ಬೆಂಗಳೂರು: ಅಸ್ಥಿಮಜ್ಜೆ ಚಿಕಿತ್ಸೆಗೆ ಸಿಗದ ಸರ್ಕಾರದ ನೆರವು..!

By Kannadaprabha NewsFirst Published Nov 27, 2022, 10:00 AM IST
Highlights

ಕಿದ್ವಾಯಿಯಲ್ಲಿ ಕೇಂದ್ರ ನಿರ್ಮಿಸಿ ವರ್ಷವಾದರೂ ಚಿಕಿತ್ಸೆ ಸಿಕ್ಕಿಲ್ಲ ಅಗತ್ಯ ಅನುದಾನ, ಸರ್ಕಾರದ ನೆರವಿಗೆ ಕಾಯತ್ತಿರುವ ರೋಗಿಗಳು

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ನ.27):  ಕಿದ್ವಾಯಿ ಕ್ಯಾನ್ಸರ್‌ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಅಸ್ಥಿಮಜ್ಜೆ (ಬೋನ್‌ಮ್ಯಾರೊ) ಕಸಿ ಶಸ್ತ್ರಚಿಕಿತ್ಸೆ ಕೇಂದ್ರ ಆರಂಭಿಸಿ ಒಂದು ವರ್ಷವಾಗುತ್ತಾ ಬಂದರೂ ಇಲ್ಲಿಗೆ ಆಗಮಿಸುವ ರೋಗಿಗಳ ಚಿಕಿತ್ಸಾ ವೆಚ್ಚಕ್ಕೆ ಸರ್ಕಾರದಿಂದ ಅನುದಾನ ಲಭ್ಯವಾಗಿಲ್ಲ. ಸದ್ಯ ದಾನಿಗಳ ನೆರವು, ಆಸ್ಪತ್ರೆಯ ಇತರೆ ಅನುದಾನದಲ್ಲಿ ಕೆಲವರಿಗೆ ಕಸಿ ಚಿಕಿತ್ಸೆ ನಡೆಸಲಾಗುತ್ತಿದ್ದು, ಇಂದಿಗೂ ಹತ್ತಾರು ಮಕ್ಕಳು ಸೇರಿದಂತೆ 40ಕ್ಕೂ ಅಧಿಕ ಕ್ಯಾನ್ಸರ್‌ ರೋಗಿಗಳು ಜೀವ ಕೈಲಿಡಿದು ಸರ್ಕಾರದ ನೆರವಿಗೆ ಎದುರು ನೋಡುತ್ತಿದ್ದಾರೆ.

ವಿವಿಧ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ 25ರಿಂದ 30 ಲಕ್ಷ ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ ಸ್ವಾಮ್ಯದ ಏಕೈಕ ಕ್ಯಾನ್ಸರ್‌ ಆಸ್ಪತ್ರೆ ಕಿದ್ವಾಯಿ ಕ್ಯಾನ್ಸರ್‌ ಸ್ಮಾರಕ ಗಂಥಿ ಸಂಸ್ಥೆಯಲ್ಲಿ .12 ಕೋಟಿ ವೆಚ್ಚದಲ್ಲಿ ಅಸ್ಥಿಮಜ್ಜೆ ಚಿಕಿತ್ಸಾ ಘಟಕ ನಿರ್ಮಿಸಲಾಯಿತು. ದೇಶದ ಮೊದಲ ಸರ್ಕಾರಿ ಅಸ್ಥಿಮಜ್ಜೆ ಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆಗೆ ಈ ಕೇಂದ್ರ ಪಾತ್ರವಾಗಿತ್ತು. ಫೆಬ್ರವರಿಯಲ್ಲಿ ಆರೋಗ್ಯ ಸಚಿವರು ಉದ್ಘಾಟಿಸಿ ಈ ಕೇಂದ್ರ ಮಕ್ಕಳ ಕ್ಯಾನ್ಸರ್‌ಗೆ ಸಹಕಾರಿಯಾಗಿದ್ದು, ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದಿದ್ದರು. ಈ ಕೇಂದ್ರಕ್ಕೆ ಬೇಡಿಕೆ ಹೆಚ್ಚಿದ್ದು, ಕ್ಯಾನ್ಸರ್‌ ರೋಗಿಗಳು ನೋಂದಣಿ ಮಾಡಿಸಿ ಅಸ್ಥಿಮಜ್ಜೆ ಚಿಕಿತ್ಸೆಗೆ ತಿಂಗಳುಗಳಿಂದ ಕಾಯುತ್ತಿದ್ದಾರೆ. ಆದರೆ, ಚಿಕಿತ್ಸಾ ವೆಚ್ಚಕ್ಕೆ ಅಗತ್ಯ ಅನುದಾನ ಸಿಕ್ಕಿಲ್ಲ.

ಕಿದ್ವಾಯಿ ನೂತನ ನಿರ್ದೇಶಕರಾಗಿ ಡಾ.ವಿ‌.ಲೋಕೇಶ್ ನೇಮಕ

ಅಂಗಾಂಗ ಕಸಿ ಯೋಜನೆಯ ನೆರವಿಗೆ ಹಲವು ಬಾರಿ ಪತ್ರ

ರಾಜ್ಯ ಸರ್ಕಾರವು 2018ರಲ್ಲಿ ಬಿಪಿಎಲ… ಕುಟುಂಬಗಳಿಗಾಗಿ ರಾಜ್ಯ ಅಂಗಾಗ ಕಸಿ ಯೋಜನೆ ಆರಂಭಿಸಿದ್ದು, ಈ ಅನುದಾನವು ಕೂಡಾ ಇಲ್ಲಿನ ಅಸ್ಥಿಮಜ್ಜೆ ಕಸಿ ರೋಗಿಗಳಿಗೆ ಸಿಗುತ್ತಿಲ್ಲ. ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಗೂ ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಅನುದಾನ ಒದಗಿಸುವಂತೆ ಆಸ್ಪತ್ರೆಯಿಂದ ಹಲವು ಬಾರಿ ಸುವರ್ಣ ಆರೋಗ್ಯ ಟ್ರಸ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈವರೆಗೂ ಸೇರ್ಪಡೆಯಾಗಿಲ್ಲ.

ದಾನಿಗಳ ನೆರವಿನಿಂದ ಚಿಕಿತ್ಸೆ

ಕಸಿ ಕೇಂದ್ರ ಆರಂಭವಾದ ಸಂದರ್ಭದಲ್ಲಿ ಕಿದ್ವಾಯಿ ಸಂಸ್ಥೆಯ ಅನುದಾನದಿಂದಲೇ ಇಬ್ಬರು ಮಕ್ಕಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಬಳಿಕ ಕಸಿ ಚಿಕಿತ್ಸೆಗೆ ಸರ್ಕಾರವು ಅನುದಾನ ಬಿಡುಗಡೆ ಮಾಡದಿರುವುದರಿಂದ ಸಂಸ್ಥೆಯು ಅನಿವಾರ್ಯವಾಗಿ ದಾನಿಗಳ ನೆರವಿನ ಮೊರೆ ಹೋಗಿತ್ತು. ಬಂದ ನೆರವಿನಲ್ಲಿಯೇ ರೋಗಿಗಳ ಆರೋಗ್ಯಸ್ಥಿತಿ ಆಧರಿಸಿ ಆದ್ಯತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 50ಕ್ಕೂ ಅಧಿಕ ಮಂದಿ ನೋಂದಣಿಯಾಗಿದ್ದು, ದಾನಿಗಳು ಮತ್ತು ಸಂಸ್ಥೆಯ ಇತರೆ ಅನುದಾನದಿಂದ 12 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ, ನಿಕಟಪೂರ್ವ ನಿರ್ದೇಶಕ ಡಾ. ಸಿ.ರಾಮಚಂದ್ರ ತಿಳಿಸಿದ್ದಾರೆ.

Belagavi: 130 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ:7 ಜಿಲ್ಲೆಯ ಜನತೆಗೆ ಅನುಕೂಲ

ಏನಿದು ಅಸ್ಥಿಮಜ್ಜೆ ಕಸಿ ಚಿಕಿತ್ಸೆ?

ಅಸ್ಥಿಮಜ್ಜೆ ಕಸಿಯಲ್ಲಿ ರೋಗಿಯ ದೇಹದಲ್ಲಿ ಸಕ್ರಿಯವಾಗಿರುವ ಕ್ಯಾನ್ಸರ್‌ ಕಣಗಳನ್ನು ನಾಶಗೊಳಿಸಿ, ಅವರದೇ ದೇಹದ ಆರೋಗ್ಯ ಅಂಗದ ಒಂದಿಷ್ಟುಮಜ್ಜೆಯನ್ನು ತೆಗೆಯಲಾಗುತ್ತದೆ. ಕ್ಯಾನ್ಸರ್‌ ಕಣಗಳು ನಾಶವಾದ ಜಾಗದಲ್ಲಿ ಕಸಿ ಮಾಡಲಾಗುತ್ತದೆ. ಇದಕ್ಕೆ .7 ಲಕ್ಷ ವೆಚ್ಚವಾಗುತ್ತದೆ. ಕ್ಯಾನ್ಸರ್‌ ಪೀಡಿತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಮಜ್ಜೆಯನ್ನು ಬೇರೆಯವರಿಂದ ಪಡೆದು ನಡೆಸುವ ಕಸಿಗೆ .21 ಲಕ್ಷ ವೆಚ್ಚವಾಗುತ್ತದೆ. ಇದಕ್ಕೆ ಸರ್ಕಾರದಿಂದ ಧನ ಸಹಾಯ ಕೋರಲಾಗಿದೆ.

ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕಕ್ಕೆ ಅಥವಾ ರಾಜ್ಯ ಅಂಗಾಗ ಕಸಿ ಯೋಜನೆಗೆ ಸೇರ್ಪಡೆ ಮಾಡುವಂತೆ ಸಾಕಷ್ಟುಬಾರಿ ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರಬರೆದು ಮನವಿ ಮಾಡಲಾಗಿತ್ತು. ಸರ್ಕಾರದಿಂದ ಯಾವುದೇ ನೆರವು ಲಭ್ಯವಾಗಿಲ್ಲ. ಚಿಕಿತ್ಸೆಗೆ ಬೇಡಿಕೆ ಹೆಚ್ಚಿದ್ದು, ಹಲವಾರು ಮಂದಿ ಸರತಿಯಲ್ಲಿ ಕಾಯುತ್ತಿದ್ದಾರೆ ಅಂತ ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ವಿಭಾಗ ಕಿದ್ವಾಯಿ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ರಾಮಚಂದ್ರ ತಿಳಿಸಿದ್ದಾರೆ. 
 

click me!