ಕೊರೋನಾ ನಂತರ ಮತ್ತೆ ಪ್ರವಾಸೋದ್ಯಮ ಕುಂಠಿತ, ಇದೀಗ ತಟ್ಟಿದೆ ಬಿಸಿಲ ಬಿಸಿ ಬೇಗೆ!

Published : May 06, 2024, 02:53 PM ISTUpdated : May 06, 2024, 04:24 PM IST
 ಕೊರೋನಾ ನಂತರ ಮತ್ತೆ ಪ್ರವಾಸೋದ್ಯಮ ಕುಂಠಿತ, ಇದೀಗ ತಟ್ಟಿದೆ ಬಿಸಿಲ ಬಿಸಿ ಬೇಗೆ!

ಸಾರಾಂಶ

 ಬೇಸಿಗೆ ರಜೆ ಅವಧಿಯಲ್ಲಿ ಜನರಿಂದ ಗಿಜಿಗುಡಬೇಕಿದ್ದ ಪ್ರವಾಸಿ ತಾಣಗಳು ಈ ಸಲ ಜನರಿಲ್ಲದೆ ಭಣಗುಡುತ್ತಿವೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಚುನಾವಣೆ ಬಿಸಿ ಮತ್ತು ಬಿಸಿಲ ಧಗೆ ತೀವ್ರ ಹೊಡೆತ ನೀಡಿದೆ.

 ಚಿಕ್ಕಬಳ್ಳಾಪುರ ;  ಬೇಸಿಗೆ ರಜೆ ಅವಧಿಯಲ್ಲಿ ಜನರಿಂದ ಗಿಜಿಗುಡಬೇಕಿದ್ದ ಪ್ರವಾಸಿ ತಾಣಗಳು ಈ ಸಲ ಜನರಿಲ್ಲದೆ ಭಣಗುಡುತ್ತಿವೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಚುನಾವಣೆ ಬಿಸಿ ಮತ್ತು ಬಿಸಿಲ ಧಗೆ ತೀವ್ರ ಹೊಡೆತ ನೀಡಿದೆ.

ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ತೀವ್ರ ಇಳಿಕೆಯಾಗಿದೆ. ರಾಜ್ಯದಲ್ಲಿ 38 ರಿಂದ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದೆ. ನೆತ್ತಿ ಸುಡುವ ಬಿಸಿಲು ಪ್ರವಾಸಿ ತಾಣಗಳಲ್ಲಿ ಮೋಜು-ಮಸ್ತಿಗೆ ಬ್ರೇಕ್‌ ಹಾಕಿದೆ.

ಪ್ರವಾಸಿಗರ ಅಂಕಿ-ಅಂಶದಲ್ಲಿ ಗೊಂದಲ
ಕೊರೊನಾ ಬಳಿಕ ಚೇತರಿಕೆ ಕಂಡಿದ್ದ ಪ್ರವಾಸೋದ್ಯಮ ಈ ವರ್ಷ ಶೇ. 40ರಿಂದ 50ರಷ್ಟು ಕುಸಿತ ಕಂಡಿದೆ ಎಂಬುದು ಹೋಟೆಲ್‌ ಉದ್ಯಮಿಗಳು ಮತ್ತು ವ್ಯಾಪಾರಸ್ಥರ ಲೆಕ್ಕಾಚಾರವಾದರೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸದರೆ ಶೇ. 15ರಷ್ಟು ಇಳಿಕೆಯಾಗಿದೆ.

ರಜೆ ಇದ್ದರೂ ಪ್ರವಾಸ ಇಲ್ಲ
ಈಗ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ. ರಜೆಯನ್ನು ಮಜವಾಗಿ ಕಳೆಯೋಣವೆಂದು ವಿದ್ಯಾರ್ಥಿಗಳು ಅಂದುಕೊಂಡಿದ್ದರು. ಆದರೆ, ಅತಿಯಾದ ಬಿಸಿಲು ಹಾಗೂ ತಾಪಮಾನದಿಂದ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರೆಗೆ ಬಿಡುತ್ತಿಲ್ಲ. ಇದರಿಂದ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿ ಗಿರಿಧಾಮ. ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿದ್ದರೂ ಬೆಂಗಳೂರಿಗರ ಜೊತೆ ಅವಿನಾಭಾವ ನಂಟು ಹೊಂದಿದೆ. ಇನ್ನು ಬೇಸಿಗೆಯ ರಜೆ ಬಂದರೆ ಸಾಕು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅವರ ಪೋಷಕರು ನಂದಿ ಗಿರಿಧಾಮಕ್ಕೆ ದಾಂಗುಡಿ ಇಡುತ್ತಿದ್ದರು. ಆದರೆ, ಈ ಬಾರಿ ಅತಿಯಾದ ಬಿಸಿಲು, ಉಷ್ಣವಿರುವ ಕಾರಣ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮತ್ತು ಪ್ರವಾಸಿಗರು ಗಿರಿಧಾಮದತ್ತ ಮುಖ ಮಾಡಿಲ್ಲ. ಇದರಿಂದ ಗಿರಿಧಾಮ ಬಿಕೋ ಎನ್ನುತ್ತಿದೆ.

ಪ್ರವಾಸಿಗರ ಕೊರತೆ:
ತಾಲೂಕಿನ ಆವಲಗುರ್ಕಿ ಬಳಿಯ ಈಶಾ ಫೌಂಡೇಷನ್ ನ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ನೋಡಲು ಸಹ ಸಾಕಷ್ಟು ಪ್ರವಾಸಿಗರು ಬರುತ್ತಿದ್ದರು. ಆದರೆ ಬಿಸಿಲ ಬೇಗೆಗೆ ಇತ್ತ ಸಹ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಂದಿ ಗಿರಿಧಾಮ, ಚಂದ್ರ ಗಿರಿ, ಬ್ರಹ್ಮ ಗಿರಿ, ಕಳವಾರ ಬೆಟ್ಟ, ಹೇಮಗಿರಿ, ಆವುಲ ಬೆಟ್ಟ ಸೇರಿದಂತೆ ಅನೇಕ ತಾಣಗಳಿಗೂ ಪ್ರವಾಸಿಗರ ಕೊರತೆ ಎದುರಾಗಿದೆ.

ಬೇಸಿಗೆ ಸೀಸನ್‌ನಲ್ಲಿ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದ ಸರಕಾರಿ ಉದ್ಯೋಗಿಗಳೆಲ್ಲಾ ಲೋಕಸಭಾ ಚುನಾವಣೆ ಮುಗಿಸಿ, ಮತ್ತೆ ಈಗ ಆಗ್ನೇಯ ಶಿಕ್ಷಕರ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಬಹುತೇಕ ಪಕ್ಷಗಳ ಕಾರ್ಯಕರ್ತರು, ಮುಖಂಡರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜಿಲ್ಲೆಯಲ್ಲಿ ರೆಸಾರ್ಟ್‌ಗಳು ಮತ್ತು ಹೋಟೆಲ್ ಗಳು ದೊಡ್ಡ ಉದ್ಯಮಗಳಾಗಿ ಬೆಳೆದಿವೆ. ಆದರೆ ಈ ಬಾರಿ ಬಿಸಿಲಿನ ತಾಪದಿಂದಾಗಿ ಹೋಟೆಲ್‌ ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ.

ಭಕ್ತರ ಸಂಖ್ಯೆ ಇಳಿಮುಖ: 
ಪ್ರವಾಸಿ ತಾಣಗಳ ಕಥೆ ಇದಾದರೆ ದೇವಾಲಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದ ಭಕ್ತರ ಸಂಖ್ಯೆಯೂ ಸಹ ಶೇ. 40ರಷ್ಟು ಇಳಿಕೆಯಾಗಿದೆ ಇದರಿಂದ ಮುಜರಾಯಿ ಇಲಾಖೆಯ ದೇವಾಲಯಗಳ ಆದಾಯಕ್ಕೂ ಸಹಾ ಕತ್ತರಿ ಬಿದ್ದಿದೆ.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!