ಧಾರವಾಡ: ಕಾಮಣ್ಣನ ಹಬ್ಬದ ಬಣ್ಣದಾಟಕ್ಕೂ ಕೊರೋನಾ ಕಾಟ..!

By Kannadaprabha News  |  First Published Mar 26, 2021, 10:45 AM IST

ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಹೋಳಿ ಹಬ್ಬಕ್ಕೆ ಈ ವರ್ಷವೂ ಕಡಿವಾಣ| 2019ರಲ್ಲಿ ಕಟ್ಟಡ ಕುಸಿತ, 2020, 2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಇಲ್ಲ ಹೋಳಿ ಸಂಭ್ರಮ| ಗಡಿಗೆ ಕಟ್ಟುವುದು, ಗುಂಪುಗೂಡುವುದಕ್ಕೆ ನಿಷೇಧ, ಸರಳವಾಗಿ ಆಚರಿಸಲು ಸೂಚನೆ| 


ಬಸವರಾಜ ಹಿರೇಮಠ

ಧಾರವಾಡ(ಮಾ.26): ಕಳೆದ ಬಾರಿಯ ಕಾಮಣ್ಣನ (ಹೋಳಿ) ಹಬ್ಬದಿಂದಲೇ ಶುರುವಾಗಿದ್ದ ಕೊರೋನಾ ವೈರಸ್‌ನ ಕರಿಛಾಯೆ ಇನ್ನೂ ಸರಿದಿಲ್ಲ. ಕೋವಿಡ್‌-19 2ನೇ ಅಲೆಯ ಭೀತಿಯಿಂದಾಗಿ ಈ ಬಾರಿಯೂ ಹೋಳಿ ಹಬ್ಬಕ್ಕೆ ಜಿಲ್ಲಾಡಳಿತವು ನಿಯಂತ್ರಣ ಹೇರಿದ್ದು ಈ ಬಾರಿಯೂ ಹೋಳಿ ಸಂಭ್ರಮ ಅಷ್ಟಕಷ್ಟೇ.

Latest Videos

undefined

2019ರ ಮಾ. 19ರಂದು ಕುಮಾರೇಶ್ವರ ನಗರದಲ್ಲಿ ಬಹುಮಹಡಿ ಕುಸಿದು ದೊಡ್ಡ ದುರ್ಘಟನೆ ನಡೆದಿತ್ತು. ಏಳು ದಿನಗಳ ಕಾರ್ಯಾಚರಣೆಯಲ್ಲಿಯೇ ಹೋಳಿ ಹಬ್ಬವಿತ್ತು. ಈ ಘಟನೆಯಲ್ಲಿ ಅಪಾರ ಸಾವು-ನೋವಿನ ಹಿನ್ನೆಲೆಯಲ್ಲಿ ಧಾರವಾಡದ ಜನತೆ ಮಾನವೀಯ ದೃಷ್ಟಿಯಿಂದ ಹೋಳಿ ಹಬ್ಬವನ್ನೇ ಆಚರಿಸಲಿಲ್ಲ. ಇನ್ನು, 2020ರ ಮಾಚ್‌ರ್‍ ತಿಂಗಳಲ್ಲಿಯೇ ಕೊರೋನಾ ವೈರಸ್‌ ಕಾರಣದಿಂದ ಹೋಳಿಗೆ ನಿಯಂತ್ರಣ ಹಾಕಲಾಗಿತ್ತು. ಇದೀಗ 2021ರಲ್ಲಿ ಹೋಳಿ ಹಬ್ಬದ ಸಮಯಕ್ಕೆ ಕೊರೋನಾ 2ನೇ ಅಲೆಯ ಭೀತಿ ಎದುರಾಗಿದ್ದು ಹೋಳಿ ಹಬ್ಬದ ರಂಗು ಪಡೆಯದೇ ಸಪ್ಪೆಯಾಗಲಿದೆ.

ಧಾರವಾಡ ಸೇರಿದಂತೆ ರಾ​ಜ್ಯಾದ್ಯಂತ ಕೋವಿಡ್‌ ಪಾಸಿಟಿವ್‌ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಹೋಳಿ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ರೀತಿ ಗುಂಪು ಕಟ್ಟಿಗಡಿಗೆ ಕಟ್ಟಿಹಬ್ಬದ ಆಚರಣೆ ಬೇಡ. ಕೊರೋನಾ ವೈರಸ್‌ ಹಬ್ಬದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಹೋಳಿ ಹಬ್ಬದಲ್ಲಿ ತುಸು ಎಚ್ಚರ ತಪ್ಪಿದರೂ ಕೊರೋನಾ ಸ್ಫೋಟವಾಗುವ ಭಯದಿಂದ ನಿಯಂತ್ರಣ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

2 ವಾರದಲ್ಲಿ ಮಹಾ ಗಂಡಾಂತರ: 11 ದಿನದಲ್ಲಿ 11 ಸಾವಿರ ಮಂದಿ ಬಲಿ ಸಾಧ್ಯತೆ!

ಈಗಾಗಲೇ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಗಡಿಗೆ ಒಡೆಯುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಜನರನ್ನು ಸೇರಿ ಗಡಿಗೆ ಒಡೆಯುವ, ಬಣ್ಣವಾಡುವುದನ್ನು ನಿಷೇಧಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮನೆಗಳಲ್ಲಿ ಮಾತ್ರ ಹೋಳಿ ಹಬ್ಬ ಆಚರಿಸುವುದು ಸೂಕ್ತ ಎಂದು ಜನರು ಸಹ ತೀರ್ಮಾನಿಸಿದ್ದಾರೆ. ಪ್ರತಿ ವರ್ಷ ಜಯನಗರ, ಟಿಕಾರೆ ರಸ್ತೆ, ಸಂಗಮ ವೃತ್ತ ಸೇರಿದಂತೆ ವಿವಿಧೆಡೆ ಬಣ್ಣದ ಗಡಿಗೆ ಕಟ್ಟಿಯುವಕರ ಗುಂಪುಗಳು ಅದನ್ನು ಒಡೆಯುವ ಸಾಹಸ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಣ್ಣ ಹಚ್ಚುವುದು, ನೀರು ಉಗ್ಗುವುದು ಹೀಗೆ ಅತ್ಯಂತ ಸಂಭ್ರಮಗಳು ನಡೆಯುತ್ತವೆ. ಜೊತೆಗೆ ಪ್ರತಿ ಓಣಿ-ಓಣಿಯಲ್ಲೂ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಕಾಮಣ್ಣನ ದಹನ ಕಾರ್ಯ ಮಾಡಲಾಗುತ್ತದೆ. ಆದರೆ ಈ ಬಾರಿ ಮತ್ತೆ ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಬ್ಬದಾಚರಣೆಗೆ ಮಾತ್ರ ಅವಕಾಶ ಇರುವುದು ಮಕ್ಕಳಿಗೆ ಹಾಗೂ ಯುವಕ-ಯುವತಿಯರಿಗೆ ತುಸು ಬೇಸರ ಮೂಡಿಸಿದೆ.

ಧಾರವಾಡದ ಸುಪ್ರಸಿದ್ಧ ಭೂಸಪೇಟೆ ಕಾಮಣ್ಣ..

ಹಲವಾರು ವರ್ಷಗಳ ಹಿಂದೆ ಯಾವನಾದರೂ ಆಜಾನುಬಾಹು ಸ್ಫುರದ್ರೂಪಿ ವ್ಯಕ್ತಿ ಮುಖದ ಮೇಲೆ ಹುರಿಕಟ್ಟಿಮೀಸೆಹೊಂದಿ, ತಲೆಗೆ ಜರಿ ರುಮಾಲು ಸುತ್ತಿ, ಮೈಮೇಲೆ ರೇಷ್ಮೆ ಜುಬ್ಬ ಧರಿಸಿ, ಜರಿ ಧೋತರ ಉಟ್ಟು, ಕಾಲಲ್ಲಿ ಜಿರ್‌ ಜಿರ್‌ ಅನ್ನುವ ಕೆರವು ತೊಟ್ಟವನನ್ನು ಕಂಡರೆ ಜನರು ಭೂಸಪ್ಯಾಟಿ ಕಾಮಣ್ಣ ಆಗ್ಯಾನ, ಮಗ’ ಅನ್ನುವ ರೂಢಿಯಿತ್ತು. ಅಷ್ಟುಸುಪ್ರಸಿದ್ಧ ಧಾರವಾಡದ ಭೂಸಪೇಟೆ ಕಾಮಣ್ಣ. ಮಂಗಳವಾರ ಪೇಟೆಯಲ್ಲಿಯ ಭೂಸಪೇಟೆಯ ಅನೇಕ ಹಿರಿಯರು ಸುಮಾರು 159 ವರ್ಷಗಳ ಹಿಂದೆ ಹೋಳಿ ಹಬ್ಬವನ್ನು ಆಚರಿಸಬೇಕೆಂಬ ಉದ್ದೇಶದಿಂದ ಸುಂದರವಾದ ಕಾಮ, ರತಿಯರ ಕಟ್ಟಿಗೆಯ ಮೂರ್ತಿಗಳನ್ನು ಮಾಡಿದ್ದು ಇದೀಗ ಸಂಭ್ರಮದಿಂದ ಪೂಜಿಸಲಾಗುತ್ತಿದೆ. ವಿಶೇಷ ಎಂದರೆ, ಹೋಳಿ ಹುಣ್ಣಿಮೆಯಂದು ಈ ಕಾಮಣ್ಣನ ದಹನವಿಲ್ಲ. ಸಾಂಕೇತಿಕವಾಗಿ ಬೇರೆ ಕಾಮಣ್ಣನ ದಹನ ಮಾಡಲಾಗುವುದು. ಹೀಗಾಗಿ 150 ವರ್ಷಗಳಿಂದ ಅದೇ ಕಾಮಣ್ಣ ಸುಸ್ಥಿತಿಯಲ್ಲಿದ್ದಾನೆ. ಅಲಂಕೃತ ಮೂರ್ತಿಯನ್ನು ನೋಡಲು ಹೋಳಿಹಬ್ಬದಲ್ಲಿ ಇಡೀ ಊರಿನ ಜನರೇ ಸೇರು​ತ್ತಾ​ರೆ. ಮಾ. 26ರ ಸಂಜೆಯಿಂದ ಮಾ. 28ರ ರಾತ್ರಿ 12ರ ವರೆಗೆ ರತಿ-ಕಾಮರ ಮೂರ್ತಿಗಳನ್ನು ನೋಡಲು ಅವಕಾಶವಿದೆ ಎಂದು ಸಮಿತಿಯ ಅಧ್ಯಕ್ಷರಾಗಿರುವ ಈರಣ್ಣ ಆಕಳವಾಡಿ ಮಾಹಿತಿ ನೀಡುತ್ತಾರೆ.
ಅದೇ ರೀತಿ ಮುಳಮುತ್ತಲ ಕಾಮಣ್ಣ ದೇವರು ಸಹ ಸುತ್ತಲೂ ಪ್ರಸಿದ್ಧ. ಸುತ್ತಲೂ ಹಳ್ಳಿಯಿಂದ ಜನರು ಬಂದು ಈ ಕಾಮಣ್ಣನಿಗೆ ಪೂಜೆ ಸಲ್ಲಿಸುತ್ತಾರೆ. ಈ ಬಾರಿ ಶನಿವಾರ ಕಾಮಣ್ಣನಿಗೆ ಪೂಜೆ ನಡೆದು ಭಾನುವಾರ ದಹನ ನಡೆಯಲಿದೆ. ಆದರೆ, ಧಾರವಾಡ ಹಾಗೂ ಸುತ್ತಮುತ್ತಲೂ ಭಾನುವಾರ ಹೋಳಿ ಹುಣ್ಣಿಮೆ ಆಚರಿಸಿ ಸೋಮವಾರ ಬಣ್ಣದ ದಿನವಾಗಿ ಆಚರಿಸಲಿದ್ದಾರೆ.

ಈ ಬಾರಿ ಸಂಭ್ರಮದಿಂದ ಹೋಳಿ ಆಚರಿಸಲು ತೀರ್ಮಾನಿಸಿದ್ದೆವು. ಆದರೆ, ಕೊರೋನಾ ಮತ್ತೆ ಅಡ್ಡಿ ಮಾಡುತ್ತಿದೆ. ಆದರೂ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗುತ್ತಿದ್ದು ಯಾವುದೇ ಕಾರಣ ಕೊರೋನಾ ವೈರಸ್‌ ಹಬ್ಬದಂತೆ ಆಚರಿಸುವುದು ಸವಾಲಿನ ಕೆಲಸ. ಮನೆಯಲ್ಲಿಯೇ ತಮ್ಮವರೊಂದಿಗೆ ಹೋಳಿ ಸಂಭ್ರಮ ಮಾಡುವುದು ಸೂಕ್ತ. ರಾಸಾಯನಿಕ ಬಣ್ಣಗಳನ್ನು ಕೈ ಬಿಟ್ಟು ನೈಸರ್ಗಿಕ ಬಣ್ಣಗಳನ್ನು ಬಳಸಿ ಎಂದು ಧಾರವಾಡ ನಿವಾಸಿ ಉದಯ ಮ. ಯಂಡಿಗೇರಿ ತಿಳಿಸಿದ್ದಾರೆ.
 

click me!