ಅಶ್ಲೀಲ ವಿಡಿಯೋ ವಿಚಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ತಿಂಗಳ ಹಿಂದೆಯೇ ತಿಳಿದಿತ್ತಾದರೂ ಅದನ್ಯಾಕೆ ಮುಚ್ಚಿಟ್ಟರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಸುರಪುರ (ಮೇ.03): ಅಶ್ಲೀಲ ವಿಡಿಯೋ ವಿಚಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ತಿಂಗಳ ಹಿಂದೆಯೇ ತಿಳಿದಿತ್ತಾದರೂ ಅದನ್ಯಾಕೆ ಮುಚ್ಚಿಟ್ಟರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ತಿಂಗಳ ಕಾಲ ಪೆನ್‌ಡ್ರೈವ್ ಅವರ ಬಳಿಯೇ ಯಾಕೆ ಹಿಡಿದುಕೊಂಡಿದ್ದರು? ಸರ್ಕಾರ ಅವರದ್ದೇ ಇತ್ತಲ್ಲ. ತನಿಖೆಗೆ ಯಾಕೆ ಒಳಪಡಿಸಿಲ್ಲ? ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಮಾಹಿತಿ ಇದ್ದರೂ ಸಹ ಚುನಾವಣೆ ಸಂದರ್ಭದಲ್ಲಿ ಅಸ್ತ್ರವಾಗಿ ಉಪಯೋಗಿಸಲು ಡಿ.ಕೆ.ಶಿವಕುಮಾರ್ ಕಾಯುತ್ತಿದ್ದರು.
ಪ್ರಜ್ವಲ್ ರೇವಣ್ಣ ಯಾವುದೇ ದೇಶಕ್ಕೆ ಹೋದರೂ ಮರಳಿ ಬಂದು ಎಸ್‌ಐಟಿ ತಂಡದ ತನಿಖೆಗೆ ಒಳಪಡಬೇಕಿದೆ. ತಪ್ಪು ಮಾಡಿಲ್ಲವೆಂದರೆ ಭಯ ಪಡಬೇಕಿಲ್ಲ. ಪ್ರಜ್ವಲ್ ಮಾಡಿರುವುದು ತಪ್ಪಾಗಿದ್ದರೆ ಎಸ್ಐಟಿ ತನಿಖೆ ಮಾಡಿ ವರದಿ ನೀಡುತ್ತದೆ. ಅದರನ್ವಯ ಶಿಕ್ಷೆಯಾಗುತ್ತದೆ. ಇಂಥ ಕೆಲಸಕ್ಕೆ ಬಿಜೆಪಿ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು. ಪ್ರಜ್ವಲ್ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ರಾಹುಲ್ ಗಾಂಧಿ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ರಾಜ್ಯದ ಮತದಾರರು ಬಿಜೆಪಿ ಪರವಾಗಿದ್ದು, ಮೋದಿ ಮತ್ತೆ ಪ್ರಧಾನಿ ಆಗಲಿ ಎಂದು ಆಶಿಸುತ್ತಿದ್ದಾರೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಓಲೈಕೆ ಅಕ್ಷಮ್ಯ ಅಪರಾಧ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಅಲ್ಪಸಂಖ್ಯಾತರಿಂದ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭಾವನೆ ತೋರಿಸುತ್ತಿದೆ, ಪ್ರತಿಯೊಂದರಲ್ಲಿ ಅಲ್ಪಸಂಖ್ಯಾತರ ಒಲೈಕೆ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ಸುರಪುರಕ್ಕೆ ಆಗಮಿಸಿದ್ದ ಅವರು ಕನ್ನಡಪ್ರಭದ ಸಹೋದರ ಸಂಸ್ಥೆ ಸುವರ್ಣ ನ್ಯೂಸ್ ಸುದ್ದಿ ವಾಹಿನಿ ಜೊತೆ ಮಾತನಾಡುತ್ತ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಲು ಮೀನಮೇಷ ಎಣಿಸುತ್ತಿದೆ. ನೇಹಾ ಹತ್ಯೆ ಪ್ರಕರಣದಲ್ಲಿ ಇದು ವೈಯಕ್ತಿಕ ವಿಚಾರ ಎಂದು ಹೇಳುತ್ತಿರುವುದು ಖಂಡನೀಯ ಎಂದ ವಿಜಯೇಂದ್ರ,
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ: ರಾಹುಲ್ ಗಾಂಧಿ
ಯಾದಗಿರಿಯಲ್ಲಿಯೂ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ ಎಂದರು.ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರು. ಅನುದಾನ ಕೊಡುವುದಾಗಿ ಹೇಳುವ ಸರ್ಕಾರ, ಅಲ್ಪಸಂಖ್ಯಾತರನ್ನು ಓಬಿಸಿ (ಇತರ ಹಿಂದುಳಿದ ವರ್ಗ) ಪಟ್ಟಿಗೆ ಸೇರಿಸುತ್ತೇವೆ, ಅವರಿಗೂ ಕೂಡ ಮೀಸಲಾತಿ ಕೊಡುತ್ತೇನೆ ಎನ್ನುವುದು ಅನ್ಯಾಯ ಎಂದು ವಾಗ್ದಾಳಿ ನಡೆಸಿದರು. ಓಬಿಸಿ ಮೀಸಲಾತಿ ಕೊಡುವುದರಿಂದ ಹಿಂದುಳಿದ ಸಮಾಜಕ್ಕೆ ಸಿಎಂ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದ ವಿಜಯೇಂದ್ರ ಅವರು, ಕಾಂಗ್ರೆಸ್ ಪಕ್ಷದ ತಾತ್ಕಾಲಿಕ ಗ್ಯಾರಂಟಿಗಳಿಂದ ಲೋಕಸಭೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಜನರ ವಿಶ್ವಾಸ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.