ಹೊಯ್ಸಳರ ಕಾಲದ ಬಸದಿ, ನಿಸಿಧಿ ಶಾಸನ ಶಿಲ್ಪ ಪತ್ತೆ

By divya perlaFirst Published Jul 13, 2019, 8:31 AM IST
Highlights

ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಸಮೀಪದ ಗಣಿದಾಳು ಪ್ರದೇಶದಲ್ಲಿ ಪುರಾತತ್ವ ಸ್ಮಾರಕಗಳ ಸ್ವಚ್ಛಾತಾ ಕಾರ್ಯದ ಸಂದರ್ಭದಲ್ಲಿ ಜೈನ ಬಸದಿಯ ಕುರುಹುಗಳು ಕಂಡು ಬಂದಿದೆ. ಹಾಗೆಯೇ ಎರಡು ನಿಸಿಧಿ ಕಲ್ಲುಗಳು ದೊರಕಿವೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಎನ್‌ಎಸ್‌ಎಸ್ ಘಟಕಗಳ ಸಹಯೋಗದೊಂದಿಗೆ ಸ್ವಚ್ಛಾತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ (ಜು.13): ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಸಮೀಪದ ಗಣಿದಾಳು ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಪುರಾತತ್ವ ಸ್ಮಾರಕಗಳ ಸ್ವಚ್ಛಾತಾ ಕಾರ್ಯದ ಸಂದರ್ಭದಲ್ಲಿ ಜೈನ ಬಸದಿಯ ಕುರುಹುಗಳು ಕಂಡು ಬಂದಿದೆ. ಹಾಗೆಯೇ ಎರಡು ನಿಸಿಧಿ ಕಲ್ಲುಗಳು ದೊರಕಿವೆ.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಎನ್‌ಎಸ್‌ಎಸ್ ಘಟಕಗಳ ಸಹಯೋಗದೊಂದಿಗೆ ಜೈನ ಬಸದಿ ಸ್ಥಳದಲ್ಲಿ ಬಾಗಿಲಿನ ಲಾಲಟ ಬಿಂಬ ಸೇರಿದಂತೆ ಸಾಕಷ್ಟು ಕುರುಹುಗಳು ದೊರೆತಿದ್ದು ಇದರಲ್ಲಿ ಜಿನಬಿಂಬವಿದೆ. ಸಿಕ್ಕಿರುವ ನಿಸಿಧಿ ಕಲ್ಲುಗಳ ಪೈಕಿ ಒಂದರಲ್ಲಿ ಆರು ಸಾಲುಗಳ ಶಾಸನವಿದೆ. ಇದು ಹಳೆಗನ್ನಡದಲ್ಲಿದೆ.

ನಿಸಿಧಿ ಶಾಸನ ಶಿಲ್ಪದಲ್ಲೇನು ಬರೆಯಲಾಗಿದೆ: 

ಇದು 90 ಸೆಂ.ಮೀ ಉದ್ದ, 37 ಸೆಂ. ಆಗಲವಾಗಿದ್ದು ಸಿಸ್ಟ್ ಶಿಲೆಯಿಂದ ಕೂಡಿದೆ. ನಿಸಿಧಿ ಶಾಸನ ಶಿಲ್ಪವು ಸಲ್ಲೇಖನ ವ್ರತವನ್ನು ಸ್ವಿಕರಿಸಿ ನಿಸಧಿ ಹೋದವರ ವಿವರವನ್ನು ಒಳಗೊಂಡಿದ್ದು, ಈ ನಿಸಿಧಿಯ ಶಾಸನವು ಎರಡು ಪಟ್ಟಿಕೆಗಳಿಂದ ಕೂಡಿದೆ.

ಮೊದಲ ಪಟ್ಟಿಕೆಯಲ್ಲಿ ಪಲ್ಲಕ್ಕಿಯಲ್ಲಿ ನಿಸಿಧಿ ಸ್ವಿಕರಿಸಿರುವ ದಂಪತಿ ಕುಳಿತಿರುವುದು, ಪಲ್ಲಕ್ಕಿಯನ್ನು ಚಾಮರಧಾರಣಿಯರು ಹಿಡಿದಿರುವುದು ಕಂಡುಬರುತ್ತದೆ. ಎರಡನೇ ಪಟ್ಟಿಕೆಯಲ್ಲಿ ಜಿನಬಿಂಬದ ಬಲಗಡೆ ಸಲ್ಲೇಖನ ಬೋಧಿಸುವ ಸೇನಭಟ್ಟಾರಕ ಪ್ರಿಯ ಶಿಷ್ಯ ಕೈಯಲ್ಲಿ ಆರಾಧನಾ ಗ್ರಂಥವನ್ನು ಹಿಡಿದು ಬೋಧಿಸುತ್ತಿದ್ದಾನೆ. ಶಿಲ್ಪದ ಮಧ್ಯದಲ್ಲಿ ಜಿನಬಿಂಬ ನಿಂತಿದ್ದು, ಈ ಬಿಂಬದ ಮೇಲೆ ಮುಕ್ಕೊಡೆ ಚಾಮರಗಳನ್ನು ಸೂರ್ಯಚಂದ್ರ ರನ್ನು ಚಿತ್ರಿಸಲಾಗಿದೆ. ಜಿನಬಿಂಬದ ಎಡಗಡೆ ಸಲ್ಲೇಖನ ಸ್ವೀಕರಿಸುವ ದಂಪತಿ ಕೈಮುಗಿದು ವ್ರತವನ್ನು ಸ್ವೀಕರಿಸುತ್ತಿದ್ದಾರೆ.

ಶಿಲ್ಪದ ಮತ್ತು ಶಾಸನದ ಮಹತ್ವ:

ಈ ನಿಸಿಧಿ ಶಿಲ್ಪದಲ್ಲಿರುವ ಶಾಸನದ ಲಿಪಿಯ ಆಧಾರದ ಮೇಲೆ ಹೊಯ್ಸಳರ ಕಾಲ ಅಂದರೆ ಕ್ರಿ.ಶ 12 ನೇ ಶತಮಾನದ್ದು ಎನ್ನಬಹುದಾಗಿದೆ. ಈ ಶಾಸನ ಶಿಲ್ಪದಲ್ಲಿ ಆರು ಸಾಲುಗಳಿದ್ದು ಹಳೆಗನ್ನಡದಲ್ಲಿದೆ, ಶಾಸನವು ಸ್ವಲ್ಪ ತೃಟಿತ(ಹಾನಿ)ವಾಗಿದೆ. ಈ ಸಾಲುಗಳು ಹೀಗಿವೆ.

‘ಶ್ರೀ ಮೂಲಸಂಘದ ಸೇನಗಣದ ಪೊಗರಿಗಚ್ಛ ಸೇನ ಭಟ್ಟಾರಕ ಪ್ರೀಯ ಗುಡ್ಡನ್ಪ ಹೊಸವಿಸೆಟ್ಟಿ ಸ್ರಾವಣ ಬ೧ ಮಂಗಳವಾರದಂದು ಸಭಪತಿ ನಾಮದಿಂ ಸ್ವರ್ರ‌್ಗಸ್ತನಾದನು ಆತನ ಧರ್ಮ್ಮಪತ್ನಿ ಕಂನವೆ ಸುಭ ಭಾವನೆಂ. ಉಸಮಾಧಿವಡದು ಸ್ವರ್ಗ್ಗಸ್ತೆಯಾದಳು. (ಶ್ರೀ)’ ಎರಡನೇ ಪಟ್ಟಿಯಲ್ಲಿ ಹೊಸ ಶಿಷ್ಯ ಸಲ್ಲೇಖನ ವ್ರತವನ್ನು ತೆಗೆದುಕೊಂಡು ನಿಸಿಧಿ ಸ್ವೀಕರಿಸುವವರಿಗೆ ಧರ್ಮ ಬೋಧನೆ ಮಾಡುತ್ತಿರುವುದು ಕಂಡುಬರುತ್ತದೆ.

ಇಲ್ಲಿ ನಿಸಿಧಿ ಶ್ರಾವಣ ಮಂಗಳವಾರದಂದು ಹೊಸವಿಸೆಟ್ಟಿ ಎಂಬುವವರು ತೆಗೆದುಕೊಂಡು ಸ್ವರ್ಗಸ್ಥನಾಗುತ್ತಾನೆ. ಆಗ ಅವನ ಹೆಂಡತಿ ಕಂನವೆಯು ಸಹಾ ನಿಷದಿ ಸಮಾಧಿ ಪಡೆದು ಸ್ವರ್ಗಸ್ಥಳಾಗುತ್ತಾಳೆ. ಇಲ್ಲಿ ಗಂಡ ಹೆಂಡತಿ ಸಮಾಧಿ ಮರಣ ಹೊಂದಿರುವುದು ಕಂಡುಬರುತ್ತದೆ ಎಂದು ಪುರಾತತ್ತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರಾದ ಆರ್.ಶೇಜೇಶ್ವರ ತಿಳಿಸಿದ್ದಾರೆ.

ಶಾಸನವನ್ನು ಓದಲು ಡಾ.ಜಗದೀಶ, ರವಿಕುಮಾರ ನವಲಗುಂದ ನೆರವು ನೀಡಿದ್ದು, ಇವರಿಗೆ ಪುರಾತತ್ತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ ಧನ್ಯವಾದ ಅರ್ಪಿಸಿದ್ದಾರೆ.

ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!

click me!