ವೈರಲ್ ಸುದ್ದಿ..! ರೇಪಿಸ್ಟ್ ಮತ್ತು ರೇಪ್ ಸಂತ್ರಸ್ತೆ 16 ವರ್ಷಗಳ ಬಳಿಕ ಮುಖಾಮುಖಿಯಾದಾಗ...

By Suvarna Web DeskFirst Published Feb 9, 2017, 1:05 PM IST
Highlights

"ಆವತ್ತು ನಡೆದದ್ದು ಸೆಕ್ಸ್ ಅಲ್ಲ, ರೇಪ್ ಎಂಬ ಸತ್ಯ ಅರಿಯಲು ಬಹಳ ದಿನ ಬೇಕಾಯಿತು. ಅತ್ಯಾಚಾರ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾಯಿತು. ಆದರೆ, ಜ್ಞಾನೋದಯವಾದ ಬಳಿಕ ನಿಜಕ್ಕೂ ನನಗೆ ಬಹಳ ನೋವಾಗತೊಡಗಿತು" ಎಂದು ಟಾಮ್ ಹೇಳಿಕೊಳ್ಳುತ್ತಾನೆ.

ಐಸ್'ಲ್ಯಾಂಡ್(ಫೆ. 09): ಯಾವುದೇ ಮಹಿಳೆಯ ಆಚಾರ, ವಿಚಾರ ಏನೇ ಇದ್ದರೂ ಅತ್ಯಾಚಾರವಾದರೆ ಆಕೆ ಮಾನಸಿಕವಾಗಿ ಜರ್ಝರಿತವಾಗುವುದು ಸಹಜ. ಆದರೆ, ರೇಪ್ ಮಾಡಿದವನ ಕಥೆ ಹೇಗಿರುತ್ತದೆ..? ಅತ್ಯಾಚಾರವಾಗಿ ಹಲವು ವರ್ಷಗಳ ಬಳಿಕ ಅವರಿಬ್ಬರು ಸಂಧಿಸಿದಾಗ ಅವರಿಬ್ಬರ ರಿಯಾಕ್ಷನ್ ಹೇಗಿರುತ್ತದೆ? ಐಸ್'ಲ್ಯಾಂಡ್ ದೇಶದ ಥಾರ್ಡಿಸ್ ಎಲ್ವಾ ಎಂಬಾಕೆಯ ಇಂಥದ್ದೊಂದು ಸ್ಟೋರಿ, ಹಾಗೂ ಅವರಿಬ್ಬರ ಸಂಭಾಷಣೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. "ನನ್ನ ಬಟ್ಟೆಯಾಗಲೀ, ನಗುವಾಗಲೀ ಅಥವಾ ಮುಗ್ಧತೆಯಾಗಲೀ ಆವತ್ತು ನಡೆದ ಅತ್ಯಾಚಾರವನ್ನು ತಡೆಯಲು ಆಗುತ್ತಿರಲಿಲ್ಲ. ಆ ವ್ಯಕ್ತಿಯೇ ಸ್ವಯಂನಿಯಂತ್ರಣ ಮಾಡಿಕೊಂಡಿದ್ದರೆ ರೇಪ್ ಆಗುತ್ತಿರಲಿಲ್ಲ" ಎಂದು ಎಲ್ವಾ ಹೇಳಿದ ಮಾತುಗಳು ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ.

ಏನಿದು ಸ್ಟೋರಿ?
1996ರಲ್ಲಿ ಆಸ್ಟ್ರೇಲಿಯಾದಿಂದ ಐಸ್'ಲ್ಯಾಂಡ್'ಗೆ ವಲಸೆ ಬಂದ ಟಾಮ್ ಸ್ಟ್ರೇಂಜರ್ ಜೊತೆ ಥಾರ್ಡಿಸ್ ಎಲ್ವಾಗೆ ಪರಿಚಯವಾಗುತ್ತದೆ. ಟಾಮ್'ಗೆ ಆಗ 18 ವರ್ಷ, ಎಲ್ವಾಗೆ 16 ವರ್ಷ. ಹದಿಹರೆಯದ ವಯಸ್ಸಿನ ಇಬ್ಬರೂ ಡೇಟಿಂಗ್ ಮಾಡುತ್ತಾರೆ. ಆದರೆ, ಒಂದು ದುರದೃಷ್ಟದ ದಿನದಂದು ಥಾರ್ಡಿಸ್ ಎಲ್ವಾಳ ಮನೆಯ ಬೆಡ್'ರೂಮಲ್ಲೇ ಟಾಮ್ ಸ್ಟ್ರೇಂಜರ್ ಅಟ್ಟಹಾಸಗೈಯುತ್ತಾನೆ.

ಚುಚ್ಚುವ ಪ್ರಶ್ನೆಗಳು:
ಬಾಯ್'ಫ್ರೆಂಡ್ ಆದರೂ ಇಂಥದ್ದೊಂದು ಲೈಂಗಿಕ ದುಃಸ್ಸಾಹಸವನ್ನು ನಿರೀಕ್ಷಿಸದಿದ್ದ ಥಾರ್ಡಿಸ್ ಎಲ್ವಾಗೆ ಆಘಾತದ ಸಂದರ್ಭವಾಗಿತ್ತು. ದಿನಗಳು, ವರ್ಷಗಳ ಕಾಲ ಆ ಘಟನೆಯು ಆಕೆಯ ಮನಸ್ಸನ್ನು ಚುಚ್ಚುತ್ತಿರುತ್ತದೆ. ಟಾಮ್ ಸ್ಟ್ರೇಂಜರ್ ಯಾವುದೇ ಆಯುಧ ಹಿಡಿದು ಹೆದರಿಸಿ ರೇಪ್ ಮಾಡಿರಲಿಲ್ಲ. ಟಿವಿಯಲ್ಲಿ ತೋರಿಸುವಂತೆ ಅತ್ಯಾಚಾರ ಎಸಗಿರಲಿಲ್ಲ. ಆದರೂ ಅಂಥದ್ದೊಂದು ಅತ್ಯಾಚಾರವನ್ನು ಜೀರ್ಣಿಸಿಕೊಳ್ಳಲು ಎಲ್ವಾಗೆ ಸಾಧ್ಯವಾಗಲೇ ಇಲ್ಲ.

ಬಾಯ್'ಫ್ರೆಂಡ್'ಗೆ ಪತ್ರ:
ಮನಸ್ಸನ್ನು ಚುಚ್ಚುತ್ತಿದ್ದ ಪ್ರಶ್ನೆಗಳಿಂದ ವಿಚಲಿತಳಾದ ಥಾರ್ಡಿಸ್ ಎಲ್ವಾ ಒಂದು ಗಟ್ಟಿಮನಸ್ಸು ಮಾಡಿ 9 ವರ್ಷಗಳ ಹಿಂದೆ ತನ್ನ ಮಾಜಿ ಪ್ರಿಯಕರ ಹಾಗೂ ಅತ್ಯಾಚಾರಿ ಟಾಮ್ ಸ್ಟ್ರೇಂಜರ್'ಗೆ ಪತ್ರ ಬರೆಯುತ್ತಾಳೆ. ಆಕೆಯ ಅಚ್ಚರಿಯಾಗುವಂತೆ ಟಾಮ್ ಉತ್ತರ ಕೂಡ ನೀಡುತ್ತಾನೆ. ತಾನು ಆ ದಿನ ಹಾಗೆ ಮಾಡಬಾರದಿತ್ತು ಎಂದು ಪಶ್ಚಾತಾಪ ಪಟ್ಟು ಆಕೆಯ ಕ್ಷಮೆ ಯಾಚಿಸುತ್ತಾನೆ.

"ಆವತ್ತು ನಡೆದದ್ದು ಸೆಕ್ಸ್ ಅಲ್ಲ, ರೇಪ್ ಎಂಬ ಸತ್ಯ ಅರಿಯಲು ಬಹಳ ದಿನ ಬೇಕಾಯಿತು. ಅತ್ಯಾಚಾರ ಎಂಬುದನ್ನು ಒಪ್ಪಿಕೊಳ್ಳಲು ಕಷ್ಟವಾಯಿತು. ಆದರೆ, ಜ್ಞಾನೋದಯವಾದ ಬಳಿಕ ನಿಜಕ್ಕೂ ನನಗೆ ಬಹಳ ನೋವಾಗತೊಡಗಿತು" ಎಂದು ಟಾಮ್ ಹೇಳಿಕೊಳ್ಳುತ್ತಾನೆ.

ಸರಿ, ರೇಪ್ ಘಟನೆಯಾಗಿ 16 ವರ್ಷಗಳ ಬಳಿಕ ಪರಸ್ಪರ ಮುಖತಃ ಭೇಟಿಯಾಗಲು ಟಾಮ್'ನೇ ಸೂಚಿಸುತ್ತಾನೆ. ಇಬ್ಬರೂ ಸಂಧಿಸುತ್ತಾರೆ. ಕಲ್ಮಷ ಮತ್ತು ದುಗುಡಗಳೆಲ್ಲಾ ದೂರವಾದ ಮನಸ್ಸುಗಳು ಪ್ರಾಮಾಣಿಕತೆಯ ಸಂಭಾಷಣೆ ನಡೆಸುತ್ತವೆ. ಆವತ್ತಿನ ಘಟನೆಯನ್ನು ಪ್ರಾಮಾಣಿಕತೆಯಿಂದ ವಿಶ್ಲೇಷಿಸುತ್ತಾರೆ. ಟೆಡ್ ಟಾಕ್ ಫೇಸ್ಬುಕ್ ಪೇಜ್'ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ.

click me!