ಮತದಾರರಿಗೆ ಹಣ, ಗಿಫ್ಟ್ ಕೊಡುವವರೇ ರಣಹೇಡಿಗಳು: ಡಿಕೆಶಿ ವಿರುದ್ಧ ಗುಡುಗಿದ ಎಚ್‌ಡಿಕೆ

By Kannadaprabha NewsFirst Published Apr 27, 2024, 10:52 AM IST
Highlights

ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ ಎಂದು ಗುಡುಗಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 

ರಾಮನಗರ(ಏ.27):  ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು ಎಂದು ತಮ್ಮನ್ನು ರಣಹೇಡಿ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಬಿಡದಿ ಸಮೀಪದ ಕೇತಿಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ ಎಂದು ಗುಡುಗಿದರು. ರಾತ್ರೋರಾತ್ರಿ ಹೋಗಿ ಕಳ್ಳಕಳ್ಳವಾಗಿ ಜನರಿಗೆ ಕ್ಯೂ ಆರ್ ಕೋಡ್ ಇರುವ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಸಿಎಂ ಆಗುವ ಆಸೆ ಮತ್ತೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್..!

ಆಯೋಗಕ್ಕೆ ದೂರು ಕೊಟ್ಟರೆ ಉಪಯೋಗ ಇಲ್ಲ:

ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು ಕೊಟ್ಟರೂ ಏನು ಪ್ರಯೋಜನ ಇಲ್ಲ. ಹಿಂದೆ ಹಲವು ಬಾರಿ ದೂರು ಕೊಟ್ಟರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ:

ನಾನು ಚುನಾವಣಾ ಆಯೋಗಕ್ಕೆ ಕೇಳುತ್ತೇನೆ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ, ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ. ಅವರವರ ಶಕ್ತಿ ಅನುಸಾರ ಹಣ ಹಂಚಿ ವೋಟು ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಬಂದರೆ ಕಾಂಗ್ರೆಸ್‌ನವರಿಗೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಅವರು ವ್ಯಂಗ್ಯವಾಡಿದರು.

ಇದನ್ನು ಚುನಾವಣೆ ಎಂದು ಕರೆಯಬೇಕಾ? ಇದನ್ನು ಚುನಾವಣಾ ಅಂತ ಪರಿಗಣಿಸಲು ಸಾಧ್ಯವಾ? ಪ್ರಜಾಪ್ರಭುತ್ವದ ಹಬ್ಬ ಎಂದು ಇದನ್ನು ಕರೆಯಲು ಆಗುತ್ತದೆಯೇ? ದುಡ್ಡು ಇರುವವರಿಗೆ ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು. ಚುನಾವಣಾ ಆಯೋಗ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿ ಅವರು ವಾಗ್ದಾಳಿ ನಡೆಸಿದರು.
ಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ ಈ ಇಬ್ಬರು ಮಹಾನುಭಾವರು.. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಡಿಕೆಶಿ ಸಹೋದರರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹರಿಹಾಯ್ದರು.

ಲೋಕಸಭಾ ಚುನಾವಣೆ 2024: ಕುಟುಂಬದವರಿಗಾಗಿ ಗೌಡರಿಂದ ನಾಟಕದ ಕಣ್ಣೀರು, ಡಿ.ಕೆ.ಶಿವಕುಮಾರ್

ಜ್ಯೋತಿಷಿ ಅಣತಿಯಂತೆ ಹಣ, ಮಲೆಮಹದೇಶ್ವರ ದೇವರ ಲಾಡು!:

ಜೋತಿಷಿಯೊಬ್ಬರು ಹೇಳಿದಂತೆ ಇವರು ಕನಕಪುರದಲ್ಲಿ ಹಣ, ಗಿಫ್ಟ್ ಕೂಪನ್ ಹಂಚಿದ್ದಾರೆ. ಅವರು ಹೇಳಿದರು ಎಂದು 505 ರೂ, ಹಣ, ಮಲೆಮಹದೇಶ್ವರ ದೇವಾಲಯದ ಲಾಡು ಮತ್ತು ಈ ಗ್ಯಾರಂಟಿ ಕಾರ್ಡ್ ಗಳನ್ನ ರಾತ್ರಿಯೆಲ್ಲಾ ಹಂಚಿದ್ದಾರೆ. ಕಾರ್ಡು ಹಂಚಿಕೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ. ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆರೋಪಿಸಿದರು.
ಅಕ್ರಮ ನಡೆಸಿ ಚುನಾವಣೆ ಗೆಲ್ಲುತ್ತೇವೆ ಎಂದು ಇವರು ಹೊರಟಿದ್ದಾರೆ. ಜನರು ಇವರ ಕುತಂತ್ರಕ್ಕೆ ಬಲಿಯಾಗದೆ ನಿರ್ಭೀತಿಯಿಂದ ಮಾಡಿದ್ದಾರೆ. ಇವರ ಆಟ ಎಲ್ಲಾ ಕಡೆ ನಡೆದಿಲ್ಲ ಎಂದರು.

ಸಖೀ ಮತಗಟ್ಟೆಯಲ್ಲಿ ಎಚ್ಡಿ ಕೆ ಮತದಾನ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಜತೆ ಆಗಮಿಸಿ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆ (ಪಿಂಕ್ ಬೂತ್) ಯಲ್ಲಿ ಮತದಾನ ಮಾಡಿದ್ದರು. ತಮ್ಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಅವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.

click me!