ಕಾಂಗರೂ ಮದರ್ ಕೇರ್ ಅಂದ್ರೇನು ಗೊತ್ತಾ?

By Suvarna Web DeskFirst Published Feb 5, 2018, 6:30 PM IST
Highlights

ಮಗುವಿಗೆ ತಾಯಿಯ ಸ್ಪರ್ಶದಷ್ಟು ಸುಖ ಬೇರೆ ಯಾವುದೂ ನೀಡೋಲ್ಲ. ಇಂಥ ಮಮತೆಯ ಸ್ಪರ್ಶ ನೀಡೋ ಕಾಂಗರೂ ಕೇರ್ ಬಗ್ಗೆ ಇಲ್ಲಿದೆ ಮಾಹಿತಿ....

- ಪ್ರಿಯಾ ಕೆರ್ವಾಶೆ


ಕೆಲ ದಿನಗಳ ಹಿಂದೆ ಅಚ್ಚರಿಯ ವೈದ್ಯಕೀಯ ಬೆಳವಣಿಗೆಯೊಂದು ನಡೆಯಿತು. ಕೂಲಿ ಕಾರ್ಮಿಕನಾಗಿದ್ದ ಬಡ ಅಪ್ಪ ತನ್ನ ನವಜಾತ ಶಿಶುವನ್ನು 2 ತಿಂಗಳ ಕಾಲ ಮೈಗಪ್ಪಿಕೊಂಡು ಕಾಂಗರೂ ಮದರ್ ಕೇರ್ ಮಾಡಿ ಉಳಿಸಿಕೊಂಡ. ಆ ಮಗುವಿಗೆ ಹೈಪೋಥರ್ಮಿಯಾ ಸಮಸ್ಯೆ ಇತ್ತು. ಅಮ್ಮನ ಗರ್ಭದಲ್ಲಿ ಬೆಚ್ಚಗಿದ್ದ ಮಗು ಹುಟ್ಟಿದ ಬಳಿಕ ಮೈ ಶಾಖ ಕಳೆದುಕೊಂಡು ತಣ್ಣಗಾಗತೊಡಗಿತು. ಅದು ಪ್ರಾಣಾಪಾಯದ ಮುನ್ಸೂಚನೆಯಂತಿತ್ತು. ಸಿಸೇರಿಯನ್ ಆಪರೇಶನ್ ಮಾಡಿಸಿಕೊಂಡಿದ್ದ ತಾಯಿಗೆ ಮಗುವಿಗೆ ಹಾಲುಣಿಸುವಷ್ಟೂ ಶಕ್ತಿ ಇರಲಿಲ್ಲ. ಆಗ ತಂದೆಗೆ ಕಾಂಗರೂ ಮದರ್ ಕೇರ್ ಮಾಡುವಂತೆ ಸೂಚಿಸಲಾಯ್ತು. ದಿನದಲ್ಲಿ 12 ರಿಂದ 24 ಗಂಟೆವರೆಗೂ ಆ ತಂದೆ ಮಗುವನ್ನು ಮೈಗಂಟಿಸಿಕೊಂಡಿದ್ದ. ಎರಡು ತಿಂಗಳಲ್ಲಿ ಅಪ್ಪನ ಬೆಚ್ಚನೆಯ ಸ್ಪರ್ಶದಲ್ಲಿ ಚೇತರಿಸಿಕೊಂಡ ಮಗು ಈಗ ಆರೋಗ್ಯದಿಂದಿದೆ.

ಕಾಂಗರೂ ಮದರ್ ಕೇರ್ ಅಂದ್ರೆ?

ಮಗುವನ್ನು ತಾಯಿ ಅಥವಾ ತಂದೆಯ ಚರ್ಮಕ್ಕೆ ಅಂಟಿಸಿಕೊಂಡಂತೆ ಇಟ್ಟು ಮಗುವಿನ ದೇಹದ ಶಾಖ ಹೆಚ್ಚುವಂತೆ ಮಾಡುವುದು. ಕಾಂಗರೂ ಮದರ್ ಕೇರ್‌ನಲ್ಲಿ ಮಗುವಿನ ಗಲ್ಲದ ಭಾಗವನ್ನು ತಾಯಿಯ ಹೆಗಲ ಅಥವಾ ಎದೆಯ ಮೇಲಿಟ್ಟು, ಮಗುವಿನ ದೇಹ ತಾಯಿಯ ಮೈಗೆ ಅಂಟಿಕೊಂಡಿರುವಂತೆ ಬಟ್ಟೆ ಕಟ್ಟುತ್ತಾರೆ. ಇದರಿಂದ ತಾಯಿಯ ಮೈಶಾಖ ಮಗುವಿಗೂ ವರ್ಗವಾಗಿ ಮಗು ಬೆಚ್ಚಗಿರುತ್ತದೆ.ಮಗುವಿನ ತಲೆ ಕೆಳಗಾದರೆ ಉಸಿರಾಡಲು ಕಷ್ಟವಾಗಬಹುದು. ಈ ಕಾಂಗರೂ ಮದರ್ ಕೇರ್‌ಗೆಂದೇ ಕಾಟನ್ ಬಟ್ಟೆಗಳು ಸಿಗುತ್ತವೆ. 

ಏನೆಲ್ಲ ಉಪಯೋಗ?

ಅವಧಿಗೆ ಮುನ್ನ ಮಗು ಜನಿಸಿದಾಗ ಇನ್‌ಕ್ಯುಬೇಟರ್‌ನ ವ್ಯವಸ್ಥೆ ಇಲ್ಲದಿದ್ದಾಗ ಈ ತಂತ್ರವನ್ನು ಬಳಸುತ್ತಾರೆ. ನವಜಾತ ಶಿಶುವಿನಲ್ಲಿ ಹೈಪೋಥರ್ಮಿಯಾ ದಂಥ ಸಮಸ್ಯೆ ಕಾಣಿಸಿಕೊಂಡಾಗಲೂ ಈ ಟೆಕ್ನಿಕ್  ಬಳಸುವುದುಂಟು. ಇದರಿಂದ ಮುಖ್ಯವಾಗಿ ಮಗುವಿನ ಮೈ ಶಾಖ ಸಮತೋಲನದಲ್ಲಿರುತ್ತದೆ. ತಾಯಿಯಲ್ಲಿ ಎದೆಹಾಲು ಹೆಚ್ಚಾಗುತ್ತದೆ. ತಾಯಿಯ ಮೈಯಿಂದ ಬ್ಯಾಕ್ಟೀರಿಯಾಗಳು ಮಗುವಿನ ಮೈಗೂ ಹೋಗುವ ಕಾರಣ ಮಗುವಿನಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿರುತ್ತದೆ. ಇನ್‌ಫೆಕ್ಷನ್ ಆಗಲ್ಲ. ಇವೆಲ್ಲದರ ಜೊತೆಗೆ ಅಮ್ಮ ಮಗು ಬೇಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಬಹುದು. 

ಕಾಂಗರೂ ಮದರ್ ಕೇರ್ ಅನ್ನು ಮೊದಲ ಬಾರಿಗೆ ಅರ್ಜೆಂಟೈನಾದಲ್ಲಿ ಬಳಸಲಾಯ್ತು. ಅಲ್ಲಿ ಜನನ ಪ್ರಮಾಣ ಹೆಚ್ಚಿತ್ತು. ಆಸ್ಪತ್ರೆಗಳಲ್ಲಿ ಇನ್ ಕ್ಯುಬೇಟರ್ ಕೊರತೆ ಇತ್ತು. ಇದರ ಜೊತೆಗೆ ಆಸ್ಪತ್ರೆಯಿಂದ ಮಗು ತಾಯಿಯನ್ನು ಬೇಗ ಡಿಸ್‌ಚಾರ್ಜ್ ಮಾಡುವ ಸಲುವಾಗಿಯೂ ಈ ತಂತ್ರ ಬಳಕೆಯಲ್ಲಿತ್ತು. 

ಎಷ್ಟು ಸಮಯ ಕಾಂಗರೂ ಕೇರ್ ಮಾಡಬೇಕು?


ಮಗು ತೂಕ ಹೆಚ್ಚಿಸಿಕೊಂಡು ಸಹಜ ಸ್ಥಿತಿಗೆ ಬರುವವರೆಗೂ ಕಾಂಗರೂ ಮದರ್ ಕೇರ್ ಮಾಡಬಹುದು. ಮಗುವಿನ ದೇಹದಲ್ಲಿ ಬ್ರೌನ್ ಫಾಟ್ ಹೆಚ್ಚಾದಾಗ ಮಗು ಚಟುವಟಿಕೆಯಿಂದಿರಲು ಆರಂಭಿಸುತ್ತದೆ. ಆದ ತನ್ನಿಂತಾನೇ ಅದರ ದೇಹದ ಶಾಖ ಸಮತೋಲನದಲ್ಲಿರುತ್ತದೆ. ಕೆಲವು ಮಕ್ಕಳು ಕೆಲವೇ ದಿನದಲ್ಲಿ ಚಟುವಟಿಕೆ ಹೆಚ್ಚಿಸಬಹುದು. ಕೆಲವು ಮಕ್ಕಳಿಗೆ ಮೂರ್ನಾಲ್ಕು ತಿಂಗಳ ಕಾಲ ಕಾಂಗರೂ ಮದರ್ ಕೇರ್ ಬೇಕಾಗಬಹುದು.

ಯಾರೆಲ್ಲ ಕಾಂಗರೂ ಕೇರ್ ಮಾಡಬಹುದು?


ತಾಯಿ, ತಂದೆ, ಅಜ್ಜ, ಅಜ್ಜಿ ಹೀಗೆ ಮಗುವಿನ ರಕ್ತ ಸಂಬಂಧಿಗಳು ಯಾರು ಬೇಕಾದರೂ ಈ ಚಿಕಿತ್ಸೆ ಮಾಡಬಹುದು. ಆದರೆ ಅವರ ದೇಹ ಸ್ವಚ್ಛವಾಗಿರಬೇಕು. ದೇಹದಲ್ಲಿ ಇನ್‌ಫೆಕ್ಷನ್‌ಗಳು ಇರಬಾರದು.
ಹೈಪೋಥರ್ಮಿಯಾದಂಥ ಸಮಸ್ಯೆಗಳಲ್ಲಿ ದಿನದಲ್ಲಿ ಬಹಳ ಹೊತ್ತು ಕಾಂಗರೂ ಮದರ್ ಕೇರ್ ಮಾಡಬೇಕಾಗುತ್ತೆ. ಹೆಚ್ಚು ಸಮಸ್ಯೆ  ಇಲ್ಲದಿದ್ದಾಗ ದಿನಕ್ಕೆ ೧ ಗಂಟೆಯಂತೆ ಕೆಲವು ತಿಂಗಳು ಕಾಂಗರೂ ಮದರ್ ಕೇರ್ ಮಾಡಬಹುದು. 

 

ನಾನು ಸ್ವೀಡನ್‌ಗೆ ಹೋಗಿದ್ದಾಗ 450 ಗ್ರಾಂ


ತೂಗುತ್ತಿದ್ದ 23 ವಾರಗಳಲ್ಲಿ ಜನಿಸಿದ ಮಗುವಿಗೆ ಕಾಂಗರೂ ಚಿಕಿತ್ಸೆ ಮಾಡುವುದು ನೋಡಿದ್ದೇನೆ. ಅಲ್ಲಿ ಇನ್‌ಕ್ಯುಬೇಟರ್ ಪಕ್ಕದಲ್ಲೇ ತಾಯಿಯ ರೂಂ, ವೈದ್ಯರು, ನರ್ಸ್ ಇರುವ ವ್ಯವಸ್ಥೆ ಇರುವುದರಿಂದ ಇದು ಸಾಧ್ಯವಾಯ್ತು. ನಮ್ಮ ದೇಶದಲ್ಲಿ 24 ವಾರದಲ್ಲಿ ಜನಿಸಿದ ಮಕ್ಕಳಿಂದ ಈ ಚಿಕಿತ್ಸೆ ಕೊಡಿಸುತ್ತಾರೆ. 

- ಡಾ. ಹರಿರಾಮ್ ನಿಯೋನೆಟಾಲಜಿ, ಪೀಡಿಯಾಟ್ರಿಕ್ ವಿಭಾಗದ ಮುಖ್ಯಸ್ಥ ಫೋರ್ಟಿಸ್ ಆಸ್ಪತ್ರೆ

click me!