ಶೌಚಾಚಾರವನ್ನು ಅನುಸರಿಸುವುದು ಹೇಗೆ?

By Suvarna Web DeskFirst Published Oct 14, 2017, 9:28 PM IST
Highlights

ಶುದ್ಧ ಸಾತ್ವಿಕ ಆಹಾರ ಸೇವನೆಯಿಂದ ಮಾತ್ರ ನಮ್ಮ ನಾಲಿಗೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಮೂರನೆಯದು ಮಾನಸಿಕ ಶೌಚ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಅದನ್ನು ನಿರಂತರ ಸತ್‌ಚಿಂತನೆ, ಸಜ್ಜನರ ಸಹವಾಸ, ಭಗವದನುಗ್ರಹ ಪ್ರಾಪ್ತಿಯಲ್ಲಿ ತೊಡಗಿಸಿಕೊಳ್ಳುವುದು. ಈ ರೀತಿ ಮೂರು ಕರಣಗಳನ್ನು ಶುದ್ಧವಾಗಿರಿಸಿ ಕೊಂಡು ಮಾಡಿದ ಕಾರ್ಯಗಳು ಶೌಚಾಚಾರ ಎನಿಸಿಕೊಳ್ಳುತ್ತದೆ.

‘ಶೌಚಾಚಾರ’ ಎಂಬ ಪದವನ್ನು ನಾವು ಕೇಳುತ್ತಲೇ ಇರುತ್ತೇವೆ. ‘ಶೌಚ’ ಎಂದರೆ ಶುದ್ಧವಾದಂತಹ, ನಿರ್ಮಲವಾದಂತಹ ಅಥವಾ ದೋಷರಹಿತವಾದದ್ದು ಎಂಬ ಅರ್ಥ. ಆಚಾರವೆಂದರೆ ನಡತೆ. ನಮ್ಮ ನಡತೆ ಯಾವ ರೀತಿಯಲ್ಲಿ ಇರಬೇಕು ಎನ್ನುವುದನ್ನು ಈ ಪದ ವಿವರಿಸುತ್ತದೆ. ‘ಶುದ್ಧತೆ’ ಎನ್ನುವುದು ತ್ರಿ(ಮೂರು) ಕರಣ (ಸಾಧನ) ಗಳಿಗೆ ಅನ್ವಯವಾಗುವಂತದ್ದು. ಕಾಯೇನ - ವಾಚಾ- ಮನಸಾ (ಶರೀರ - ಮಾತು- ಮನಸ್ಸು) ಇವು ತ್ರಿಕರಣಗಳು. ಮೊದಲನೆಯದು ಕಾಯ ಅಂದರೆ ಶರೀರ ಶುದ್ಧಿ. ಇದು ನಮ್ಮ ಆರೋಗ್ಯ ರಕ್ಷಣೆಗೂ ಅವಶ್ಯ. ನಾವು ನಮ್ಮ ಮನಸ್ಸು ಸ್ವಸ್ಥವಾಗಿರಬೇಕಾದರೆ ನಮ್ಮ ದೇಹ- ಉಡುಗೆ- ನಾವಿರುವ ಮನೆ ಮತ್ತು ಅಕ್ಕಪಕ್ಕದ ಪರಿಸರವನ್ನು ನಿರ್ಮಲವಾಗಿರಿಸಿ ಕೊಳ್ಳುವುದು ಅವಶ್ಯ. ಎರಡನೆಯದು ಮಾತು. ಮಾತಿನ ಶುಚಿತ್ವವೆಂದರೆ ನಾಲಿಗೆಯನ್ನು ಹಿಡಿತ ದಲ್ಲಿಟ್ಟುಕೊಳ್ಳುವುದು.

ಅನ್ಯರಿಗೆ ನೋವಾಗದಂತೆ ಹಿತವಾದ- ಮಿತವಾದ ಮಾತುಗಳನ್ನಾಡುವುದು. ಇದಕ್ಕೆ ಪೂರಕವಾಗಿ ಸಾತ್ವಿಕ ಆಹಾರ ಸೇವನೆಯನ್ನು ರೂಢಿಸಿಕೊಳ್ಳುವುದು. ಶುದ್ಧ ಸಾತ್ವಿಕ ಆಹಾರ ಸೇವನೆಯಿಂದ ಮಾತ್ರ ನಮ್ಮ ನಾಲಿಗೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಮೂರನೆಯದು ಮಾನಸಿಕ ಶೌಚ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಅದನ್ನು ನಿರಂತರ ಸತ್‌ಚಿಂತನೆ, ಸಜ್ಜನರ ಸಹವಾಸ, ಭಗವದನುಗ್ರಹ ಪ್ರಾಪ್ತಿಯಲ್ಲಿ ತೊಡಗಿಸಿಕೊಳ್ಳುವುದು. ಈ ರೀತಿ ಮೂರು ಕರಣಗಳನ್ನು ಶುದ್ಧವಾಗಿರಿಸಿ ಕೊಂಡು ಮಾಡಿದ ಕಾರ್ಯಗಳು ಶೌಚಾಚಾರ ಎನಿಸಿಕೊಳ್ಳುತ್ತದೆ.

ಇದಿಲ್ಲದಿದ್ದರೆ ಮನಸ್ಸು ಏನೋ ಯೋಚಿಸುತ್ತಿದ್ದರೆ. ದೇಹ ಬೇರೆ ಕೆಲಸ ಮಾಡುತ್ತಿರುತ್ತದೆ. ಮಾತು ಬೇರೇನೋ ಆಡುತ್ತಿರುತ್ತದೆ. ಅದಕ್ಕಾಗಿಯೇ ಹಿರಿಯರು ‘ಮಾತು ಒಂದು, ಕೃತಿ ಮತ್ತೊಂದು- ಶ್ರುತಿ ಮಗದೊಂದು- ಸ್ಥಿತಿ ಬೇರೊಂದು’ ಎನ್ನುತ್ತಾರೆ. ಇಂತಹ ಸ್ಥಿತಿಯ ಕಾರ್ಯಗಳಿಂದ ಎಂದೂ ಉತ್ತಮ ಫಲ ನಿರೀಕ್ಷಿಸಲಾಗದು. ಹೀಗಾಗಿಯೇ ನಮ್ಮ ಹಿರಿಯರು ತ್ರಿಕರಣ ಶುದ್ಧವಾದಂತಹ ಆಚರಣೆಯಲ್ಲಿರುವಂತೆ ಆದೇಶಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಕಾಯೇನ-ವಾಚಾ-ಮನಸಾ ಶುದ್ಧರಾಗಿದ್ದು, ಸನ್ಮಾರ್ಗದಲ್ಲಿ ನಡೆಯುತ್ತ, ಶುಭ ಫಲವನ್ನು ಹೊಂದಿ, ಸಂಸಾರ ಸಾಗರವನ್ನು ಸರಾಗವಾಗಿ ಸಾಗಿಸೋಣ.

ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ, ದೈವಜ್ಞ ಬ್ರಾಹ್ಮಣ ಮಠ, ಕರ್ಕಿ

click me!