ನಕಾರಾತ್ಮಕ ಯೋಚನೆಗಳಿಗೆ ಕಾರಣಗಳು ಹೊರಗಿನ ವಿಷಯಗಳು ಅಥವಾ ಒಳಗಿನದ್ದೇ ಇರಬಹುದು. ಆದರೆ, ಅವುಗಳ ಫಲಿತಾಂಶ ಮಾತ್ರ ಒಂದೇ. ನಕಾರಾತ್ಮಕ ಭಾವನೆಗಳು ಹಾಗೂ ಸೋಲು... ಈ ಯೋಚನೆಗಳಿಂದ ಹೊರಬರದೆ ಗೆಲುವು ಸಿಗಲು ಸಾಧ್ಯವಿಲ್ಲ.
ನಕಾರಾತ್ಮಕ ಯೋಚನೆಯಿಂದ ಸಕಾರಾತ್ಮಕ ಪರಿಹಾರ ಸಿಕ್ಕ ಯಾವುದೇ ಉದಾಹರಣೆ ಖಂಡಿತಾ ಸಿಗುವುದಿಲ್ಲ. ನೆಗೆಟಿವ್ ಥಾಟ್ಸ್ ಯಾವಾಗಲೂ ವಿನಾಶದ ಹಾದಿ. ಅವು ನಮ್ಮ ಮನಸ್ಸನ್ನು ಕೆಡಿಸುವ ಜೊತೆಗೆ, ದೈನಂದಿನ ಬದುಕಿನ ಮಧ್ಯೆ ನುಸುಳಿ, ಕೆಲಸಗಳಿಗೆ ಅಡಚಣೆ ತಂದು ನಿಧಾನವಾಗಿ ಬದುಕಿನ ಬಗ್ಗೆ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ. ನಕಾರಾತ್ಮಕ ಯೋಚನೆಯಿಂದ ಸಿಗುವುದು ಬೇಜಾರು, ದುಃಖ, ನೋವು, ಸಂಕಟ, ಸೋಲು ಅಷ್ಟೇ... ಕೆಲವೊಮ್ಮೆ ನಕಾರಾತ್ಮಕ ಯೋಚನೆಗಳು ಅತಿಯಾದಾಗ ಜನರು ಅದರಿಂದ ಹೊರ ಬರುವ ಹಾದಿ ತಪ್ಪಿಸಿಕೊಳ್ಳುತ್ತಾರೆ. ಅಲ್ಲಿಯೇ ಸಿಕ್ಕು ಒದ್ದಾಡುತ್ತಾರೆ. ಬಿಟ್ಟೆನೆಂದರೂ ಬಿಡದ ಮಾಯೆಯಾಗಿ ಅದು ಕಾಡುತ್ತದೆ. ಆದರೆ, ಖಂಡಿತವಾಗಿ ಇವುಗಳಿಂದ ಹೊರಬರಲು ಹಾದಿ ಇದ್ದೇ ಇರುತ್ತದೆ. ಹುಡುಕಿಕೊಳ್ಳುವ ಮನಸ್ಸು ಹಾಗೂ ಪ್ರಯತ್ನ ನಮ್ಮದಾಗಿರಬೇಕಷ್ಟೇ. ಒಮ್ಮೆ ಅದರಿಂದ ಹೊರಬಂದರೆ ಮತ್ತೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಬದುಕಿನ ಸುಂದರವಾದ ಮುಖ ಹಾಗೂ ಗೆಲುವಿನ ಮೆಟ್ಟಿಲನ್ನು ನೀವು ಕಾಣುತ್ತೀರಿ. ಏಕೆಂದರೆ ಭೂಮಿ ಮೇಲಿನ ಅತಿ ಅದ್ಬುತ ಸಾಧನೆಗಳು ಹಾಗೂ ಉತ್ಪನ್ನಗಳೆಲ್ಲವೂ ಮನುಷ್ಯನ ಮನಸ್ಸು ಹಾಗೂ ಮೆದುಳಿನ ಕಾಮಗಾರಿಯೇ. ಅವುಗಳನ್ನು ಸರಿಯಾದ ಹಾದಿಯಲ್ಲಿ ತಿರುಗಿಸಿದರೆ ಯಶಸ್ಸು, ಸಂತೋಷ ಕಟ್ಟಿಟ್ಟ ಬುತ್ತಿ.
ಅರ್ಧ ಗ್ಲಾಸ್ ನೀರು ತುಂಬಿರುವುದನ್ನು ಅರ್ಧ ತುಂಬಿಲ್ಲ ಎಂದೂ, ಅರ್ಧ ತುಂಬಿದೆ ಎಂದೂ ಪರಿಗಣಿಸಬಹುದು. ಪಾಸಿಟಿವ್ ಆಗಿ ಯೋಚಿಸುವವರು ಅರ್ಧ ತುಂಬಿದೆ ಎಂದೇ ಸಂತೋಷ ಪಡುತ್ತಾರೆ. ಬದುಕಿನ ಪಾಸಿಟಿವ್ ಸಂಗತಿಗಳತ್ತ ಗಮನ ಹರಿಸೋಣ. ನಿಮ್ಮ ಬಳಿ ಏನಿಲ್ಲ ಎಂದು ಯೋಚಿಸುವುದಕ್ಕಿಂತ ಏನಿದೆ ಎಂದು ಯೋಚಿಸುವುದು ಉತ್ತಮ. ಹಾಗಿದ್ದರೆ ನೆಗೆಟಿವ್ ಥಾಟ್ಸ್‌ನಿಂದ ದೂರವಿರುವುದು ಹೇಗೆ?
undefined
1. ಸ್ಮೈಲ್
ಇಂದಿನ ಬ್ಯುಸಿ ಬದುಕಿನಲ್ಲಿ ತುಟಿ ತನಗೆ ನಗಲು ಬರುತ್ತದೆ ಎಂಬುದನ್ನೇ ಮರೆತುಬಿಟ್ಟಿದೆ. ಅದಕ್ಕೆ ನಾವೇ ಅದನ್ನು ನೆನಪು ಮಾಡಿಕೊಡಬೇಕು. ಸಾಧ್ಯವಾದಾಗಲೆಲ್ಲ ಕನ್ನಡಿ ಮುಂದೆ ನಿಂತು ಚೆನ್ನಾಗಿ ಸ್ಮೈಲ್ ಮಾಡಿ. ಹಾಗೂ ಪರಿಚಿತ ಮುಖಗಳನ್ನು ಕಂಡಾಗಲೆಲ್ಲ ಸ್ಮೈಲ್ ಮಾಡಬೇಕೆಂದು ನೆನಪು ಮಾಡಿಕೊಡುತ್ತಿರಿ. ಇದು ಖಂಡಿತಾ ನಿಮ್ಮ ಮೂಡನ್ನು ಚೆನ್ನಾಗಾಗಿಸಿ, ಒತ್ತಡ ಕಡಿಮೆ ಮಾಡುತ್ತದೆ.
2. ಧ್ಯಾನ ಅಥವಾ ಯೋಗ
ಸಾವಿರಾರು ಯೋಚನೆಗಳ ನಡುವೆ ನಾವು ಏಕಾಗ್ರತೆ ಸಾಧಿಸುವುದನ್ನು, ಮೈಂಡ್‌ಗೆ ಸ್ವಲ್ಪ ಬಿಡುವು ಕೊಡುವುದನ್ನೇ ಮರೆತುಬಿಟ್ಟಿರುತ್ತೇವೆ. ಇದರಿಂದ ಕೂಡಾ ಅದು ನೆಗೆಟಿವ್ ಯೋಚನೆಗಳ ಜಾಲದಲ್ಲಿ ಸಿಲುಕಿದಾಗ ಹೊರಬರಲು ತಿಣುಕಾಡುತ್ತದೆ. ಹಾಗಾಗಿ, ಪ್ರತಿದಿನ ಒಂದಿಷ್ಟು ಹೊತ್ತು ಧ್ಯಾನ ಮಾಡಿ ಎಲ್ಲ ಯೋಚನೆಗಳಿಗೆ ಪೂರ್ಣ ವಿರಾಮ ಹಾಕಿ. ಯೋಗ ಕೂಡಾ ನಿಮ್ಮ ಗಮನವನ್ನು ಉಸಿರಿನ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ. ಇವೆರಡೂ ವಿಧಾನದಲ್ಲಿ ಹೆಚ್ಚು ರಿಲ್ಯಾಕ್ಸ್ ಆಗುತ್ತೀರಿ.
3. ಪಾಸಿಟಿವ್ ಜನರ ಸಂಗ
ಮೊದಲೇ ನೆಗೆಟಿವ್ ಯೋಚನೆಗಳು ಜಾಸ್ತಿ. ನಿಮ್ಮ ಸಂಗದಲ್ಲಿರುವವರೂ ನೆಗೆಟಿವ್ ಆಗೇ ಯೋಚಿಸಿ, ನೆಗೆಟಿವ್ ಕಾಮೆಂಟ್ ಮಾಡುತ್ತಾ, ನಿಮ್ಮ ಯೋಚನೆಗಳು ಸರಿಯೆನ್ನುವಂಥ ಮಾತನಾಡುತ್ತಿದ್ದರೆ, ಅವರು ಖಂಡಿತಾ ನಿಮ್ಮ ಒಳಿತನ್ನು ಬಯಸುತ್ತಿಲ್ಲ ಎಂದರ್ಥ. ಬದಲಿಗೆ ಸದಾ ಪಾಸಿಟಿವ್ ಆಗಿ ಮಾತನಾಡುವವರೊಡನೆ ಸ್ನೇಹ ಮಾಡಿ. ನಿಮ್ಮನ್ನು ಎಲ್ಲದಕ್ಕೂ ಪ್ರೇರೇಪಿಸುತ್ತಾ ಉತ್ಸಾಹದ ಚಿಲುಮೆಯಾಗಿರುವವರ ಸಂಗದಲ್ಲಿರಿ. ಸಹವಾಸದಿಂದ ಸರಿಯಾದ ಯೋಚನೆಗಳು ಬರಲಾರಂಭಿಸುತ್ತವೆ.
4. ನೆಗೆಟಿವ್ ಯೋಚನೆಗಳಿಗೆಲ್ಲ ಅಲ್ಲಿಯೇ ಕೌಂಟರ್ ಕೊಡಿ
ನಕಾರಾತ್ಮಕ ಯೋಚನೆಗಳು ಬಂದಾಗೆಲ್ಲ ಅದಕ್ಕೆ ವಿರುದ್ಧವಾಗಿ ಪ್ರಯತ್ನಪೂರ್ವಕವಾಗಿ ಯೋಚಿಸಿ. ಉದಾಹರಣೆಗೆ, ಈ ಬಾರಿ ನನ್ನ ಸಂಬಳ ಹೆಚ್ಚಾಗಿಲ್ಲ. ಬಹುಷಃ ನನ್ನ ನಸೀಬೇ ಸರಿ ಇಲ್ಲ ಎಂದುಕೊಳ್ಳುವ ಬದಲು, ಈ ಬಾರಿ ಸಂಬಳ ಹೆಚ್ಚಲಿಲ್ಲ ನಿಜ. ಆದರೆ, ಹಾಗಂಥ ಅದಕ್ಕಾಗಿ ಕೊರಗುತ್ತಾ ಕೂರುವವನು ನಾನಲ್ಲ. ಚೆನ್ನಾಗಿ ಕೆಲಸ ಮಾಡಿ ನಾನೇನು ಅಂಥ ತೋರಿಸಲೇಬೇಕು, ಹೆಚ್ಚು ಸಂಬಳ ಪಡೆದೇ ಪಡೆಯುತ್ತೇನೆ- ಹೀಗೆ ನಿಮಗೆ ನೀವೇ ಸವಾಲು ಹಾಕಿಕೊಳ್ಳಿ. ಬದುಕಿನ ಚಕ್ರ ತಿರುಗುತ್ತಲೇ ಇರುತ್ತದೆ. ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬ ನಂಬಿಕೆ ಇರಲಿ.
5. ಸಂತ್ರಸ್ತರಾಗಿರಬೇಡಿ, ನಿಮ್ಮ ಜೀವನದ ಜವಾಬ್ದಾರಿ ನೀವೇ ತೆಗೆದುಕೊಳ್ಳಿ
ಯಾವಾಗಲೂ ನಿಮ್ಮ ಬದುಕಿನಲ್ಲಿ ಆಗುವುದಕ್ಕೆಲ್ಲ ನೀವೇ ಜವಾಬ್ದಾರರಾಗಿರುತ್ತೀರಿ. ಅದನ್ನು ಒಪ್ಪಿಕೊಂಡು ಹೇಗೆ ಬೇಕೋ ಹಾಗೆ ಬದಲಿಸಿಕೊಳ್ಳಿ. ಅದು ಬಿಟ್ಟು ಹಣೆಬರಹ, ದುರದೃಷ್ಟ, ನನಗೇ ಹೀಗಾಗುತ್ತದೆ ಎಂದೆಲ್ಲ ಹಳಿಯುತ್ತಾ ಕೂತರೆ ಬದುಕು ಮತ್ತಷ್ಟು ಮಗುಚಿಕೊಳ್ಳುತ್ತದೆ.
6. ಪಾಸಿಟಿವ್ ಕೋಟ್ಸ್ ಓದುತ್ತಿರಿ
ನಿಮ್ಮ ಮನೆಯ ಗೋಡೆಗಳು, ಫ್ರಿಡ್ಜ್, ಕಂಪ್ಯೂಟರ್ ಸ್ಕ್ರೀನ್, ಮೊಬೈಲ್ ವಾಲ್‌ಪೇಪರ್- ಹೀಗೆ ಎಲ್ಲ ಕಡೆ ಪಾಸಿಟಿವ್ ಕೋಟ್‌ಗಳಿಂದ ತುಂಬಿಕೊಳ್ಳಿ. ಇದು ನಿಮಗೆ ಪಾಸಿಟಿವ್ ಆಗಿ ಯೋಚಿಸಲು ರಿಮೈಂಡರ್‌ನಂತೆ ಕೆಲಸ ಮಾಡುತ್ತದೆ.