ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ದಿನಕ್ಕೊಮ್ಮೆ ನೀರು ಪೂರೈಕೆ ಯಾವಾಗ?

By Suvarna NewsFirst Published Dec 22, 2019, 7:31 AM IST
Highlights

ಬಲ್ಕ್ ನೀರು ತರುವ ಯೋಜನೆ ಪೂರ್ಣವಾಗೋದು ಯಾವಾಗ?| ಅಮ್ಮಿನಬಾವಿ ಬಳಿಕ ಫಿಲ್ಟರ್‌ ಪಾಯಿಂಟ್‌ ಕಾಮಗಾರಿಯೇ ಇನ್ನು ಮುಗಿದಿಲ್ಲ| ಇನ್ನೂ ಎರಡು ತಿಂಗಳಿಗೂ ಅಧಿಕ ಕಾಲ ಬೇಕಾಗುತ್ತೆ: ಅಧಿಕಾರಿ ವರ್ಗ|
 

ಶಿವಾನಂದ ಗೊಂಬಿ

ಹುಬ್ಬಳ್ಳಿ[ಡಿ.22]: ಮಹಾನಗರಕ್ಕೆ 3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುವುದು ಯಾವಾಗ? ಬಲ್ಕ್ ನೀರು ತರುವ ಯೋಜನೆ ಪೂರ್ಣವಾಗೋದು ಯಾವಾಗ?

ಈ ಪ್ರಶ್ನೆಗಳೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಡಿಸೆಂಬರ್‌ನೊಳಗೆ ಮಹಾನಗರಕ್ಕೆ ಪ್ರತಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುವುದು ಎಂದು ನೀಡಿರುವ ಭರವಸೆ. ಡಿಸೆಂಬರ್‌ ಮುಗಿಯಲು ಇನ್ನೇನು ಹತ್ತು ದಿನಗಳು ಮಾತ್ರ ಉಳಿದಿವೆ. ಆದರೆ 3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲು ಯಾವ ಸಿದ್ಧತೆ ಪಾಲಿಕೆಯಲ್ಲಿ ಆಗುತ್ತಿಲ್ಲ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 67 ವಾರ್ಡ್‌ಗಳಿವೆ (ಈಗ 82). ಮಹಾನಗರಕ್ಕೆ ನೀರು ಪೂರೈಕೆ ಮಾಡಬೇಕೆಂದರೆ ಬರೋಬ್ಬರಿ 205 ಎಂಎಲ್‌ಡಿ ನೀರು ಬೇಕು. ಸವದತ್ತಿ ರೇಣುಕಾ ಸಾಗರ (ಮಲಪ್ರಭಾ ಡ್ಯಾಂ)ದಿಂದ 165 ಎಂಎಲ್‌ಡಿ ನೀರು ಮಾತ್ರ ಬರುತ್ತದೆ. ಇನ್ನು 40 ಎಂಎಲ್‌ಡಿ ನೀರು ನೀರಸಾಗರದಿಂದ ಪಡೆಯಲಾಗುತ್ತಿದೆ. ಈ ವರ್ಷವೇನೋ ನೀರಸಾಗರ ಮಳೆಯಿಂದ ಭರ್ತಿಯಾಗಿದೆ. ಹೀಗಾಗಿ ನೀರಸಾಗರದಿಂದಲೂ ನೀರು ಪಡೆಯಲಾಗುತ್ತಿದೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನೀರಸಾಗರ ಸಂಪೂರ್ಣ ಬತ್ತಿತ್ತು. ಈ ಕಾರಣಕ್ಕಾಗಿ ಮಹಾನಗರದಲ್ಲಿ 10-12 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿತ್ತು. ಕುಡಿಯುವ ನೀರಿಗಾಗಿ ಪ್ರತಿನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಪ್ರತಿಭಟನೆ, ರಸ್ತೆತಡೆ, ಧರಣಿಗಳು ನಡೆಯುವುದು ಮಾಮೂಲಿ ಎಂಬಂತಾಗಿತ್ತು.

26 ಕೋಟಿ ಯೋಜನೆ:

ಹೀಗೆ ನೀರಿನ ಸಮಸ್ಯೆ ತೀವ್ರವಾಗಿದ್ದರಿಂದ . 26 ಕೋಟಿ ಯೋಜನೆಯನ್ನು ಅಧಿಕಾರಿಗಳು ಸಿದ್ಧಪಡಿಸಿದರು. ಕೊರತೆಯಾಗುವ 40 ಎಂಎಲ್‌ಡಿ ನೀರನ್ನು ಸವದತ್ತಿಯ ಮಲಪ್ರಭಾ ಡ್ಯಾಂನಿಂದಲೇ ಎತ್ತುವಳಿ ಮಾಡಿಕೊಳ್ಳುವ ಯೋಜನೆಯಿದು. ಇದಕ್ಕೆ ಬಲ್‌್ಕ ನೀರು ಎತ್ತುವಳಿ ಯೋಜನೆಯೆಂದು ಕರೆಯಲಾಯಿತು. ಇದಕ್ಕಾಗಿ ಸವದತ್ತಿಯಲ್ಲಿ ಇನ್ನೊಂದು ಪಂಪ್‌ಹೌಸ್‌ ಹಾಗೂ ಅಮ್ಮಿನಬಾವಿಯಲ್ಲಿ ಫಿಲ್ಟರ್‌ ಘಟಕ ಹಾಕಿಕೊಂಡು ಈಗ ತರಲಾಗುತ್ತಿರುವ 165 ಎಂಎಲ್‌ಡಿ ನೀರಿನ ಜೊತೆಗೆ 40 ಎಂಎಲ್‌ಡಿ ನೀರನ್ನು ಹೆಚ್ಚುವರಿಯಾಗಿ ಎತ್ತುವಳಿ ಮಾಡಿ ಸರಬರಾಜು ಮಾಡುವ ಯೋಜನೆಯಿದು.

ಪಾಲಿಕೆಯಿಂದಲೇ ದುಡ್ಡು ಹಾಕಿಕೊಂಡು ಮಾಡುತ್ತೇವೆ ಎಂದರೂ ಸಿದ್ದರಾಮಯ್ಯ ಸರ್ಕಾರ ಮಾತ್ರ ಇದಕ್ಕೆ ಹಸಿರು ನಿಶಾನೆಯನ್ನೇ ತೋರಿಸಿರಲಿಲ್ಲ. ಕೊನೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಅವರ ಪ್ರಯತ್ನದಿಂದ ಯೋಜನೆಗೆ ಹಸಿರು ನಿಶಾನೆಯೂ ಸಿಕ್ಕಿತು. 2019ರ ಜನವರಿಯಲ್ಲಿ ಯೋಜನೆಗೆ ದೇಶಪಾಂಡೆ ಅವರೇ ಚಾಲನೆಯನ್ನೂ ನೀಡಿದ್ದರು. 9 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಇದರ ಆಧಾರದ ಮೇಲೆ ಇಲ್ಲಿನ ಜನಪ್ರತಿನಿಧಿಗಳು ಡಿಸೆಂಬರ್‌ ಪ್ರಾರಂಭದಿಂದಲೇ ಮಹಾನಗರದಲ್ಲಿ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುವುದು. ಬಳಿಕ 24/7 ಯೋಜನೆಯನ್ನೂ ಎಲ್ಲ ವಾರ್ಡ್‌ಗಳಿಗೆ ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.

ಕಾಮಗಾರಿ ಪೂರ್ಣಗೊಂಡಿಲ್ಲ:

ಯೋಜನೆಯಂತೆ ಸವದತ್ತಿಯಲ್ಲಿ ಪಂಪ್‌ ಅಳವಡಿಕೆ ಕಾರ್ಯ ಶೇ. 80ರಷ್ಟು ಆಗಿದೆಯಂತೆ. ಇನ್ನು ಅಮ್ಮಿನಬಾವಿಯಲ್ಲಿ ಫಿಲ್ಟರ್‌ ಪಾಯಿಂಟ್‌ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ಇದರೊಂದಿಗೆ ಕೆಲವೊಂದಿಷ್ಟುಕೆಲಸಗಳು ಬಾಕಿಯುಳಿದಿವೆ. ಹೀಗಾಗಿ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಡಿಸೆಂಬರ್‌ ಮುಗಿದರೂ 3ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗದು ಎಂಬುದು ಅಧಿಕಾರಿಗಳ ಮಾತು.

ಈ ಎಲ್ಲ ಕೆಲಸಗಳು ಮುಗಿಯಬೇಕೆಂದರೆ ಕನಿಷ್ಠವೆಂದರೂ ಇನ್ನು ಒಂದು ತಿಂಗಳಾದರೂ ಬೇಕಾಗುತ್ತೆ. ಕಾಮಗಾರಿಯೆಲ್ಲ ಮುಗಿದ ಬಳಿಕ ಸಣ್ಣ ಪುಟ್ಟಕೆಲಸ ಮುಗಿಸಿಕೊಂಡು ಪ್ರಾಯೋಗಿಕವಾಗಿ ಮಾಡಿದ ನಂತರ ಅಂದರೆ ಫೆಬ್ರವರಿ ಅಥವಾ ಮಾಚ್‌ರ್‍ನೊಳಗೆ 3 ಅಥವಾ 4 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಬಹುದು. ಅಲ್ಲಿವರೆಗೂ ಸಾಧ್ಯವಿಲ್ಲ ಎಂಬ ಮಾತು ಅಧಿಕಾರಿ ವರ್ಗದ್ದು.

ಒಟ್ಟಿನಲ್ಲಿ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ನೀರು ಕಾಣಲು ಇನ್ನೂ ಕನಿಷ್ಠವೆಂದರೂ 3 ತಿಂಗಳು ಕಾಯಲೇಬೇಕಾದ ಅನಿವಾರ್ಯತೆ ಇರುವುದಂತೂ ಸತ್ಯ!

ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ವಿಪರೀತ ಮಳೆ ಆಗಿದ್ದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಇದೀಗ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ 3 ದಿನಕ್ಕೊಮ್ಮೆ ನೀರು ಪೂರೈಕೆ ಪ್ರಾರಂಭಿಸಲಾಗುವುದು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದ್ದಾರೆ.

ಮಹಾನಗರದಲ್ಲಿ ಎಲ್ಲ ಕಾಮಗಾರಿಗಳು ವಿಳಂಬವೇ. ರಸ್ತೆ ಅಭಿವೃದ್ಧಿಯಾಗಲಿ, ಚರಂಡಿ ನಿರ್ಮಾಣವಾಗಲಿ ಎಲ್ಲವೂ ವಿಳಂಬವೇ ಆಗುತ್ತದೆ. ಇದೀಗ ಕುಡಿಯುವ ನೀರು ಯೋಜನೆಯ ಕಾಮಗಾರಿಯೂ ವಿಳಂಬವಾಗುತ್ತಿದೆ. ಮಹಾನಗರದ ಎಲ್ಲ ಯೋಜನೆಗಳು ಸದಾ ವಿಳಂಬವೇ  ಎಂದು ನಾಗರಿಕ ಮಂಜುನಾಥ ಪಾಟೀಲ ತಿಳಿಸಿದ್ದಾರೆ. 

click me!