ಬರದ ನಾಡಿಗೆ ಭಾಗೀರಥಿ

Published : Jun 19, 2018, 01:47 PM IST
ಬರದ ನಾಡಿಗೆ ಭಾಗೀರಥಿ

ಸಾರಾಂಶ

ಚಿನ್ನದ ಗಣಿಗಳಿದ್ದ ಊರಲ್ಲಿ ನೀರಿಗೆ ಬಂಗಾರದ ಬೆಲೆ. ರಾಜ್ಯಾದ್ಯಂತ ಪ್ರವಾಹಸದೃಶ ಮಳೆಯಾದರೂ ಇಲ್ಲಿ ನಾಲ್ಕು ಹನಿ ಸುರಿಯಲ್ಲ. ಮಳೆ, ಬೆಳೆ ಇಲ್ಲದೇ ತತ್ತರಿಸುವ ಜನ ಅನಿವಾರ್ಯವಾಗಿ ವಲಸೆ ಹೋಗುತ್ತಿದ್ದರು. ಆದರೆ ಈಗಬೆಂಗಳೂರಿನ ಕೆರೆಗಳು ಈ ಜಿಲ್ಲೆಯ ಕೆರೆಗೆ ನೀರುಣಿಸುತ್ತಿವೆ. ಎಷ್ಟೋ ವರ್ಷಗಳ ನಂತರ ಕೋಲಾರ ಬರಡು ನೆಲದಲ್ಲಿ ಜೀವ ಚೈತನ್ಯ ಮೂಡಿದೆ.   

ಜೆ.ಸತ್ಯರಾಜ್ ಕೋಲಾರ

ಕೋಲಾರ ಬರದ ನಾಡು. ಕಳೆದ 10 ವರ್ಷಗಳಿಂದ ಇಲ್ಲಿನ ಜನ ತೊಟ್ಟು ನೀರಿಗೆ ಪರದಾಡಿದ್ದಾರೆ. 1500 ಅಡಿ ಕೊಳವೆ ಬಾವಿ ತೆಗೆಸಿದರೂ ಸಿಗದ ನೀರು, ಪಾತಾಳಕ್ಕಿಳಿದ ಅಂತರ್ಜಲ ಮಟ್ಟ. ಕೃಷಿ ಚಟುವಟಿಕೆ ಎಂದೋ ನಿಂತು ಹೋಗಿ ರೈತರು ನಗರಕ್ಕೆ ವಲಸೆ ಹೋಗಿದ್ದಾರೆ. ಇಂಥ ಮರಳುಗಾಡಿಗೆ ಓಯಸಿಸ್‌ನಂತೆ ಬಂದದ್ದು ಕೆ.ಸಿ.ವ್ಯಾಲಿ ಯೋಜನೆ! ಈಗ ಕೋಲಾರದ ಕೆರೆಗಳು ತುಂಬುತ್ತಿವೆ. ರೈತರು ತಮ್ಮ ಜಮೀನಿಗೆ ಮರಳಿ ಕೃಷಿಯಲ್ಲಿ ತೊಡಗಿಸುವ ಹುಮ್ಮಸ್ಸಿನಲ್ಲಿದ್ದಾರೆ. 

ಕೆಸಿ ಯೋಜನೆ ಎಂದರೆ?

ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ ಹಾಗೂ ಬೆಳ್ಳಂದೂರಿನ ನೀರು ಸಂಸ್ಕರಣಾ ಘಟಕದಿಂದ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದ ಕೆರೆಗಳಿಗೆ ಹರಿಸಿ, ೧೨೬ ಕೆರೆಗಳನ್ನು ತುಂಬಿಸುವ ಯೋಜನೆ. ಈ ಯೋಜನೆಯ ಅಂದಾಜು ಮೊತ್ತು ಸುಮಾರು 1348 ಕೋಟಿ ರುಪಾಯಿ. ಈ ಕೆ.ಸಿ.ವ್ಯಾಲಿ ಯೋಜನೆಯನ್ನು ಮೊದಲು ರೂಪಿಸಿದವರು ಈ ಹಿಂದೆ ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ದಿ.ಡಿ.ಕೆ.ರವಿ. ಆದರೆ ಆಗ ಸರ್ಕಾರ ಆಸಕ್ತಿ ತೋರಲಿಲ್ಲ. ಮುಂದೆ ಶಾಸಕ ರಮೇಶ್ ಕುಮಾರ್ ಪರಿಶ್ರಮದಿಂದ ಈ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿತು. ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದಲ್ಲೇ ನೀರು ಸರಬರಾಜಾಗುತ್ತಿತ್ತು. ಆದರೆ ಪೈಪ್ ಲೈನ್ ಅಳವಡಿಕೆ ಸಮಸ್ಯೆಯಿಂದ ಈ ತಿಂಗಳಲ್ಲಷ್ಟೇ ನೀರು ಹರಿಸುವುದು ಸಾಧ್ಯವಾಯಿತು.

ಕೆರೆ ತುಂಬಿ, ಮನದುಂಬಿ..

ಜೂನ್ 2, 2018 ಕೋಲಾರದ ಇತಿಹಾಸದಲ್ಲಿ ಮಹತ್ವದ ದಿನ. ಬೆಂಗಳೂರಿನಿಂದ ಚರಂಡಿಗೆ ಹರಿದು ಪೋಲಾಗುತ್ತಿದ್ದ ನೀರು ಕೋಲಾರದ ಹಲವಾರು ಕೆರೆಗಳನ್ನು ತುಂಬಿದ ದಿನ. ಸದ್ಯ ಸುಮಾರು 200 ಎಂಎಲ್ ಅಡಿಯಷ್ಟು ನೀರು ಹರಿಯುತ್ತಿದೆ. ಇನ್ನೆರಡು ತಿಂಗಳಲ್ಲಿ ಇದರ ಸಾಮರ್ಥ್ಯ ದ್ವಿಗುಣಗೊಳ್ಳಲಿದ್ದು ೪೦೦ ಎಂಎಲ್‌ಡಿಯಷ್ಟು ನೀರು ಜಿಲ್ಲೆಗೆ ಹರಿಯಲಿದೆ. ಈಗಾಗಲೇ ಲಕ್ಷ್ಮೀಸಾಗರ ತುಂಬಿ, ಜೋಡಿ ಕೃಷ್ಣಾಪುರ ಕೆರೆ ತುಂಬಿ ನರಸಾಪುರ ಕೆರೆಗೆ ಹರಿಯುತ್ತಿದೆ. ಇಲ್ಲಿಂದ ಮೂರು ಕವಲುಗಳಾಗಿ ಹರಿಯಲಿದೆ, ದಕ್ಷಿಣಕ್ಕೆ ಮಾಲೂರು ತಾಲೂಕು ಮಾರ್ಗವಾಗಿ ಬಂಗಾರಪೇಟೆ, ಪೂರ್ವಕ್ಕೆ ಅರಾಭಿಕೊತ್ತನೂರು, ಅಮ್ಮೇರಹಳ್ಳಿ, ಕೋಲಾರ ಕೆರೆಗಳ ಮೂಲಕ ಪಾಲಾರ್ ಕಾಲುವೆ ಸೇರುವುದು ಅಲ್ಲದೆ, ಮತ್ತೊಂದು ಮಾರ್ಗವಾಗಿ ವೇಮಗಲ್ ಮೂಲಕ ಮುದುವಾಡಿ ದೊಡ್ಡ ಕೆರೆಯ ಮೂಲಕ ಶ್ರೀನಿವಾಸಪುರ ಕೆರೆಗಳನ್ನು ತುಂಬಿಸಲಾಗುತ್ತದೆ. ಪಾಲಾರ್ ನದಿ ಮೂಲಕ ಹರಿಯುವ ನೀರನ್ನು ಮುಳಬಾಗಿಲು ಮಾರ್ಗವಾಗಿ ಬರುವ ಕೆರೆಗಳಿಗೆ ಹರಿಸಲಾಗುತ್ತದೆ. ಉಳಿದ ನೀರು ಬೇತಮಂಗಲ ಕೆರೆ ಮೂಲಕವಾಗಿ ಉಳಿದ ಕೆರೆಗಳನ್ನು ತುಂಬಿಸಲಿದೆ. 

ಅಂತರ್ಜಲ ಏರುವ ನಿರೀಕ್ಷೆ

ಜಿಲ್ಲೆಗೇ ಇದು ಮೊದಲ ನೀರಾವರಿ ಯೋಜನೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಭರವಸೆ ರೈತರದು. ಕೃಷಿಗೆ ಕೊಳವೆ ಬಾವಿಗಳನ್ನೇ ನಂಬಿ ಕೂತಿರುವ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಕೆ.ಸಿ.ವ್ಯಾಲಿ ಮೂಲಕ ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ಮಟ್ಟ 500 ಅಡಿಗೆ ಏರಿಕೆ ಆಗಲಿದೆ ರೈತರು ಉತ್ಸಾಹದಿಂದ ಹೇಳುತ್ತಾರೆ. ಅಂತಹ ಸ್ಥಿತಿ ಜಿಲ್ಲೆಗೆ ಒದಗಿಬಂದರೆ ದಶಕಗಳಿಂದ ಜಿಲ್ಲೆಯನ್ನು ಕಾಡುತ್ತಿದ್ದ ಬರಗಾಲ ಇನ್ನಿಲ್ಲದಂತೆ ದೂರ ಸರಿದು ಕೋಲಾರ ಜಿಲ್ಲೆ ಹಸಿರು ಜಿಲ್ಲೆಯಾಗಿ ಕಂಗೊಳಿಸಲಿದೆ. ?

ಶಾಸಕರ ಕಣ್ಣಲ್ಲಿ ನೀರು!

ಸ್ವಾತಂತ್ರಾನಂತರ ಕೋಲಾರ ಜಿಲ್ಲೆಗೆ ಬಂದ ಮೊದಲ ನೀರಾವರಿ ಯೋಚನೆಯಿದು. ಇಲ್ಲಿನ ಬರ, ಜನರ ಬವಣೆಯನ್ನು ಕಣ್ಣಾರೆ ಕಂಡಿದ್ದವರು ರಮೇಶ್ ಕುಮಾರ್. ಕೆರೆಗಳು ತುಂಬಿ ರೈತರು ಹರ್ಷಚಿತ್ತರಾದಾಗ ಭಾವೋದ್ವೇಗದಲ್ಲಿ ಶಾಸಕರ ಕಣ್ಣಲ್ಲೂ ನೀರು. ಈ ಯೋಜನೆಗೆ ಯಾರೇ ಅಡ್ಡಗಾಲು ಹಾಕಲಿ, ಪ್ರಾಣ ಕೊಟ್ಟಾದರೂ ಕೆ.ಸಿ ವ್ಯಾಲಿ ಯೋಜನೆ ವಿಫಲವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೂ ನಡೆಯಿತು. ಅಂತರ್ಜಲ ಮಟ್ಟ ಏರಿಕೆ, ಮತ್ತೆ ಕೃಷಿಯ ಕನಸುಈಗಾಗಲೇ ಕೋಲಾರದ ಮೂರು ಕೆರೆಗಳು ತುಂಬಿವೆ. 200 ಎಂಎಲ್‌ಡಿ ನೀರು ಹರಿದಿದೆ. ತಾಂತ್ರಿಕ ಸಮಸ್ಯೆ ಸರಿಯಾದ ಬಳಿಕ ಮುಂದಿನ ತಿಂಗಳಿಂದ ಇನ್ನಷ್ಟು ನೀರು ಹರಿಯಲಿದ್ದು, ಒಟ್ಟಾರೆ ೪೦೦ ಎಂಎಲ್‌ಡಿ ನೀರು ವರ್ಷವಿಡೀ ಹರಿದು ಜಿಲ್ಲೆಯ 126 ಕೆರೆಗಳು ತುಂಬಲಿವೆ. ಮೊದಲು ಇಲ್ಲಿನ ರೈತರು  ಟೊಮ್ಯಾಟೋ ಹಾಗೂ ತರಕಾರಿ ಬೆಳೆಯುತ್ತಿದ್ದರು. ಬರ ಆವರಿಸಿದ ಬಳಿಕ ಕೃಷಿ ನಿಂತುಹೋಯ್ತು. ಈಗ ಕೆರೆ ತುಂಬಿ ಅಂತರ್ಜಲ ಮಟ್ಟ ಹೆಚ್ಚಾದರೆ ರೈತರ ಬೋರ್‌ವೆಲ್‌ಗಳಲ್ಲಿ ಮತ್ತೆ ನೀರು ಸಿಗಲಿದೆ. ಹೀಗಾಗಿ ಇನ್ನು ನಾಲ್ಕು ತಿಂಗಳ ಬಳಿಕ ಕೃಷಿ ಚಟುವಟಿಕೆ ಮತ್ತೆ ಆರಂಭವಾಗುವ ನಿರೀಕ್ಷೆ ಇದೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ChatGPT ಅಥವಾ ಗ್ರೋಕ್‌ ಜೊತೆಗೆ ಈ 10 ಸಂಗತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!
ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?