Udupi: ಹೂಳು ತುಂಬಿ ಹಾಳಾಯ್ತು ಸರ್ವ ಋತು ಮೀನುಗಾರಿಕಾ ಬಂದರು

By Govindaraj SFirst Published Nov 2, 2022, 5:57 PM IST
Highlights

ಜಿಲ್ಲೆಯಲ್ಲಿ ಸದ್ಯ ಸಮುದ್ರಕ್ಕಿಂತ ಬಂದರಿನ ಹೂಳೇ ಅಪಾಯ ಎಂಬ ಸ್ಥಿತಿ ಎದುರಾಗಿದೆ. ಅಮಾಯಕ ಮೀನುಗಾರರು ಅಡ್ರೆಸ್ ಇಲ್ಲದೆ ಸಾಯುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸತ್ತವರ ಸಂಖ್ಯೆ 54! 

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ (ನ.02): ಜಿಲ್ಲೆಯಲ್ಲಿ ಸದ್ಯ ಸಮುದ್ರಕ್ಕಿಂತ ಬಂದರಿನ ಹೂಳೇ ಅಪಾಯ ಎಂಬ ಸ್ಥಿತಿ ಎದುರಾಗಿದೆ. ಅಮಾಯಕ ಮೀನುಗಾರರು ಅಡ್ರೆಸ್ ಇಲ್ಲದೆ ಸಾಯುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸತ್ತವರ ಸಂಖ್ಯೆ 54! ತಕ್ಷಣ ಹೊಳೆತ್ತಲು ಇನ್ನೆಷ್ಟು ಜೀವ ಹೋಗಬೇಕು ಎಂದು ಮೀನುಗಾರರು ಕೇಳುತ್ತಿದ್ದಾರೆ. ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರು ಏಷ್ಯಾದಲ್ಲಿ ಅತಿ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಲ್ಲಿ ದುಡಿಯುವ ಮೀನುಗಾರರಿಗೆ ಕಡಲಿಗಿಂತಲೂ ಬಂದರೇ ಅಪಾಯಕಾರಿ ಎನಿಸಿದೆ. 

ಆಳ ಸಮುದ್ರದಲ್ಲಿ ನಡೆಯುವ ಅವಘಡಗಳಿಗಿಂತಲೂ ಹೆಚ್ಚು ಬಂದರಿನಲ್ಲೇ ಮೀನುಗಾರರು ಬಿದ್ದು ಸಾಯುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ 2017ರಿಂದ 2022ರ ವರೆಗೆ ಮಲ್ಪೆ ಬಂದರಿನಲ್ಲಿ ಬರೋಬ್ಬರಿ 54 ಮೀನುಗಾರರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು ಬಂದರಿನಲ್ಲಿ ಜಮೆಯಾಗಿರುವ ಹೂಳಿನಲ್ಲಿ ಸಿಲುಕಿ ಸತ್ತಿದ್ದಾರೆ! ಕಳೆದ ಎಂಟು ವರ್ಷಗಳಿಂದ ಧಕ್ಕೆಯಲ್ಲಿ ಹೂಳು ತೆಗೆದಿಲ್ಲ. ಇದರ ಪರಿಣಾಮ ಮಲ್ಪೆ ಬಂದರು ಮೀನುಗಾರರ ಪಾಲಿಗೆ ಮೃತ್ಯು ಕೋಪವಾಗಿ ಮಾರ್ಪಟ್ಟಿದೆ. ದಕ್ಕೆಯಲ್ಲಿ ಒಂದು ಬೋಟಿನಿಂದ ಮತ್ತೊಂದು ಬೋಟಿಗೆ ದಾಟುವಾಗ, ಮೀನು ಇಳಿಸುವಾಗ ಆಯತಪ್ಪಿ ಬಿದ್ದರೆ ಬದುಕಿ ಮೇಲೆ ಬರುವ ಸಾಧ್ಯತೆಯೇ ಇಲ್ಲ. 

ಮೀನು ಉತ್ಪಾದನೆ ಹಾಗೂ ರಫ್ತಿನಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡುವ ಉದ್ದೇಶ: ಸಚಿವ ಅಂಗಾರ

ಬಂದರಿನಲ್ಲಿ ದುಡಿಯಲು ನಾನಾ ರಾಜ್ಯಗಳ ಕಾರ್ಮಿಕರು ಬರುತ್ತಾರೆ. ಅದರಲ್ಲೂ ಜಾರ್ಖಂಡ್, ತಮಿಳುನಾಡು , ಆಂಧ್ರಪ್ರದೇಶ, ಕೇರಳದ ಬಡ ಕಾರ್ಮಿಕರೇ ಹೆಚ್ಚು. ಯಾವುದೋ ಊರಿನಿಂದ ಬಂದವರು ಇಲ್ಲಿ ಸತ್ತರೆ ಹೇಳೋರಿಲ್ಲ ಕೇಳೋರಿಲ್ಲ. ಕೆಲವೊಮ್ಮೆ ಹೂತವರ ಶವ ಮೇಲಕ್ಕೆ ಬರಲು ವಾರಗಳು ತಗಲುತ್ತದೆ. ಇನ್ನು ಬಂದರಿನೊಳಗೆ ಬೋಟುಗಳು ಬರಲು ಹೂಳಿನಿಂದಾಗಿ ಕಷ್ಟವಾಗುತ್ತಿದೆ. ಸ್ಪೀಡ್ ಬೋಟ್‌ಗಳ ರೆಕ್ಕೆಗಳು ಕೆಸರಿನಲ್ಲಿ ಸಿಲುಕಿ ಹಾನಿಯಾಗುತ್ತಿದೆ. ಬೋಟ್‌ನ ತಳಭಾಗ, ನೀರಿನ ಮೇಲ್ಮೈಯಿಂದ 3 ಮೀಟರ್ ಆಳಕ್ಕೆ ಇಳಿಯುತ್ತೆ. ಆದರೆ ಉಳಿದ ಸಮಸ್ಯೆಯಿಂದಾಗಿ ಬೋಟುಗಳ ಸಂಚಾರ ಸಾಧ್ಯವಾಗುತ್ತಿಲ್ಲ. 

ವಿಕಿಪೀಡಿಯಾಕ್ಕೆ ಉಡುಪಿ ಕಾಲೇಜು ವಿದ್ಯಾರ್ಥಿನಿಯರ ಕನ್ನಡ ಡಿಂಡಿಮ..!

ಮಳೆಗಾಲದಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಿಂದ ಬಾರಿ ಪ್ರಮಾಣದ ಕೆಸರು ನೀರು ಸಮುದ್ರ ಸೇರುತ್ತದೆ. ಹೀಗೆ ಬಂದ ನೀರು ಬಂದರು ಪ್ರದೇಶದಲ್ಲಿ ಜಮೆ ಆಗುತ್ತಿದೆ. ಶೀಘ್ರ ಹೂಳು ತೆರವು ಮಾಡಿ ಮೀನುಗಾರರ ಜೀವ ಕಾಪಾಡಬೇಕೆಂದು ಸ್ಥಳೀಯರು ಬೇಡಿಕೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಅನೇಕರನ್ನು ಬದುಕಿಸಿದ್ದಾರೆ, ಅನೇಕ ಶವಗಳನ್ನು ಮೇಲಕ್ಕೆತ್ತಿದ್ದಾರೆ. ಹೂಳು ತೆಗೆಯದೆ ಹೋದರೆ ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಸರಕಾರ ಎಚ್ಚೆತ್ತು ಮಲ್ಪೆ ಬಂದರು ಸೇರಿದಂತೆ ಕರಾವಳಿಯ ಮೀನುಗಾರಿಕಾ ಬಂದರುಗಳಲ್ಲಿ ಹೂಳೆತ್ತುವ ಕೆಲಸ ಮಾಡಬೇಕು.

click me!