ರಾಜಧಾನಿಯಲ್ಲಿ ಕೊರೋನಾ ಹೊಸ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆಯಾದ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ಮೀಸಲಿಡಬೇಕಾದ ಹಾಸಿಗೆಗಳ ಪ್ರಮಾಣವನ್ನು ಶೇ.10ಕ್ಕೆ ಇಳಿಕೆ ಮಾಡಲಾಗಿದೆ.
ಬೆಂಗಳೂರು (ಫೆ.11): ರಾಜಧಾನಿಯಲ್ಲಿ ಕೊರೋನಾ (Coronavirus) ಹೊಸ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆಯಾದ ಹಿನ್ನೆಲೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ಮೀಸಲಿಡಬೇಕಾದ ಹಾಸಿಗೆಗಳ ಪ್ರಮಾಣವನ್ನು ಶೇ.10ಕ್ಕೆ ಇಳಿಕೆ ಮಾಡಲಾಗಿದೆ. ಈ ಹಿಂದೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ನೋಂದಣಿಯಾಗಿದ್ದ ನಗರದ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ತಮ್ಮಲ್ಲಿನ ಹಾಸಿಗೆಗಳ ಪೈಕಿ ಶೇ.50 ರಷ್ಟನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿತ್ತು.
ಆ ಹಾಸಿಗೆಗಳಲ್ಲಿ ಬಿಬಿಎಂಪಿ (BBMP) ಕಡೆಯಿಂದ ಶಿಫಾರಸು ಪಡೆದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಸದ್ಯ ಸೋಂಕು ಹೊಸ ಪ್ರಕರಣಗಳು ಎರಡು ಸಾವಿರ ಆಸುಪಾಸಿಗೆ ಇಳಿಕೆಯಾಗಿದ್ದು, ನಿತ್ಯ ಶೇ.2ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಈ ಹಿನ್ನೆಲೆ ಖಾಸಗಿ ಆಸ್ಪತ್ರೆಗಳು ಶೇ.10ರಷ್ಟು ಮಾತ್ರ ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಲು ಎಂದು ಸೂಚಿಸಿಲಾಗಿದೆ. ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.10ರಷ್ಟುಹಾಸಿಗೆಗಳನ್ನು ಮೀಸಲಿಡಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
Covid 19 Crisis Bengaluru: ಸಾವಿರಕ್ಕೂ ಹೆಚ್ಚು ಬೆಡ್ ಖಾಲಿ ಇದ್ರೂ ಖಾಸಗಿ ಆಸ್ಪತ್ರೆಗಳಿಗೆ ಡಿಮ್ಯಾಂಡ್!
ಸಂಪರ್ಕಿತರ ಪತ್ತೆ ಪ್ರಮಾಣ ಅರ್ಧಕ್ಕೆ ಇಳಿಕೆ: ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಅವರ ಸಂಪರ್ಕದಲ್ಲಿದ್ದ ಕನಿಷ್ಠ 10 ರಿಂದ ಗರಿಷ್ಠ 15 ಮಂದಿ ಪತ್ತೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿತ್ತು. ಇತ್ತ ಸೋಂಕು ಇಳಿಕೆಯಾಗುತ್ತಿರುವುದು ಮತ್ತು ಕೊರೋನಾ ಪರೀಕ್ಷಾ ಗುರಿ ಸಡಿಲಗೊಳಿಸಿದ ಬೆನ್ನೆಲ್ಲೆ ವಾರ್ಡ್ ಮಟ್ಟದ ಆರೋಗ್ಯ ಸಿಬ್ಬಂದಿಯು ಸಂಪರ್ಕಿತರ ಪತ್ತೆ ಕಾರ್ಯವನ್ನು ಮಂದಗೊಳಿಸಿದ್ದಾರೆ. ಇನ್ನೊಂದೆಡೆ ಸಂಪರ್ಕಿತರ ಪತ್ತೆ ಕಾರ್ಯಕ್ಕೆ ಬಿಬಿಎಂಪಿ ಹೆಚ್ಚುವರಿಯಾಗಿ ನಿಯೋಜಿಸಿದ್ದ ಸಿಬ್ಬಂದಿಯನ್ನು ಹಿಂಪಡೆದಿದೆ.
ಫೆಬ್ರವರಿ 1ರಿಂದೀಚೆಗೆ ನಗರದಲ್ಲಿ 25 ಸಾವಿರ ಮಂದಿಗೆ ಸೋಂಕು ತಗುಲಿದ್ದು, 1.8 ಲಕ್ಷ ಸಂಪರ್ಕಿರನ್ನು ಗುರುತಿಸಲಾಗಿದೆ. ಅಂದರೆ, ಒಬ್ಬ ಸೋಂಕಿತರಿಗೆ ಏಳು ಸಂಪರ್ಕಿತರು ಪತ್ತೆಯಾದಾದಂತಾಗಿದೆ. ಅದರಲ್ಲೂ ರಾಜರಾಜೇಶ್ವರಿ ನಗರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಒಬ್ಬ ಸೋಂಕಿತರಿಗೆ ಸರಾಸರಿ ಮೂರು ಸಂಪರ್ಕಿತರನ್ನು ಗುರುತಿಸಲಾಗುತ್ತಿದೆ. ಸಂಪರ್ಕಿತರ ಪತ್ತೆ ಹಿನ್ನೆಡೆಯಾಗಿರುವುದು ಮುಂದೆ ಸೋಂಕು ಹೆಚ್ಚಳಕ್ಕೆ ಹಾದಿಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೊರೋನಾ ತಜ್ಞರು.
Covid 19 Crisis Bengaluru: ಸರ್ಕಾರಿ ಆಸ್ಪತ್ರೆ ಖಾಲಿ ಇದ್ರೂ ಖಾಸಗಿ ಚಿಕಿತ್ಸೆ!
ಕಂಟೈನ್ಮೆಂಟ್ ವಲಯಗಳ ಸಂಖ್ಯೆ 52ಕ್ಕೆ ಇಳಿಕೆ: ನಗರದಲ್ಲಿ ಕೊರೋನಾ ಸೋಂಕು ಹೆಚ್ಚು ಕಾಣಿಸಿಕೊಂಡು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯಗಳ ಎಂದು ಗುರುತಿಸಿ ನಿರ್ಬಂಧ ವಿಧಿಸಲಾಗುತ್ತದೆ. ನಿಗದಿತ ಸಮಯದೊಳಗೆ ಐದಕ್ಕಿಂತ ಕಡಿಮೆ ಹೊಸ ಪ್ರಕರಣಗಳು ಪತ್ತೆಯಾದ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ವಲಯ ಮತ್ತು ಐದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುವ ಪ್ರದೇಶವನ್ನು ಕ್ಲಸ್ಟರ್ ವಲಯ ಎಂದು ಗುರುತಿಸಲಾಗುತ್ತದೆ. ಇವುಗಳ ಸಂಖ್ಯೆ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿ (ಜನವರಿ ಮೂರನೇ ವಾರ) 500 ಆಸುಪಾಸಿಗೆ ಹೆಚ್ಚಳವಾಗಿತ್ತು. ಫೆಬ್ರವರಿ 1 ರಂದು ಕಂಟೈನ್ಮೆಂಟ್ ವಲಯಗಳ ಸಂಖ್ಯೆ 200 ಇಳಿಕೆಯಾಗಿತ್ತು. ಸದ್ಯ (ಫೆ.10) 52ಕ್ಕೆ ಕುಸಿದಿದೆ.
ಬಿಬಿಎಂಪಿ ವಲಯ - ಕಂಟೈನ್ಮೆಂಟ್ ವಲಯ
ಬೊಮ್ಮನಹಳ್ಳಿ - 22
ಪೂರ್ವ - 8
ಯಲಹಂಕ - 7
ದಕ್ಷಿಣ - 7
ಮಹಾದೇವಪುರ - 6
ಪಶ್ಚಿಮ - 1
ರಾಜರಾಜೇಶ್ವರಿ ನಗರ - 1
ದಾಸರಹಳ್ಳಿ - 0