದಲು ಮಹಿಳೆಯರನ್ನೆಲ್ಲ ರಾಮಾಪುರ ಮಾರಮ್ಮನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ನಾವು ಹೋಗಬೇಕಿದ್ದದ್ದು ಈ ದೇವಸ್ಥಾನವಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಮಹಿಳೆಯರೆಲ್ಲ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ಚಾಲಕ ಸೇತು ಮಹಿಳೆಯರನ್ನು ಸುಳ್ವಾಡಿಗೂ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದ.

ಮಾರಮ್ಮನ ಪ್ರಸಾದ ದುರಂತ: ಜನರು ಮಾತ್ರವಲ್ಲ, ಪಕ್ಷಿಗಳ ಮಾರಣ ಹೋಮ

ಈ ಮಹಿಳೆಯರು ಚಾಲಕನಿಗೆ ಹಿಡಿಶಾಪ ಹಾಕಿಕೊಂಡು ರಾಮಾಪುರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಸುಳ್ವಾಡಿಗೆ ಹೊರಡಬೇಕೆನ್ನುವಷ್ಟರಲ್ಲಿ ಗೋಪುರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿ ಅನೇಕ ಮಂದಿ ಅಸ್ವಸ್ಥರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆಗ ಮಹಿಳೆಯರು ನಾವು ಹೋಗದಿದ್ದದ್ದೇ ಒಳ್ಳೆಯದಾಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಸಂಜೆ ಸಾಲು ಸಾಲು ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೊಳಗಾದ ಮಹಿಳೆಯರು ತಾವು ತರಾಟೆಗೆ ತೆಗೆದುಕೊಂಡಿದ್ದ ಚಾಲಕನೇ ದೇವರ ರೂಪದಲ್ಲಿ ಬಂದು ಜೀವ ಉಳಿಸಿದ ಎಂದು ಕೈ ಮುಗಿಯುತ್ತಿದ್ದಾರೆ.

click me!