ಶಿವಮೊಗ್ಗ: ಹೆಚ್ಚಿದ ಸೊಳ್ಳೆಯಿಂದ ಜ್ವರ ಬಾಧೆ

By Kannadaprabha NewsFirst Published Aug 2, 2019, 12:43 PM IST
Highlights

ಶಿವಮೊಗ್ಗದ ಶಿರಾಳಕೊಪ್ಪ ಭಾಗದಲ್ಲಿ ವೈರಲ್ ಫಿವರ್ ಹೆಚ್ಚುತ್ತಿದೆ. ಪ್ರತಿದಿನ ಒಪಿಡಿ ವಿಭಾಗದಲ್ಲಿ 250 ರಿಂದ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿಗೆ ಚಿಕೂನ್ ಗುನ್ಯಾ ಇರುವುದು ದೃಢಪಟ್ಟಿದೆ.

ಶಿರಾಳಕೊಪ್ಪ(ಆ.02): ಬಿಟ್ಟುಬಿಟ್ಟು ಬರುತ್ತಿರುವ ಮಳೆ, ಅಲ್ಲಲ್ಲಿ ನಿಂತ ನೀರು ಹಾಗೂ ಚರಂಡಿಗಳಲ್ಲಿನ ಕೊಚ್ಚೆ ನೀರಿನಿಂದ ಪಟ್ಟಣದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಕಷ್ಟು ನಾಗರೀಕರು ಜ್ವರಗಳಿಂದ ಬಳಲುತ್ತಿದ್ದಾರೆ.

ಒಪಿಡಿಯಲ್ಲಿ ಪ್ರತಿದಿನ 300ರಷ್ಟು ರೋಗಿಗಳು:

ಇಲ್ಲಿಯ ಸಮುದಾಯ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದೆ. ಪ್ರತಿದಿನ ಒಪಿಡಿ ವಿಭಾಗದಲ್ಲಿ 250 ರಿಂದ 300 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಜ್ವರ ಬಾಧೆಯಿಂದ ಬಳಲುತ್ತಿರುವವರಿಗೆ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ಕೊಡಲಾಗುತ್ತಿದೆ.

ಈ ಕುರಿತು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಮೋಹನ್‌ ಪ್ರತಿಕ್ರಿಯಿಸಿ, ಪಟ್ಟಣದಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಅವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಚಿಕೂನ್‌ ಗುನ್ಯ ಮತ್ತು ಡೆಂಘೀ ಬಗ್ಗೆ ಪರೀಕ್ಷಿಸಲು ರೋಗಿಗಳ ರಕ್ತವನ್ನು ಪರೀಕ್ಷೆಗೆ ಕಳಿಸುತ್ತಿದ್ದೇವೆ. ಆಲ್ಲಿಂದ ವರದಿ ಬಂದ ಮೇಲೆ ನಿಖರ ಮಾಹಿತಿ ತಿಳಿಯಲಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ 53 ಜನರ ರಕ್ತದ ಸ್ಯಾಂಪಲ್‌ ಪರೀಕ್ಷೆಗೆ ಕಳಿಸಿದಾಗ 9 ಮಂದಿಗೆ ಚಿಕೂನ್‌ ಗುನ್ಯಾ ಇರುವುದು ದೃಢಪಟ್ಟಿದೆ. ಅವರಿಗೆ ಚಿಕಿತ್ಸೆಕೊಡಲಾಗಿದೆ. ಅವರೆಲ್ಲ ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅದೇರೀತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕಷ್ಟುರೋಗಿಗಳಿಗೆ ಚಿಕೂನ್‌ ಗುನ್ಯಾ ಇದೆ ಎಂದು ಹೇಳಲಾಗುತ್ತಿದೆ. ರೋಗಿಗಳ ರಕ್ತವನ್ನು ಜಿಲ್ಲಾ ರಕ್ತಪರೀಕ್ಷಾ ಕೇಂದ್ರಕ್ಕೆ ಕಳಿಸಿ ಅವರು ನೀಡುವ ವರದಿ ಮಾತ್ರ ಖಾತ್ರಿ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ 59 ಡೆಂಘೀ, 14 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆ

ಪಟ್ಟಣದಲ್ಲಿ ಸೊಳ್ಳೆ ಮತ್ತು ಕೊಳಚೆ ಹೆಚ್ಚಿರುವ ಬಗ್ಗೆ ಪಪಂ ಮುಖ್ಯಾಧಿಕಾರಿ ಶಿವಪ್ಪ ಪ್ರತಿಕ್ರಿಯಿಸಿ, ಜನರಲ್ಲಿ ಅರಿವು ಮೂಡಿಸಲು ಕರಪತ್ರ ಮುದ್ರಿಸಲಾಗುತ್ತಿದೆ. ಎಲ್ಲ ಪ್ರದೇಶಗಳಲ್ಲಿ ನೀರು ನಿಲ್ಲುತ್ತಿರುವದನ್ನು ತೆರವು ಗೊಳಿಸಲಾಗುತ್ತಿದೆ. ಸೀಲ್ಟುತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈದ್ಯರ ಸಲಹೆ

1 ಎಲ್ಲೆಂದರಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಉತ್ಪತ್ತಿ ಆಗುತ್ತದೆ. ಆದ್ದರಿಂದ ಪಟ್ಟಣ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳು ಸ್ವಚ್ಛತೆ ಬಗ್ಗೆ ಗಮನ ಕೊಡುವ ಅವಶ್ಯಕತೆ ಇದೆ.

2) ನಾಗರೀಕರು ತಮ್ಮ ಮನೆ ಸುತ್ತ ಸ್ವಚ್ಛವಾಗಿಟ್ಟು ಕೊಳ್ಳಬೇಕು. ಮನೆಯ ಹತ್ತಿರ ಟಯರ್‌, ಟ್ಯೂಬ್‌ಗಳಲ್ಲಿ ನೀರು ನಿಂತಿದ್ದರೆ ಅವುಗಳನ್ನು ಖಾಲಿ ಮಾಡಬೇಕು. ಮನೆಯಲ್ಲಿ ಲಾರ್ವಾ ಆಗದಂತೆ ನೋಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರು ಕುಡಿದರೆ ಒಳ್ಳೆಯದು.

3) ಹಾಗೆಯೇ ಸಂಜೆ ಮನೆಯಲ್ಲಿ ಬೇವಿನ ಹೊಗೆ ಹಾಕುವುದರಿಂದ ಸೊಳ್ಳೆಗಳನ್ನು ಹತೋಟಿಗೆ ತರಬಹುದು. ಸಾಧ್ಯವಿದ್ದಲ್ಲಿ ಸೊಳ್ಳೆ ಪರದೆ ಉಪಯೋಗಿಸಬೇಕು ಎಂದು ಡಾ. ಮೋಹನ್‌ ನಾಗರಿಕರಿಗೆ ಸಲಹೆ ನೀಡಿದ್ದಾರೆ.

click me!