ಒಂದೇ ವಾರದಲ್ಲಿ 1510 ರಸ್ತೆ ಗುಂಡಿ ಸೃಷ್ಟಿ!

By Web DeskFirst Published Oct 7, 2018, 8:14 AM IST
Highlights

ಮೊದಲು ಸುಮಾರು 3071 ಗುಂಡಿಗಳನ್ನು ಗುರುತಿಸಿದ್ದ ಬಿಬಿಎಂಪಿ ಇದರಲ್ಲಿ ಶೇ.90 ರಷ್ಟು ಗುಂಡಿ ಮುಚ್ಚಲಾಗಿದ್ದು, ಬಾಕಿ ಗುಂಡಿಗಳ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿತ್ತು. ಇದರ ನಡುವೆಯೇ ಒಂದೇ ವಾರದಲ್ಲಿ ಮತ್ತೆ 1510 ಹೊಸ ಗುಂಡಿಗಳು ಸೃಷ್ಟಿ ಯಾಗಿರುವುದಾಗಿ ಮೇಯರ್ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಬೆಂಗಳೂರು :  ಶೇಕಡ 90 ರಷ್ಟು ರಸ್ತೆಗುಂಡಿಗಳನ್ನು ಮುಚ್ಚಿರುವುದಾಗಿ ಸೆ.25 ರಂದೇ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ಬಿಬಿಎಂಪಿ ನಂತರದ ಒಂದೇ ವಾರದಲ್ಲಿ ಇನ್ನೂ 1510ಹೊಸ ರಸ್ತೆಗುಂಡಿಗಳನ್ನು ಗುರುತಿಸಿದೆ. ಇದರಿಂದ ನಗರದಲ್ಲಿ ಒಂದೆಡೆ ರಸ್ತೆಗುಂಡಿ ಮುಚ್ಚುತ್ತಿದ್ದರೆ, ಮತ್ತೊಂದೆಡೆ ಹೊಸ ಗುಂಡಿಗಳು ಸೃಷ್ಟಿಯಾಗುತ್ತಲೇ ಇವೆ. 

ಮೊದಲು ಸುಮಾರು 3071 ಗುಂಡಿಗಳನ್ನು ಗುರುತಿಸಿದ್ದ ಬಿಬಿಎಂಪಿ ಇದರಲ್ಲಿ ಶೇ.90 ರಷ್ಟು ಗುಂಡಿ ಮುಚ್ಚಲಾಗಿದ್ದು, ಬಾಕಿ ಗುಂಡಿಗಳ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿತ್ತು. ಇದರ ನಡುವೆಯೇ ಒಂದೇ ವಾರದಲ್ಲಿ ಮತ್ತೆ 1510 ಹೊಸ ಗುಂಡಿಗಳು ಸೃಷ್ಟಿ ಯಾಗಿರುವುದಾಗಿ ಮೇಯರ್ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದರಿಂದ ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆಯಾ ಎಂಬ ಅನುಮಾನ ಪಾಲಿಕೆ ವಲಯದಲ್ಲೇ ಸೃಷ್ಟಿಯಾಗಿದೆ. ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ರಸ್ತೆಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಕೇಳಿದ ಮಾಹಿತಿಗೆ, ಸೆ. 24 ರಿಂದ ಅ.3ರವರೆಗೆ ಹೊಸದಾಗಿ 1510 ರಸ್ತೆಗುಂಡಿಗಳನ್ನು ಗುರಿತಿಸಲಾಗಿದೆ. ಇವುಗ ಳಲ್ಲಿ 794 ಗುಂಡಿಗಳನ್ನು ಮುಚ್ಚಲಾಗಿದ್ದು, ಉಳಿದ 716 ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ ಎಂದು ಪಟ್ಟಿ ನೀಡಿದ್ದಾರೆ. ಇದರಲ್ಲಿ ಪೂರ್ವ ಮತ್ತು ಮಹದೇವಪುರ ವಲಯದಲ್ಲಿ ಒಂದೂ ಗುಂಡಿಗಳಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಪಟ್ಟಿ ‘ಕನ್ನಡಪ್ರಭ’ಕ್ಕೆ ದೊರೆತಿದೆ. ಆದರೆ, ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ನ್ಯಾಯಾಲಯ ಈಗ ರಸ್ತೆಗುಂಡಿಗಳ ಸಂಖ್ಯೆಲೆಕ್ಕ ಹಾಕುವ ಕೆಲಸ ಬಿಟ್ಟು ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ ರಸ್ತೆಗಳನ್ನು ದುರಸ್ತಿ ಗೊಸ್ತಿಗೊಳಿಸುವಂತೆ ಹೇಳಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಮೇಯರ್ ಅವರಿಗೆ ಹೊಸದಾಗಿ ಗುರುತಿಸಿರುವ ರಸ್ತೆಗುಂಡಿಗಳ ಪಟ್ಟಿಯನ್ನು ಯಾರು ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ ಪಾಲಿಕೆ ಮುಖ್ಯ ಎಂಜಿನಿಯರ್ (ನಗರ ಯೋಜನೆ) ಎ.ಆರ್. ವೆಂಕಟೇಶ್. ‘ರಸ್ತೆಗುಂಡಿ ಮುಚ್ಚುತ್ತಿರೋ ಇಲ್ಲಾ ನಾವು ಪಾಲಿಕೆ ಮುಚ್ಚಬೇಕೋ’ ಎಂದು ತಪರಾಕಿ ಹಾಕಿದ್ದ ಹೈಕೋರ್ಟ್ ಸೆ. 24 ರೊಳಗೆ ನಗರದಲ್ಲಿ ಒಂದೂ ರಸ್ತೆಗುಂಡಿಗಳಿಲ್ಲದಂತೆ ಮುಚ್ಚಿ ಎಂದು ಬಿಬಿಎಂಪಿಗೆ ಈ ಹಿಂದೆ ಗುಡುವು ವಿಧಿಸಿತ್ತು. 

ಗುಡುವಿನೊಳಗೆ ಗುಂಡಿ ಮುಚ್ಚಲು ವಿಫಲವಾಗಿದ್ದ ಪಾಲಿಕೆ ಸೆ. 25ರ ವಿಚಾರಣೆ ವೇಳೆ ಗುರುತಿಸಲಾಗಿದ್ದ ಗುಂಡಿಗಳ ಪೈಕಿ ಶೇ. 90ರಷ್ಟು ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಇನ್ನು ಅಕ್ಟೋಬರ್ 5 ರಂದು ನಡೆದ ವಿಚಾರಣೆ ವೇಳೆ ಕೂಡ ಪೂರ್ಣ ಪ್ರಮಾಣದಲ್ಲಿ ಗುಂಡಿ ಮುಚ್ಚಿದ್ದೇವೆ ಎಂದು ನಾವು ಹೇಳುವುದಿಲ್ಲ. ಆದರೆ, ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ ಎಂದು ಬಿಬಿಎಂಪಿ ಪರ ವಕೀಲರು ಮಾ ಹಿತಿ ನೀಡಿದ್ದರು. ಆದರೆ, ಈಗ ಮೇಯರ್ ಕೇಳಿದ ಮಾಹಿತಿಗೆ ಅಧಿಕಾರಿಗಳು ಹೊಸ ಗುಂಡಿಗಳ ಲೆಕ್ಕ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

click me!