ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಆಪ್ತ, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು.
ಮೈಸೂರು : ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಆಪ್ತ, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಭೇಟಿ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದರು.
ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮಂಗಳವಾರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ನೇರವಾಗಿ ಟಿ.ಕೆ. ಲೇಔಟ್‌ನಲ್ಲಿರುವ ಸಿ. ಬಸವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಒಂದು ಗಂಟೆ ಕಾಲ ಚರ್ಚಿಸಿದರು. ಈ ವೇಳೆ ಶಾಸಕ ಡಾ. ಯತೀಂದ್ರ ಮತ್ತು ಇತರೆ ಮುಖಂಡರು ಸಾಥ್ ನೀಡಿದರು. ಭೇಟಿ ಬಳಿಕ ಹೊರ ಬಂದ ಸಿದ್ದರಾಮಯ್ಯಅವರು ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು.
undefined
ಇಂದು ತೀರ್ಮಾನ: ಈ ವೇಳೆ ಸಿ. ಬಸವೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ವರ್ಷಗಳಿಂದ ನಾವಿಬ್ಬರೂ ಭೇಟಿ ಮಾಡಿರಲಿಲ್ಲ. ಕಾರಣಾಂತರಗಳಿಂದ ನಾವಿಬ್ಬರೂ ದೂರವಾಗಿದ್ದೇವು. ಕೊನೆಯ ಚುನಾವಣೆ ಆಗಿರುವ ಕಾರಣ ನನ್ನೊಂದಿಗೆ ಬರುವಂತೆ ಮನವಿ ಮಾಡಿದ್ದಾರೆ ಎಂದರು.
ಡಾ. ಕೂಡ ಮುಂದೆ ನಿಮ್ಮ ಮನಸ್ಸಿಗೆ ನೋವಾಗದಂತೆ ಮತ್ತು ತಮ್ಮ ಮಾತಿಗೆ ಗೌರವವನ್ನು ಕೊಟ್ಟು ನಡೆಸಿಕೊಳ್ಳುವ ಮಾತನ್ನು ಹೇಳಿದರು. ಆದರೆ, ನಾನು ನನ್ನ ನಿರ್ಧಾರವನ್ನು ಬುಧವಾರ ಬೆಳಗ್ಗೆ ಹೇಳುತ್ತೇನೆಂದು ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಜೆಡಿಎಸ್ ಬಿಟ್ಟಮೇಲೆ ರಾಜಕಾರಣದಿಂದ ದೂರ ಉಳಿದಿದ್ದೆ. ಶ್ರೀನಿವಾಸಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಅವರ ಮನೆಗೆ ಮಾತುಕತೆ ನಡೆಸಲು ತೆರಳಿದಾಗ ತಮ್ಮ ಜತೆಗಿರುವಂತೆ ಹೇಳಿದರು. ಶ್ರೀನಿವಾಸಪ್ರಸಾದ್ ಮತ್ತು ನಾನು ರಾಜಕೀಯ ಹೊರತುಪಡಿಸಿ ಆತ್ಮೀಯ ಸ್ನೇಹಿತರು. ಹೀಗಾಗಿ, ಅವರೊಂದಿಗೆ ಬಿಜೆಪಿಯಲ್ಲಿ ತೊಡಗಿಸಿಕೊಂಡಿದ್ದೆ. ಇಲ್ಲಿಯ ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂದು ನನ್ನ ಪಾಡಿಗೆ ನಾನು ಉಳಿದುಬಿಟ್ಟಿದ್ದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಮತ್ತು ನಾನು ಆತ್ಮೀಯ ಸ್ನೇಹಿತರು. ಸಚಿವರಾಗಿದ್ದ ಕಾಲದಿಂದಲೂ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಯಾವುದೇ ವಿಚಾರವಾಗಲಿ ಸಮಾಲೋಚನೆ ಮಾಡುತ್ತಿದ್ದೇವು. ಕಾರಣಾಂತರದಿಂದ ದೂರವಾಗಿದ್ದೇವು. ಈಗ ಮತ್ತೆ ಕೊನೆಯ ಚುನಾವಣೆ ಆಗಿರುವ ಕಾರಣ ಸಹಕಾರ ನೀಡುವಂತೆ ಹೇಳಿದ್ದಾರೆ. ನಾನೊಬ್ಬ ತೀರ್ಮಾನ ಮಾಡಲ್ಲ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಬುಧವಾರ ಹೇಳುತ್ತೇನೆ. ನನ್ನ ನಿಲುವನ್ನು ನೇರವಾಗಿ ಹೇಳುವ ಕಾರಣ ಒಮ್ಮೆ ಶ್ರೀನಿವಾಸಪ್ರಸಾದ್ ಅವರೊಂದಿಗೆ ಚರ್ಚಿಸುತ್ತೇನೆ ಎಂದರು.
ಸಿದ್ದರಾಮಯ್ಯ ಗೆದ್ದರೆ 9ನೇ ಬಾರಿ ವಿಧಾನಸಭೆಗೆ
ಅಂಶಿ ಪ್ರಸನ್ನಕುಮಾರ್
ಮೈಸೂರು : ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಂದು ಉಪ ಚುನಾವಣೆ ಸೇರಿದಂತೆ ಈವರೆಗೆ ಎಂಟು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿ ವರುಣ ಕ್ಷೇತ್ರದಿಂದ ಸ್ಪರ್ಧಿಸಿದ್ದು ಗೆದ್ದರೆ ದಾಖಲೆಯ ಒಂಭತ್ತನೇ ಬಾರಿ ಆಯ್ಕೆಯಾದಂತೆ ಆಗುತ್ತದೆ.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 1983 ರಲ್ಲಿ ಬೆಂಬಲಿತ ಪಕ್ಷೇತರ, 1985 ರಲ್ಲಿ ಜನತಾಪಕ್ಷ, 1994 ರಲ್ಲಿ ಜನತಾದಳ, 2004 ರಲ್ಲಿ ಜೆಡಿಎಸ್, 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾದರು. 1983 ರಲ್ಲಿ ಗೆದ್ದಾಗ ದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಸಿದ್ದರಾಮಯ್ಯ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ, ನಂತರ ಪಶುಸಂಗೋಪನಾ ಸಚಿವ ಸ್ಥಾನ ನೀಡಲಾಯಿತು. 1985 ರಲ್ಲಿ ಗೆದ್ದಾಗ ಮತ್ತೆ ರೇಷ್ಮೆ ಖಾತೆ ಮಂತ್ರಿಯಾದರು. ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಹೆಗಡೆ ಅವರು ರಾಜೀನಾಮೆ ನೀಡಿ, ಎಸ್.ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಸಾರಿಗೆ ಸಚಿವರಾದರು.
1989 ರ ವೇಳೆಗೆ ಜನತಾಪಕ್ಷವು ಜನತಾದಳ- ಸಮಾಜವಾದಿ ಜನತಾಪಕ್ಷವಾಗಿ ಇಬ್ಭಾಗವಾಗಿದ್ದರಿಂದ ಸಿದ್ದರಾಮಯ್ಯ ಅವರು ಜನತಾದಳದೊಂದಿಗೆ ಗುರುತಿಸಿಕೊಂಡರು. ಆ ವರ್ಷ ನಡೆದ ಚುನಾವಣೆಯಲ್ಲಿ ಮತ ವಿಭಜನೆಯಾಗಿ ಕಾಂಗ್ರೆಸ್‌ನ ಎಂ. ರಾಜಶೇಖರಮೂರ್ತಿ ಅವರ ಎದುರು ಸೋತರು. 1994ರ ಚುನಾವಣೆ ವೇಳೆಗೆ ಜನತಾದಳ ಒಗ್ಗೂಡ ಹೋರಾಟ ನಡೆಸಿದ್ದರಿಂದ ಸಿದ್ದರಾಮಯ್ಯ ಮೂರನೇ ಬಾರಿ ಗೆದ್ದು, ಎಚ್.ಡಿ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. 1996 ರಲ್ಲಿ ಎಚ್.ಡಿ. ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿ ಪಟ್ಟಕ್ಕೇರಿದಾಗ ರಾಜ್ಯದಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾದರು.
1999ರ ವೇಳೆಗೆ ಮತ್ತೆ ಜನತಾದಳವು ಸಂಯುಕ್ತ ಹಾಗೂ ಜಾತ್ಯತೀತ ಎಂದು ವಿಭಜನೆಯಾಗಿತ್ತು. ಆ ವೇಳೆಗೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಲಾಗಿತ್ತು. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಿತು. ಲೋಕಸಭೆಗೆ ವಿಜಯಶಂಕರ್, ವಿಧಾನಸಭೆಗೆ ಸಿದ್ದರಾಮಯ್ಯ ಎಂದು ಮತ ಚಲಾಯಿಸಲು ಹೋಗಿ, ಗೊಂದಲವಾಯಿತು. ಜೆಡಿಎಸ್‌ನ ಚಿಹ್ನೆ ‘ಟ್ರ್ಯಾಕ್ಟರ್’ ಆಗಿತ್ತು. ಅದು ಮತಯಂತ್ರದಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. (ಹೀಗಾಗಿಯೇ ನಂತರ ತೆನೆಹೊತ್ತ ಮಹಿಳೆಯ ಗುರುತು ಪಡೆಯಲಾಯಿತು). ಇದರಿಂದ ಕಾಂಗ್ರೆಸ್‌ನ ಎ.ಎಸ್. ಗುರುಸ್ವಾಮಿ ಅವರ ಎದುರು ಸಿದ್ದರಾಮಯ್ಯ ಸೋತರು. ನಂತರ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿದರು.